Aakash Chopra: ಅಮೆರಿಕದಲ್ಲಿ ಮೋದಿಯನ್ನು ಟೀಕಿಸಿದ ರಾಹುಲ್​ ಗಾಂಧಿ; ಏನೇ ಇದ್ರೂ ನಮ್ಮ ದೇಶದಲ್ಲೇ ಮಾತಾಡಿ; ಎಂದ ಮಾಜಿ ಕ್ರಿಕೆಟಿಗ ಚೋಪ್ರಾ
ಕನ್ನಡ ಸುದ್ದಿ  /  ಕ್ರೀಡೆ  /  Aakash Chopra: ಅಮೆರಿಕದಲ್ಲಿ ಮೋದಿಯನ್ನು ಟೀಕಿಸಿದ ರಾಹುಲ್​ ಗಾಂಧಿ; ಏನೇ ಇದ್ರೂ ನಮ್ಮ ದೇಶದಲ್ಲೇ ಮಾತಾಡಿ; ಎಂದ ಮಾಜಿ ಕ್ರಿಕೆಟಿಗ ಚೋಪ್ರಾ

Aakash Chopra: ಅಮೆರಿಕದಲ್ಲಿ ಮೋದಿಯನ್ನು ಟೀಕಿಸಿದ ರಾಹುಲ್​ ಗಾಂಧಿ; ಏನೇ ಇದ್ರೂ ನಮ್ಮ ದೇಶದಲ್ಲೇ ಮಾತಾಡಿ; ಎಂದ ಮಾಜಿ ಕ್ರಿಕೆಟಿಗ ಚೋಪ್ರಾ

ಬಿಜೆಪಿ ದ್ವೇಷವನ್ನು ಹುಟ್ಟು ಹಾಕಿ ಭಾರತೀಯ ಸಮಾಜವನ್ನು ವಿಭಜಿಸಲು ಮತ್ತು ಒಡೆಯಲು ಪ್ರಯತ್ನಿಸುತ್ತಿದೆ ಎಂದು ರಾಹುಲ್​ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಈ ಕುರಿತು ಆಕಾಶ್ ಚೋಪ್ರಾ ತಮ್ಮ ಟ್ವಿಟರ್​​​ನಲ್ಲಿ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಸಿಡಿದೆದ್ದ ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ ವಾಗ್ದಾಳಿ
ರಾಹುಲ್ ಗಾಂಧಿ ವಿರುದ್ಧ ಸಿಡಿದೆದ್ದ ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ ವಾಗ್ದಾಳಿ

ಇತ್ತೀಚೆಗಷ್ಟೇ ಅಮೆರಿಕದ ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ್ದ ಹೇಳಿಕೆಯನ್ನು ಭಾರತದ ಮಾಜಿ ಕ್ರಿಕೆಟಿಗ, ವೀಕ್ಷಕ ವಿಶ್ಲೇಷಣೆಕಾರ ಆಕಾಶ್ ಚೋಪ್ರಾ (Aakash Chopra) ಟೀಕಿಸಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಯದಲ್ಲಿ ನಡೆದ ಸಂವಾದಾತ್ಮಕ ಅಧಿವೇಶನದಲ್ಲಿ ರಾಹುಲ್, ಭಾರತ ಸರ್ಕಾರ ಮತ್ತು ಬಿಜೆಪಿ ಅನುಸರಿಸುತ್ತಿರುವ ನೀತಿಗಳು ಹಾಗೂ ದೇಶದಲ್ಲಿ ಉಂಟಾಗುತ್ತಿರುವ ಅರಾಜಕತೆಯ ಕುರಿತು ಮಾತನಾಡಿದ್ದರು.

ಬಿಜೆಪಿ ದ್ವೇಷವನ್ನು ಹುಟ್ಟು ಹಾಕಿ ಭಾರತೀಯ ಸಮಾಜವನ್ನು ವಿಭಜಿಸಲು ಮತ್ತು ಒಡೆಯಲು ಪ್ರಯತ್ನಿಸುತ್ತಿದೆ ಎಂದು ರಾಹುಲ್​ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಈ ಕುರಿತು ಆಕಾಶ್ ಚೋಪ್ರಾ ತಮ್ಮ ಟ್ವಿಟರ್​​​ನಲ್ಲಿ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. ರಾಹುಲ್​​ ಗಾಂಧಿ ವಿರುದ್ಧ ದೊಡ್ಡ ಮಟ್ಟದಲ್ಲಿ ವಾಗ್ದಾಳಿ ನಡೆಸಿದ್ದು, ನಮ್ಮ ನೆಲದಲ್ಲಿ ಬಂದು ಮಾತನಾಡಿ ಎಂದು ಕಿಡಿಕಾರಿದ್ದಾರೆ.

ಆಕಾಶ್​ ಚೋಪ್ರಾ ಟ್ವೀಟ್​ನಲ್ಲಿ ಏನಿದೆ?

