RCB New Coach: ನೂತನ ಹೆಡ್ಕೋಚ್ ಆಗಿ ಆ್ಯಂಡಿ ಫ್ಲವರ್ರನ್ನು ನೇಮಿಸಿದ ಆರ್ಸಿಬಿ; ಎಬಿ ಡಿವಿಲಿಯರ್ಸ್ ಮೆಂಟರ್ ಸಾಧ್ಯತೆ, ಬದಲಾಗುತ್ತಾ ಲಕ್
RCB New Coach: 17ನೇ ಆವೃತ್ತಿಯ ಐಪಿಎಲ್ಗೂ ಮುನ್ನವೇ ಹಲವು ತಂಡದಗಳಲ್ಲಿ ಭಾರೀ ಬದಲಾವಣೆ ಕಂಡು ಬರಲಿದೆ. ಕೆಲ ತಂಡಗಳು ಈಗಾಗಲೇ ಭರ್ಜರಿ ತಯಾರಿ ಆರಂಭಿಸಿವೆ. ಆರ್ಸಿಬಿ ಕೂಡ ನೂತನ ಕೋಚ್ನ ಹುಡುಕಾಟದಲ್ಲಿತ್ತು. ಇದೀಗ ಬೆಂಗಳೂರು ಫ್ರಾಂಚೈಸಿಗೆ ಹೊಸ ಕೋಚ್ ಒಬ್ಬರು ಆಯ್ಕೆ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಐಪಿಎಲ್ನಲ್ಲಿ (IPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಕ್ಕೆ ನೂತನ ಹೆಡ್ ಕೋಚ್ ಆಯ್ಕೆಯಾಗಿದ್ದಾರೆ. ವಿಶ್ವಕಪ್ ಸೇರಿ 7 ಪ್ರಶಸ್ತಿ ಗೆದ್ದಿರುವ ಅನುಭವ ಹೊಂದಿರುವ ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲವರ್ (Andy Flower) ಆರ್ಸಿಬಿ ತಂಡದ ಕೋಚ್ ಪಾತ್ರಕ್ಕೆ ನೇಮಕಗೊಂಡಿದ್ದಾರೆ. ತಂಡದ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸನ್ ಅವರ ಫ್ರಾಂಚೈಸಿ ಜೊತೆಗಿನ ಅಧಿಕಾರದ ಅವಧಿಯು ಆಗಸ್ಟ್ 31ಕ್ಕೆ ಮುಕ್ತಾಯಗೊಳ್ಳುತ್ತದೆ.
ಟ್ರೆಂಡಿಂಗ್ ಸುದ್ದಿ
ಮೈಕ್ ಹೆಸನ್ ನೇತೃತ್ವದ ಆರ್ಸಿಬಿ ಸಹಾಯಕ ಸಿಬ್ಬಂದಿ ಮುಖ್ಯಸ್ಥರು ಸೇರಿದಂತೆ ಹೆಡ್ ಕೋಚ್ ಸಂಜಯ್ ಬಂಗಾರ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಈ ಬಗ್ಗೆ ಆರ್ಸಿಬಿ ಅಧಿಕೃತವಾಗಿ ಘೋಷಿಸಿದೆ. ಜುಲೈ 18ರ ವರದಿಯಲ್ಲಿ ರಾಜಸ್ಥಾನ್ ರಾಯಲ್ಸ್ ಸೇರಿದಂತೆ ಹಲವಾರು ಫ್ರಾಂಚೈಸಿಗಳೊಂದಿಗೆ ಫ್ಲವರ್ ಚರ್ಚೆಯಲ್ಲಿ ತೊಡಗಿದ್ದರು. ಇದೀಗ ಆರ್ಸಿಬಿ, ಮುಂಬರುವ ವರ್ಷಗಳಲ್ಲಿ ಅವರ ಸೇವೆಯನ್ನು ಪಡೆದುಕೊಂಡಿದೆ. ಇದರಿಂದ ಈಗಲಾದರೂ ಬದಲಾಗುತ್ತಾ ಲಕ್ ಎನ್ನುತ್ತಿದ್ದಾರೆ ಫ್ಯಾನ್ಸ್.
