70 ಎಕರೆಯಲ್ಲಿ ತಲೆ ಎತ್ತಲಿದೆ ಸ್ಪೋರ್ಟ್ಸ್ ಸಿಟಿ: ಕ್ರೀಡಾಪಟುಗಳಿಗೆ ಮೀಸಲಾತಿ ಸೇರಿ ಹಲವು ಸಿಹಿ ಸುದ್ದಿ ಕೊಟ್ಟ ಸಚಿವ ಜಿ ಪರಮೇಶ್ವರ
ಆಸ್ಟ್ರೇಲಿಯಾ, ಅಮೆರಿಕ, ಚೀನಾದಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಭರವಸೆ ನೀಡಿದರು.
ಬೆಂಗಳೂರು: ಕರ್ನಾಟಕದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ 70 ಎಕರೆ ವ್ಯಾಪ್ತಿಯಲ್ಲಿ ‘ಸ್ಪೋರ್ಟ್ಸ್ ಸಿಟಿ’ (ಕ್ರೀಡಾ ನಗರ) ನಿರ್ಮಿಸುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಮುಂಬರುವ ದಿನಗಳಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ (Home Minister G Parameshwara) ಹೇಳಿದ್ದಾರೆ.
ಡಿಸೆಂಬರ್ 26ರ ಮಂಗಳವಾರ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ 2023ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಶೀಘ್ರದಲ್ಲೇ ಸರ್ಕಾರದ ಮುಂದಿರುವ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸಲು ಕ್ರಮಗೊಳ್ಳುವುದಾಗಿ ಭರವಸೆ ನೀಡಿದರು.
‘ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ’
ಆಸ್ಟ್ರೇಲಿಯಾ, ಅಮೆರಿಕ, ಚೀನಾ ದೇಶಗಳಲ್ಲಿ ಕ್ರೀಡಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರೆ, ಯುವಕರಿಗೆ ಅನುಕೂಲವಾಗಲಿದೆ. ಮುಂದಿನ ಬಜೆಟ್ನಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೆ ತರಲಾಗುವುದು ಎಂದರು.
‘ಕ್ರೀಡಾಂಗಣ ನಿರ್ಮಾಣಕ್ಕೆ ಆದ್ಯತೆ’
ಸುಸಜ್ಜಿತವಾದ ಬಾಸ್ಕೆಟ್ ಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 5 ಎಕರೆ ಭೂಮಿಯನ್ನು ಮೀಸಲಿಡಲಾಗಿದೆ. ಅಲ್ಲದೇ, ರಾಜ್ಯದಲ್ಲಿ 15ಕ್ಕೂ ಹೆಚ್ಚು ಸಿಂಥೆಟಿಕ್ ಟ್ರ್ಯಾಕ್‌ಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಹೇಳಿದರು.
ತುಮಕೂರಿನಲ್ಲಿ 58 ಕೋಟಿ ರೂ. ಅನುದಾನದಲ್ಲಿ ಸುಸಜ್ಜಿತವಾದ ಕ್ರೀಡಾಂಗಣವನ್ನು ಸರ್ಕಾರ ನಿರ್ಮಿಸಿದೆ. ಕಂಠೀರವ ಸ್ಟೇಡಿಯಂಗಿಂತ ಸುಸಜ್ಜಿತವಾಗಿದೆ. ಸುಮಾರು 800 ಅಥ್ಲೆಟಿಕ್‌ಗಳು ಭಾಗವಹಿಸಬಹುದು. ಇದೇ ಮಾದರಿಯ ಕ್ರೀಡಾಂಗಣಗಳನ್ನು ಬೇರೆ ಜಿಲ್ಲೆಗಳಲ್ಲಿಯೂ ನಿರ್ಮಿಸಲು ಕ್ರಮಗೈಗೊಳ್ಳಲಾಗುವುದು ಎಂದು ತಿಳಿಸಿದರು.
‘ಬೇರೆ ಇಲಾಖೆಗಳಿಗೂ ಮೀಸಲಾತಿ’
ಯುವಕರನ್ನು ಕ್ರೀಡಾ ಕ್ಷೇತ್ರಕ್ಕೆ ಸೆಳೆಯಲು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 3ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಇದನ್ನು ರಾಜ್ಯದ ಎಲ್ಲಾ ಇಲಾಖೆಗಳ ನೇಮಕಾತಿಗೆ ಅನ್ವಯಿಸಲಾಗುವುದು. ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಶೇ 2ರಷ್ಟು ಕ್ರೀಡಾ ಮೀಸಲಾತಿ ಇದ್ದದ್ದನ್ನು 3ಕ್ಕೆ ಹೆಚ್ಚಿಸಲಾಗಿದೆ ಎಂದರು.