ಬೇರೆ ದೇಶಗಳಿಂದ ಬರುವ ವಿರೋಧ ಪಕ್ಷದ ನಾಯಕರು, ನಮ್ಮ ನೆಲಕ್ಕೆ ಬಂದು, ಅವರ ರಾಷ್ಟ್ರದ ಬಗ್ಗೆ ಮಾತನಾಡಿದ್ದನ್ನೂ ಈವರೆಗೂ ನಾನು ನೋಡಿಲ್ಲ. ಆದರೆ, ನೀವ್ಯಾಕೆ ವಿದೇಶದಲ್ಲಿ ಹೀಗೆ ಮಾತನಾಡುತ್ತಿದ್ದೀರಿ? ಹೋರಾಟ ಏನೇ ಇದ್ದರೂ ಸ್ವಂತ ದೇಶದಲ್ಲಿ ಮಾಡಿ. ಯಾರು ಬೇಕು ಎಂಬುದನ್ನು ಮತದಾರರು ನಿರ್ಧರಿಸಲಿ. ಪ್ರಜಾಪ್ರಭುತ್ವ ಎಂದರೆ ಇದೇ ಅಲ್ವಾ? ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ನಲ್ಲಿ ಆಕಾಶ್ ಚೋಪ್ರಾ ಅವರು ಎಲ್ಲಿಯೂ ರಾಹುಲ್ ಹೆಸರನ್ನು ಉಲ್ಲೇಖಿಸದಿದ್ದರೂ, ಅವರ ಟ್ವೀಟ್‌ನ ಸಾರಾಂಶವನ್ನು ರಾಹುಲ್‌ಗೆ ಉದ್ದೇಶಿಸಲಾಗಿದೆ. ಈ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ನಡೆಸುತ್ತಿದ್ದಾರೆ.

ರಾಹುಲ್​​​ ಭಾಷಣದ ವಿವರ ಇಲ್ಲಿದೆ

ರಾಹುಲ್ ಗಾಂಧಿ ಭಾಷಣದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದರು. ದ್ವೇಷ ಹುಟ್ಟುಹಾಕಿ ಸಮಾಜ ವಿಭಜಿಸಲು ಬಿಜೆಪಿ ಯತ್ನಿಸುತ್ತಿದೆ. ಭಾರತವು ಮುಕ್ತ ಭಾಷಣದ ಸಂಪ್ರದಾಯ ಹೊಂದಿದೆ ಎಂದು ಹೇಳಿದ ರಾಹುಲ್ ಗಾಂಧಿ, ಮಹಾನ್ ನಾಯಕರು, ಆಧ್ಯಾತ್ಮಿಕ ಮತ್ತು ರಾಜಕೀಯ ನಾಯಕರ ಉದಾಹರಣೆಗಳನ್ನು ಉಲ್ಲೇಖಿಸಿದರು.

ಅವರು (ಕಾಂಗ್ರೆಸ್) ಶಾಂತಿ, ಸಾಮರಸ್ಯ, ಸಂವಾದ ಉತ್ತೇಜಿಸಿದರು ಎಂದು ಹೇಳಿದ್ದರು. ಜನರನ್ನು ಒಟ್ಟುಗೂಡಿಸುವುದು ಮತ್ತು ಈ ಸಂಭಾಷಣೆ ನಡೆಸುವುದು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಇತಿಹಾಸ. ಇದು ಅವರ (ಕಾಂಗ್ರೆಸ್) ಮತ್ತು ಬಿಜೆಪಿ ನಡುವಿನ ವ್ಯತ್ಯಾಸ. ಭಾರತಕ್ಕೆ ಪತ್ರಿಕಾ ಸ್ವಾತಂತ್ರ್ಯ ಬಹಳ ಮುಖ್ಯ, ಟೀಕೆಗೆ ಸಿದ್ಧರಾಗಿರಬೇಕು. ಟೀಕೆಗೆ ಕಿವಿಗೊಡಬೇಕು. ಇದೇ ಪ್ರಜಾಪ್ರಭುತ್ವವನ್ನು ನಿರ್ಮಿಸುತ್ತದೆ ಎಂದು ರಾಹುಲ್​ ಹೇಳಿದ್ದರು.

ಆಕಾಶ್​ ಚೋಪ್ರಾ ಕುರಿತು

ಏತನ್ಮಧ್ಯೆ, ಭಾರತಕ್ಕಾಗಿ ಹತ್ತು ಟೆಸ್ಟ್ ಪಂದ್ಯಗಳನ್ನು ಆಡಿರುವ ಆಕಾಶ್ ಚೋಪ್ರಾ, ಅವರು ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಕಾಮೆಂಟರಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಚೋಪ್ರಾ, ಯೂಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದಾರೆ. ಈ ಚಾನೆಲ್‌ನಲ್ಲಿ ಆಕಾಶ್, ಭಾರತೀಯ ಕ್ರಿಕೆಟ್ ವಿಷಯಗಳ ಜೊತೆಗೆ ಸಮಕಾಲೀನ ಕ್ರಿಕೆಟ್ ವಿಷಯಗಳನ್ನು ಚರ್ಚಿಸುತ್ತಾರೆ.

ಐಪಿಎಲ್‌ನಲ್ಲಿ 'ಆಕಾಶವಾಣಿ' ಶೀರ್ಷಿಕೆಯ ಜಿಯೋ ಸಿನಿಮಾದಲ್ಲಿ ಪ್ರೇಕ್ಷಕರನ್ನು ರಂಜಿಸಿದ ಚೋಪ್ರಾ, ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಟವನ್ನು ವಿಶ್ಲೇಷಿಸಲು ತಯಾರಿ ನಡೆಸಿದ್ದಾರೆ. ಸ್ಟಾರ್‌ ಕಾಮೆಂಟರಿ ಪ್ಯಾನೆಲ್ ಪಟ್ಟಿಯಲ್ಲಿ ಅವರ ಹೆಸರು ಇಲ್ಲದಿದ್ದರೂ, ಆಕಾಶ್ ತಮ್ಮ ಯೂಟ್ಯೂಬ್​​​ ಮೂಲಕ ಫೈನಲ್‌ ಬಗ್ಗೆ ವಿಶ್ಲೇಷಣೆ ನೀಡಲಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.