ಕನ್ನಡ ಸುದ್ದಿ  /  Sports  /  Border Gavaskar Trophy India Vs Australia 4th Test Preview

India vs Australia 4th Test: ಇಶಾನ್ ಪದಾರ್ಪಣೆ, ಸಿರಾಜ್‌ಗೆ ರೆಸ್ಟ್: ಅಹಮದಾಬಾದ್‌ ಟೆಸ್ಟ್‌ಗೆ ಭಾರತದ ಸಂಭಾವ್ಯ ಆಡುವ ಬಳಗ ಇದು

ಸದ್ಯ ಮೊಹಮ್ಮದ್ ಶಮಿ ತಂಡಕ್ಕೆ ಮರಳುವುದು ಖಚಿತವಾಗಿದೆ. ಟೆಸ್ಟ್‌ ಸರಣಿ ಬಳಿಕ ಮೂರು ಏಕದಿನ ಪಂದ್ಯಗಳಲ್ಲಿ ಭಾರತದ ವೇಗದ ದಾಳಿಯನ್ನು ಮುನ್ನಡೆಸಲಿರುವ ಸಿರಾಜ್, ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ ಬಳಿಕ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ.

ಶುಬ್ಮನ್‌ ಗಿಲ್‌ ಮತ್ತು ಇಶಾನ್‌ ಕಿಶನ್
ಶುಬ್ಮನ್‌ ಗಿಲ್‌ ಮತ್ತು ಇಶಾನ್‌ ಕಿಶನ್

ಆಸ್ಟ್ರೇಲಿಯಾ ವಿರುದ್ಧದ ಇಂದೋರ್ ಟೆಸ್ಟ್‌ ಕೇವಲ ಎರಡೂವರೆ ದಿನಗಳಿಗಿಂತಲೂ ಕಡಿಮೆ ಅವಧಿಗೆ ಮಯಕ್ತಾಯವಾಯ್ತು. ಅದು ಕೂಡಾ ಭಾರತದ ಹೀನಾಯ ಸೋಲಿನೊಂದಿಗೆ. ನಾಯಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಅಗ್ರ ಕ್ರಮಾಂಕ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಆದರೆ, ಕೆಳ ಕ್ರಮಾಂಕದ ಬ್ಯಾಟಿಂಗ್‌ ಬೆಂಬಲದಿಂದಾಗಿ ತಂಡವು ಅಲ್ಪ ಪ್ರಮಾಣದ ಗೌರವ ಉಳಿಸಿಕೊಂಡಿದೆ. ಇಂತಹ ಪರಿಸ್ಥಿತಿಯ ನಡುವೆ ಭಾರತದ ಮುಂದೆ ನಾಲ್ಕನೇ ಟೆಸ್ಟ್‌ ಎದುರಾಗಿದೆ.

ಮಹತ್ವದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯಕ್ಕೆ ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಮೈದಾನವಾದ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಸಜ್ಜಾಗಿದೆ. ನಾಳೆಯಿಂದ ಪಂದ್ಯವು ಆರಂಭವಾಗಲಿದ್ದು, ಭಾರತವು ಸರಣಿ ಗೆಲುವಿಗೆ ಪ್ರಯತ್ನಿಸಲಿದೆ. ಇನ್ನೊಂದೆಡೆ ಈಗಾಗಲೇ ಸರಣಿ ಸೋಲು ಖಚಿತವಾಗಿರುವ ಆಸೀಸ್‌, ಪಂದ್ಯವನ್ನು ಗೆದ್ದು ಸರಣಿಯನ್ನು ಡ್ರಾ ಮಾಡಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಲಿದೆ.

ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರನ್ನು ಮೂರನೇ ಟೆಸ್ಟ್‌ಪಂದ್ಯದಿಂದ ಹೊರಗಿಡಲಾಗಿತ್ತು. ಅದಕ್ಕೂ ಹಿಂದಿನ ಎರಡು ಟೆಸ್ಟ್‌ಗಳಲ್ಲಿಉತ್ತಮ ಪ್ರದರ್ಶನ ನೀಡಲು ವಿಫಲರಾದ ಕನ್ನಡಿಗನ್ನು ಹೊರಗಿಟ್ಟು, ಶುಬ್ಮನ್‌ ಗಿಲ್‌ ಅವರನ್ನು ತಂಡಕ್ಕೆ ಕರೆತರಲಾಯ್ತು. ಆದರೆ, ಇದರಿಂದ ತಂಡಕ್ಕೆ ಲಾಭದ ಬದಲಿಗೆ ನಷ್ಟವೇ ಹೆಚ್ಚಾಯ್ತು. ಭಾರತದ ಬ್ಯಾಟಿಂಗ್ ಘಟಕದ ಸಮಸ್ಯೆಯು ಕೇವಲ ಒಬ್ಬ ಆಟಗಾರನದ್ದಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆ ಎಸ್ ಭರತ್ ಸೇರಿದಂತೆ ಸಾಮೂಹಿಕ ವೈಫಲ್ಯ ಕಂಡುಬಂದಿದೆ.

