ಸಂಸದರಿಂದ 13 ಗ್ರಾಂ ಚಿನ್ನದ ಸರ ಉಡುಗೊರೆ; ಖೋ ಖೋ ವಿಶ್ವಕಪ್ ಗೆದ್ದ ಚೈತ್ರಾಗೆ ಅದ್ಧೂರಿ ಸ್ವಾಗತ, ಜೆಸಿಬಿ ಮೂಲಕ ಹೂವಿನ ಮಳೆಗರೆದ ಜನತೆ
B Chaithra: ಖೋ ಖೋ ವಿಶ್ವಕಪ್ ಗೆದ್ದ ಭಾರತ ಮಹಿಳೆಯರ ತಂಡದ ಭಾಗವಾಗಿದ್ದ ಬಿ ಚೈತ್ರಾ ಅವರಿಗೆ ಟಿ ನರಸೀಪುರ ತಾಲೂಕಿನ ಕುರುಬೂರು ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.

ಚೊಚ್ಚಲ ಖೋ ಖೋ ಮಹಿಳೆಯರ ವಿಶ್ವಕಪ್ (Kho kho women world cup) ಚಾಂಪಿಯನ್ ಪಟ್ಟ ಅಲಂಕರಿಸಿದ ಗೆಲುವಿನ ಬಳಿಕ ಇದೇ ಮೊದಲ ಬಾರಿಗೆ ತವರಿಗೆ ಆಗಮಿಸಿದ ಭಾರತ ತಂಡದ ಚೈತ್ರಾ ಅವರಿಗೆ ಮೈಸೂರು ಜಿಲ್ಲೆಯ ಟಿ ನರಸೀಪುರ ಮತ್ತು ಹುಟ್ಟೂರು ಕುರುಬೂರು ಗ್ರಾಮಸ್ಥರು ಮತ್ತು ವಿದ್ಯಾಭ್ಯಾಸ ಮಾಡಿದ ಶಾಲೆಯ ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು. ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಚೈತ್ರಾ ಅವರನ್ನು ಶಾಲಾ ಸಿಬ್ಬಂದಿ ಹಾಗೂ ವಿವಿಧ ಮಠಾಧೀಶರು ಸನ್ಮಾನಿಸಿ ಗೌರವಿಸಿ ಅಭಿನಂದನೆ ಸಲ್ಲಿಸಿದರು. ಚಾಮರಾಜನಗರ ಸಂಸದ ಸುನಿಲ್ ಬೋಸ್ ಅಭಿನಂದಿಸಿ 13 ಗ್ರಾಂ ಚಿನ್ನದ ಸರ ಹಾಗೂ 20 ಸಾವಿರ ನಗದು ಬಹುಮಾನ ವೈಯಕ್ತಿಕವಾಗಿ ವಿತರಿಸಿದರು.
ಇತ್ತೀಚೆಗೆ ಮುಕ್ತಾಯಗೊಂಡ ಖೋ ಖೋ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದ ಭಾರತದ ವನಿತೆಯರ ತಂಡದಲ್ಲಿ ಸ್ಥಾನ ಪಡೆದಿದ್ದ ಬಿ ಚೈತ್ರಾ ಅವರು ಫೈನಲ್ನಲ್ಲಿ ಪಂದ್ಯಶ್ರೇಷ್ಠ ಆಟದ ಜೊತೆಗೆ ಎಲ್ಲಾ ಪಂದ್ಯಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಜನವರಿ 25ರ ಶನಿವಾರ ಸಂಜೆ ಟಿ ನರಸೀಪುರದಲ್ಲಿ ಖಾಸಗಿ ಬಸ್ ನಿಲ್ದಾಣದಿಂದ ವಿದ್ಯೋದಯ ಕಾಲೇಜಿನ ತನಕ ಚೈತ್ರಾ ಅವರನ್ನು ತೆರೆದ ಬೆಳ್ಳಿ ರಥದಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು. ಚೈತ್ರಾ ಅವರಿಗೆ ಜೆಸಿಬಿ ಮೂಲಕ ಹೂವಿನ ಮಳೆಗರೆದರು. ಹುಟ್ಟೂರಿನಲ್ಲೂ ಇದೇ ದೃಶ್ಯ ಕಂಡು ಬಂತು. ಮೆರವಣಿಗೆಯುದ್ದಕ್ಕೂ ಜನರು ಘೋಷಣೆ ಕೂಗುವ ಮೂಲಕ ಅದ್ದೂರಿ ಚೈತ್ರೋತ್ಸವ ಆಚರಿಸಿದರು.
ನಿವೇಶನಕ್ಕೆ ಒತ್ತಾಯಿಸಿದ ಕುರುಬೂರು ಶಾಂತಕುಮಾರ್
ವಿಶ್ವಕಪ್ ಖೋ ಖೋ ಚಾಂಪಿಯನ್ ಚೈತ್ರಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿರುವುದು ಸ್ವಾಗತಾರ್ಹ. ಇಂತಹ ಗ್ರಾಮೀಣ ಕ್ರೀಡೆಯಲ್ಲಿ ವಿಶ್ವ ದಾಖಲೆ ಮಾಡಿರುವ ಕ್ರೀಡಾಪಟುವಿಗೆ 5 ಲಕ್ಷ ರೂ ಪ್ರೋತ್ಸಾಹ ಧನ ನೀಡಿರುವುದು ಸರಿಯಾದ ಕ್ರಮ ಅಲ್ಲ. ಕೂಡಲೇ ಮುಖ್ಯಮಂತ್ರಿಗಳು ಪುನರ್ ಪರಿಶೀಲನೆ ಮಾಡಲಿ. ಬೇರೆ ರಾಜ್ಯಗಳಲ್ಲಿ ಪ್ರೋತ್ಸಾಹ ನೀಡಿರುವಂತೆ ಈ ಕ್ರೀಡಾಪಟುವಿಗೆ ಸರ್ಕಾರಿ ಉದ್ಯೋಗ ನೀಡಲಿ ಅಥವಾ ಮೈಸೂರು ನಗರದಲ್ಲಿ ನಿವೇಶನ ನೀಡಲು ಒತ್ತಾಯಿಸುತ್ತೇನೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ಶ್ಲಾಘನೆ
ಖೋ-ಖೋ ವಿಶ್ವಕಪ್‌ನಲ್ಲಿ ಪುರುಷರ ಹಾಗೂ ಮಹಿಳಾ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಭಾರತ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದ ಮಂಡ್ಯದ ಎಂಕೆ ಗೌತಮ್ ಮತ್ತು ಟಿ ನರಸೀಪುರದ ಬಿ ಚೈತ್ರಾ ಅವರನ್ನು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಸನ್ಮಾನಿಸಿ ಗೌರವಿಸಿದ್ದರು. ಇವರ ಜೊತೆಗೆ ಆಟಗಾರರ ತರಬೇತುದಾರರಾದ ಸುಮಿತ್ ಭಾಟಿಯಾ, ತಂಡದ ಮ್ಯಾನೇಜರ್ ರಾಜಕುಮಾರಿ ಅವರನ್ನು ಸನ್ಮಾನಿಸಿದ್ದರು. ಬಳಿಕ ಕರ್ನಾಟಕಕ್ಕೆ ಆಗಮಿಸಿದ ಚೈತ್ರಾ ಮತ್ತು ಗೌತಮ್ ಅವರನ್ನು ಸನ್ಮಾನಿಸಿದ ಸಿದ್ದರಾಮಯ್ಯ, 5 ಲಕ್ಷ ಪ್ರೋತ್ಸಾಹ ಧನ ಘೋಷಿಸಿದ್ದರು.
