Aakash Chopra: ಭಾರತದ ಅಗ್ರ ಬ್ಯಾಟರ್ಗಳು ಬಾಬರ್ ಅಜಮ್ರನ್ನು ನೋಡಿ ಕಲಿಯಬೇಕು ಎಂದಿದ್ದ ನಾಸರ್ ಹುಸೇನ್ಗೆ ಆಕಾಶ್ ಚೋಪ್ರಾ ತಿರುಗೇಟು
ಟೀಮ್ ಇಂಡಿಯಾ ಆಟಗಾರರು ಪಾಕಿಸ್ತಾನದ ಬಾಬರ್ ಅಜಮ್ ಅವರನ್ನು ನೋಡಿ ಕಲಿಯಬೇಕು ಎಂದಿದ್ದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ನಾಸರ್ ಹುಸೇನ್ಗೆ (Nasser Hussain) ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ತಿರುಗೇಟು ಕೊಟ್ಟಿದ್ದಾರೆ.
ಪಾಕಿಸ್ತಾನ ತಂಡವನ್ನು ಹೆಚ್ಚು ಬೆಂಬಲಿಸುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸರ್ ಹುಸೇನ್ (Nasser Hussain) ಅವರು, ಟೀಮ್ ಇಂಡಿಯಾವನ್ನು (Team India) ಟೀಕಿಸಿದ್ದಾರೆ. ಅಲ್ಲದೆ, ಭಾರತದ ಆಟಗಾರರು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರನ್ನು ನೋಡಿ ಬ್ಯಾಟಿಂಗ್ ಮಾಡುವುದು ಹೇಗೆ ಎಂಬುದನ್ನು ಕಲಿಯಿರಿ ಎಂದು ಸಲಹೆ ನೀಡಿದ್ದಾರೆ. ಇದೀಗ ಈ ಟೀಕೆಗೆ ಭಾರತದ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ (Aakash Chopra) ತಮ್ಮದೇ ದಾಟಿಯಲ್ಲಿ ಕಿಡಿಕಾರಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ (WTC Final 2023) ಟೀಮ್ ಇಂಡಿಯಾ ಸೋಲು ಕಂಡಿದ್ದು, ಎಷ್ಟೋ ಮಂದಿಗೆ ಭಾರಿ ಖುಷಿ ಕೊಟ್ಟಿದೆ. ಇನ್ನೂ ಕೆಲವರು ಟೀಮ್ ಇಂಡಿಯಾ ಹೀಗೆ ಆಡಬೇಕಿತ್ತು? ಹಾಗೇ ಆಡಬೇಕಿತ್ತು ಎಂದು ಸಲಹೆ ಕೊಡುತ್ತಿದ್ದಾರೆ. ಸರಿ, ನಮ್ಮ ಬಗ್ಗೆ ಬಿಟ್ಟು ಬಿಡಿ. ನೀವು ನಿಜವಾಗಿಯೂ ಫೈನಲ್ಗಾದರೂ ಬರುತ್ತೀರಾ? ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ನಿಮ್ಮ ತಂಡದ ಸ್ಥಾನ ಎಲ್ಲಿದೆ ಎಂಬುದನ್ನು ನೆನಪಿಸಿ ನೋಡಿ. ಫೈನಲ್ ಪ್ರವೇಶಿಸಿದ ಎರಡೂ ತಂಡಗಳೂ ಅಗ್ರ ತಂಡಗಳೇ ಎಂದು ಇಂಗ್ಲೆಂಡ್ ಮಾಜಿ ನಾಯಕನಿಗೆ ಆಕಾಶ್ ಚೋಪ್ರಾ ಚಳಿ ಬಿಡಿಸಿದ್ದಾರೆ.
ನಾಸಿರ್ ಹುಸೇನ್ ಹೇಳಿದ್ದೇನು?
ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಚೆಂಡು ಚಲಿಸುವಾಗ ವೇಗಿಗಳನ್ನು ಹೇಗೆ ಆಡಬೇಕು? ಸ್ವಿಂಗ್ ಮತ್ತು ಸೀಮ್ ಅನ್ನು ಹೇಗೆ ಆಡಬೇಕು ಎಂಬುದರ ಕುರಿತು ಪಾಕಿಸ್ತಾನದ ಬಾಬರ್ ಅಜಮ್ ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರಿಂದ ಒಂದು ಅಥವಾ ಎರಡು ವಿಷಯಗಳನ್ನು ಕಲಿಯಬೇಕು ಎಂದು ನಾಸರ್ ಹುಸೇನ್ ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಚೋಪ್ರಾ, ಎಲ್ಲರೂ ಸಲಹೆ ಕೊಡುವವರೆ. ಭಾರತದ ಅಗ್ರಮ ಕ್ರಮಾಂಕದ ಬ್ಯಾಟರ್ಗಳು ಅದ್ಭುತ ಪ್ರದರ್ಶನ ತೋರಿದ್ದಾರೆ. ಅವರು ಚೆನ್ನಾಗಿ ಆಡುತ್ತಾರೆ ಕೂಡ. ಅದನ್ನು ಬಿಂಬಿಸುವ ಅಗತ್ಯ ಇಲ್ಲ. ತಮ್ಮ ತಂಡಗಳ ಆಟಗಾರರ ಬಗ್ಗೆಯೂ ಯೋಚಿಸಬೇಕು ಎಂದು ಹೇಳಿದ್ದಾರೆ.
