ಪ್ಯಾರಿಸ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಡ್ರಾ; ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿಗೆ ಪದಕ ಭರವಸೆ ಹೆಚ್ಚಳ
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಡ್ರಾ; ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿಗೆ ಪದಕ ಭರವಸೆ ಹೆಚ್ಚಳ

ಪ್ಯಾರಿಸ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಡ್ರಾ; ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿಗೆ ಪದಕ ಭರವಸೆ ಹೆಚ್ಚಳ

ಭಾರತದ ಬ್ಯಾಡ್ಮಿಂಟನ್ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸುಲಭ ಎದುರಾಳಿಗಳನ್ನು ಎದುರಿಸಲಿದ್ದಾರೆ. ಈಗಾಗಲೇ ಡ್ರಾ ನಡೆದಿದ್ದು, ಭಾರತದ ಜೋಡಿಯು ಶ್ರೇಯಾಂಕದಲ್ಲಿ ತಮಗಿಂತ ಕೆಳಗಿರುವ ಎದುರಾಳಿಗಳನ್ನು ಎದುರಿಸಲಿದ್ದಾರೆ.

ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿಗೆ ಪದಕ ಭರವಸೆ ಹೆಚ್ಚಳ
ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿಗೆ ಪದಕ ಭರವಸೆ ಹೆಚ್ಚಳ

ಈ ಬಾರಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪರ ಪದಕ ಗೆಲ್ಲಬಲ್ಲ ಭರವಸೆಯ ಕ್ರೀಡೆಗಳಲ್ಲಿ ಬ್ಯಾಡ್ಮಿಂಟನ್‌ ಕೂಡಾ ಒಂದು. ಭಾರತದ ಪ್ರಬಲ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಜುಲೈ 26ರಿಂದ ಆರಂಭವಾಗಲಿರುವ ಜಾಗತಿಕ ಕ್ರೀಡಾಕೂಟದ ಆರಂಭಕ್ಕೂ ಮುನ್ನವೇ ಪದಕ ಗೆಲ್ಲುವ ನಿರೀಕ್ಷೆ ಹೆಚ್ಚಿಸಿದ್ದಾರೆ. ಸೋಮವಾರ ನಡೆದ ಡ್ರಾ ಪ್ರಕಾರ, ಈ ಜೋಡಿಗೆ ಸುಲಭ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

ಭಾರತದ ಜೋಡಿಯ ಒಲಿಂಪಿಕ್ಸ್‌ನಲ್ಲಿ 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಇಂಡೋನೇಷ್ಯಾದ ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಫಜರ್ ಅಲ್ಫಿಯಾನ್/ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ಜೋಡಿ ಇದ್ದಾರೆ. ಇದೇ ವೇಳೆ ಜರ್ಮನಿಯ 31ನೇ ಶ್ರೇಯಾಂಕಿತ ಮಾರ್ಕ್ ಲ್ಯಾಮ್ಸ್ಫಸ್/ಮಾರ್ವಿನ್ ಸೀಡೆಲ್ ಹಾಗೂ ಫ್ರಾನ್ಸ್‌ನ ರೋನನ್ ಲಾಬರ್/ಲ್ಯೂಕಾಸ್ ಕಾರ್ವಿ ಇದ್ದಾರೆ.

ಜುಲೈ 9ರ ಶ್ರೇಯಾಂಕದ ಆಧಾರದಲ್ಲಿ ವಿಶ್ವದ ನಂ.3ನೇ ಜೋಡಿಯಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಈ ಗುಂಪಿನಲ್ಲಿರುವ ಪ್ರಬಲ ಜೋಡಿಯಾಗಿದ್ದಾರೆ. ಹೀಗಾಗಿ ಇಲ್ಲಿ ಇವರಿಗೆ ಸುಲಭ ಜಯ ಒಲಿಯುವ ನಿರೀಕ್ಷೆ ಇದೆ. ಪ್ರತಿ ಗುಂಪಿನಿಂದ ಅಗ್ರ ಎರಡು ಜೋಡಿಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಅಲ್ಲಿ ನಾಕೌಟ್‌ ಲೈನ್ ಅಪ್ ನಿರ್ಧರಿಸಲು ಮತ್ತೆ ಡ್ರಾ ನಡೆಯಲಿದೆ.

ಹಾಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಭಾರತದ ಜೋಡಿಯು, ಇಂಡೋನೇಷಿಯನ್ನರ ವಿರುದ್ಧ 3-2 ಅಂತರದ ಗೆಲುವಿನ ದಾಖಲೆ ಹೊಂದಿದ್ದಾರೆ. ಅಲ್ಲದೆ 2018ರಿಂದ ಅಲ್ಫಿಯಾನ್ ಮತ್ತು ಅರ್ಡಿಯಾಂಟೊ ವಿರುದ್ಧ ಸೋತೇ ಇಲ್ಲ. ಜರ್ಮನ್ನರ ವಿರುದ್ಧ ರಾಂಕಿರೆಡ್ಡಿ ಮತ್ತು ಶೆಟ್ಟಿ 1-0 ದಾಖಲೆ ಹೊಂದಿದ್ದರೆ, ಫ್ರೆಂಚ್ ಜೋಡಿ ವಿರುದ್ಧ 2-0 ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಯಶಸ್ವಿ ಜೋಡಿ

ರಾಂಕಿರೆಡ್ಡಿ ಮತ್ತು ಚಿರಾಗ್ ಪ್ರಸಕ್ತ ವರ್ಷ ಅಮೋಘ ಫಾರ್ಮ್‌ನಲ್ಲಿದ್ದಾರೆ. ಮಲೇಷ್ಯಾ ಓಪನ್, ಇಂಡಿಯಾ ಓಪನ್, ಫ್ರೆಂಚ್ ಓಪನ್ ಮತ್ತು ಥೈಲ್ಯಾಂಡ್ ಓಪನ್‌ನಲ್ಲಿ ಹೀಗೆ ನಾಲ್ಕು ಫೈನಲ್ ತಲುಪಿದ್ದಾರೆ. ಕಳೆದ ವರ್ಷ, ಅಂದರೆ 2024ರಲ್ಲಿ ಇವರು 23-6 ಅಂತರದ ಗೆಲುವಿನ ದಾಖಲೆ ಹೊಂದಿದ್ದಾರೆ.

