Salman Butt: ಉದ್ದೇಶಪೂರ್ವಕವಾಗಿ ವಿಶ್ವಕಪ್ ಪ್ರೋಮೋದಲ್ಲಿ ಬಾಬರ್ರನ್ನು ಸೇರಿಸಿಲ್ಲ; ಅಖ್ತರ್ ಬಳಿಕ ಮತ್ತೊಬ್ಬ ಪಾಕ್ ಮಾಜಿ ಕ್ರಿಕೆಟಿಗ ಕೆಂಡ
World Cup promo: ಏಕದಿನ ವಿಶ್ವಕಪ್ ಪ್ರೋಮೋ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ತುಂಬಾ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಪ್ರೋಮೋದಲ್ಲಿ ತೋರಿಸದೆ ಬಾಬರ್ ಅಜಮ್ (Babar Azam) ಅವರಿಗೆ ಅವಮಾನ ಮಾಡಲಾಗಿದೆ ಎಂದು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಏಕದಿನ ವಿಶ್ವಕಪ್ 2023 ಟೂರ್ನಿಗಾಗಿ (ODI World Cup 2023) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪ್ರೋಮೋ ಬಿಡುಗಡೆ ಮಾಡಿದೆ. ಆದರೆ, ಈ ಪ್ರೋಮೋ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ತುಂಬಾ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಪ್ರೋಮೋದಲ್ಲಿ ತೋರಿಸದೆ ಬಾಬರ್ ಅಜಮ್ (Babar Azam) ಅವರಿಗೆ ಅವಮಾನ ಮಾಡಲಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಇದೀಗ ಈ ಸಾಲಿಗೆ ಮತ್ತೊಬ್ಬ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ (Salman Butt) ಸೇರಿದ್ದಾರೆ.
ಪ್ರಚಾರದ ವಿಡಿಯೋದಲ್ಲಿ ಬಾಬರ್ ಅಜಮ್ ಇಲ್ಲದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಸಲ್ಮಾನ್ ಬಟ್, ಪಾಕಿಸ್ತಾನದ ನಾಯಕನ ಅಭಿಮಾನಿಗಳ ಆಕ್ರೋಶವು ಸಮರ್ಥನೀಯ. ಇದು ದೊಡ್ಡ ವಿಷಯವಲ್ಲ. ಬಾಬರ್ಗೂ ಇದು ಸಮಸ್ಯೆಯಾಗುತ್ತಿಲ್ಲ. ಆದರೆ ಅವರ ಅಭಿಮಾನಿಗಳ ಖುಷಿಯನ್ನು ಹಾಳು ಮಾಡಿದೆ. ಅವರ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ಅಭಿಮಾನಿಗಳ ಕೋಪದಲ್ಲಿ ನ್ಯಾಯ ಇದೆ ಎಂದು ಹೇಳಿದ್ದಾರೆ.
‘ಉದ್ದೇಶಪೂರ್ವಕ ಕೃತ್ಯ’
ನನಗೆ ತಿಳಿದಿರುವ ಪ್ರಕಾರ ಬಾಬರ್ ಅವರನ್ನು ಮರೆತಿಲ್ಲ. ಉದ್ದೇಶ ಪೂರ್ವಕವಾಗಿಯೇ ತೋರಿಸದೆ ಕೃತ್ಯ ನಡೆಸಲಾಗಿದೆ. ವಿಶ್ವದ ನಂ.1 ಏಕದಿನ ಬ್ಯಾಟ್ಸ್‌ಮನ್. ಆತನನ್ನೇ ಪ್ರೋಮೋದಲ್ಲಿ ತೋರಿಸದಿದ್ದರೆ ಹೇಗೆ? ಏಕದಿನ ವಿಶ್ವಕಪ್ 2023 ಟೂರ್ನಿಯ ಪ್ರೋಮೋದಲ್ಲಿ ತೋರಿಸದಿರುವುದು ಅವರ (ಭಾರತ/ಐಸಿಸಿ) ಮನಸ್ಥಿತಿ ಏನೆಂಬುದನ್ನು ತೋರಿಸುತ್ತದೆ. ನೆನಪಿರಲಿ, ಇದು ಮಕ್ಕಳು ಮಾಡಿದ ಪ್ರೋಮೋ ಅಲ್ಲ ಎಂದು ಸಲ್ಮಾನ್ ಬಟ್ ಟೀಕಿಸಿದ್ದಾರೆ.