ಐಸಿಸಿಗೂ ಚೋಪ್ರಾ ತರಾಟೆ
ನಾಜೀರ್ ಹುಸೇನ್ ವಿರುದ್ಧ ಕಿಡಿ ಕಾರಿದ ನಂತರ ಐಸಿಸಿಗೂ ಆಕಾಶ್ ಚೋಪ್ರಾ ತರಾಟೆ ತೆಗೆದುಕೊಂಡಿದ್ದಾರೆ. ಡಬ್ಲ್ಯುಟಿಸಿ ಫೈನಲ್ ಗೆಲುವನ್ನು ನಿರ್ಧರಿಸಲು ಮೂರು ಪಂದ್ಯಗಳನ್ನು ಆಯೋಜಿಸಬೇಕು ಎಂದು ರೋಹಿತ್ ಶರ್ಮಾ ಹೇಳಿದ್ದರು. ಇದಕ್ಕೆ ಬೆಂಬಲ ಸೂಚಿಸಿದ ಚೋಪ್ರಾ, 3 ಪಂದ್ಯಗಳ ಸರಣಿ ನಡೆಸುವುದು ಉತ್ತಮ ಎಂದು ಅವರು ಒತ್ತಾಯಿಸಿದರು. ಬೇರೆ ಟೂರ್ನಿಗಳಲ್ಲಿ ಸೆಮಿಫೈನಲ್, ಕ್ವಾರ್ಟರ್ ಫೈನಲ್ ಇರುವುದಿಲ್ಲ. ಹಾಗಾಗಿ, ಡಬ್ಲ್ಯುಟಿಸಿ ಫೈನಲ್ನಲ್ಲಿ ಮೂರು ಪಂದ್ಯಗಳು ಇರಬೇಕು ಎಂದಿದ್ದಾರೆ.
ಪಾಕಿಸ್ತಾನ-ಭಾರತ ಪಂದ್ಯ ಏಕಿಲ್ಲ?
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೂರ್ನಿಯು ಐಸಿಸಿ ಆಯೋಜಿಸುವ ಟೂರ್ನಿ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಏಕೆ ಅವಕಾಶ ಕೊಡುವುದಿಲ್ಲ. ಟೂರ್ನಿಯಲ್ಲಿ ಎಲ್ಲಾ ತಂಡಗಳ ವಿರುದ್ಧ ಅಡುವ ಅವಕಾಶ ಯಾವ ತಂಡಕ್ಕೂ ಸಿಗುವುದಿಲ್ಲ. ಟೂರ್ನಿ ಆರಂಭವಾಗಿ 4 ವರ್ಷ ಕಳೆದಿವೆ. ಆದರೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಇಲ್ಲದೆ ಐಸಿಸಿ ಟೂರ್ನಿಯನ್ನು ಊಹಿಸಲು ಸಾಧ್ಯವೇ? ಇದು ಎಂದಿಗೂ ಆಗಲು ಸಾಧ್ಯವಿಲ್ಲ ಎಂದಿದ್ದಾರೆ ಚೋಪ್ರಾ.
ಇಂಡೋ-ಪಾಕಿಸ್ತಾನ ಪಂದ್ಯವೆಂದರೆ ಯಾವಾಗಲೂ ಟೂರ್ನಿಯ ಪ್ರಮುಖ ಆಕರ್ಷಣೆ. ವ್ಯವಹಾರದ ನೆಲೆಯಲ್ಲೂ ಅತ್ಯಧಿಕ ರೇಟಿಂಗ್ ಸಿಗುವ ಪಂದ್ಯ. ಮೂರನೇ ಆವೃತ್ತಿಯಲ್ಲೂ ಇಂಡೋ-ಪಾಕ್ ಪಂದ್ಯವಿಲ್ಲ. ಉಭಯ ತಂಡಗಳ ಟೆಸ್ಟ್ ಸರಣಿಗೆ ಆಯೋಜನೆ ಸಾಧ್ಯವಾಗದಿದ್ದರೆ, ಡಬ್ಲ್ಯುಟಿಸಿ ಟೂರ್ನಿಯನ್ನು ಒಂದು ದ್ವಿಪಕ್ಷೀಯ ಕ್ರಿಕೆಟ್ ಅಥವಾ ಸರಣಿ ಎಂದು ಕರೆಯಿರಿ ಎಂದು ಚೋಪ್ರಾ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ಅನ್ನು ಗ್ಲಾಮರಸ್ ಮಾಡಬೇಕು ಅಂದರೆ ಇಂಡೋ-ಪಾಕ್ ಪಂದ್ಯ ಬೇಕು ಎಂಬುದನ್ನು ಒಪ್ಪಿಕೊಳ್ಳಿ ಎಂದಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಉಭಯ ದೇಶಗಳು ದ್ವಿಪಕ್ಷೀಯ ಸರಣಿಗಳಲ್ಲಿ ಪರಸ್ಪರ ಮುಖಾಮುಖಿ ಆಗುತ್ತಿಲ್ಲ. ಆದರೆ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಪರಸ್ಪರ ಕಾದಾಟ ನಡೆಸಲಿವೆ. ಇದರಲ್ಲಿ ಟೆಸ್ಟ್ ಕ್ರಿಕೆಟ್ ಹೊರತುಪಡಿಸಿ.
ಡಬ್ಲ್ಯುಟಿಸಿ ಫೈನಲ್ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ 209 ರನ್ಗಳ ಅಂತರದಿಂದ ಸೋಲು ಕಂಡಿತು. ಇದರೊಂದಿಗೆ ಸತತ 2ನೇ ಬಾರಿಗೆ ಫೈನಲ್ ಪ್ರಶಸ್ತಿ ಎನ್ನುವುದು ಮರೀಚಿಕೆಯಾಗಿದೆ. ಪ್ರಸ್ತುತ ಇದೇ ವರ್ಷ ತವರಿನಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಭಾರತವು ತವರಿನ ಲಾಭದೊಂದಿಗೆ 10 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲಲು ಯೋಜನೆ ರೂಪಿಸಿದೆ.