ಬೆಂಗಳೂರು ಬುಲ್ಸ್ಗೆ ಉಳಿದೆಲ್ಲಾ ಪಂದ್ಯಗಳು ಗೆದ್ದರಷ್ಟೇ ಉಳಿಗಾಲ; ಹೀಗಿದೆ ಗೂಳಿಗಳ ಪ್ಲೇ ಆಫ್ ಲೆಕ್ಕಾಚಾರ
Bengaluru bulls: ಪ್ರೊ ಕಬಡ್ಡಿ ಲೀಗ್ ಆರಂಭಕ್ಕೂ ಮುನ್ನ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ತಂಡಗಳ ಪೈಕಿ ಬೆಂಗಳೂರು ಬುಲ್ಸ್ ಕೂಡ ಒಂದು. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಹಾಗಾದರೆ ಫ್ಲೇ ಆಫ್ಗೇರಲು ಬೆಂಗಳೂರು ಬುಲ್ಸ್ ಏನು ಮಾಡಬೇಕು?
10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi League) ಕೊನೆಯ ಹಂತದ ಪಂದ್ಯಗಳು ರೋಚಕವಾಗಿ ಸಾಗುತ್ತಿವೆ. ಯಾವ ತಂಡ ನಾಕೌಟ್ ಪ್ರವೇಶಿಸಲಿದೆ? ಯಾವ ತಂಡ ಹೊರ ಬೀಳಲಿದೆ ಎಂಬುದು ಕುತೂಹಲ ಕೆರಳಿಸಿದೆ. ಎಲ್ಲಾ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಂಕಪಟ್ಟಿಯ ಕೆಳ ಕ್ರಮಾಂಕದ ಕೊನೆಯ ಎರಡು ಸ್ಥಾನಗಳಲ್ಲಿರುವ ತಂಡಗಳನ್ನು ಹೊರತುಪಡಿಸಿ ಉಳಿದೆಲ್ಲ ಟೀಮ್ಗಳಿಗೂ ಪ್ಲೇ ಆಫ್ಗೇರುವ ಅವಕಾಶ ಇನ್ನೂ ಜೀವಂತವಾಗಿದೆ. ಹಾಗಾದರೆ ಬೆಂಗಳೂರು ಬುಲ್ಸ್ (Bengaluru Bulls) ಪರಿಸ್ಥಿತಿ ಹೇಗಿದೆ? ಇಲ್ಲಿದೆ ವಿವರ.
ಅಂಕಪಟ್ಟಿಯಲ್ಲಿ ಟಾಪ್-6 ತಂಡಗಳು
ಅಂಕಪಟ್ಟಿಯಲ್ಲಿ ಅಗ್ರ 6 ತಂಡಗಳು ಪ್ಲೇ ಆಫ್ಗೆ ಪ್ರವೇಶ ಪಡೆಯಲಿವೆ. ಜನವರಿ 26ರ ಅಂತ್ಯಕ್ಕೆ ಜೈಪುರ ಪಿಂಕ್ ಪ್ಯಾಂಥರ್ಸ್ (63 ಅಂಕ), ಪುಣೇರಿ ಪಲ್ಟನ್ (60), ದಬಾಂಗ್ ಡೆಲ್ಲಿ ಕೆಸಿ (54), ಗುಜರಾತ್ ಜೈಂಟ್ಸ್ (49), ಹರಿಯಾಣ ಸ್ಟೀಲರ್ಸ್ (45), ಪಾಟ್ನಾ ಪೈರೇಟ್ಸ್ (42) ತಂಡಗಳು ಕ್ರಮವಾಗಿ ಅಗ್ರ-6ರಲ್ಲಿ ಸ್ಥಾನ ಪಡೆದಿವೆ. ಎಲ್ಲಾ ತಂಡಗಳು ಸಹ ಇನ್ನೂ 7 ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದು, ಅಗ್ರಸ್ಥಾನಕ್ಕೇರಲು ಸಾಕಷ್ಟು ಪೈಪೋಟಿ ನಡೆಸುತ್ತಿವೆ. ಈಗಾಗಲೇ 8 ವಾರ ಪೂರೈಸಿರುವ ಪ್ರೊ ಕಬಡ್ಡಿ, ಇನ್ನು 4 ವಾರಗಳನ್ನಷ್ಟೇ ಹೊಂದಿದೆ.
