AB De Villiers: ನನ್ನ ಸ್ನೇಹಿತರು ನಿವೃತ್ತಿಯಾದಾಗ, ತಂಡದಲ್ಲಿರಲು ಮನಸ್ಸು ಒಪ್ಪಲಿಲ್ಲ; ಹಠಾತ್ ನಿವೃತ್ತಿಗೆ ಕಾರಣ ಬಹಿರಂಗಪಡಿಸಿದ ಎಬಿಡಿ
ಕನ್ನಡ ಸುದ್ದಿ  /  ಕ್ರೀಡೆ  /  Ab De Villiers: ನನ್ನ ಸ್ನೇಹಿತರು ನಿವೃತ್ತಿಯಾದಾಗ, ತಂಡದಲ್ಲಿರಲು ಮನಸ್ಸು ಒಪ್ಪಲಿಲ್ಲ; ಹಠಾತ್ ನಿವೃತ್ತಿಗೆ ಕಾರಣ ಬಹಿರಂಗಪಡಿಸಿದ ಎಬಿಡಿ

AB De Villiers: ನನ್ನ ಸ್ನೇಹಿತರು ನಿವೃತ್ತಿಯಾದಾಗ, ತಂಡದಲ್ಲಿರಲು ಮನಸ್ಸು ಒಪ್ಪಲಿಲ್ಲ; ಹಠಾತ್ ನಿವೃತ್ತಿಗೆ ಕಾರಣ ಬಹಿರಂಗಪಡಿಸಿದ ಎಬಿಡಿ

AB De Villiers: 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಲು ಕಾರಣ ಏನೆಂಬುದನ್ನು ಸೌತ್​ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್​ ಬಹಿರಂಗಪಡಿಸಿದ್ದಾರೆ.

ಹಠಾತ್ ನಿವೃತ್ತಿಗೆ ಕಾರಣ ಬಹಿರಂಗಪಡಿಸಿದ ಎಬಿ ಡಿವಿಲಿಯರ್ಸ್
ಹಠಾತ್ ನಿವೃತ್ತಿಗೆ ಕಾರಣ ಬಹಿರಂಗಪಡಿಸಿದ ಎಬಿ ಡಿವಿಲಿಯರ್ಸ್

2019ರ ಏಕದಿನ ವಿಶ್ವಕಪ್​ ಟೂರ್ನಿಗೆ (ODI World Cup 2019) ದಕ್ಷಿಣ ಆಫ್ರಿಕಾ ತಂಡವನ್ನು ಸಿದ್ಧಪಡಿಸುತ್ತಿರುವಾಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ದಿಢೀರ್​ ನಿವೃತ್ತಿ ಘೋಷಿಸುವ ಮೂಲಕ ಮಿಸ್ಟರ್​ 360 ಎಬಿ ಡಿವಿಲಿಯರ್ಸ್ (AB De Villiers)​ ಎಲ್ಲರಿಗೂ ಆಘಾತ ನೀಡಿದ್ದರು. ಎಬಿಡಿ ನಿವೃತ್ತಿಯ ಆಘಾತದಿಂದ ಚೇತರಿಸಿಕೊಳ್ಳಲು ಸೌತ್​ ಆಫ್ರಿಕಾಕ್ಕೆ (South Africa) ಬಹಳ ಸಮಯ ಹಿಡಿಯಿತು.

ಏಕದಿನ ವಿಶ್ವಕಪ್ 2019 ಪಂದ್ಯಾವಳಿಯಲ್ಲಿ ಸತತ ಸೋಲುಗಳನ್ನು ಎದುರಿಸಿದ ದಕ್ಷಿಣ ಆಫ್ರಿಕಾದ ಪರಿಸ್ಥಿತಿಯನ್ನು ನೋಡಿದ ನಂತರ ಎಬಿ ಡಿವಿಲಿಯರ್ಸ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಬಯಸಿದ್ದರು. ಆದರೆ ಕ್ರಿಕೆಟ್ ಮಂಡಳಿ ಇದಕ್ಕೆ ಒಪ್ಪಲಿಲ್ಲ. ಆದರೆ ವಿಶ್ವಕಪ್‌ಗೆ ಒಂದು ವರ್ಷ ಮೊದಲು ಡಿವಿಲಿಯರ್ಸ್ ನಿವೃತ್ತಿಯಾಗಿದ್ದೇಕೆ ಎಂಬುದಕ್ಕೆ ಕಾರಣ ಬಹಿರಂಗಗೊಂಡಿದೆ.

