Praggnanandhaa: ಪ್ರಗ್ನಾನಂದಾ ಸೆಮೀಸ್ ಪ್ರವೇಶಿಸ್ತಿದ್ದಂತೆ ಅಮ್ಮನ ಆನಂದ ಭಾಷ್ಪ; ತಾಯಿ ಕಣ್ಣಲ್ಲಿ ಮಗನ ಸಾಧನೆ ಖುಷಿ, ಇದು ಚಿತ್ರ ಹೇಳುವ ಕಥೆ
FIDE World Cup: ಚೆಸ್ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ರಮೇಶ್ ಬಾಬು ಪ್ರಗ್ನಾನಂದಾನನ್ನು ತನ್ನ ತಾಯಿ ಪ್ರೀತಿಯಿಂದ ದಿಟ್ಟಿಸಿ ನೋಡುತ್ತಿರುವ ಕ್ಷಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಇದು ಚಿತ್ರ ಹೇಳುವ ಕಥೆ.
ಅಮ್ಮನ ಪ್ರೀತಿಯೇ ಹಾಗೆ, ಆಕಾಶಕ್ಕೂ ನಿಲುಕದ್ದು. ತಾಯಿ ಕಣ್ಣಲ್ಲಿ ಮಗನ ಸಾಧನೆ ನೋಡುವುದೇ ಒಂದು ಸಾರ್ಥಕತೆ. ಅಪಾರ ಖುಷಿ. ವರ್ಣಿಸಲು ಪದಗಳೇ ಸಾಲದೇನೋ ಎನಿಸುತ್ತದೆ. ಹೌದು, ಇಂತಹದ್ದೇ ಸುಂದರ ಘಟನೆಯೊಂದು ನಡೆದಿದೆ. ಚೆಸ್ ವಿಶ್ವಕಪ್‌ನಲ್ಲಿ (FIDE World Cup) ಭಾರತದ ರಮೇಶ್ ಬಾಬು ಪ್ರಗ್ನಾನಂದಾ (R Praggnanandhaa) ಸೆಮಿಫೈನಲ್ ಪ್ರವೇಶಿಸಿದ ಸಂದರ್ಭ, ಆತನ ತಾಯಿ ಮಗನ ಸಾಧನೆ ಕಂಡು ಆನಂದಭಾಷ್ಪ ಸುರಿಸಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ವಾರೆವ್ಹಾ ಎಂತಹ ಅದ್ಭುತ ಎನ್ನುತ್ತಾ, ತಮ್ಮದೇ ರೀತಿಯಲ್ಲಿ ವರ್ಣಿಸುತ್ತಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ ಭಾರತದವರೇ ಆದ ಅರ್ಜುನ್ ಎರಿಗೈಸಿ ವಿರುದ್ಧವೇ ಗೆದ್ದು ಸಂದರ್ಶನ ನೀಡುವ ಸಂದರ್ಭದಲ್ಲಿ ಪ್ರಗ್ನಾನಂದಾ ಅವರ ತಾಯಿ ನಾಗಲಕ್ಷ್ಮಿ ಅವರು (Praggnanandhaa's Mother Nagalakshmi) ತಮ್ಮ ಮಗನನ್ನೇ ನೋಡುತ್ತಿರುವ ಈ ಹೃದಯಸ್ಪರ್ಶಿ ಕ್ಷಣ ಸೆರೆಯಾಗಿದೆ. ಪ್ರಗ್ನಾನಂದಾ ಸಂದರ್ಶನವನ್ನು ನೀಡುತ್ತಿರುವಾಗ ಆತನ ಪಕ್ಕದಲ್ಲಿ ದಿಟ್ಟಿಸಿ ಖುಷಿಯಿಂದ ನಿಂತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮತ್ತೊಂದು ಚಿತ್ರವು ನಾಗಲಕ್ಷ್ಮಿ ಒಂಟಿಯಾಗಿ ಕುಳಿತು ಸಂತೋಷದ ಕಣ್ಣೀರು ಹಾಕುತ್ತಿರುವುದನ್ನು ಕಾಣಬಹುದು.
ವಿಶ್ವನಾಥನ್ ಆನಂದ್ ಬಳಿಕ ಸಾಧನೆ
ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ವಿಶ್ವಕಪ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ತಮ್ಮ ದೇಶವಾಸಿ ಅರ್ಜುನ್ ಎರಿಗೈಸಿ ಅವರನ್ನು ಹಠಾತ್ ಡೆತ್ ಟೈ ಬ್ರೇಕ್‌ನಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಐತಿಹಾಸಿಕ ಸಾಧನೆಯು ವಿಶ್ವನಾಥನ್ ಆನಂದ್ ನಂತರ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಈ ಹಂತವನ್ನು ತಲುಪಿದ 2ನೇ ಭಾರತೀಯ ಆಟಗಾರನನ್ನಾಗಿ ಮಾಡಿದೆ.