‘ಮೊದಲೇ ಯೋಜನೆ ಇರುತ್ತದೆ’
ಈ ಪ್ರೋಮೋ ತಯಾರಿಸುವುದಕ್ಕೂ ಮುನ್ನ, ಕೆಲವು ತಿಂಗಳ ಹಿಂದೆಯೇ ಪ್ರಣಾಳಿಕೆ ಸಿದ್ಧಪಡಿಸುತ್ತಾರೆ. ಹೇಗೆ ಮಾಡಬೇಕು? ಯಾರು ಇರಬೇಕು? ಎಷ್ಟು ಮೊತ್ತ ಬೇಕು? ಪ್ರಮುಖ ಅಂಶಗಳೇನು? ಹೀಗೆ ಹಲವು ವಿಷಯಗಳ ಕುರಿತು ಯೋಜನೆ ರೂಪಿಸುತ್ತಾರೆ. ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಸಾಕಷ್ಟು ಶ್ರಮವನ್ನೂ ಹಾಕಲಾಗುತ್ತದೆ. ಹಾಗಾಗಿ ಬಾಬರ್ ಅಜಮ್ರನ್ನು ತೋರಿಸದಿದ್ದರೆ, ಅದು ಉದ್ದೇಶಪೂರ್ವಕ ಕೃತ್ಯ' ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಭಟ್ ಪ್ರತಿಕ್ರಿಯಿಸಿದ್ದಾರೆ.
ಐಸಿಸಿಗೆ ಜಾಡಿಸಿದ್ದ ಅಖ್ತರ್
ಇನ್ನೂ ಇದಕ್ಕೂ ಮೊದಲು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್, ಕೂಡ ಐಸಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರೋಮೋದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಇಲ್ಲದಿರುವುದಕ್ಕೆ ವಿಷಾದಿಸಿದರು. ಇದನ್ನು ಪಕ್ಷಪಾತ ಎಂದು ಕರೆಯುವ ಮೂಲಕ ಕಟು ವಾಗ್ದಾಳಿ ನಡೆಸಿದರು. ಪಾಕಿಸ್ತಾನ ಮತ್ತು ಬಾಬರ್ ಅಜಮ್ ಅವರ ಮಹತ್ವದ ಉಪಸ್ಥಿತಿಯಿಲ್ಲದೆ ವಿಶ್ವಕಪ್ ಪ್ರೋಮೋ ಪೂರ್ಣಗೊಳ್ಳುತ್ತದೆ ಎಂದು ಯಾರು ಭಾವಿಸಿದ್ದರು. ನಿಜವಾಗಿಯೂ ತಮಾಷೆಯಂತಿದೆ ಎಂದು ಟ್ವೀಟ್ ಮಾಡಿದ್ದರು. ಕಮಾನ್ ಗಾಯ್ಸ್ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಅಕ್ಟೋಬರ್ 5ರಿಂದ ಆರಂಭ
2023ರ ವಿಶ್ವಕಪ್ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ. ಆರಂಭಿಕ ಪಂದ್ಯವು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ 2019ರ ಫೈನಲ್ ತಂಡಗಳ ಮುಖಾಮುಖಿಯಾಗಲಿವೆ. ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಭಾರತವು ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ. ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ಬ್ಲಾಕ್‌ಬಸ್ಟರ್ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ.
ಪ್ರೋಮೋದಲ್ಲಿ ಏನಿದೆ?
2 ನಿಮಿಷ 13 ಸೆಕೆಂಡುಗಳ ಸುದೀರ್ಘ ಕ್ಲಿಪ್ನಲ್ಲಿ ಅಭಿಮಾನಿಗಳೇ ಹೆಚ್ಚಿದ್ದಾರೆ. ಈ ಹಿಂದಿನ ವಿಶ್ವಕಪ್ ಪಂದ್ಯಗಳ ಕ್ಷಣಗಳು ಇದರಲ್ಲಿದೆ. ಎಂಎಸ್ ಧೋನಿ 2011ರ ಏಕದಿನ ವಿಶ್ವಕಪ್ ಗೆಲುವಿನ ಸಿಕ್ಸರ್, ಜೆಮಿಮಾ ರಾಡ್ರಿಗಸ್, ದಿನೇಶ್ ಕಾರ್ತಿಕ್ ಮತ್ತು ಶುಭ್ಮನ್ ಗಿಲ್ ಸೇರಿದಂತೆ ಭಾರತೀಯ ಸ್ಟಾರ್ ಕ್ರಿಕೆಟಿಗರು ಇದ್ದಾರೆ. ಜೊತೆಗೆ 2019ರ ವಿಶ್ವಕಪ್ ವಿಜೇತ ಇಯಾನ್ ಮಾರ್ಗನ್, 2019ರ ವಿಶ್ವಕಪ್ ವಿಜೇತ ಇಂಗ್ಲೆಂಡ್ ನಾಯಕ, ಜಾಂಟಿ ರೋಡ್ಸ್ ಮುತ್ತಯ್ಯ ಮುರಳೀಧರನ್ ಕೂಡ ಇದ್ದಾರೆ. ಈ ವಿಶ್ವಕಪ್‌ಗೆ ಶಾರೂಖ್ ಖಾನ್ ರಾಯಭಾರಿ. ಪ್ರೋಮೋದಲ್ಲಿ ಪಾಕ್ ಬೌಲರ್ಗಳಾದ ಶಾಹೀನ್ ಅಫ್ರೀದಿ, ಶಾದಾಬ್ ಖಾನ್, ವಹಾಬ್ ರಿಯಾಜ್, ಮೊಹಮ್ಮದ್ ರಿಯಾಜ್ ಕಾಣಿಸಿಕೊಂಡಿದ್ದಾರೆ. ಆದರೆ ಬಾಬರ್ ಅಜಮ್ ಇರಲಿಲ್ಲ.