‘ತಂಡದ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಿಲ್ಲ’

ಇತ್ತೀಚೆಗಷ್ಟೇ ರಾಬಿನ್ ಉತ್ತಪ್ಪ (Robin Uthappa) ನಡೆಸಿಕೊಡುವ 'ಹೋಮ್ ಆಫ್ ಹೀರೋಸ್' ಕಾರ್ಯಕ್ರಮದಲ್ಲಿ ಎಬಿ ಡಿವಿಲಿಯರ್ಸ್ ಈ ವಿಷಯ ಬಹಿರಂಗಪಡಿಸಿದ್ದಾರೆ. ನಿಜ ಹೇಳಬೇಕೆಂದರೆ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಅಂದಿನ ವಾತಾವರಣಕ್ಕೆ ನಾನು ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮಿಸ್ಟರ್ 360 ಡಿಗ್ರಿ ಬ್ಯಾಟರ್ ಹೇಳಿದ್ದಾರೆ.

‘ನನ್ನ ಸ್ನೇಹಿತರು ತಂಡದ ತೊರೆದರು’

ನಾನು ಬಯಸಿದ ತಂಡದ ಸೆಟಪ್ ಅನ್ನು ಮಿಸ್​ ಆದೆ. ಮಾರ್ಕ್​​ ಬೌಚರ್ (Mark Boucher)​, ಗ್ರೇಮ್ ಸ್ಮಿತ್ (Graeme Smith), ಜಾಕ್ ಕಾಲಿಸ್ (Jacques Kallis) ಅವರಂತಹ ಆಟಗಾರರು ನಿವೃತ್ತರಾದ ನಂತರ, ನಾನು ತಂಡದಲ್ಲಿ ನನ್ನ ಉತ್ತಮ ಸ್ನೇಹಿತರನ್ನು ಕಳೆದುಕೊಂಡೆ. ಅವರೆಲ್ಲರೂ ನಿವೃತ್ತರಾದಾಗ, ತಂಡದಲ್ಲಿ ಏನೋ ನಾನು ಕಳೆದುಕೊಂಡಂತೆ ಭಾಸವಾಯಿತು ಎಂದು ತಿಳಿಸಿದ್ದಾರೆ.

‘ಸ್ನೇಹಿತರು ಇಲ್ಲದಿದ್ದದ್ದೇ ಸಮಸ್ಯೆಯಾಯಿತು’

ತಂಡದಲ್ಲಿದ್ದ ಹೆಚ್ಚಿನವರು ನನಗಿಂತ ಚಿಕ್ಕವರು. ಇನ್ನೂ ಕೆಲವರು ಕೆಲವೇ ಪಂದ್ಯಗಳನ್ನು ಆಡಿದ್ದರು. ಹಿರಿಯನಾದ ನಾನು ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ನಾನು ಕೆಲವು ದಿನಗಳ ಕಾಲ ಅದನ್ನು ಆನಂದಿಸಿದೆ. ಆದರೆ ಕನಿಷ್ಠ 4 ರಿಂದ 5 ಮಂದಿ ಆಪ್ತ ಸ್ನೇಹಿತರಿಲ್ಲದ ತಂಡವನ್ನು ಮುನ್ನಡೆಸುವುದು ತುಂಬಾ ಕಷ್ಟ. ನನಗೆ ಇದೇ ದೊಡ್ಡ ಸಮಸ್ಯೆಯಾಯಿತು ಎಂದು ಎಬಿಡಿ ಹೇಳಿದ್ದಾರೆ.

