ಬೆಂಗಳೂರು ಬುಲ್ಸ್ ಅಚ್ಚರಿಯ ನಿರ್ಧಾರ; ತಂಡದಿಂದ ಕೋಚ್ ರಣಧೀರ್ ಸಿಂಗ್ ಸೆಹ್ರಾವತ್ ರಿಲೀಸ್, ಹೊಸ ಕೋಚ್ ನೇಮಕ
Randhir Singh Sehrawat: ಸತತ 11 ಸೀಸನ್‌ಗಳಿಗೆ ಒಂದೇ ಕೋಚ್ ಅನ್ನು ಉಳಿಸಿಕೊಂಡ ಏಕೈಕ ಫ್ರಾಂಚೈಸಿ ಬೆಂಗಳೂರು ಬುಲ್ಸ್. ಇದೀಗ ತಂಡದ ಭರವಸೆಯ ಕೋಚ್ ಜತೆಗಿನ ಸುದೀರ್ಘ ನಂಟು ಕೊನೆಗೊಂಡಿದೆ. ಫ್ರಾಂಚೈಸಿಯ ನಿರ್ಧಾರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಇದೇ ವೇಳೆ ಹೊಸ ಕೋಚ್ ಅವರನ್ನೂ ಆಯ್ಕೆ ಮಾಡಿದೆ.

ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಗೂ ಮುನ್ನ ಬೆಂಗಳೂರು ಬುಲ್ಸ್ ತಂಡದಿಂದ ಆಶ್ಚರ್ಯಕರ ಬೆಳವಣಿಗೆಯೊಂದು ನಡೆದಿದೆ. ಪಿಕೆಎಲ್‌ನ ಜನಪ್ರಿಯ ಫ್ರಾಂಚೈಸಿಯು ತಂಡದಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದ ಕೋಚ್ ರಣಧೀರ್ ಸಿಂಗ್ ಸೆಹ್ರಾವತ್ ಅವರನ್ನು ರಿಲೀಸ್ ಮಾಡಿದೆ. ಬುಲ್ಸ್ ತಂಡವು ಮೊದಲ ಸೀಸನ್‌ನಲ್ಲಿಯೇ ರಣಧೀರ್ ಅವರನ್ನು ತಮ್ಮ ಮುಖ್ಯ ಕೋಚ್ ಆಗಿ ನೇಮಿಸಿತ್ತು. ಸತತ 11 ಸೀಸನ್‌ಗಳಿಗೆ ಒಂದೇ ಕೋಚ್ ಅನ್ನು ಉಳಿಸಿಕೊಂಡ ಏಕೈಕ ಫ್ರಾಂಚೈಸಿ ಬೆಂಗಳೂರು ಬುಲ್ಸ್. ಇದೀಗ ಅವರೊಂದಿಗಿನ ಸುದೀರ್ಘ ನಂಟು ಕೊನೆಗೊಂಡಿದೆ. ಹೀಗಾಗಿ ಫ್ರಾಂಚೈಸಿಯ ನಿರ್ಧಾರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.
ರಣಧೀರ್ ಸಿಂಗ್ ಸೆಹ್ರಾವತ್ ಅವರ ಕೋಚಿಂಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಹಲವು ಬಾರಿ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಮುಖ್ಯವಾಗಿ ತಂಡವು ಪ್ರೊ ಕಬಡ್ಡಿ ಲೀಗ್‌ನ ಆರನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದು ಮಾತ್ರವಲ್ಲದೆ, ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ತಂಡವು ಪಿಕೆಎಲ್ ಸೀಸನ್ ಎರಡರಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.
ರಣಧೀರ್ ನಿರ್ಗಮನದ ಕುರಿತಾಗಿ ಫ್ರಾಂಚೈಸಿಯು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ದೃಢಪಡಿಸಿದೆ. “ಸುದೀರ್ಘ ಒಂದು ದಶಕಕ್ಕೂ ಹೆಚ್ಚು ಕಾಲ, ‘ಕೋಚ್ ಸಾಬ್’ ರಣಧೀರ್ ನಮ್ಮ ತಂಡದ ಪ್ರಯಾಣದ ಮೂಲಾಧಾರವಾಗಿದ್ದಾರೆ. ನಾವು ಜೊತೆಯಾಗಿ ಸಾಧಿಸಿದ ಯಶಸ್ಸು ಮತ್ತು ಸಾಧನೆಗಳಲ್ಲಿ ಅವರು ಅವಿಭಾಜ್ಯ ಅಂಗವಾಗಿದ್ದಾರೆ. ಅವರ ಸಮರ್ಪಣೆ ಮತ್ತು ನಾಯಕತ್ವವು ಬೆಂಗಳೂರು ಬುಲ್ಸ್ ಕುಟುಂಬದ ಮೇಲೆ ಶಾಶ್ವತ ಪ್ರಭಾವ ಬೀರಿದೆ. ರಣಧೀರ್ ಅವರ ಅಮೂಲ್ಯ ಕೊಡುಗೆಗಳಿಗಾಗಿ ನಾವು ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ. ಅವರ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇವೆ” ಎಂದು ಬುಲ್ಸ್ ಹೇಳಿದೆ.
ಬುಲ್ಸ್ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ತಂಡದ ದಶಕದ ಪಿಕೆಎಲ್ ಅಭಿಯಾನದಲ್ಲಿ ಜೊತೆಗಿದ್ದುದಕ್ಕೆ ಹಾಗೂ ನೀಡಿದ ಸೇವೆಗಾಗಿ ಅಭಿಮಾನಿಗಳು ಕೂಡಾ ಕಾಮೆಂಟ್ ಮೂಲಕ ಧನ್ಯವಾದ ಸಮರ್ಪಿಸಿದ್ದಾರೆ.
ಬಿ.ಸಿ.ರಮೇಶ್ ಹೊಸ ಕೋಚ್
ರಣದೀಪ್ ಅವರನ್ನು ರಿಲೀಸ್ ಮಾಡುದ ಬೆನ್ನಲ್ಲೇ ಹೊಸ ಕೋಚ್ ಆಗಿ ಬಿ.ಸಿ.ರಮೇಶ್ ಅವರನ್ನು ಬುಲ್ಸ್ ತಂಡ ನೇಮಿಸಿದೆ. ಈ ಬಗ್ಗೆ ತಂಡ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದು, "ಕರ್ನಾಟಕದ ಹೆಮ್ಮೆ, ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ.ರಮೇಶ್ ಸರ್, ಈಗ ಬೆಂಗಳೂರು ಬುಲ್ಸ್ ತಂಡದ ದ್ರೋಣ. 2018ರಲ್ಲಿ ಗೂಳಿ ಪಡೆಗೆ ತಮ್ಮ ಮೊದಲ ಟ್ರೋಫಿ ದಕ್ಕಿಸಿದ ರಮೇಶ್ ಸರ್, ಪುಣೆ ಹಾಗೂ ಬೆಂಗಾಲ್ ತಂಡಗಳೊಂದಿಗೂ ವಿಜಯ ಸಾಧಿಸಿದ್ದಾರೆ. ಗೂಳಿ ಪಡೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯೊಂದಿಗೆ, ಬಿ.ಸಿ.ರಮೇಶ್ ಅವರನ್ನು ಸ್ವಾಗತಿಸುತ್ತಿದ್ದೇವೆ" ಎಂದು ಫ್ರಾಂಚೈಸ್ ಹೇಳಿಕೊಂಡಿದೆ.
