ಕನ್ನಡ ಸುದ್ದಿ  /  Sports  /  Chahal Kisses To Suryakumar Hand In Extraordinary Gesture

Chahal on Suryakumar: ಶತಕವೀರ ಸೂರ್ಯ ಕೈಗೆ ಮುತ್ತಿಟ್ಟ ಯೂಜಿ; 'ನಮ್ಮ ತಂಡದಲ್ಲಿರುವುದು ನನ್ನ ಪುಣ್ಯ' ಎಂದ ಸ್ಪಿನ್ನರ್

ಇದೇ ವೇಳೆ ಚಹಾಲ್‌ ಅವರ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಚಹಾಲ್ ಆಟದ ನಂತರ ಸೂರ್ಯಕುಮಾರ್ ಕೈಗೆ ಚುಂಬಿಸುತ್ತಿರುವುದನ್ನು ಕಾಣಬಹುದು. ಸೂರ್ಯ ಅವರ ಕೈಗಳನ್ನು ತಮ್ಮ ಎರಡು ಕಣ್ಣುಗಳತ್ತ ಸ್ಪರ್ಷಿಸಿ, ಮುಂಗೈಗೆ ಮುತ್ತಿಟ್ಟಿದ್ದಾರೆ. ಆ ಮೂಲಕ ಸೂರ್ಯನಿಗೆ ಚಹಾಲ್‌ ಗೌರವ ಸೂಚಿಸಿದ್ದು, ಈ ವಿಡಿಯೋ ವೈರಲ್‌ ಆಗಿದೆ.

ಸೂರ್ಯಕುಮಾರ್ ಯಾದವ್ ಕೈಗಳಿಗೆ ಚಹಾಲ್ ಮುತ್ತಿಟ್ಟ ದೃಶ್ಯ
ಸೂರ್ಯಕುಮಾರ್ ಯಾದವ್ ಕೈಗಳಿಗೆ ಚಹಾಲ್ ಮುತ್ತಿಟ್ಟ ದೃಶ್ಯ

ಶನಿವಾರ ರಾಜ್‌ಕೋಟ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವುದರೊಂದಿಗೆ, ಭಾರತವು ಸರಣಿಯನ್ನು ತನ್ನದಾಗಿಸಿಕೊಂಡಿತು. ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಸೂರ್ಯಕುಮಾರ್ ಯಾದವ್, ಶತಕ ಸಿಡಿಸಿ ಮಿಂಚಿದರು. 51 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಒಂಬತ್ತು ಆಕರ್ಷಕ ಸಿಕ್ಸರ್‌ಗಳೊಂದಿಗೆ ಅಜೇಯ 112 ರನ್ ಗಳಿಸುವ ಮೂಲಕ ಭಾರತದ ಇನ್ನಿಂಗ್ಸ್ ಮುನ್ನಡೆಸಿದರು. ಅತಿಥೇಯರು 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 228 ರನ್ ಗಳಿಸಿದರೆ, ಲಂಕಾ ಗುರಿ ಬೆನ್ನಟ್ಟಲು ವಿಫಲವಾಯಿತು. ಅಂತಿಮವಾಗಿ 16.4 ಓವರ್‌ಗಳಲ್ಲಿ ಕೇವಲ 137 ರನ್‌ಗಳಿಗೆ ಆಲೌಟ್ ಆಯಿತು.

ವಿಶೇಷವೆಂದರೆ, ಕೇವಲ ಆರು ತಿಂಗಳ ಅವಧಿಯಲ್ಲಿ ಸೂರ್ಯಕುಮಾರ್ ಅವರ ಮೂರನೇ ಟಿ20 ಶತಕ ಇದಾಗಿದೆ. ಕಳೆದ ವರ್ಷ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ, ಸೂರ್ಯ ಮೊದಲ ಶತಕ ಸಿಡಿಸಿದ್ದರು. ಅಲ್ಲಿ ಭರ್ಜರಿ 117 ರನ್‌ ಬಾರಿಸಿದ್ದರು. ಆದರೆ, ಆ ಪಂದ್ಯ ಗೆಲ್ಲುವಲ್ಲಿ ಭಾರತ ವಿಫಲವಾಯ್ತು. ನವೆಂಬರ್‌ನಲ್ಲಿ ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತೊಂದು ಸೆಂಚುರಿ ಸಿಡಿಸಿದರು. ಆ ಬಳಿಕ ಕಳೆದ ರಾತ್ರಿ ಮತ್ತೊಂದು ಶತಕ ಸಿಡಿಸಿದ ಸ್ಕೈ, ತಮ್ಮ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಸೂರ್ಯಕುಮಾರ್, ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ತನಗೆ ಆಡಲು ಹೇಗೆ ಸುಲಭ ಎಂಬುದನ್ನು ಬಹಿರಂಗಪಡಿಸಿದರು.

