Bengaluru Weather: ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್ ಸಿಸ್ಟಮ್, ಏನದು
Bengaluru Weather: ಬೆಂಗಳೂರು ಹವಾಮಾನದ ಬಗ್ಗೆ ಆರ್‌ಸಿಬಿ ಅಭಿಮಾನಿಗಳು ಚಿಂತಿಸಬೇಕಾದ್ದಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿದೆ ಸಬ್‌ಏರ್ ಸಿಸ್ಟಮ್. ಕೇವಲ 15 ನಿಮಿಷದಲ್ಲಿ ಕ್ರೀಡಾಂಗಣ ಒಣಗಿಸಿ ಆಟಕ್ಕೆ ಒದಗಿಸಿಕೊಡುವ ಈ ವ್ಯವಸ್ಥೆಯನ್ನು ಪರಿಚಯಿಸುವ ಚಿತ್ರಣ ಇಲ್ಲಿದೆ.

ಬೆಂಗಳೂರು: ಐಪಿಎಲ್ 2024 (IPL 2024) ರ 68 ನೇ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಿ ಮಾರ್ಪಟ್ಟಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಮೇ 18) ರಾತ್ರಿ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಸೆಣಸಲಿದೆ. ಪ್ಲೇ ಆಫ್ ಹಂತಕ್ಕೆ ಹೋಗುವುದಕ್ಕೆ ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿದ್ದು, ಇದರ ಫಲಿತಾಂಶವೇ ಎಲ್ಲವನ್ನೂ ನಿರ್ಧರಿಸಲಿದೆ. ಈ ನಡುವೆ, ಇಂದು ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿರುವ ಕಾರಣ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಎರಡೂ ತಂಡಗಳು ತಮ್ಮ ತಮ್ಮ ಗೇಮ್ ಪ್ಲಾನ್ ಮಾಡಿಕೊಂಡು ರಾತ್ರಿ ಪಂದ್ಯದಲ್ಲಿ ಮುಖಾಮುಖಿಯಾಗಲು ಸಿದ್ಧತೆ ನಡೆಸಿಕೊಳ್ಳುತ್ತಿವೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಇಂದು ಬೆಂಗಳೂರು ಸುತ್ತಮುತ್ತ ಶೇಕಡ 75 ರಷ್ಟು ಮಳೆಯಾಗಲಿದೆ. ಇದು ಆರ್‌ಸಿಬಿ ಅಭಿಮಾನಿಗಳನ್ನು ಚಿಂತೆಗೀಡುಮಾಡಿದೆ. ಪ್ಲೇ ಆಫ್ ಹಂತಕ್ಕೆ ಆರ್‌ಸಿಬಿ ಹೋಗಬೇಕು ಎಂದು ಬಯಸುವ ಆರ್‌ಸಿಬಿ ಅಭಿಮಾನಿಗಳಿಗೆ ಇಲ್ಲೊಂದು ಸಮಾಧಾನದ ವಿಚಾರ ಇದೆ. ಮಳೆ ಬಂದು ಹೋದ 15 ನಿಮಿಷದಲ್ಲಿ ಕ್ರೀಡಾಂಗಣ ಪಂದ್ಯಕ್ಕೆ ಸಜ್ಜಾಗಲಿದೆ. ಅಂತಹ ವ್ಯವಸ್ಥೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ. ಏನದು -
ಬೆಂಗಳೂರು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸಬ್‌ಏರ್ ಸಿಸ್ಟಮ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯುತ್ತಮ ಗುಣಮಟ್ಟದ ಒಳಚರಂಡಿ ವ್ಯವಸ್ಥೆ ಇರುವುದು ವಿಶೇಷವಾಗಿದ್ದು, ಸದ್ಯ ಬೆಂಗಳೂರು ಹವಾಮಾನದ ಹಿನ್ನೆಲೆಯಲ್ಲಿ ಮತ್ತೆ ಚರ್ಚೆಯಲ್ಲಿದೆ. ಈ ವ್ಯವಸ್ಥೆಯನ್ನು ದೇಶದಲ್ಲೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಮಳೆ ಬಂದು ನಿಂತ ನಂತರ, ಮೈದಾನದಲ್ಲಿ ಎಷ್ಟೇ ಪ್ರಮಾಣದ ನೀರು ಇದ್ದರೂ ಕೇವಲ 15 ನಿಮಿಷಗಳ ಅವಧಿಯಲ್ಲಿ ಸಬ್‌ಏರ್ ವ್ಯವಸ್ಥೆಯು ಮೈದಾನವನ್ನು ಆಟಕ್ಕೆ ಸಿದ್ಧಪಡಿಸುವುದು ವಿಶೇಷ.
