1900ರ ಬಳಿಕ ಒಲಿಂಪಿಕ್ಸ್ಗೆ ಕ್ರಿಕೆಟ್; ಸ್ವರೂಪ, ಆಟಗಾರರು, ತಂಡಗಳು, ಅರ್ಹತೆಯ ಮಾಹಿತಿ ಇಂತಿದೆ
Cricket in LA Olympics: 128 ವರ್ಷಗಳ ನಂತರ 2028ರ ಲಾಸ್ ಏಂಜಲೀಸ್‌ನಲ್ಲಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರ್ಪಡೆ ಕಂಡಿದೆ. ಸ್ವರೂಪ, ತಂಡಗಳು ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ (LA Olympics) 128 ವರ್ಷಗಳ ನಂತರ ಕ್ರಿಕೆಟ್ ಸೇರ್ಪಡೆಯಾಗಿದ್ದು, ನಿರೀಕ್ಷೆ ದುಪ್ಪಟ್ಟಾಗಿದೆ. ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ನಡೆಯಲಿದ್ದು, 31 ಕ್ರೀಡೆಗಳು ಮತ್ತು 351 ಪದಕಗಳ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ. ಈ ಬಾರಿ ಕ್ರಿಕೆಟ್ ಜೊತೆಗೆ ಫ್ಲ್ಯಾಗ್ ಫುಟ್ಬಾಲ್, ಬೇಸ್‌ಬಾಲ್/ಸಾಫ್ಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್ ಕ್ರೀಡೆಗಳನ್ನೂ ಸೇರ್ಪಡೆ ಮಾಡಲಾಗಿದೆ.
ಒಲಿಂಪಿಕ್ಸ್‌ನಲ್ಲಿ ಕೊನೆಯದಾಗಿ ಕ್ರಿಕೆಟ್ ಕಾಣಿಸಿಕೊಂಡಿದ್ದು 1900ರಲ್ಲಿ. ಇದೀಗ ದೊಡ್ಡ ಅಂತರದ ನಂತರ ಕ್ರಿಕೆಟ್ ಆಟವನ್ನು ಸೇರಿಸಲಾಗಿದೆ. 2028ರ ಕ್ರೀಡಾಕೂಟದಲ್ಲಿ ಪುರುಷ-ಮಹಿಳಾ ತಂಡಗಳು ಸ್ಪರ್ಧಿಸಲಿದೆ. ಒಟ್ಟು ತಲಾ 6 ತಂಡಗಳು ಭಾಗವಹಿಸಲಿವೆ. ಆತಿಥೇಯ ರಾಷ್ಟ್ರವಾಗಿ ಯುನೈಟೆಡ್ ಸ್ಟೇಟ್ಸ್ ನೇರ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಆದರೆ ಉಳಿದ 5 ಸ್ಥಾನಕ್ಕೆ ಹಲವು ತಂಡಗಳ ನಡುವೆ ಪೈಪೋಟಿ ಏರ್ಪಡಲಿದೆ.
ಈ ವರದಿಯಲ್ಲಿ ಲಾಸ್ ಏಂಜಲೀಸ್ 2028 ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಡುವ ಕುರಿತು, ಅದರ ಸ್ವರೂಪ, ಯಾವ ತಂಡಗಳು ಆಡಬಹುದು, ಸ್ಟಾರ್ ಆಟಗಾರರು ಇರುತ್ತಾರಾ? ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಪ್ರಮುಖ ವಿವರಗಳ ಮಾಹಿತಿ ನೀಡಲಿದ್ದೇವೆ.