ಬೆಂಗಳೂರು ಬುಲ್ಸ್ಗೆ ಯಾವ ಸ್ಥಾನ?
ಪ್ರೊ ಕಬಡ್ಡಿ ಲೀಗ್ ಆರಂಭಕ್ಕೂ ಮುನ್ನ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ತಂಡಗಳ ಪೈಕಿ ಬೆಂಗಳೂರು ಬುಲ್ಸ್ ಕೂಡ ಒಂದು. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಪಿಕೆಎಲ್ 10ರಲ್ಲಿ ಮಂಕಾದ ಬುಲ್ಸ್, ಸುರ್ಜೀತ್ ಸಿಂಗ್, ವಿಕಾಶ್ ಖಂಡೋಲಾ ಸೌರಭ್ ನಂದಲ್, ಭರತ್ ಮತ್ತು ಅಮನ್ ಆಂಟಿಲ್ ಅವರಂತಹ ಅನುಭವಿ ಹೆಸರುಗಳಿದ್ದರೂ ಅದರ ಹೊರತಾಗಿ ತಂಡವು ಒಂಬತ್ತನೇ ಸ್ಥಾನದಲ್ಲಿದೆ. ಆಡಿದ 9 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿದೆ. 7 ಸೋಲು ಕಂಡಿದೆ. 2 ಡ್ರಾ ಸಾಧಿಸಿದ್ದು, 38 ಅಂಕ ಪಡೆದಿದೆ.
ಅಗ್ರ-6ರೊಳಗೆ ಪ್ರವೇಶಿಸಲು ಏನು ಮಾಡಬೇಕು?
ಬೆಂಗಳೂರು ಬುಲ್ಸ್ ತಂಡಕ್ಕೆ ಅಗ್ರ-6ರೊಳಗೆ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಆದರೆ ಉಳಿದ 7 ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಬೇಕು. ಕೇವಲ ಕಡಿಮೆ ಅಂತರದ ಗೆಲುವಿನ ಬದಲಿಗೆ ಭಾರಿ ಅಂತರದ ಜಯ ಸಾಧಿಸಬೇಕು. ಆ ಮೂಲಕ ಹೆಚ್ಚು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಲು ಸಾಧ್ಯ. ಅಷ್ಟೇ ಅಲ್ಲದೆ, ಉಳಿದ ತಂಡಗಳ ಫಲಿತಾಂಶ ಕೂಡ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಸಾಕಷ್ಟು ಎಚ್ಚರದಿಂದ ಬುಲ್ಸ್ ಆಡಬೇಕಿದೆ.