ಭಾರತದ ವೈಫಲ್ಯಗಳನ್ನು ಮೆಟ್ಟಿ ನಿಂತು ತಂಡದ ಗೌರವಯುತ ಪ್ರದರ್ಶನಕ್ಕೆ ಕಾರಣರಾದವರು ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್. ನಾಗ್ಪುರ ಹಾಗೂ ದೆಹಲಿ ಟೆಸ್ಟ್‌ಗಳಲ್ಲಿ ತಂಡದ ನ್ಯೂನತೆಗಳನ್ನು ಇವರುಗಳು ಮರೆಮಾಚಿದರು. ಹೀಗಾಗಿ ಸರಣಿಯಲ್ಲಿ ಭಾರತ ಮೇಲುಗೈ ಸಾಧಿಸಲು ಕಾರಣ ಕೆಳ ಕ್ರಮಾಂಕದ ಆಟಗಾರರು ಎಂಬುದು ನೂರು ಪ್ರತಿಶತ ಸತ್ಯ. ಸದ್ಯ ಅಹಮದಾಬಾದ್‌ನಲ್ಲಿ ಗುರುವಾರ ಪ್ರಾರಂಭವಾಗುವ ಸರಣಿಯ ನಿರ್ಣಾಯಕ ಪಂದ್ಯದಲ್ಲಿ, ಟೀಮ್‌ ಇಂಡಿಯಾದ ಬ್ಯಾಟಿಂಗ್ ಘಟಕದ ಮೇಲೆ ಹೆಚ್ಚಿನ ಚಿತ್ತ ನೆಟ್ಟಿದೆ. ಅಲ್ಲದೆ ಸಹಜವಾಗಿಯೂ ಪಿಚ್‌ ಹೇಗ ವರ್ತಿಸಲಿದೆ ಎಂಬ ಬಗ್ಗೆ ಕುತೂಹಲ ಹೆಚ್ಚಿದೆ.

ಈ ಟೆಸ್ಟ್‌ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೆ ಎಸ್‌ ಭರತ್‌ ಕೂಡಾ ಉತ್ತಮ ಪ್ರದರ್ಶನ ನೀಡಿಲ್ಲ. ಆದರೆ, ವಿಕೆಟ್‌ ಕೀಪಿಂಗ್‌ನಲ್ಲಿ ಉತ್ತಮ ಪ್ರದರ್ಶನ ಮೂಡಿ ಬರುತ್ತಿದೆ. ಹೀಗಾಗಿ ಇವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ತಂಡದಲ್ಲಿ ಚಿಂತನೆ ಹೆಚ್ಚಿದೆ. ಆದರೆ, ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಭರತ್‌ ಪರ ಮಾತನಾಡಿದ್ದು, ಅವರ ಕೀಪಿಂಗ್‌ ಕೌಶಲ್ಯವನ್ನು ಮೆಚ್ಚಿಕೊಂಡಿದ್ದಾರೆ. ಒಂದು ವೇಳೆ ಇವರನ್ನು ತಂಡದಿಂದ ಹೊರಗಿಟ್ಟರೆ, ವಿಕೆಟ್‌ ಕೀಪಿಂಗ್‌ ಆಯ್ಕೆಯಾಗಿ ತಂಡಕ್ಕೆ ಇಶಾನ್‌ ಕಿಶನ್‌ ಕಾಲಿಡಲಿದ್ದಾರೆ.

ಭಾರತದ ಬೌಲಿಂಗ್‌ಗೆ ಸಂಬಂಧಿಸಿದಂತೆ, ಒಬ್ಬ ಸೀಮರ್ ಆಡಿದರೆ ಸಾಕು ಎಂದು ನಂಬುವ ಸಂಭವವಿದೆ. ಆದರೆ ಸರಣಿಯಲ್ಲಿ ಹೊಸ ಚೆಂಡಿನೊಂದಿಗೆ ವೇಗಿಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಆ ಒಂದು ಅಥವಾ ಎರಡು ವಿಕೆಟ್‌ಗಳು ಕೂಡಾ ಪಂದ್ಯದ ಗತಿಯನ್ನು ಬದಲಿಸಬಲ್ಲವು. ಈ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ದ್ರಾವಿಡ್ ಅವರ ಮಾತುಗಳ ಪ್ರಕಾರ, ಭಾರತವು ಇಬ್ಬರು ಸೀಮರ್‌ಗಳು ಮತ್ತು ಮೂವರು ಸ್ಪಿನ್ನರ್‌ಗಳ ಸಂಯೋಜನೆಯಿಂದ ಹಿಂದೆ ಸರಿಯುವ ಸಾಧ್ಯತೆಯಿಲ್ಲ.

ಸದ್ಯ ಮೊಹಮ್ಮದ್ ಶಮಿ ತಂಡಕ್ಕೆ ಮರಳುವುದು ಖಚಿತವಾಗಿದೆ. ಟೆಸ್ಟ್‌ ಸರಣಿ ಬಳಿಕ ಮೂರು ಏಕದಿನ ಪಂದ್ಯಗಳಲ್ಲಿ ಭಾರತದ ವೇಗದ ದಾಳಿಯನ್ನು ಮುನ್ನಡೆಸಲಿರುವ ಸಿರಾಜ್, ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ ಬಳಿಕ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ.

4ನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಆಡುವ ಬಳಗ

ಆರಂಭಿಕರು: ರೋಹಿತ್ ಶರ್ಮನ್, ಶುಬ್ಮನ್ ಗಿಲ್

ಅಗ್ರ ಮತ್ತು ಮಧ್ಯಮ ಕ್ರಮಾಂಕ: ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್

ವಿಕೆಟ್ ಕೀಪರ್: ಇಶಾನ್ ಕಿಶನ್

ಆಲ್‌ರೌಂಡರ್‌ಗಳು: ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಆರ್ ಅಶ್ವಿನ್

ವೇಗಿಗಳು: ಮೊಹಮ್ಮದ್ ಶಮಿ, ಉಮೇಶ್ ಯಾದವ್