ತಾಯಿ ಬೆಂಬಲವನ್ನು ವರ್ಣಿಸಿದ ಪ್ರಗ್ನಾನಂದಾ
ಈ ಸಂದರ್ಶನದಲ್ಲಿ ತನ್ನ ತಾಯಿಯ ನೀಡಿರುವ ಬೆಂಬಲವನ್ನು ವರ್ಣಿಸಿದ್ದಾರೆ. ಆಕೆಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ನನ್ನೊಂದಿಗೆ ಯಾರಾದರೊಬ್ಬರು ಜೊತೆಗಿರುವುದು ನನಗೆ ಶಕ್ತಿ ಇದ್ದಂತೆ. ನನ್ನ ತಾಯಿ ಯಾವಾಗಲೂ ಬೆಂಬಲ ನೀಡುತ್ತಾರೆ. ಎಷ್ಟೋ ಬಾರಿ ನಾನು ಸೋತ ನಂತರ ಅವರು, ಸಮಾಧಾನಪಡಿಸುತ್ತಾರೆ. ಶಾಂತಿಪಡಿಸುತ್ತಾರೆ. ಧೈರ್ಯ ಹೇಳುತ್ತಾರೆ. ಧೃತಿಗೆಡದಂತೆ ನೋಡಿಕೊಳ್ಳುತ್ತಾರೆ. ನನಗೆ, ನನ್ನ ತಾಯಿಯೇ ದೊಡ್ಡ ಬೆಂಬಲ, ಶಕ್ತಿ. ನನಗೆ ಮಾತ್ರವಲ್ಲ ನನ್ನ ಸಹೋದರಿಗೂ ಸಹ ಅವರೇ ಶಕ್ತಿ ಎಂದು ಆಕೆಯ ಬೆಂಬಲದ ಕುರಿತು ತುಟಿಬಿಚ್ಚಿ ಮಾತನಾಡಿದ್ದಲ್ಲದೆ, ಆಕೆಯ ವರ್ಣಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಡ್ರಾ ಸಾಧಿಸಿದ ಭಾರತದ ಆಟಗಾರ
ಸೆಮಿಫೈನಲ್ ಪ್ರವೇಶಿಸಿದ ಪ್ರಗ್ನಾನಂದಾ ಅವರು ಮುಂದಿನ ವರ್ಷದ ಟೂರ್ನಿಗೂ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿನ ಸೆಮಿಫೈನಲ್ ಪಂದ್ಯದಲ್ಲಿ ಪ್ರಗ್ನಾನಂದಾ ಅವರು, ವಿಶ್ವ ನಂಬರ್ 2 ಅಮೆರಿಕದ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಎದುರಿಸಿದ್ದು, ಮೊದಲ ಸುತ್ತಿನಲ್ಲಿ ಶನಿವಾರ ಡ್ರಾ ಸಾಧಿಸಿದ್ದಾರೆ. ಕರುವಾನಾ ವಿರುದ್ಧದ ಸೆಮಿಫೈನಲ್ ಕದನದಲ್ಲಿ ಮೊದಲ ಸುತ್ತಿನಲ್ಲಿ ಕಪ್ಪು ಕಾಯಿಗಳೊಂದಿಗೆ ಆಡಿದ ಪ್ರಗ್ನಾನಂದಾ, ಆರಂಭದಲ್ಲಿ ಹಿನ್ನಡೆ ಅನುಭವಿಸಿದರು.
ಮೊದಲ ಸುತ್ತಿನಲ್ಲಿ ಭಾರತೀಯ ಆಟಗಾರನ ಮೇಲೆ ಫ್ಯಾಬಿಯಾನೋ ಒತ್ತಡ ಹೇರಿದರು. ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಪ್ರಗ್ನಾನಂದಾ ತನ್ನ ಚಾಣಾಕ್ಷ ನಡೆಯ ಮೂಲಕ ಒಂದು ಹಂತದಲ್ಲಿ ಫ್ಯಾಬಿಯಾನೋಗೆ ಗೆಲ್ಲಲು ಬಿಡಲಿಲ್ಲ. 2ನೇ ಸುತ್ತಿನಲ್ಲಿ ಪ್ರಗ್ನಾನಂದಾ ಬಿಳಿ ಕಾಯಿಗಳೊಂದಿಗೆ ಆಡಲಿದ್ದು, ಈ ಸುತ್ತಿನಲ್ಲಿ ಯಾರೇ ಗೆದ್ದರೂ ಫೈನಲ್ ಪ್ರವೇಶ ಪಡೆಯಲಿದ್ದಾರೆ. ಒಂದು ವೇಳೆ ಈ ಸುತ್ತಿನಲ್ಲೂ ಡ್ರಾ ಡ್ರಾಗೊಂಡರೆ, ಆಗ ಸೋಮವಾರ ಟೈ ಬ್ರೇಕರ್ ಸುತ್ತು ಜರುಗಲಿದೆ.