ಯು ಮುಂಬಾ (40), ಬೆಂಗಾಲ್ ವಾರಿಯರ್ಸ್ (38) ಮತ್ತು ತಮಿಳ್ ತಲೈವಾಸ್ (35) ತಂಡಗಳು ಕ್ರಮವಾಗಿ 7, 8 ಮತ್ತು 10ನೇ ಸ್ಥಾನದಲ್ಲಿವೆ. ಈ ಮೂರು ತಂಡಗಳು ತಲಾ 7 ಪಂದ್ಯಗಳನ್ನು ಆಡಲಿವೆ. ಆದರೆ, ಬುಲ್ಸ್ ತಂಡಕ್ಕಿರುವಷ್ಟೇ ಈ ಮೂರು ತಂಡಗಳಿಗೂ ನಾಕೌಟ್ ಪ್ರವೇಶಿಸುವ ಅವಕಾಶ ಇದೆ. ಆದರೆ ಇವುಗಳ ಫಲಿತಾಂಶ ಕೂಡ ಬೆಂಗಳೂರು ತಂಡದ ಸ್ಥಾನವನ್ನು ನಿರ್ಧರಿಸುತ್ತದೆ. ಫೆಬ್ರವರಿ 21ರಂದು ಲೀಗ್ ಪಂದ್ಯಗಳು ಮುಕ್ತಾಯಗೊಳ್ಳಲಿದ್ದು, ಯಾರಿಗೆ ಯಾವ ಸ್ಥಾನ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಬೆಂಗಳೂರು ಬುಲ್ಸ್ಗೆ ಉಳಿದಿರುವ ಪಂದ್ಯಗಳು
ಜನವರಿ 28, ರಾತ್ರಿ 8 ಗಂಟೆ- ಬೆಂಗಳೂರು ಬುಲ್ಸ್ vs ಜೈಪುರ ಪಿಂಕ್ ಫ್ಯಾಂಥರ್ಸ್
ಜನವರಿ 31, ರಾತ್ರಿ 8 ಗಂಟೆ- ಬೆಂಗಳೂರು ಬುಲ್ಸ್ vs ಪಾಟ್ನಾ ಪೈರೇಟ್ಸ್
ಫೆಬ್ರವರಿ 04, ರಾತ್ರಿ 8 ಗಂಟೆ- ಬೆಂಗಳೂರು ಬುಲ್ಸ್ vs ಯು ಮುಂಬಾ
ಫೆಬ್ರವರಿ 07, ರಾತ್ರಿ 8 ಗಂಟೆ- ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟನ್
ಫೆಬ್ರವರಿ 11, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್ vs ಗುಜರಾತ್ ಜೈಂಟ್ಸ್
ಫೆಬ್ರವರಿ 18, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್ vs ದಬಾಂಗ್ ಡೆಲ್ಲಿ
ಫೆಬ್ರವರಿ 21, ರಾತ್ರಿ 9 ಗಂಟೆ- ಬೆಂಗಳೂರು ಬುಲ್ಸ್ vs ಹರಿಯಾಣ ಸ್ಟೀಲರ್ಸ್
ತಂಡಗಳು (ಜ.26ರ ಅಂತ್ಯಕ್ಕೆ) | ಪಂದ್ಯ | ಗೆಲುವು | ಸೋಲು | ಡ್ರಾ | ಅಂಕ |
---|---|---|---|---|---|
ಜೈಪುರ ಪಿಂಕ್ ಪ್ಯಾಂಥರ್ಸ್ | 15 | 11 | 2 | 2 | 63 |
ಪುಣೇರಿ ಪಲ್ಟನ್ | 14 | 11 | 2 | 1 | 60 |
ದಬಾಂಗ್ ದೆಹಲಿ ಕೆಸಿ | 15 | 9 | 4 | 2 | 54 |
ಗುಜರಾತ್ ಜೈಂಟ್ಸ್ | 15 | 9 | 6 | 0 | 49 |
ಹರಿಯಾಣ ಸ್ಟೀಲರ್ಸ್ | 15 | 8 | 6 | 1 | 45 |
ಪಾಟ್ನಾ ಪೈರೇಟ್ಸ್ | 15 | 7 | 7 | 1 | 42 |
ಯು ಮುಂಬಾ | 15 | 6 | 7 | 2 | 40 |
ಬೆಂಗಾಲ್ ವಾರಿಯರ್ಸ್ | 15 | 6 | 7 | 2 | 38 |
ಬೆಂಗಳೂರು ಬುಲ್ಸ್ | 15 | 6 | 9 | 0 | 37 |
ತಮಿಳು ತಲೈವಾಸ್ | 15 | 6 | 9 | 0 | 35 |
ಯುಪಿ ಯೋಧಾಸ್ | 15 | 3 | 11 | 1 | 23 |
ತೆಲುಗು ಟೈಟಾನ್ಸ್ | 16 | 2 | 14 | 0 | 16 |