ಕನ್ನಡ ಸುದ್ದಿ  /  ಕ್ರೀಡೆ  /  Anushka Sharma: ಸ್ಮರಣೀಯ 500ನೇ ಪಂದ್ಯದಲ್ಲಿ 76ನೇ ಶತಕ ಸಿಡಿಸಿದ ಕಿಂಗ್ ಕೊಹ್ಲಿ; ಅಭಿಮಾನಿಗಳ ಹೃದಯ ಗೆದ್ದ ಅನುಷ್ಕಾ ಶರ್ಮಾ ವಿಶೇಷ ಪೋಸ್ಟ್‌

Anushka Sharma: ಸ್ಮರಣೀಯ 500ನೇ ಪಂದ್ಯದಲ್ಲಿ 76ನೇ ಶತಕ ಸಿಡಿಸಿದ ಕಿಂಗ್ ಕೊಹ್ಲಿ; ಅಭಿಮಾನಿಗಳ ಹೃದಯ ಗೆದ್ದ ಅನುಷ್ಕಾ ಶರ್ಮಾ ವಿಶೇಷ ಪೋಸ್ಟ್‌

Anushka Sharma: ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನ 2ನೇ ದಿನದಂದು ವೆಸ್ಟ್ ಇಂಡೀಸ್ (India vs West Indies) ವಿರುದ್ಧ ತಮ್ಮ 29 ನೇ ಟೆಸ್ಟ್ ಶತಕ ಪೂರೈಸಿದ ಕೊಹ್ಲಿ ಹೃದಯದ ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಕುರಿತ ಅನುಷ್ಕಾ ಶರ್ಮಾ ಪೋಸ್ಟ್ ವೈರಲ್.
ವಿರಾಟ್ ಕೊಹ್ಲಿ ಕುರಿತ ಅನುಷ್ಕಾ ಶರ್ಮಾ ಪೋಸ್ಟ್ ವೈರಲ್.

ಟೀಮ್​ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟರ್​ ವಿರಾಟ್ ಕೊಹ್ಲಿಗೆ (Virat Kohli) ಬಾಲಿವುಡ್ ನಟಿಯೂ ಆಗಿರುವ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರೇ ದೊಡ್ಡ ಚಿಯರ್ ಲೀಡರ್. ಸದಾ ಬೆನ್ನಿಗೆ ನಿಲ್ಲುವ ಅನುಷ್ಕಾ, ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ 2ನೇ ದಿನದಂದು ವೆಸ್ಟ್ ಇಂಡೀಸ್ (India vs West Indies) ವಿರುದ್ಧ ತಮ್ಮ 29 ನೇ ಟೆಸ್ಟ್ ಶತಕ ಪೂರೈಸಿದ ಕೊಹ್ಲಿ ಹೃದಯದ ಹೃದಯದ ಎಮೋಜಿಯನ್ನು ಹಂಚಿಕೊಂಡಿದ್ದಾರೆ.

ವಿರಾಟ್ ಶತಕ ಸಿಡಿಸಿದ ಕ್ಷಣದ ವಿರಾಟ್‌ನ ಟಿವಿ ಪರದೆಯ ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಟೇಟಸ್​​ನಲ್ಲಿ ಪತ್ನಿ ಅನುಷ್ಕಾ ಶರ್ಮಾ, ಶೇರ್ ಮಾಡಿದ್ದಾರೆ. ಆ ಫೋಟೋಗೆ ಹಾರ್ಟ್‌ ಎಮೊಜಿ ಹಾಕಿದ್ದಾರೆ. ಈ ಪೋಸ್ಟ್‌ ವಿರುಷ್ಕಾ ಅಭಿಮಾನಿಗಳ ಹೃದಯ ಗೆದ್ದಿದೆ. 2018ರಿಂದಲೂ ವಿದೇಶಿ ನೆಲದಲ್ಲಿ ಶತಕ ಸಿಡಿಸಿಲ್ಲ. ಭಾರತದಲ್ಲಿ ಮಾತ್ರ ಆರ್ಭಟ ಎಂಬ ಟೀಕೆಗಳು ಕೇಳಿ ಬಂದಿದ್ದವು. ಈಗ ಕೊಹ್ಲಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರೆ, ಅನುಷ್ಕಾ ನಾನಿದ್ದೇನೆ ಎಂಬ ಮತ್ತಷ್ಟು ಬೆಂಬಲ ಸೂಚಿಸಿದ್ದಾರೆ.

500ನೇ ಪಂದ್ಯದಲ್ಲಿ ಸ್ಮರಣೀಯ ಶತಕ

ವೆಸ್ಟ್​ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ​ ವಿರಾಟ್ ಕೊಹ್ಲಿ, ತಮ್ಮ 29ನೇ ಟೆಸ್ಟ್​ ಶತಕವನ್ನು ಪೂರೈಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಇದು ಅವರಿಗೆ 76ನೇ ಶತಕ. ವಿಶೇಷ ಅಂದರೆ ಕೊಹ್ಲಿ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸ್ಮರಣೀಯ ಶತಕ ಸಿಡಿಸಿ ಗಮನ ಸೆಳೆದರು. ವಿರಾಟ್ ಸೆಂಚುರಿ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 438 ರನ್​ ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲ ಟೆಸ್ಟ್​​ನಲ್ಲಿ ಮೂರಂಕಿ ದಾಟಲು ವಿಫಲವಾಗಿದ್ದ ವಿರಾಟ್, ಈಗ 2ನೇ ಪಂದ್ಯದಲ್ಲಿ 206 ಎಸೆತಗಳಲ್ಲಿ 121 ರನ್ ಬಾರಿಸಿದ್ದಾರೆ. ಈ ಶತಕದ ಮೂಲಕ ಆಸ್ಟ್ರೇಲಿಯಾದ ಲೆಜೆಂಡರಿ ಕ್ರಿಕೆಟರ್ ಸರ್ ಡಾನ್ ಬ್ರಾಡ್ಮನ್‌ ಶತಕಗಳ ದಾಖಲೆ (29) ಸರಿಗಟ್ಟಿದರು. ಆರಂಭಿಕರು ಅದ್ಭುತ ಪ್ರದರ್ಶನ ತೋರಿದರೂ, ಮೊದಲ ದಿನದಾಟದ 2ನೇ ಸೆಷನ್​ನಲ್ಲಿ 4 ವಿಕೆಟ್​ ಉರುಳಿದವು. ಈ ಹಂತದಲ್ಲಿ ಆಸರೆಯಾಗಿದ್ದು, ವಿರಾಟ್‌ ಕೊಹ್ಲಿ ಹಾಗೂ ರವೀಂದ್ರ ಜಡೇಜಾ.

ಈ ಜೋಡಿ 5ನೇ ವಿಕೆಟ್‌ಗೆ 159 ರನ್‌ ಜೊತೆಯಾಟವಾಡಿ ತಂಡವನ್ನು ಉತ್ತಮ ಹಂತಕ್ಕೆ ಕೊಂಡೊಯ್ದಿತು. ಮೊದಲ ದಿನದಾಟದ ಅಂತ್ಯದ ವೇಳೆಗೆ ಕೊಹ್ಲಿ ಅಜೇಯ 87 ರನ್ ಬಾರಿಸಿದ್ದರು. 2ನೇ ದಿನದಾಟದ ಆರಂಭವಾದ ಅರ್ಧಗಂಟೆಯಲ್ಲೇ ಶಾನನ್ ಗೇಬ್ರಿಯಲ್​ ಬೌಲಿಂಗ್​ನಲ್ಲಿ ಆಕರ್ಷಕ ಬೌಂಡರಿ ಸಿಡಿಸುವ ಮೂಲಕ ಶತಕ ಸಿಡಿಸಿ ಸಂಭ್ರಮಿಸಿದರು. ಆದರೆ ಈ ಪಂದ್ಯದಲ್ಲಿ ಟ್ರೇಡ್‌ಮಾರ್ಕ್ ಡ್ರೈವ್‌ಗಳು ಮತ್ತು ಫ್ಲಿಕ್‌ಗಳನ್ನು ಒಳಗೊಂಡ ಕೆಲವು ಅದ್ಭುತ ಹೊಡೆತಗಳು ಗಮನ ಸೆಳೆದವು.

2018ರ ಬಳಿಕ ನೂರರ ಗಡಿ ದಾಟಿದ ಕೊಹ್ಲಿ

2018ರಲ್ಲಿ ನಾಲ್ಕು ವಿದೇಶಿ ಶತಕ ಗಳಿಸಿದ ನಂತರ ಕೊಹ್ಲಿ, ಮತ್ತೆ ವಿದೇಶದಲ್ಲಿ ನೂರರ ಗಡಿ ದಾಟಲು ಐದು ವರ್ಷಗಳು ಕಾಯಬೇಕಾಯಿತು. ಇನ್ನು 2016ರ ಬಳಿಕ ವೆಸ್ಟ್​ ಇಂಡೀಸ್​​ನಲ್ಲಿ ಶತಕ ಸಿಡಿಸಿದ್ದಾರೆ. ಸದ್ಯ ಸಕ್ರಿಯ ಆಟಗಾರರ ಪೈಕಿ ಕೇನ್​ ವಿಲಿಯಮ್ಸನ್​ರ 28 ಶತಕಗಳನ್ನು ದಾಟಿ ಮುಂದೆ ಹೋಗಿದ್ದಾರೆ. ಸ್ಟೀವ್ ಸ್ಮಿತ್ (32) ಮತ್ತು ಜೋ ರೂಟ್ (30) ನಂತರ ಸಕ್ರಿಯ ಕ್ರಿಕೆಟಿಗರಲ್ಲಿ 3ನೇ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಹೊಂದಿದ್ದಾರೆ. ಭಾರತ ಈಗ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.