ಎಬಿಡಿ ಮೆಂಟರ್?
ಆ್ಯಂಡಿ ಫ್ಲವರ್ ಹೆಡ್ಕೋಚ್ ಆಗಿ ನೇಮಕವಾಗಿದ್ದರೆ, ಫ್ರಾಂಚೈಸಿ ಯಶಸ್ಸಿಗೆ ಮಹತ್ತರ ಕೊಡುಗೆ ನೀಡಿದ ಎಬಿ ಡಿವಿಲಿಯರ್ಸ್‌ಗೂ ವಿಶೇಷ ಸ್ಥಾನ ಸಿಗುವ ಸಾಧ್ಯತೆ ಇದೆ. ಮೆಂಟರ್ ಆಗಿ ಸೇವೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ ಅಧಿಕೃತ ದೃಢೀಕರಣವನ್ನು ಇನ್ನೂ ಮಾಡಲಾಗಿಲ್ಲ. ಈಗಾಗಲೇ ಆಸ್ಟ್ರೇಲಿಯಾದ ಕೋಚ್ ಆಗಿದ್ದ ಜಸ್ಟಿನ್ ಲ್ಯಾಂಗರ್ ಅವರನ್ನು ಸಂಜೀವ್ ಗೋಯೆಂಕಾ ಮಾಲೀಕತ್ವದ ತಂಡವು ನೇಮಕ ಮಾಡಿದೆ. ಇವರ ನಂತರ ಅಪಾರ ಕೋಚಿಂಗ್ ಅನುಭವ ಹೊಂದಿರುವ ಆ್ಯಂಡ್ ಫ್ಲವರ್ಗೆ ಆರ್ಸಿಬಿ ಮಣೆ ಹಾಕಿದೆ.
ಟಿ20 ಲೀಗ್ಗಳಲ್ಲಿ ಆ್ಯಂಡಿ ಫ್ಲವರ್ ಅನುಭವ
ಐಪಿಎಲ್ನಲ್ಲಿ ಮಾತ್ರವಲ್ಲದೆ, ಹಲವು ಟಿ20 ಲೀಗ್ಗಳಲ್ಲೂ ಆ್ಯಂಡಿ ಫ್ಲವರ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (CPL 2020) ಸೇಂಟ್ ಲೂಸಿಯಾ ಝೌಕ್ಸ್, ಪಾಕಿಸ್ತಾನ ಸೂಪರ್ ಲೀಗ್ನಲ್ಲಿ (PSL 2021) ಮುಲ್ತಾನ್ ಸುಲ್ತಾನ್ಸ್ ಮತ್ತು ILT20 (2023) ನಲ್ಲಿ ಗಲ್ಫ್ ಜೈಂಟ್ಸ್ ಸೇರಿದಂತೆ ವಿಶ್ವಾದ್ಯಂತ ಹಲವು ಟಿ20 ತಂಡಗಳಿಗೆ ಫ್ಲವರ್‌ನ ಒಳಗೊಳ್ಳುವಿಕೆ ವಿಸ್ತರಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಕೋಚಿಂಗ್ ಸಿಬ್ಬಂದಿಯೊಳಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಇಂಗ್ಲೆಂಡ್ ತಂಡದ ಕೋಚ್, ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೂ ಕೋಚ್ ಆಗಿದ್ದರು. ಅಲ್ಲದೆ, ಟಿ20 ವಿಶ್ವಕಪ್ ಕೂಡ ಇವರ ಮಾರ್ಗದರ್ಶನದಲ್ಲಿ 2010ರಲ್ಲಿ ಇಂಗ್ಲೆಂಡ್ ಗೆದ್ದಿತ್ತು.
