fifa world cup 2022: ಫಿಫಾ ವಿಶ್ವಕಪ್ ನಲ್ಲಿ ಅತಿವೇಗದ ಗೋಲು: ಕೆನಡಾ ಆಟಗಾರ ಅಲ್ಫಾನ್ಸೊ ಡೇವಿಸ್ ಹೊಸ ದಾಖಲೆ
ಕೆನಡಾದ ಫುಟ್ಬಾಲ್ ಆಟಗಾರ ಅಲ್ಫೊನ್ಸೊ ಡೇವಿಸ್ 2022 ರ ಫಿಫಾ ವಿಶ್ವಕಪ್‌ನಲ್ಲಿ ವೇಗವಾಗಿ ಗೋಲು ಹೊಡೆದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಕ್ರೊಯೆಷಿಯಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಡೇವಿಸ್ ಕೇವಲ 67 ಸೆಕೆಂಡ್‌ಗಳಲ್ಲಿ ಗೋಲು ಗಳಿಸಿದ್ದಾರೆ.
ಫಿಫಾ ವಿಶ್ವಕಪ್ ನಲ್ಲಿ ಕೆನಡಾದ ಆಟಗಾರ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಕೆನಡಾದ ಫುಟ್ಬಾಲ್ ಆಟಗಾರ ಅಲ್ಫೊನ್ಸೊ ಡೇವಿಸ್ ಅತಿ ವೇಗವಾಗಿ ಗೋಲು ಗಳಿಸಿದ ಆಟಗಾರ ಎನಿಸಿದ್ದಾರೆ.
ಭಾನುವಾರ ನಡೆದ ಕ್ರೊಯೆಷಿಯಾ ವಿರುದ್ಧದ ಪಂದ್ಯದಲ್ಲಿ ಅವರು ಈ ದಾಖಲೆ ಮಾಡಿದರು. ಭಾನುವಾರ ಎಫ್ ಗುಂಪಿನ ಭಾಗವಾಗಿ ಕ್ರೊಯೆಷಿಯಾ ಮತ್ತು ಕೆನಡಾ ನಡುವೆ ಪಂದ್ಯ ನಡೆಯಿತು.
ಪಂದ್ಯದ ಮೊದಲ 67 ಸೆಕೆಂಡುಗಳಲ್ಲಿ ಅಲ್ಫೊನ್ಸೊ ಡೇವಿಸ್ ಗೋಲು ಗಳಿಸಿ ಕೆನಡಾಕ್ಕೆ ಉತ್ತಮ ಆರಂಭ ನೀಡಿದರು. 2022 ರ ಫಿಫಾ ವಿಶ್ವಕಪ್‌ನಲ್ಲಿ ಡೇವಿಸ್ ವೇಗವಾಗಿ ಗೋಲು ಗಳಿಸಿದ ಆಟಗಾರರಾದರು. ಇದು ವಿಶ್ವಕಪ್‌ನಲ್ಲಿ ಡೇವಿಸ್ ಅವರ ಮೊದಲ ಗೋಲು ಎಂಬುದು ಗಮನಾರ್ಹ. ಡೇವಿಸ್ ಕೆನಡಾಕ್ಕೆ ಉತ್ತಮ ಆರಂಭವನ್ನು ನೀಡಿದರು, ಆದರೆ ಈ ಪಂದ್ಯದಲ್ಲಿ ತಂಡವು ಸೋಲಬೇಕಾಯಿತು.
ಈ ಪಂದ್ಯದಲ್ಲಿಕ್ರೊಯೆಷಿಯಾ 4-1 ಗೋಲುಗಳಿಂದ ಕೆನಡಾ ತಂಡವನ್ನು ಸೋಲಿಸಿತು. ಕ್ರೊಯೆಷಿಯಾದ ಆಟಗಾರರಲ್ಲಿ ಕ್ರಮಾರಿಕ್ ಎರಡು ಗೋಲು ಗಳಿಸಿದರೆ, ವಿವಾಜ ಮತ್ತು ಮಜರ್ ತಲಾ ಒಂದು ಗೋಲು ಗಳಿಸಿದರು. ಗ್ರೂಪ್ ಹಂತದಲ್ಲಿ ಎರಡು ಪಂದ್ಯಗಳನ್ನು ಸೋತ ಕೆನಡಾ ವಿಶ್ವಕಪ್‌ನಿಂದ ಹೊರಬಿದ್ದಿದೆ.
ಟರ್ಕಿಶ್ ಆಟಗಾರ ಹಕನ್ ಸುಕುರ್ ವಿಶ್ವಕಪ್ ಇತಿಹಾಸದಲ್ಲಿ ಅತಿ ವೇಗದ ಗೋಲು ಗಳಿಸಿದ ದಾಖಲೆ ಹೊಂದಿದ್ದಾರೆ. 2002 ರ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ, ಹಕನ್ ಸುಕುರ್ ಆಟ ಪ್ರಾರಂಭವಾದ 11 ಸೆಕೆಂಡುಗಳಲ್ಲಿ ಗೋಲು ಗಳಿಸಿದರು. ಇಪ್ಪತ್ತು ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ.