Ind vs Aus WTC Final: ಚರಿತ್ರೆ ಬರೆದ ಆಸ್ಟ್ರೇಲಿಯಾ ನೂತನ ವಿಶ್ವ ಟೆಸ್ಟ್ ಚಾಂಪಿಯನ್; ಸೋತ ಭಾರತ ತಂಡ ಮತ್ತೆ ರನ್ನರ್ಅಪ್ಗೆ ತೃಪ್ತಿ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ (WTC Final) ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ (Australia vs India) ಹೀನಾಯ ಸೋಲು ಕಂಡಿದೆ. ಒಂದೆದೆ ಆಸಿಸ್ ಚೊಚ್ಚಲ ಟೆಸ್ಟ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಮತ್ತೊಂದೆಡೆ ಸತತ ಎರಡನೇ ಬಾರಿಯೂ ಭಾರತ ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ (WTC FInal 2023) ಆಸ್ಟ್ರೇಲಿಯಾ ಗೆದ್ದು (Australia Champion) ನೂತನ ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆದ ಅಂತಿಮ ದಿನದಾಟದಲ್ಲಿ ಹೋರಾಟ ನಡೆಸದೆ ಟೀಮ್ ಇಂಡಿಯಾ (Team India) ಶರಣಾಗಿದೆ. ಇದರೊಂದಿಗೆ ಆಸಿಸ್ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿ ಜಯಿಸಿದೆ.
ಈ ಭರ್ಜರಿ ಗೆಲುವಿನೊಂದಿಗೆ ಆಸ್ಟ್ರೇಲಿಯಾ, ಮೂರು ಫಾರ್ಮೆಟ್ ಕ್ರಿಕೆಟ್ನಲ್ಲೂ ವಿಶ್ವಕಪ್ ಗೆದ್ದ ವಿಶ್ವದ ಏಕೈಕ ತಂಡ ಎಂಬ ಐತಿಹಾಸಿಕ ದಾಖಲೆ ಬರೆದಿದೆ. 10 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನಸಿನಲ್ಲಿದ್ದ ಭಾರತಕ್ಕೆ ಮತ್ತೆ ನಿರಾಸೆಯಾಗಿದೆ. ಅಲ್ಲದೆ, ನಾಯಕನಾಗಿ ರೋಹಿತ್ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯದಲ್ಲಿ ಸೋತಿದ್ದಾರೆ.
3 ವಿಕೆಟ್ ನಷ್ಟಕ್ಕೆ 164 ರನ್ಗಳೊಂದಿಗೆ 5ನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಟೀಮ್ ಇಂಡಿಯಾ, ಒಂದು ಸೆಷನ್ ಅಂತ್ಯಕ್ಕೂ ಮೊದಲೇ ಆಲೌಟ್ ಆಯಿತು. 4ನೇ ದಿನದಂದು ತಂಡಕ್ಕೆ ಭರವಸೆ ಮೂಡಿಸಿದ್ದ ವಿರಾಟ್ ಕೊಹ್ಲಿ, ಅಂತಿಮ ದಿನದಂದು ಕೇವಲ 5 ರನ್ ಗಳಿಸಿ ಹೊರ ನಡೆದರು.
ಇದರೊಂದಿಗೆ ಭಾರತ ತಂಡದ ಟ್ರೋಫಿ ಕನಸು ಭಗ್ನವಾಯಿತು. ಕೊನೆಯ ದಿನದಾಟದಲ್ಲಿ ಭಾರತದ ಗೆಲುವಿಗೆ 280 ರನ್ ಮತ್ತು ಆಸ್ಟ್ರೇಲಿಯಾಗೆ ಜಯಿಸಲು 7 ವಿಕೆಟ್ ಬೇಕಿತ್ತು. ಅಂತಿಮವಾಗಿ ಆಸ್ಟ್ರೇಲಿಯಾವೇ 209 ರನ್ಗಳ ಅಂತರದಿಂದ ಗೆದ್ದು ಬೀಗಿತು. 2ನೇ ಇನ್ನಿಂಗ್ಸ್ನಲ್ಲಿ ಭಾರತ 234 ರನ್ಗಳಿಗೆ ಆಲೌಟ್ ಆಯಿತು.
