ಕನ್ನಡ ಸುದ್ದಿ  /  Sports  /  Border Gavaskar Trophy India Record Fourth Consecutive Series Win Over Australia

India vs Australia: ನಾಲ್ಕನೇ ಟೆಸ್ಟ್ ನೀರಸ ಡ್ರಾದಲ್ಲಿ ಅಂತ್ಯ; 2-1ರಿಂದ ಸತತ ನಾಲ್ಕನೇ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದ ಭಾರತ

ಮೂರನೇ ಟೆಸ್ಟ್‌ ಪಂದ್ಯವನ್ನು ಭಾರತ ಕೈಚೆಲ್ಲಿ, ನಾಲ್ಕನೇ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿತು. ಆದರೂ, ಭಾರತವು ಬಾರ್ಡರ್‌ ಗವಾಸ್ಕರ್‌-ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಸರಣಿಯನ್ನು 2-1 ಅಂತರದಿಂದ ಗೆಲ್ಲುವ ಮೂಲಕ ಭಾರತವು ಸತತ ನಾಲ್ಕನೇ ಬಾರಿ ಪ್ರತಿಷ್ಠಿತ ಟ್ರೋಫಿ ಗೆದ್ದಿತು.

ಸರಣಿ ಗೆದ್ದ ಭಾರತ
ಸರಣಿ ಗೆದ್ದ ಭಾರತ (REUTERS)

ನಿರೀಕ್ಷೆಯಂತೆಯೇ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್‌ ಪಂದ್ಯವು ಡ್ರಾದಲ್ಲಿ ಅಂತ್ಯಗೊಂದಿದೆ. ದಿನದಾಟ ಅಂತ್ಯವಾಗಲು ಇನ್ನೂ ಕೆಲ ಓವರ್‌ಗಳು ಉಳಿದಿರುವಂತೆಯೇ, ದಿಢೀರನೆ ಪಂದ್ಯವನ್ನು ಡ್ರಾ ಮಾಡಲಾಗಿದೆ. ಉಭಯ ತಂಡಗಳ ಆಟಗಾರರು ಹಾಗೂ ಅಂಪೈಯರ್‌ಗಳು ಪಂದ್ಯವನ್ನು ಡ್ರಾ ಮಾಡಲು ನಿರ್ಧರಿಸಿದರು.

ಪಂದ್ಯದ ಐದನೇ ದಿನದಲ್ಲಿ ನಿರೀಕ್ಷೆಯಂತೆ ಆಸೀಸ್‌ ತಂಡವು ಕ್ರೀಸ್‌ಕಚ್ಚಿ ಬ್ಯಾಟಿಂಗ್‌ ನಡೆಸಿತು. ವಿಕೆಟ್‌ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ನಿಧಾನವಾಗಿ ಬ್ಯಾಟ್‌ ಬೀಸಿದ ಬ್ಯಾಟರ್‌ಗಳು ದಿನದ ಅಂತ್ಯದ ವೇಳೆಗೆ 2 ವಿಕೆಟ್‌ ಕಳೆದುಕೊಂಡು 175 ರನ್‌ ಗಳಿಸಿದರು. ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಆಸೀಸ್‌ ವಿಕೆಟ್‌ ನಷ್ಟವಿಲ್ಲದೆ 3 ರನ್‌ ಕಲೆ ಹಾಕಿತ್ತು.

ಇಂದು ಬ್ಯಾಟಿಂಗ್‌ ಆರಂಭಿಸಿದ ಆಸೀಸ್‌ ಮ್ಯಥ್ಯೂ ಕುಹ್ನೆಮನ್‌ ಅವರನ್ನು ಕೇವಲ 6 ರನ್‌ಗಳಿಗೆ ಕಳೆದುಕೊಂಡಿತು. ಆರಂಭಿಕ ಮೇಲುಗೈ ಸಾಧಿಸಿದ ಭಾರತ, ಅದೇ ಯಶಸ್ಸನ್ನು ಮತ್ತೆ ಪುನರಾವರ್ತಿಸುವಲ್ಲಿ ವಿಫಲವಾಯ್ತು. ಟ್ರೇವಿಸ್‌ ಹೆಡ್‌ ಜವಾಬ್ದಾರಿಯುತವಾಗಿ ಆಡಿ ಶತಕದಂಚಿನಲ್ಲಿ ಎಡವಿದರು. 163 ಎಸೆತಗಳಲ್ಲಿ 90 ರನ್‌ ಗಳಿಸಿದ್ದಾಗ ಅಕ್ಷರ್‌ ಪಟೇಲ್‌ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು.

ಎರಡು ವಿಕೆಟ್‌ ಪತನದ ನಂತರ ಬಂದ ನಾಯಕ ಸ್ಮಿತ್‌, ಲ್ಯಾಬುಶೆನ್‌ ಜೊತೆಗೂಡಿ ಮತ್ತೆ ನಿಧಾನಗತಿಯ ಆಟ ಮುಂದುವರೆಸಿದರು. ತಂಡವು 78.1 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿದ್ದಾಗ ಪಂದ್ಯವನ್ನು ಡ್ರಾ ಮಾಡಲಾಯ್ತು. ಲ್ಯಾಬುಶೆನ್‌ ಅಜೇಯ 63 ರನ್‌ ಗಳಿಸಿದರೆ, ನಾಯಕ ಸ್ಮಿತ್ ಅಜೇಯ 10 ರನ್‌ ಗಳಿಸಿದರು.

ಸ್ಮಿತ್‌ ನಾಯಕತ್ವದಲ್ಲಿ ಸೋಲಿಲ್ಲ!

ಪ್ಯಾಟ್‌ ಕಮಿನ್ಸ್‌ ನಾಯಕತ್ವದಲ್ಲಿ ಆಸೀಸ್‌ ತಂಡವು ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಸೋತಿತ್ತು. ತಾಯಿಯ ಅನಾರೋಗ್ಯದ ನಿಮಿತ್ತ ಕಮಿನ್ಸ್‌ ತವರಿಗೆ ಮರಳಿದ ಹಿನ್ನೆಲೆಯಲ್ಲಿ, ಸ್ಮಿತ್‌ಗೆ ಮುಂದಿನ ಎರಡು ಪಂದ್ಯಗಳ ನಾಯಕತ್ವ ವಹಿಸಲಾಯ್ತು. ಅವರ ನಾಯಕತ್ವದಲ್ಲಿ ಮೂರನೇ ಟೆಸ್ಟ್‌ ಪಂದ್ಯವನ್ನು ಭರ್ಜರಿಯಾಗಿ ಗೆದ್ದ ಕಾಂಗರೂಗಳು, ಇದೀಗ ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಿಮವಾಗಿ ಸ್ಮಿತ್ ನಾಯಕತ್ವದಲ್ಲಿ ಆಸೀಸ್‌ ತಂಡವು ಈ ಸರಣಿಯಲ್ಲಿ ಸೋಲಿನಿಂದ ಪಾರಾಗಿದೆ.

ಸರಣಿ ಗೆದ್ದ ಭಾರತ

ಮೂರನೇ ಟೆಸ್ಟ್‌ ಪಂದ್ಯವನ್ನು ಭಾರತ ಕೈಚೆಲ್ಲಿ, ನಾಲ್ಕನೇ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿತು. ಆದರೂ, ಭಾರತವು ಬಾರ್ಡರ್‌ ಗವಾಸ್ಕರ್‌-ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಸರಣಿಯನ್ನು 2-1 ಅಂತರದಿಂದ ಗೆಲ್ಲುವ ಮೂಲಕ ಭಾರತವು ಸತತ ನಾಲ್ಕನೇ ಬಾರಿ ಪ್ರತಿಷ್ಠಿತ ಟ್ರೋಫಿ ಗೆದ್ದಿತು. ವಿಶೇಷವೆಂದರೆ, ಕಳೆದ ನಾಲ್ಕೂ ಆವೃತ್ತಿಗಳ ಬಾರ್ಡ್‌ರ್‌-ಗವಾಸ್ಕರ್‌ ಟ್ರೋಫಿಯನ್ನು ಕ್ರಮವಾಗಿ 2-1 ಅಂತರದಿಂದಲೇ ಗೆದ್ದುಕೊಂಡು ಬಂದಿದೆ.

ಪೂಜಾರಾ-ಗಿಲ್‌ ಬೌಲಿಂಗ್

ವಿಶೇಷವೆಂದರೆ, ಈ ಐದನೇ ದಿನದಾಟದಲ್ಲಿ ಚೇತೇಶ್ವರ ಪೂಜಾರ ಮತ್ತು ಶುಬ್ಮನ್‌ ಬೌಲಿಂಗ್‌ ಮಾಡಿದರು. ಇಬ್ಬರೂ ತಲಾ ಒಂದು ಓವರ್‌ ಬೌಲಿಂಗ್‌ ಮಾಡಿದರು. ಶುಬ್ಮನ್‌ ಗಿಲ್‌ ತಮ್ಮ ಎರಡನೇ ಓವರ್‌ನ ಮೊದಲ ಎಸೆತ ಎಸೆದ ಬೆನ್ನಲ್ಲೇ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

ಜೂನ್ 7ರಂದು ಪ್ರಾರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಉಭಯ ತಂಡಗಳು ಮತ್ತೆ ಕಾದಾಡಲಿವೆ. ಇಂಗ್ಲೆಂಡ್‌ನ ಓವಲ್‌ನಲ್ಲಿ ಮತ್ತೆ ಭಾರತ ಹಾಗೂ ಆಸೀಸ್‌ ತಂಡಗಳು ಮುಖಾಮುಖಿಯಾಗಿವೆ. ಸರಣಿಯ ಮೂರನೇ ಟೆಸ್ಟ್‌ನಲ್ಲಿ ಗೆದ್ದು ಆಸ್ಟ್ರೇಲಿಯಾ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿತ್ತು. ಅತ್ತ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ನ್ಯೂಜಿಲೆಂಡ್ ಸೋಲಿಸಿದ ನಂತರ, ಭಾರತ ಕೂಡಾ ಫೈನಲ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿದೆ.

ಪಂದ್ಯದ ಪ್ರಶಸ್ತಿಗಳು

ಪಂದ್ಯದ ಬಲಿಷ್ಠ ಆಟಗಾರ : ಅಕ್ಷರ್‌ ಪಟೇಲ್‌

ಗೇಮ್‌ ಚೇಂಜರ್‌ ಆಫ್‌ ದಿ ಮ್ಯಾಚ್:‌ ಶುಬ್ಮನ್‌ ಗಿಲ್‌

ಪಂದ್ಯಶ್ರೇಷ್ಠ ಆಟಗಾರ: ವಿರಾಟ್ ಕೊಹ್ಲಿ

ಅರಣಿ ಶ್ರೇಷ್ಠ: ರವಿಚಂದ್ರನ್‌ ಅಶ್ವಿನ್‌ ,ಮತ್ತು ರವೀಂದ್ರ ಜಡೇಜಾ