ಬಂಗಾರ್, ಹೆಸನ್ ಮಾರ್ಗದರ್ಶನದಲ್ಲಿ ಆರ್ಸಿಬಿ
2019ರ ಐಪಿಎಲ್ನಲ್ಲಿ ಮೈಕ್ ಹೆಸನ್ ಆರ್ಸಿಬಿ ತಂಡ ಸೇರಿದರು. ಆರಂಭದಲ್ಲಿ ಹೆಡ್ ಕೋಚ್ ಆಗಿದ್ದ ಹೆಸನ್, ನಂತರ ತಂಡದ ನಿರ್ದೇಶಕರಾಗಿ ಆಯ್ಕೆಯಾದರು. ಹೆಸನ್ ಸ್ಥಾನಕ್ಕೆ 2021ರಲ್ಲಿ ಸಂಜಯ್ ಬಂಗಾರ್ ಹೆಡ್ಕೋಚ್ ಆಗಿ ನೇಮಕವಾಗಿದ್ದರು. ಹೆಸನ್ ಕೋಚ್ ಆಗಿದ್ದಾಗ 2020ರಲ್ಲಿ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಿತ್ತು. 2021ರಲ್ಲಿ ಸಂಜಯ್ ಬಂಗಾರ್ ಮಾರ್ಗದರ್ಶನದಲ್ಲೂ ಆರ್ಸಿಬಿ ಪ್ಲೇಆಫ್ಗೆ ಅರ್ಹತೆ ಪಡೆದಿತ್ತು. 2022ರಲ್ಲೂ ಎಲಿಮಿನೇಟರ್ಗೆ ಪ್ರವೇಶಿಸಿದ ಬೆಂಗಳೂರು ಈ ಪಂದ್ಯದಲ್ಲಿ ಗೆದ್ದು 2ನೇ ಕ್ವಾಲಿಫೈಯರ್ಗೆ ಎಂಟ್ರಿಕೊಟ್ಟಿತ್ತು. ಆದರೆ, ಪ್ರಶಸ್ತಿ ಗೆಲ್ಲಲಿಲ್ಲ.
ಈಗಲಾದರೂ ಕಪ್ ಬರ ನೀಗುತ್ತಾ?
ಸದ್ಯ ಐಪಿಎಲ್ 16 ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಆದರೆ, ಮೂರು ಫೈನಲ್ ಪ್ರವೇಶಿಸಿದರೂ, ಟ್ರೋಫಿ ಎನ್ನುವುದು ಮರೀಚಿಕೆಯಾಗಿದೆ. ಇದೀಗ ಕೋಚಿಂಗ್ ಸಿಬ್ಬಂದಿಯಲ್ಲಿ ಬದಲಾವಣೆಯಾಗುತ್ತಿದ್ದು, ಟ್ರೋಫಿ ಬರ ನೀಗುತ್ತಾ ಎಂಬುದು ಕೋಟ್ಯಂತರ ಅಭಿಮಾನಿಗಳ ಪ್ರಶ್ನೆ. ಮಿನಿ ಹರಾಜಿಗೂ ಮುನ್ನ ಆರ್ಸಿಬಿ ತಂಡವು ಯಾರನ್ನು ಕೈಬಿಡಲಿದೆ. ಯಾರನ್ನು ತಂಡಕ್ಕೆ ಆಯ್ಕೆ ಮಾಡಲಿದೆ. ಫಿನಿಷರ್ ಸ್ಥಾನಕ್ಕೆ ಎಬಿ ಡಿವಿಲಿಯರ್ಸ್ ಅವರಂತಹ ಸಾಮರ್ಥ್ಯಕ್ಕೆ ತಕ್ಕಂತೆ ಖರೀದಿಸುತ್ತಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಫ್ಲವರ್ ಪ್ರದರ್ಶನ
90ರ ದಶಕದಲ್ಲಿ ಜಿಂಬಾಬ್ವೆ ತಂಡದ ಪರ ಆಡಿರುವ ಆ್ಯಂಡಿ ಫ್ಲವರ್, 63 ಟೆಸ್ಟ್, 213 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 4794 ರನ್, ಏಕದಿನ ಕ್ರಿಕೆಟ್ನಲ್ಲಿ 6786 ರನ್ ಸಿಡಿಸಿದ್ದಾರೆ.
ಸಂಬಂಧಿತ ಲೇಖನ