“ಆಟಕ್ಕೆ ತಯಾರಿ ನಡೆಸುತ್ತಿರುವಾಗ ನಮ್ಮ ಮೇಲೆ ನಾವೇ ಒತ್ತಡ ಹೇರುವುದು ನಿಜಕ್ಕೂ ಮುಖ್ಯ. ಅಭ್ಯಾಸದ ವೇಳೆ ಅದನ್ನು ಮಾಡಿದರೆ, ಆಟ ಆಡುವಾಗ ಸ್ವಲ್ಪ ಸುಲಭವಾಗುತ್ತದೆ. ನನ್ನ ಆಟದ ಹಿಂದೆ ಬಹಳಷ್ಟು ಕಠಿಣ ಪರಿಶ್ರಮವಿದೆ. ಆದರೆ, ಅಭ್ಯಾಸದ ಅವಧಿಯಲ್ಲಿ ಗುಣಮಟ್ಟದ ಆಟ ಆಡುವುದು ತುಂಬಾ ಮುಖ್ಯ. ನಿಮ್ಮ ಆಟ ಏನು ಎಂಬುದನ್ನು ನೀವು ತಿಳಿದುಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳಬೇಕು. ನಾನು ಬೌಂಡರಿಗಳನ್ನು ಗುರಿಯಾಗಿಸಿ ಆಡುತ್ತೇನೆ,” ಎಂದು ಪಂದ್ಯದ ಬಳಿಕ ಸೂರ್ಯಕುಮಾರ್ ಹೇಳಿದರು.

“ಕೆಲವು ಶಾಟ್‌ಗಳನ್ನು ಮೊದಲೇ ನಿರ್ಧರಿಸಿ ಬ್ಯಾಟ್‌ ಬೀಸುತ್ತೇನೆ. ಆದರೆ ಎಲ್ಲಾ ಸಮಯದಲ್ಲೂ ಯೋಜನೆ ಸಫಲವಾಗುವುದಿಲ್ಲ. ನಮ್ಮಲ್ಲಿ ಇತರ ಹೊಡೆತಗಳೂ ಇರಬೇಕು. ಆಗ ಮಾತ್ರ ನಾವು ಬೌಲರ್ ತನ್ನ ಯೋಜನೆಯನ್ನು ಬದಲಾಯಿಸಿದಾಗ ತಕ್ಕ ಉತ್ತರ ನೀಡಬಹುದು. ಕೋಚ್‌ ದ್ರಾವಿಡ್ ಅವರು ನನಗೆ ಸ್ವಾತಂತ್ರ್ಯ ನೀಡಿದ್ದಾರೆ. ನನ್ನ ಆಟವನ್ನು ಆಟಲು ನನಗೆ ಅವಕಾಶ ನೀಡಿದ್ದಾರೆ,” ಎಂದು ಸೂರ್ಯ ಹೇಳಿದರು.

32 ವರ್ಷದ ಆಟಗಾರನ ಬ್ಯಾಟಿಂಗ್ ಸಾಮರ್ಥ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಹ ಆಟಗಾರರು ಕೂಡಾ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸ್ಪಿನ್ನರ್‌ ಯಜುವೇಂದ್ರ ಚಹಾಲ್‌, ಅವರು ವಿಭಿನ್ನ ಮಟ್ಟದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಾನು ಅವರ ತಂಡದಲ್ಲಿರುವುದಕ್ಕೆ ನನಗೆ ಸಂತೋಷವಾಗಿದೆ. ನೆಟ್ಸ್‌ನಲ್ಲಿ ನಾವು ಅವರಿಗೆ ಬೌಲಿಂಗ್‌ ಮಾಡಲು ಖುಷಿಯಾಗುತ್ತದೆ" ಎಂದು ಹೇಳಿದ್ದಾರೆ.

ಇದೇ ವೇಳೆ ಚಹಾಲ್‌ ಅವರ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಚಹಾಲ್ ಆಟದ ನಂತರ ಸೂರ್ಯಕುಮಾರ್ ಕೈಗೆ ಚುಂಬಿಸುತ್ತಿರುವುದನ್ನು ಕಾಣಬಹುದು. ಸೂರ್ಯ ಅವರ ಕೈಗಳನ್ನು ತಮ್ಮ ಎರಡು ಕಣ್ಣುಗಳತ್ತ ಸ್ಪರ್ಷಿಸಿ, ಮುಂಗೈಗೆ ಮುತ್ತಿಟ್ಟಿದ್ದಾರೆ. ಆ ಮೂಲಕ ಸೂರ್ಯನಿಗೆ ಚಹಾಲ್‌ ಗೌರವ ಸೂಚಿಸಿದ್ದು, ಈ ವಿಡಿಯೋ ವೈರಲ್‌ ಆಗಿದೆ.

ಭಾರತ ಪರ ಸೂರ್ಯಕುಮಾರ್‌ ಹೊರತುಪಡಿಸಿ, ಶುಭಮನ್ ಗಿಲ್ ಉತ್ತಮ ಪ್ರದರ್ಶನ ನೀಡಿದರು. ಆದರೂ ಅರ್ಧಶತಕದಿಂದ ವಂಚಿತರಾದ ಅವರು, 46 ರನ್ ಗಳಿಸಿದರು. ಮತ್ತೊಂದೆಡೆ, ಕಳೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ರಾಹುಲ್ ತ್ರಿಪಾಠಿ, 16 ಎಸೆತಗಳಲ್ಲಿ 5 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 35 ರನ್‌ಗಳನ್ನು ಸಿಡಿಸಿದರು. ಶ್ರೀಲಂಕಾ ಪರ ದಿಲ್ಶಾನ್ ಮಧುಶಂಕ ಎರಡು ವಿಕೆಟ್ ಕಬಳಿಸಿದರಾದರೂ ನಾಲ್ಕು ಓವರ್‌ಗಳಲ್ಲಿ 55 ರನ್‌ ಬಿಟ್ಟುಕೊಟ್ಟರು.