2028ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್
ಅಮೆರಿಕದ ಸ್ಪೋರ್ಟಿಂಗ್ ಕ್ಯಾಪಿಟಲ್‌ನಲ್ಲಿ 6 ತಂಡಗಳು ಚಿನ್ನಕ್ಕಾಗಿ ಹೋರಾಡಲಿವೆ. ಲಾಸ್ ಏಂಜಲೀಸ್-28ನಲ್ಲಿ 3ನೇ ಬಾರಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು, ಅದೇ ಸಮಯದಲ್ಲಿ ಪ್ಯಾರಾಲಿಂಪಿಕ್ ಕ್ರೀಡಾಕೂಟವನ್ನು ಮೊದಲ ಬಾರಿಗೆ ಸ್ವಾಗತಿಸುತ್ತಿದೆ. ಇದಲ್ಲದೆ, 128 ವರ್ಷಗಳ ನಂತರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಐತಿಹಾಸಿಕ ಪುನರಾಗಮನ ಮಾಡಲಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ದೃಢಪಡಿಸಿದೆ. ಪುರುಷ-ಮಹಿಳೆಯರ ವಿಭಾಗದಲ್ಲಿ ಒಟ್ಟು 90 ಆಟಗಾರರು ಸ್ಪರ್ಧಿಸಬೇಕು. ಪ್ರತಿ ತಂಡವು 15 ಆಟಗಾರರನ್ನು ಹೊಂದಿರುತ್ತದೆ. ಇದು ಟಿ20 ಕ್ರಿಕೆಟ್ ಸ್ವರೂಪದಲ್ಲಿ ನಡೆಯಲಿದೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಬದಲಿಗೆ ಬೇಗನೇ ಮುಕ್ತಾಯಗೊಳ್ಳುವ ಟಿ20 ಸ್ವರೂಪಕ್ಕೆ ಆದ್ಯತೆ ನೀಡಲಾಗಿದೆ. ಆತಿಥೇಯ ರಾಷ್ಟ್ರವಾಗಿ ಯುನೈಟೆಡ್ ಸ್ಟೇಟ್ಸ್ ಪಂದ್ಯಾವಳಿಯಲ್ಲಿ ನೇರ ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ.
ತಂಡಗಳ ಅರ್ಹತೆಯ ಮಾನದಂಡವೇನು?
ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ 12 ಪೂರ್ಣ ಸದಸ್ಯತ್ವ ರಾಷ್ಟ್ರಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಳಗೊಂಡಿದೆ. ಇದಲ್ಲದೆ, 94 ದೇಶಗಳು ಸಹ ಸದಸ್ಯ ರಾಷ್ಟ್ರಗಳಾಗಿವೆ. 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ಗೆ ಅರ್ಹತೆ ಪಡೆಯುವ ಕಾರ್ಯವಿಧಾನ ಖಚಿತವಾಗಿಲ್ಲ.
ಆದರೆ ಯುಎಸ್ಎ ಆತಿಥೇಯ ರಾಷ್ಟ್ರವಾಗಿರುವುದರಿಂದ ನೇರ ಪ್ರವೇಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಉಳಿದಂತೆ ಪ್ರತಿ ವಿಭಾಗದಲ್ಲಿ ಉಳಿದ 5 ತಂಡಗಳು ಅರ್ಹತೆ ಪಡೆಯಬೇಕಿದೆ. ಐಒಸಿ ಮುಂದಿರುವ ಮಾನದಂಡ ಏನೆಂದರೆ ಟಿ20 ಶ್ರೇಯಾಂಕ ಪರಿಗಣಿಸಬಹುದು. ಹೀಗಾದರೆ ಭಾರತದ ಪುರುಷರು, ಮಹಿಳಾ ತಂಡಗಳು ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲಿವೆ. ಅರ್ಹತೆ ಪಡೆದ ತಂಡಗಳ ಪರ ಸ್ಟಾರ್ ಆಟಗಾರರು ಆಡುವುದು ಖಚಿತ. ಆದರೆ ತಂಡಗಳ ಆಯ್ಕೆ ಪ್ರಕ್ರಿಯೆ ಹೇಗಿರಲಿದೆ ಎನ್ನುವ ಕುತೂಹಲ ಹುಟ್ಟುಹಾಕಿದೆ.
