Aakash Chopra: ಡಬ್ಲ್ಯೂಟಿಸಿಯಲ್ಲಿ ಭಾರತ ಪಾಕಿಸ್ತಾನ ಪಂದ್ಯವೇ ಇಲ್ಲದಿದ್ದರೆ ಏನ್ ಚೆನ್ನಾಗಿರುತ್ತೆ; ಐಸಿಸಿಯನ್ನು ಕುಟುಕಿದ ಚೋಪ್ರಾ
WTC: ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಭಾರತ ಮತ್ತು ಪಾಕಿಸ್ತಾನವು ಡಬ್ಲ್ಯುಟಿಸಿಯಲ್ಲೂ ಪರಸ್ಪರ ಆಡಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ವಾರ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ (World Test Championship final) ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿತು. ಕಳೆದ ಹಾಗೂ ಚೊಚ್ಚಲ ಆವೃತ್ತಿಯ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದ ತಂಡವು, ಅದಾದ ಎರಡು ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ಮತ್ತೆ ನಿರಾಶೆ ಅನುಭವಿಸಿತು. ಪ್ಯಾಟ್ ಕಮಿನ್ಸ್ ಬಳಗವು 209 ರನ್‌ಗಳ ಬೃಹತ್ ಅಂತರದಿಂದ ಜಯಭೇರಿ ಬಾರಿಸಿತು. 2021ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಸೋತಿತ್ತು. ಈ ಬಾರಿ ರೋಹಿತ್ ಶರ್ಮಾ ಕೂಡಾ ತಂಡವನ್ನು ಜಯದತ್ತ ಮುನ್ನಡೆಸಲು ವಿಫಲರಾದರು. ಆ ಮೂಲಕ ಭಾರತಕ್ಕೆ ಮತ್ತೊಂದು ಐಸಿಸಿ ಟ್ರೋಫಿ ಕನಸು ನನಸಾಗದೆ ಹೋಯ್ತು.
ಸೋಲಿನ ನಂತರ ಮಾತನಾಡಿದ ಭಾರತದ ನಾಯಕ ರೋಹಿತ್ ಶರ್ಮಾ, ವಿಶ್ವ ಚಾಂಪಿಯನ್ ತಂಡವನ್ನು ಒಂದು ಪಂದ್ಯದಿಂದ ನಿರ್ಧರಿಸಲು ಸಾಧ್ಯವಿಲ್ಲ. ಹಾಗಾಗಿ ಮೂರು ಪಂದ್ಯಗಳ ಸರಣಿಯನ್ನು ಆಡಿಸುವ ಮೂಲಕ ಚಾಂಪಿಯನ್ ತಂಡವನ್ನು ನಿರ್ಧರಿಸುವುದು ಉತ್ತಮ ಮಾರ್ಗ ಎಂದು ಐಸಿಸಿಗೆ ಸಲಹೆ ನೀಡಿದ್ದಾರೆ. ಹಿಟ್‌ಮ್ಯಾನ್ ಅಭಿಪ್ರಾಯಕ್ಕೆ ಹಲವಾರು ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಧ್ವನಿಯಾಗಿದ್ದರು. ಅತ್ತ ಆಸೀಸ್ ನಾಯಕ ಕಮಿನ್ಸ್ ಈ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದರು.
“ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲಲು ಒಂದು ಅವಕಾಶ ಮಾತ್ರ ಸಿಗುತ್ತದೆ. ಎಎಫ್‌ಎಲ್ ಹಾಗೂ ಎನ್‌ಆರ್‌ಲ್ ಸೀಸನ್‌ಗಳಲ್ಲೂ ಫೈನಲ್ ಮಾತ್ರ ಇವೆ. ಕ್ರೀಡೆ ಅಂದರೆ ಹೀಗೆಯೇ” ಎಂದು ಕಮಿನ್ಸ್ ಹೇಳಿದ್ದರು.
ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ, ಈ ಬಗ್ಗೆ ಮತ್ತೊಂದು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಈ ವಾರದ ಕೊನೆಯಲ್ಲಿ ಇಂಗ್ಲೆಂಡ್ ಹಾಗೂ ಆಸೀಸ್ ನಡುವೆ ಆಶಸ್ ಸರಣಿಯೊಂದಿಗೆ ಮೂರನೇ ಆವೃತ್ತಿಯ ಡಬ್ಲ್ಯೂಟಿಸಿ ಪಂದ್ಯಗಳು ಆರಂಭವಾಗುತ್ತಿದೆ. ಈ ಬಗ್ಗೆ ಚೋಪ್ರಾ ಮತ್ತೊಂದು ಸಲಹೆಯನ್ನು ಐಸಿಸಿಗೆ ನೀಡಿದ್ದಾರೆ. ರೋಹಿತ್ ಪರವಾಗಿ ಮಾತನಾಡಿದ ಆಕಾಶ್, ಮೂರು ಪಂದ್ಯಗಳ ಸರಣಿ ನಡೆಸುವಂತೆ ಅವರು ಒತ್ತಾಯಿಸಿದರು. ಡಬ್ಲ್ಯೂಟಿಸಿಯು ಐಸಿಸಿ ಆಯೋಜಿಸುವ ಪಂದ್ಯಾವಳಿಯಾಗಿರುವುದರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆಯೂ ಪಂದ್ಯಗಳು ಇರಬೇಕು ಎಂದು ಅಭಿಪ್ರಾಯಪಟ್ಟರು.
“ಎಲ್ಲಾ ತಂಡಗಳ ವಿರುದ್ಧ ಆಡುವ ಅವಕಾಶ ಸಿಗುವುದಿಲ್ಲ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್. ಅಲ್ಲದೆ ಐಸಿಸಿ ನಡೆಸುವ ಈವೆಂಟ್. ಈಗಾಗಲೇ ಇದು ಆರಂಭಗೊಂಡು 4 ವರ್ಷಗಳು ಕಳೆದಿವೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಇಲ್ಲದೆ ಐಸಿಸಿ ಈವೆಂಟ್ ಅನ್ನು ನಮ್ಮಿಂದ ಊಹಿಸಿಕೊಳ್ಳಲು ಸಾಧ್ಯವೇ? ಇದು ಎಂದಿಗೂ ಆಗಲು ಸಾಧ್ಯವಿಲ್ಲ. ಇದು ಯಾವಾಗಲೂ ಟೂರ್ನಮೆಂಟ್‌ನ ಪ್ರಮುಖ ಆಕರ್ಷಣೆ. ವ್ಯವಹಾರದ ನೆಲೆಯಲ್ಲೂ ಅತ್ಯಧಿಕ ರೇಟಿಂಗ್ ಸಿಗುವ ಪಂದ್ಯ,” ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
“ಹಾಗಾದರೆ, ಡಬ್ಲ್ಯೂಟಿಸಿಯು ಐಸಿಸಿ ಆಯೋಜಿಸುವ ಟೂರ್ನಿ ಅಲ್ಲವೇ? ಇದು 6 ವರ್ಷಗಳ ಕಾಲ ನಡೆದರೂ ಭಾರತ-ಪಾಕಿಸ್ತಾನ ನಡುವೆ ಒಂದೇ ಒಂದು ಸರಣಿ ಕೂಡಾ ಇಲ್ಲ. ಇದು ಐಸಿಸಿ ಈವೆಂಟ್ ಹೌದು. ಒಂದು ವೇಳೆ ಅಲ್ಲದಿದ್ದರೆ ಇದನ್ನು ಒಂದು ದ್ವಿಪಕ್ಷೀಯ ಕ್ರಿಕೆಟ್ ಅಥವಾ ಸರಣಿ ಎಂದು ಕರೆಯಿರಿ. ಇಲ್ಲವಾದಲ್ಲಿ ಟೆಸ್ಟ್ ಕ್ರಿಕೆಟ್ ಅನ್ನು ಗ್ಲಾಮರೈಸ್ ಮಾಡಲು ಡಬ್ಲ್ಯುಟಿಸಿಯನ್ನು ಮಾಡಿದ್ದೀರಿ ಎಂಬುದನ್ನು ಒಪ್ಪಿಕೊಳ್ಳಿ,” ಎಂದು ಚೋಪ್ರಾ ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಉಭಯ ದೇಶಗಳು ದ್ವಿಪಕ್ಷೀಯ ಸರಣಿಗಳಲ್ಲಿ ಪರಸ್ಪರ ಆಡುವುದಿಲ್ಲ. ಆದರೂ, ಐಸಿಸಿ ಪಂದ್ಯಾವಳಿಗಳಲ್ಲಿ ಮುಖಾಮುಖಿಯಾಗುತ್ತವೆ.
ವಿಭಾಗ