‘ನನ್ನಿಂದ ಸಮಸ್ಯೆಯಾಗಬಾರದೆಂದು ಹಿಂದೆ ಸರಿದೆ’

ನೀವು ನನ್ನನ್ನು ಹತ್ತಿರದಿಂದ ಗಮನಿಸಿದ್ದರೆ, ತಂಡಕ್ಕೆ ನಾನು ಸೆಟ್​ ಆಗುತ್ತಿಲ್ಲ ಎಂಬುದನ್ನು ತಿಳಿಯಬಹುದು. ನನ್ನಿಂದ ತೊಂದರೆ ಆಗಬಾರದು, ಬ್ಯಾಲೆನ್ಸ್ ಹಾಳಾಗಬಾರದೆಂದು ತಂಡವನ್ನು ತೊರೆದೆ. ನನಗೆ ಅಂಕಿ-ಅಂಶಗಳೆಂದರೆ ಚಿಕ್ಕಂದಿನಿಂದಲೂ ಅಲರ್ಜಿ. ಏಕದಿನ ಕ್ರಿಕೆಟ್​​ನಲ್ಲಿ ಎಷ್ಟೋ ಮಂದಿ ನೀನು 10 ಸಾವಿರ ರನ್ ಗಳಿಸಬೇಕು ಎಂದು ಹೇಳಿದ್ದರು. ಆದರೆ ನಾನು ಆ ಅಂಕಿ-ಅಂಶವನ್ನು ಎಂದಿಗೂ ತಲೆಗೆ ಹಚ್ಚಿಕೊಳ್ಳಲಿಲ್ಲ. ನಾನು ಎಷ್ಟು ಗಳಿಸುತ್ತೇನೋ ಅಷ್ಟು ರನ್ ಸಾಕೆನಿಸಿತು ಎಂದು ಹೇಳಿದ್ದಾರೆ.

‘ಆರ್​​ಸಿಬಿ ಪರ ಕೊನೆಯದಾಗಿ ಆಡಬೇಕೆಂದುಕೊಂಡೆ’

ನಾನು ಆ ಸಂದರ್ಭದಲ್ಲಿ ನಿವೃತ್ತಿಯಾಗಲು ನನ್ನ ಬಳಿ 20 ಕಾರಣಗಳು ಇದ್ದವು. ಅದರಲ್ಲಿ ಕೆಲವು ವೈಯಕ್ತಿಕ ಕಾರಣಗಳೂ ಸೇರಿವೆ. ಆ ಬಳಿಕ ನಾಲ್ಕು ವರ್ಷ ಐಪಿಎಲ್​ ಆಡಬೇಕು. ಆರ್​​ಸಿಬಿ ಪರವಾಗಿ ಕ್ರಿಕೆಟ್​ ಆಡಿ ನಿವೃತ್ತಿಯಾಗಬೇಕು ಎಂದು ನಿರ್ಧರಿಸಿದ್ದೆ ಎಂದು ಪ್ರತಿಕ್ರಿಯಿಸಿದ್ದಾರೆ ಎಬಿಡಿ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕನೂ ಆಗಿದ್ದ ಎಬಿ ಡಿವಿಲಿಯರ್ಸ್ 228 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 25 ಶತಕ ಮತ್ತು 53 ಅರ್ಧ ಶತಕಗಳೊಂದಿಗೆ 9577 ರನ್ ಗಳಿಸಿದ್ದಾರೆ. ಅವರು 114 ಟೆಸ್ಟ್‌ಗಳಲ್ಲಿ 8765 ರನ್ ಗಳಿಸಿದ್ದಾರೆ. 78 ಟಿ20 ಪಂದ್ಯಗಳಲ್ಲಿ 1672 ರನ್ ಗಳಿಸಿರುವ ಎಬಿಡಿ, ಐಪಿಎಲ್‌ನಲ್ಲಿ 5000ಕ್ಕೂ ಹೆಚ್ಚು ರನ್ ಗಳಿಸಿದ 2ನೇ ವಿದೇಶಿ ಬ್ಯಾಟ್ಸ್‌ಮನ್ ಆಗಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.