2022ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಜೋಡಿಯು ಎರಡು ಬಾರಿ ವಿಶ್ವದ ನಂ.1 ಜೋಡಿಯಾಗಿದ್ದಾರೆ. ಆ ಬಳಿಕ ಈ ವರ್ಷ ವಿಶ್ವದ ಅಗ್ರ ಮೂರು ಸ್ಥಾನಗಳಿಂದ ಕೆಳಕ್ಕೆ ಹೋಗಿಲ್ಲ.

'ಎ' ಗುಂಪಿನಲ್ಲಿ ವಿಶ್ವದ ನಂ.1 ಜೋಡಿಯಾದ ಲಿಯಾಂಗ್ ವೀ ಕೆಂಗ್/ವಾಂಗ್ ಚಾಂಗ್ ಜೋಡಿಯು ಟೋಕಿಯೊ 2020ರ ಕಂಚಿನ ಪದಕ ವಿಜೇತರಾದ ಮಲೇಷ್ಯಾದ ಆರನ್ ಚಿಯಾ/ಸೋಹ್ ವೂಯಿ ಯಿಕ್ ಜೋಡಿಯನ್ನು ಎದುರಿಸಬೇಕಿದೆ. ಗ್ರೇಟ್ ಬ್ರಿಟನ್‌ನ ಬೆನ್ ಲೇನ್/ಸೀನ್ ವೆಂಡಿ ಮತ್ತು ಕೆನಡಾದ ಡಾಂಗ್ ಆಡಮ್/ನೈಲ್ ಯಾಕುರಾ ಅವರನ್ನು ಎದುರಿಸಲಿದ್ದಾರೆ.

ಹಾಲಿ ವಿಶ್ವ ಚಾಂಪಿಯನ್‌ಗಳಾಗಿರುವ ದಕ್ಷಿಣ ಕೊರಿಯಾದ ಕಾಂಗ್ ಮಿನ್-ಹ್ಯುಕ್/ಸಿಯೊ ಸೆಯುಂಗ್-ಜೇ ಜೋಡಿಯು 'ಬಿ' ಗುಂಪಿನಲ್ಲಿ ಫ್ರಾನ್ಸ್‌ನ ಕ್ರಿಸ್ಟೋ ಪೊಪೊವ್/ತೋಮಾ ಜೂನಿಯರ್ ಪೊಪೊವ್ ಅವರನ್ನು ಎದುರಿಸಲಿದ್ದಾರೆ. ಇದೇ ವೇಳೆ ಥಾಯ್ಲೆಂಡ್‌ನ ಸುಪಕ್ ಜೊಮ್ಕೊಹ್/ಕಿಟ್ಟಿನ್ಪೊಂಗ್ ಕೆಡ್ರೆನ್ ಮತ್ತು ಜೆಕ್ನ ಒಂಡ್ರೆಜ್ ಕ್ರಾಲ್/ಆಡಮ್ ಮೆಂಡ್ರೆಕ್ ಕೂಡಾ ಇದೇ ಗುಂಪಿನಲ್ಲಿದ್ದಾರೆ.

'ಡಿ' ಗುಂಪಿನಲ್ಲಿ ಹಾಲಿ ಚಾಂಪಿಯನ್ಸ್

'ಡಿ' ಗುಂಪಿನಲ್ಲಿ ಒಟ್ಟು ಐದು ಜೋಡಿಗಳಿವೆ. ಹಾಲಿ ಒಲಿಂಪಿಕ್ ಚಾಂಪಿಯನ್ ಚೈನೀಸ್ ತೈಪೆಯ ಲೀ ಯಾಂಗ್/ವಾಂಗ್ ಚಿ-ಲಿನ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಡೆನ್ಮಾರ್ಕ್‌ನ ಕಿಮ್ ಆಸ್ಟ್ರಪ್/ಆಂಡರ್ಸ್ ಸ್ಕಾರುಪ್ ರಾಸ್ಮುಸ್ಸೆನ್ ಜೋಡಿಗಳಿವೆ. ಚೀನಾದ ಲಿಯು ಯು ಚೆನ್ / ಓ ಕ್ಸುವಾನ್ ಯಿ, 2021ರ ವಿಶ್ವ ಚಾಂಪಿಯನ್ ಜಪಾನ್‌ನ ಟಕುರೊ ಹೊಕಿ / ಯುಗೊ ಕೊಬಯಾಶಿ ಮತ್ತು ಅಮೆರಿಕದ ವಿನ್ಸನ್ ಚಿಯು / ಜೋಶುವಾ ಯುವಾನ್ ಇತರ ಮೂರು ಜೋಡಿಗಳು ಇದರಲ್ಲಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದರು. ಆ ಬಳಿಕ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ಬೆಳ್ಳಿ ಹಾಗೂ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಹೀಗಾಗಿ ಈ ಬಾರಿ ಬ್ಯಾಡ್ಮಿಂಟನ್‌ನಲ್ಲಿ ಇನ್ನೂ ಹೆಚ್ಚು ಪದಕಗಳು ಬರುವ ನಿರೀಕ್ಷೆ ಇದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.