ಸಾವನ್ನು ಹತ್ತಿರದಿಂದ ನೋಡಿದ್ದೇನೆ; ಜೇಕ್ ಪಾಲ್ ವಿರುದ್ಧ ಸೋತರೂ ನಾನು ಗೆದ್ದಿದ್ದೇನೆ ಎಂದ ಮೈಕ್ ಟೈಸನ್
ಹೆವಿವೇಯ್ಟ್ ಬಾಕ್ಸಿಂಗ್ ಪಂದ್ಯದಲ್ಲಿ ಜೇಕ್ ಪಾಲ್ ವಿರುದ್ಧ ಸೋತಿದ್ದಕ್ಕೆ ನನಗೆ ವಿಷಾದವಿಲ್ಲ ಎಂದು ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ ಹೇಳಿದ್ದಾರೆ. ತಾನು ಈಗಾಗಲೇ ಸಾವನ್ನು ಹತ್ತಿರದಿಂದ ನೋಡಿದವನು. ಆರೋಗ್ಯ ಸಮಸ್ಯೆಯ ನಡುವೆಯೂ ಹೋರಾಡಿ ಸೋತಿದ್ದೇನೆ. ಈ ಸೋಲು ನನಗೆ ಗೆಲುವಿನಂತೆಯೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಜೇಕ್ ಪಾಲ್ ವಿರುದ್ಧದ ಅನಿರೀಕ್ಷಿತ ಸೋಲಿನ ಕುರಿತು ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ (Mike Tyson) ಪ್ರತಿಕ್ರಿಯೆ ನೀಡಿದ್ದಾರೆ. ನವೆಂಬರ್ 15ರ ಶುಕ್ರವಾರ ನಡೆದ ಹೆವಿವೇಯ್ಟ್ ಬಾಕ್ಸಿಂಗ್ ಪಂದ್ಯದಲ್ಲಿ ಯುವ ಬಾಕ್ಸರ್ ಜೇಕ್ ಪಾಲ್ ವಿರುದ್ಧ ಟೈಸನ್ ಸೋಲು ಕಂಡರು. ಬರೋಬ್ಬರಿ ಎಂಟು ಸುತ್ತುಗಳವರೆಗೆ ಆಡಿದ ಟೈಸನ್, ಬಾಕ್ಸಿಂಗ್ ರಿಂಗ್‌ನಲ್ಲಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 58ನೇ ವಯಸ್ಸಿನಲ್ಲಿಯೂ ತೀವ್ರ ಪೈಪೋಟಿ ನೀಡಿದ ಅವರು, ಈ ಹಿಂದೆ ಯೂಟ್ಯೂಬರ್ ಆಗಿದ್ದು ಈಗ ಬಾಕ್ಸರ್ ಆಗಿರುವ ಜೇಕ್ ಪಾಲ್ ವಿರುದ್ಧದ ಹೋರಾಟದಲ್ಲಿ ಸೋತ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದಾರೆ. ಈ ಸೋಲಿನ ಬಗ್ಗೆ ತನಗೆ ಯಾವುದೇ ವಿಷಾದವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ವಿಶ್ವ ಹೆವಿವೇಯ್ಟ್ ಮಾಜಿ ಚಾಂಪಿಯನ್ ಆಗಿರುವ ಮೈಕ್ ಟೈಸನ್ ಪಂದ್ಯವೆಂದರೆ ಅಭಿಮಾನಿಗಳ ಕ್ರೇಜ್ ದುಪ್ಪಟ್ಟು. ಅವರು ವೃತ್ತಿಪರ ಹೋರಾಟಕ್ಕಾಗಿ ಬಾಕ್ಸಿಂಗ್ ರಿಂಗ್‌ಗೆ ಮರಳಿದ್ದರಿಂದ ಈ ಪಂದ್ಯದ ಬಗ್ಗೆ ಜನರ ಕ್ರೇಜ್ ಹೆಚ್ಚಿತ್ತು. ಹೀಗಾಗಿ ಪ್ರಚಾರ ಕೂಡಾ ಗಗನಕ್ಕೇರಿತ್ತು. ಪ್ರಮುಖ ಈವೆಂಟ್ ವಿಶ್ವದಾದ್ಯಂತದ ವೃತ್ತಿಪರ ಬಾಕ್ಸಿಂಗ್ ಅಭಿಮಾನಿಗಳ ಗಮನ ಸೆಳೆಯಿತು. ಸಾವಿರಾರು ಅಭಿಮಾನಿಗಳು ಟೈಸನ್ ಬೆಂಬಲಕ್ಕೆ ಬಂದಿದ್ದರು. ಆದರೆ, ಟೈಸನ್ ಸೋಲು ಫ್ಯಾನ್ಸ್‌ಗೆ ನಿರಾಶೆ ಮೂಡಿಸಿದೆ.
ಐರನ್ ಮೈಕ್ ಅವರು ಎಕ್ಸ್‌ನಲ್ಲಿ ತಮ್ಮ ಹೋರಾಟದ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. “ಕೊನೆಯ ಬಾರಿಗೆ” ಬಾಕ್ಸಿಂಗ್ ರಿಂಗ್‌ಗೆ ಬಂದು ಹಿನ್ನಡೆ ಕಂಡಿರುವುದಕ್ಕೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ.