ಸಬ್ ಏರ್ ಸಿಸ್ಟಮ್ಸ್ ನಿರ್ಮಿಸಿದ ಉಪ ಮೇಲ್ಮೈ ಗಾಳಿ ಮತ್ತು ನಿರ್ವಾತ ಚಾಲಿತ ಒಳಚರಂಡಿ ವ್ಯವಸ್ಥೆ ಇದಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದನ್ನು 2017 ರಲ್ಲಿ ಅಳವಡಿಸಲಾಗಿದೆ. ಇದು ಪ್ರತಿ ನಿಮಿಷಕ್ಕೆ 10,000 ಲೀಟರ್ ಪ್ರಮಾಣದಲ್ಲಿ ನೆಲದಿಂದ ನೀರನ್ನು ಸ್ಥಳಾಂತರಿಸಬಲ್ಲದು. ಈ ವ್ಯವಸ್ಥೆ ಅಳವಡಿಸುವುದಕ್ಕೆ 4.25 ಕೋಟಿ ರೂಪಾಯಿ ವ್ಯಯಿಸಿದೆ. ಇದಕ್ಕಾಗಿ 4.5 ಕಿ.ಮೀ. ಪೈಪ್ ಬಳಸಲಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್ ಏರ್ ಸಿಸ್ಟಮ್ ತಂತ್ರಜ್ಞಾನ ಅಷ್ಟೇ ಅಲ್ಲ, ಇನ್ನೂ ಕೆಲವು ವಿಶೇಷ ವ್ಯವಸ್ಥೆಗಳಿವೆ. ಸೌರ ವಿದ್ಯುತ್ ವ್ಯವಸ್ಥೆ, ಮಳೆ ನೀರಿನ ಕೊಯ್ಲು, ವಿಶೇಷ ಚೇತನರಿಗೆ ನೆರವಾಗುವ ವಿದ್ಯುತ್ ಚಾಲಿತ ಕುರ್ಚಿ ಸೌಲಭ್ಯ ಕೂಡಾ ಇರುವುದು ವಿಶೇಷ.
ಚಿನ್ನಸ್ವಾಮಿ ಕ್ರೀಡಾಂಗಣದ ಸಬ್‌ಏರ್ ಸಿಸ್ಟಮ್ ವಿಡಿಯೋ ವೈರಲ್
ಶರಣ್ ಕಲ್ಯಾಣ್ ಎಂಬುವವರು ಬೆಂಗಳೂರು ಎಂ ಚಿನ್ನಸ್ವಾಮಿ ಸ್ಟೇಡಿಯಂನ ಸಬ್ ಏರ್ ಸಿಸ್ಟಮ್‌ನ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ನಿನ್ನೆ ರಾತ್ರಿ ಶೇರ್ ಮಾಡಿದ್ದಾರೆ. ಇದು ಸಬ್ ಏರ್ ಸಿಸ್ಟಮ್‌ನ ಚಿತ್ರಣವನ್ನು ಒದಗಿಸಿದೆ.
ಇದಲ್ಲದೆ ಇನ್ನೊಂದು ವಿಡಿಯೋ ಕೂಡ ಗಮನಸೆಳೆದಿದ್ದು, ಅದರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಸಬ್‌ಏರ್ ಸಿಸ್ಟಮ್ ಅನ್ನು ಪರೀಕ್ಷಿಸಿದ ಸಂದರ್ಭದ್ದು. ಅದರಲ್ಲಿ, ಮೈದಾನದ ಒಳಗೆ ನೀರು ತುಂಬಿಸಿ ಅದನ್ನು ಒಣಗಿಸುವ ಚಿತ್ರಣವಿದೆ. ಆರ್‌ಸಿಬಿ ಅಭಿಮಾನಿಗಳು ಚಿಂತೆ ಮಾಡಬೇಕಾದ್ದಿಲ್ಲ ಎಂಬ ಒಕ್ಕಣೆಯೊಂದಿಗೆ ಈ ವಿಡಿಯೋ ಶುರುವಾಗುತ್ತಿದೆ…
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
