ಸೆಕ್ಸಿಸ್ಟ್ ಕಾಮೆಂಟ್: ಒಲಿಂಪಿಕ್ಸ್ ಕವರೇಜ್‌ನಿಂದ ವೀಕ್ಷಕ ವಿವರಣೆಕಾರ ವಜಾ; ಆಟಗಾರ್ತಿಯರ ದೇಹವನ್ನಲ್ಲ ಆಟ ನೋಡಿ ಎಂದ ಕ್ರೀಡಾಪ್ರೇಮಿಗಳು
ಹಿರಿಯ ವೀಕ್ಷಕ ವಿವರಣೆಕಾರ ಬಾಬ್ ಬಲ್ಲಾರ್ಡ್ ಅವರು, ಆನ್-ಏರ್ ಸಮಯದಲ್ಲೇ ಮಹಿಳೆಯರ ಕುರಿತಾಗಿ ಅಸಂಬದ್ಧವಾಗಿ ವೀಕ್ಷಕ ವಿವರಣೆ ಮಾಡಿದ್ದಕ್ಕಾಗಿ ಕರ್ತವ್ಯದಿಂದ ವಜಾಗೊಂಡಿದ್ದಾರೆ. ಅವರ ಸೆಕ್ಸಿಸ್ಟ್ ಕಾಮೆಂಟ್‌ಗೆ ಜಾಗತಿಕವಾಗಿ ವ್ಯಾಪಕ ಟೀಕೆ-ಆಕ್ರೋಶಗಳು ಕೇಳಿಬಂದಿವೆ.

ಪ್ಯಾರಿಸ್ ಒಲಿಂಪಿಕ್ಸ್ ಈಜು ಈವೆಂಟ್ ಸಂದರ್ಭದಲ್ಲಿ ಆನ್ ಏರ್‌ನಲ್ಲಿ ಸೆಕ್ಸಿಸ್ಟ್ ಕಾಮೆಂಟ್ ಮಾಡಿದ ಅನುಭವಿ ಕಾಮೆಂಟೇಟರ್ ಬಾಬ್ ಬಲ್ಲಾರ್ಡ್ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದ ತೆಗೆದುಹಾಕಿಲಾಗಿದೆ. ಭಾನುವಾರ ನಡೆದ 4x100 ಮೀಟರ್ ಫ್ರೀಸ್ಟೈಲ್ ಈಜು ರಿಲೇಯಲ್ಲಿ ಆಸ್ಟ್ರೇಲಿಯಾ ವನಿತೆಯರು ಚಿನ್ನದ ಪದಕ ಗೆದ್ದರು. ಈ ವೇಳೆ ನೇರಪ್ರಸಾರ ಕಾರ್ಯಕ್ರಮದಲ್ಲಿ ವೀಕ್ಷಕ ವಿವರಣೆಕಾರನಾಗಿದ್ದ ಯುರೋಸ್ಪೋರ್ಟ್ ಕಾಮೆಂಟೇಟರ್ ಬಾಬ್ ಬಲ್ಲಾರ್ಡ್, ಆಟಗಾರ್ತಿಯರ ಪ್ರದರ್ಶನದ ಕುರಿತಾಗಿ ಮಾತನಾಡುವ ಬದಲಾಗಿ ಅನಗತ್ಯವಾಗಿ ಅವರ ದೇಹ, ಮೇಕಪ್ ಕುರಿತಾಗಿ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಹೀಗಾಗಿ ಬಲ್ಲಾರ್ಡ್ ಅವರನ್ನು ಸೋಮವಾರ ಪ್ಯಾರಿಸ್ ಒಲಿಂಪಿಕ್ಸ್ ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಆಸ್ಟ್ರೇಲಿಯಾದ ಮಹಿಳೆಯರ ಈಜು ರಿಲೇ ತಂಡವು ತಮ್ಮ ಈವೆಂಟ್‌ನಲ್ಲಿ ಚಿನ್ನದ ಪದಕ ಗೆದ್ದು ಪೂಲ್ ಡೆಕ್‌ನಿಂದ ಬರುತ್ತಿರುವಾಗ, ಬಲ್ಲಾರ್ಡ್ ಯುರೋಸ್ಪೋರ್ಟ್‌ನಲ್ಲಿ ಕಾಮೆಂಟರಿ ಮಾಡಿದ್ದಾರೆ. "ಮಹಿಳೆಯರು ಈಗಷ್ಟೇ ಮುಗಿಸುತ್ತಿದ್ದಾರೆ. ಹೆಂಗಸರು ಹೇಗಿರುತ್ತಾರೆಂದು ನಿಮಗೆ ತಿಳಿದಿದೆ... ಸುತ್ತಾಡುವುದು, ಮೇಕಪ್ ಮಾಡುವುದು…" ಹೀಗೆ ವೀಕ್ಷಕ ವಿವರಣೆ ಮುಂದುವರೆಸುತ್ತಾರೆ. ಈ ವೇಳೆ ಬಲ್ಲಾರ್ಡ್ ಜೊತೆಗೆ ವೀಕ್ಷಕ ವಿವರಣೆ ಮಾಡುತ್ತಿದ್ದ ಬ್ರಿಟಿಷ್ ಈಜು ಚಾಂಪಿಯನ್ ಲಿಜ್ಜೀ ಸಿಮಂಡ್ಸ್, ಬಲ್ಲಾರ್ಡ್ ಹೇಳಿಕೆಯನ್ನು 'ಅತಿರೇಕದ ಮಾತು' ಎಂದಿದ್ದಾರೆ.
ಹಿರಿಯ ಕಾಮೆಂಟರ್ ಆಗಿ ಬಲ್ಲಾರ್ಡ್ ಅವರು ಆಟದ ಹೊರತಾಗಿ ಆಟಗಾರ್ತಿಯರ ದೇಹದ ಕುರಿತಾಗಿ ಮಾತನಾಡಿ, ಸುಶಿಕ್ಷಿತ ನಾಗರಿಕರ ಕೆಂಗಣ್ಣಿಗೆ ಗುರಿಯಾದರು. ಹೀಗಾಗಿ ಅವರ ಕಾಮೆಂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜಾಗತಿಕ ಮಟ್ಟದಲ್ಲಿ ಭಾರಿ ಟೀಕೆಗೆ ಗುರಿಯಾಯಿತು. ಬಲ್ಲಾರ್ಡ್ ಮಾತುಗಳು ಪುರುಷ ಪ್ರಧಾನ ಮನಸ್ಥಿತಿಯ ದ್ಯೋತಕ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಆಸೀಸ್ ವನಿತೆಯರು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದಾಗ, ಕಾಮೆಂಟರಿ ಪ್ಯಾನಲ್‌ನಲ್ಲಿ ಕುಳಿತು ಅವರ ಸಾಧನೆಯ ಕುರಿತಾಗಿ ವೀಕ್ಷಕರಿಗೆ ಮಾಹಿತಿ ನೀಡಬೇಕಿತ್ತು. ಬದಲಿಗೆ ಅವರ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿರುವುದು ಪ್ರಜ್ಞಾವಂತ ನಾಗರಿಕರಿಗೆ ಮುಜುಗರ ತರಿಸಿದೆ.
ಕ್ರೀಡಾಪಟುಗಳು ಸಾಧನೆ ಮಾಡಿದಾಗ ಅವರ ಆಟವನ್ನು ಪ್ರಶಂಸಿಸಬೇಕಿರುವುದು ಕಾಮೆಂಟೇಟರ್‌ಗಳ ಕರ್ತವ್ಯ. ಅದರ ಹೊರತಾಗಿ ಅವರ ದೇಹದ ಕುರಿತಾಗಲಿ, ಮೇಕಪ್ ಕುರಿತಾಗಲಿ ಮಾತನಾಡುವ ಸಂದರ್ಭ ಅದಲ್ಲ. ಪುರುಷರ ಆಟಗಾರರು ಗೆದ್ದಾಗ ಅವರ ಸಾಧನೆಯನ್ನಷ್ಟೇ ಬಿತ್ತರಿಸುವ ಕಾಮೆಂಟರ್‌ಗಳು ನಾರಿಯರ ಕ್ರೀಡೆಯ ಸಮಯದಲ್ಲಿ ವೈಯಕ್ತಿಕ ವಿಚಾರಗಳತ್ತ ಮೂಗು ತೂರಿಸುವುದು ಸರಿಯಲ್ಲ. ಇದು ಲಿಂಗತಾರತಮ್ಯ ಮನೋಭಾವವನ್ನು ಕೂಡಾ ಬಿಂಬಿಸುತ್ತದೆ ಎಂಬುವುದು ಜನರ ಅಭಿಪ್ರಾಯ.
ಬಲ್ಲಾರ್ಡ್ ಸುಮಾರು 40 ವರ್ಷಗಳ ಕಾಲ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಈ ಹಿಂದೆ ಈಗಾಗಲೇ ವಾಟರ್ ಪೋಲೋ, ಐಸ್ ಹಾಕಿ, ಡೈವಿಂಗ್ ಮತ್ತು ಈಜು ಮುಂತಾದ ಕ್ರೀಡೆಗಳಲ್ಲಿ ಹಲವಾರು ಒಲಿಂಪಿಕ್ಸ್‌ಗಳಲ್ಲಿ ವೀಕ್ಷಕ ವಿವರಣೆ ಕೊಟ್ಟಿದ್ದಾರೆ. ಈ ಬಾರಿ ಅವರ ಸೆಕ್ಸಿಸ್ಟ್ ಕಾಮೆಂಟ್‌ನಿಂದ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇದು ಕಾಮೆಂಟಿಯೇಟರ್‌ಗಳಿಗೆ ಒಂದು ಪಾಠವಾಗಲಿದೆ.
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 2ನೇ ಪದಕ ಗೆದ್ದ ಮನು ಭಾಕರ್; ಶೂಟಿಂಗ್ನಲ್ಲಿ ಸರಬ್ಜೋತ್ ಸಿಂಗ್ ಜೊತೆಗೆ ಕಂಚಿನ ಪದಕ