ಕಳೆದ ಎರಡು ವರ್ಷಗಳಿಂದ ಕ್ರೀಡಾ ಕೋಟಾದಲ್ಲಿ 180 ಮಂದಿ ಪೊಲೀಸರು ನೇಮಕವಾಗಿದ್ದಾರೆ ಎಂದ ಗೃಹ ಸಚಿವ, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದರೆ 5 ಕೋಟಿ, ಬೆಳ್ಳಿ ಪದಕಕ್ಕೆ 3 ಕೋಟಿ, ಕಂಚಿಗೆ 2 ಕೋಟಿ ಹಾಗೂ ಏಷ್ಯನ್ಸ್ ಗೇಮ್ಸ್‌ನಲ್ಲಿ ಪದಕ ಪಡೆದರೆ 25 ಲಕ್ಷ ಸರ್ಕಾರದಿಂದ ನೀಡಲಾಗುತ್ತಿದೆ ಎಂದರು. ಇದೇ ವೇಳೆ ಕ್ರೀಡಾ ಸಾಧಕರಿಗೆ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು.
ಪ್ರಶಸ್ತಿ ಪುರಸ್ಕೃತರ ವಿವರ
ಪ್ರಿಯಾ ಮೋಹನ್ (ಅಥ್ಲೆೆಟಿಕ್ಸ್), ಮಿಥುನ್ ಮಂಜುನಾಥ್ (ಬ್ಯಾಡ್ಮಿಂಟನ್), ಬಿಎಂ ಮನೋಜ್ (ಬಾಸ್ಕೆೆಟ್ಬಾಲ್), ಸಂಪತ್ ವಿ ಪಾಸಮೆಲ್(ಸೈಕ್ಲಿಂಗ್), ಎಸ್ಎಂ ಸಾತ್ವಿಕ್ (ಫೆನ್ಸಿಂಗ್), ಪಿಎಸ್ ಶ್ರೀವರ್ಷಿಣಿ (ಜಿಮ್ನಾಸ್ಟಿಕ್), ಸೋಮ್ ಕುಮಾರ್ (ಫುಟ್ಬಾಲ್), ಎಂ ಕಾಮೇಶ್ವರ್ (ಕ್ಯಾನೋಯಿಂಗ್ ಮತ್ತು ಕಯಾಕಿಂಗ್), ಜಿ ಮನೀಷ್ (ಲಾವುನ್ ಟೆನಿಸ್), ಬಿ ಅಭಿರಾಮ್ ಸುದೇವ್ (ಹಾಕಿ).
ಕೆಎಸ್ ಗಗನಾ (ನೆಟ್‌ಬಾಲ್), ತಿಲೋತ್ತಮ ಸೇನ್ (ರಿಫ್ಲೈ ಶೂಟಿಂಗ್), ತನಿಷ್ ಜಾರ್ಜ್ ಮ್ಯಾಥ್ಯೂ (ಈಜು), ಆರ್ ಪ್ರೀತಮ್ (ಟೇಕ್ವಾಂಡೋ), ಬಿಎನ್ ಉಷಾ (ವೈಟ್ ಲಿಫ್ಟಿಂಗ್), ಗಿರೀಶ್ ಆರ್ ದೊಡ್ಡಮನಿ (ಪತ್ರಕರ್ತ), ನರಸಿಂಹ (ಛಾಯಾಚಿತ್ರಗ್ರಾಹಕ), ಎಸ್ ವೆಂಕಟೇಶ್ ಪ್ರಸಾದ್ (ಬ್ಯಾಡ್ಮಿಂಟನ್), ಸಿಎಸ್ ಪುಣಚ (ಹಾಕಿ), ಬಿಆರ್ ಗೋಪಾಲ್ ರಾವ್ (ಈಜು), ಬಿ ಧನಸಂಜಯನ್ (ಬಾಕ್ಸಿಂಗ್).
ಪ್ರಶಸ್ತಿ ವಿತರನೆ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಬಿ.ನಾಗೇಂದ್ರ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ ಗೋವಿಂದರಾಜು ಅವರು ಉಪಸ್ಥಿತರಿದ್ದರು.
ವಿಭಾಗ