“ಸೋತರೂ ಗೆಲುವು ಸಾಧಿಸಿದಂತ ಸಂದರ್ಭಗಳಲ್ಲಿ ಇದು ಕೂಡಾ ಒಂದು” ಎಂದು ಟೈಸನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಕಳೆದ ರಾತ್ರಿಯ ದಿನಕ್ಕೆ ನಾನು ಕೃತಜ್ಞನಾಗಿದ್ದೇನೆ. ಕೊನೆಯ ಬಾರಿಗೆ ರಿಂಗ್‌ಗೆ ಬಂದಿರುವುದಕ್ಕೆ ಯಾವುದೇ ವಿಷಾದವಿಲ್ಲ” ಎಂದು ಹೇಳಿದ್ದಾರೆ.
ಟೈಸನ್ ಪಂದ್ಯ ವೀಕ್ಷಣೆಗಾಗಿ ಡಲ್ಲಾಸ್ ಎಟಿ ಆಂಡ್ ಟಿ ಕ್ರೀಡಾಂಗಣಕ್ಕೆ ಬರೋಬ್ಬರಿ 72,300 ಅಭಿಮಾನಿಗಳು ಹಾಜರಾಗಿದ್ದರು. ಇದೇ ವೇಳೆ ವಿಶ್ವಾದ್ಯಂತ 60 ಮಿಲಿಯನ್‌ಗೂ ಹೆಚ್ಚು ಕುಟುಂಬಗಳು ಬಾಕ್ಸಿಂಗ್ ವೀಕ್ಷಿಸಿವೆ ಎಂದು ಟೆಲಿಕಾಸ್ಟರ್ ನೆಟ್‌ಫ್ಲಿಕ್ಸ್ ತಿಳಿಸಿದೆ.
ಜೂನ್‌ನಲ್ಲಿಯೇ ಸಾವನ್ನು ಹತ್ತಿರದಿಂದ ನೋಡಿದ್ದೆ
ಆರೋಗ್ಯ ಸಮಸ್ಯೆಗಳಿಂದಾಗಿ ಕಳೆದ ಜೂನ್ ತಿಂಗಳಲ್ಲಿಯೇ ಸಾವನ್ನು ಹತ್ತಿರದಿಂದ ನೋಡದ್ದೇನೆ ಎಂದು ಹೇಳಿದ ಟೈಸನ್, ಸೋಲಿನ ಸ್ವಲ್ಪ ಸಮಯದ ನಂತರ ಬಂದ ಪ್ರತಿಕ್ರಿಯೆಗಳನ್ನು ನೋಡಿ ಮತ್ತೊಮ್ಮೆ ಬಾಕ್ಸಿಂಗ್ ರಿಂಗ್‌ಗೆ ಮರಳುವ ಅವಕಾಶಗಳನ್ನು ಮುಕ್ತವಾಗಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಮಿಯಾಮಿಯಿಂದ ಲಾಸ್ ಏಂಜಲೀಸ್‌ಗೆ ವಿಮಾನ ಪಯಣ ಮಾಡುವಾಗ ರಕ್ತ ವಾಂತಿ ಮಾಡಿದ ನಂತರ, ವೈದ್ಯಕೀಯ ಚಿಕಿತ್ಸೆಗೆ ಒಳಗಾದರು. ಹೀಗಾಗಿ ಜುಲೈ ನಂತರ ಆಟದಿಂದ ಹಿಂದೆ ಸರಿಯಬೇಕಾಯ್ತು. ಇದೇ ಕಾರಣಕ್ಕೆ ತನ್ನದು ಹೋರಾಟದ ಗೆಲುವು ಎಂದು ಹೇಳಿದರು.
“ನಾನು ಜೂನ್‌ನಲ್ಲಿಯೇ ಬಹುತೇಕ ಸತ್ತಿದ್ದೇನೆ” ಎಂದು ಟೈಸನ್ ಹೇಳಿದರು. “8 ಬಾರಿ ದೇಹಕ್ಕೆ ರಕ್ತ ಬೇಕಾಯ್ತು. ನನ್ನ ಅರ್ಧದಷ್ಟು ರಕ್ತವನ್ನು ಆಸ್ಪತ್ರೆಯಲ್ಲಿ ಕಳೆದುಕೊಂಡಿದ್ದೇನೆ. ಆರೋಗ್ಯವಾಗಿರಲು ನಿರಂತರ ಹೋರಾಡಬೇಕಾಯಿತು. ಹೀಗಾಗಿ ನಾನು ಈಗ ಸೋತರೂ ಗೆದ್ದಿದ್ದೇನೆ” ಎಂದು ಹೇಳಿದ್ದಾರೆ.
ಟೈಸನ್ ಅವರ ಪೋಸ್ಟ್‌ಗೆ ಎಲೋನ್ ಮಸ್ಕ್ ಕೂಡ ಪ್ರತಿಕ್ರಿಯಿಸಿದ್ದಾರೆ. ಟೈಸನ್ನ ಅವರನ್ನು ಮಸ್ಕ್ “ಬ್ರಾವೋ” ಎಂದು ಕರೆದಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | PKL 2024: ಪಿಕೆಎಲ್ 2024 ರಲ್ಲಿ ಕಳಪೆ ಪ್ರದರ್ಶನ ನೀಡಿದ ನಾಯಕರು ಇವರು, ಆದ್ರೆ ತಂಡದ ಪ್ರದರ್ಶನ ಮಾತ್ರ ಅದ್ಭುತ!
ವಿಭಾಗ