ದಿನದಾಟ ಆರಂಭಿಸಿದ ವಿರಾಟ್ ಕೊಹ್ಲಿ, ಕ್ರೀಸ್ನಲ್ಲಿ ಇದ್ದದ್ದು ಕೆಲವೇ ಹೊತ್ತು. ಸ್ಕಾಟ್ ಬೋಲ್ಯಾಂಡ್ ಬೌಲಿಂಗ್ನಲ್ಲಿ ಸ್ಟೀವ್ ಸ್ಮಿತ್ ಹಿಡಿದ ಅದ್ಭುತ ಸ್ಲಿಪ್ ಕ್ಯಾಚ್ಗೆ ಬಲಿಯಾದರು. ಬಳಿಕ ಕ್ರೀಸ್ಗೆ ಬಂದ ರವೀಂದ್ರ ಜಡೇಜಾ ಅದೇ ಓವರ್ನಲ್ಲಿ ಡಕೌಟ್ ಆಗಿ ಹೊರ ನಡೆದರು. ಆ ಬಳಿಕ ಕ್ರೀಸ್ನಲ್ಲಿದ್ದ ಅಜಿಂಕ್ಯ ರಹಾನೆ ಕೆಲಹೊತ್ತು ಹೋರಾಟ ನಡೆಸಿದರು. ಆದರೆ 46 ರನ್ ಗಳಿಸಿದ್ದಾಗ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಕೀಪರ್ ಕ್ಯಾಚ್ ನೀಡಿ ಔಟಾದರು.
ಬಳಿಕ ಕಣಕ್ಕಿಳಿದ ಕೆಎಸ್ ಭರತ್ (23) , ಶಾರ್ದೂಲ್ ಠಾಕೂರ್ (0), ಉಮೇಶ್ ಯಾದವ್ (1), ಮೊಹಮ್ಮದ್ ಸಿರಾಜ್ (1) ಆಸ್ಟ್ರೇಲಿಯಾ ಬೌಲರ್ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದರು. ಮೊಹಮ್ಮದ್ ಶಮಿ ಅಜೇಯ 13 ರನ್ ಗಳಿಸಿದರು. 2ನೇ ಇನ್ನಿಂಗ್ಸ್ನಲ್ಲಿ ಆಸಿಸ್ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿದರು. ನಾಥನ್ ಲಿಯಾನ್ 4 ವಿಕೆಟ್, ಸ್ಕಾಟ್ ಬೋಲ್ಯಾಂಡ್ 3 ವಿಕೆಟ್, ಮಿಚೆಲ್ ಸ್ಟಾರ್ಕ್ 2 ವಿಕೆಟ್, ಪ್ಯಾಟ್ ಕಮಿನ್ಸ್ 1 ವಿಕೆಟ್ ಪಡೆದು ಮಿಂಚಿದರು.
ಸ್ಕೋರ್ ವಿವರ
- ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ - 469/10
- ಭಾರತ ತಂಡ ಮೊದಲ ಇನ್ನಿಂಗ್ಸ್ - 296/10
- ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ - 270/8 ಡಿಕ್ಲೇರ್
- ಭಾರತ ತಂಡ ಎರಡನೇ ಇನ್ನಿಂಗ್ಸ್ - 234/10
3 ಫಾರ್ಮೆಟ್ನಲ್ಲೂ ಆಸ್ಟ್ರೇಲಿಯಾ ಚಾಂಪಿಯನ್
ಡಬ್ಲ್ಯುಟಿಸಿ ಫೈನಲ್ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಐತಿಹಾಸಿಕ ದಾಖಲೆ ಬರೆದಿದೆ. ಏಕದಿನ, ಟಿ20 ಮತ್ತು ಟೆಸ್ಟ್ ಮೂರು ಫಾರ್ಮೆಟ್ನಲ್ಲೂ ಚಾಂಪಿಯನ್ ಆದ ವಿಶ್ವ ಕ್ರಿಕೆಟ್ನಲ್ಲಿ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಭಾಗ