ಕನ್ನಡ ಸುದ್ದಿ  /  Sports  /  Cricket News Bcci Announces Sportswear Brand Adidas As Team India New Kit Sponsor Jay Shah Killer Mpl Jra

Adidas: ಟೀಮ್ ಇಂಡಿಯಾ ಜೆರ್ಸಿಗೆ ಅಡಿಡಾಸ್ ಪ್ರಾಯೋಜಕತ್ವ; ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ ರೋಹಿತ್ ಬಳಗ

“ಕಿಟ್ ಪ್ರಾಯೋಜಕರಾಗಿ ಅಡಿಡಸ್‌ ಜೊತೆಗೆ ಬಿಸಿಸಿಐನ ಪಾಲುದಾರಿಕೆ ಬಗ್ಗೆ ಘೋಷಿಸಲು ನನಗೆ ಸಂತೋಷವಾಗಿದೆ. ನಾವು ಕ್ರಿಕೆಟ್ ಆಟವನ್ನು ಬೆಳೆಸಲು ಬದ್ಧರಾಗಿದ್ದೇವೆ. ಇಂತಹ ಸಮಯದಲ್ಲಿ ವಿಶ್ವದ ಪ್ರಮುಖ ಕ್ರೀಡಾ ಉಡುಪುಗಳ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಅಡಿಡಾಸ್‌ನೊಂದಿಗೆ ಪಾಲುದಾರರಾಗಲು ಹೆಚ್ಚು ಉತ್ಸುಕರಾಗಿದ್ದೇವೆ,” ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಭಾರತ ತಂಡದ ಆಟಗಾರರು
ಭಾರತ ತಂಡದ ಆಟಗಾರರು (Getty Images)

ಭಾರತ ಕ್ರಿಕೆಟ್‌ ತಂಡದ ಆಟಗಾರರು ಮುಂದಿನ ಪಂದ್ಯಗಳಲ್ಲಿ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಕ್ರೀಡಾ ಉಡುಪುಗಳ ಬೃಹತ್‌ ಕಂಪನಿಯಾದ ಹಾಗೂ ಜಾಗತಿಕ ಮಟ್ಟದಲ್ಲಿ ಬ್ರಾಂಡ್‌ ಆಗಿ ಬೆಳೆದಿರುವ ಅಡಿಡಾಸ್‌ (Adidas) ಸಂಸ್ಥೆಯು, ಭಾರತ ಕ್ರಿಕೆಟ್‌ ತಂಡದ (Team India) ನೂತನ ಜೆರ್ಸಿಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯು ಆಟಗಾರರ ಕಿಟ್ ಪ್ರಾಯೋಜಕರಾಗಿ ಅಡಿಡಾಸ್‌ ಸಂಸ್ಥೆಯೊಂದಿಗೆ ಪಾಲುದಾರಿಕೆ ಒಪ್ಪಂದ ನಡೆಸಿರುವ ಬಗ್ಗೆ ಘೋಷಣೆ ಮಾಡಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಭಾರತ ಕ್ರಿಕೆಟ್‌ ತಂಡದ ಆಟಗಾರರು ಮೈದಾನಕ್ಕೆ ಇಳಿಯುವಾಗ, ಹೊಸ ಜೆರ್ಸಿಯೊಂದಿಗೆ ಆಟಗಾರರನ್ನು ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.

ಪ್ರಸ್ತುತ ಭಾರತ ಕ್ರಿಕೆಟ್‌ ತಂಡದ ಆಟಗಾರರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆವೃತ್ತಿಯಲ್ಲಿ ತಮ್ಮ ತಮ್ಮ ಫ್ರಾಂಚೈಸಿಗಳ ಪರ ಆಡುತ್ತಿದ್ದಾರೆ. ಐಪಿಎಲ್‌ ಮುಗಿದ ಬೆನ್ನಲ್ಲೇ ಇಂಗ್ಲೆಂಡ್‌ಗೆ ಹಾರಲಿರುವ ಭಾರತ ಟೆಸ್ಟ್‌ ತಂಡವು, 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವವನ್ನು ಎದುರಿಸಲಿದೆ. ಈ ವೇಳೆ ಆಟಗಾರರು ಬಿಳಿ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದ್ದಾರೆ.

“ಕಿಟ್ ಪ್ರಾಯೋಜಕರಾಗಿ ಅಡಿಡಸ್‌ ಜೊತೆಗೆ ಬಿಸಿಸಿಐನ ಪಾಲುದಾರಿಕೆ ಬಗ್ಗೆ ಘೋಷಿಸಲು ನನಗೆ ಸಂತೋಷವಾಗಿದೆ. ನಾವು ಕ್ರಿಕೆಟ್ ಆಟವನ್ನು ಬೆಳೆಸಲು ಬದ್ಧರಾಗಿದ್ದೇವೆ. ಇಂತಹ ಸಮಯದಲ್ಲಿ ವಿಶ್ವದ ಪ್ರಮುಖ ಕ್ರೀಡಾ ಉಡುಪುಗಳ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಅಡಿಡಾಸ್‌ನೊಂದಿಗೆ ಪಾಲುದಾರರಾಗಲು ಹೆಚ್ಚು ಉತ್ಸುಕರಾಗಿದ್ದೇವೆ. ಹೊಸ ಪ್ರಾಯೋಜಕರಿಗೆ ಸ್ವಾಗತ,” ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಹೊಸ ಪ್ರಾಯೋಜಕರ ಬಗ್ಗೆ ಶಾ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೂ, ಪ್ರಸ್ತುತ ಭಾರತದ ಕಿಟ್‌ ಪ್ರಾಯೋಜಕತ್ವ ವಹಿಸಿರುವ ಕಿಲ್ಲರ್ ಬದಲಿಗೆ ಮುಂದೆ ಅಡಿಡಾಸ್ ಬರಲಿದೆ. ಐದು ವರ್ಷಗಳ ಒಪ್ಪಂದ ಇದಾಗಿದೆ. "ಒಪ್ಪಂದದ ಅಂತಿಮ ಚಿತ್ರಣವನ್ನು ರೂಪಿಸಲಾಗುತ್ತಿದೆ. ಆದರೆ ಮೌಲ್ಯಮಾಪನವು ಹೆಚ್ಚಾಗಲಿದೆ" ಎಂದು ಈ ವಿಷಯದ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದಿನ ಕಿಟ್ ಪ್ರಾಯೋಜಕತ್ವ ಒಪ್ಪಂದದ ಪ್ರಕಾರ, 2023ರ ಅಂತ್ಯದವರೆಗೆ MPL ಪ್ಯಾಯೋಜಕತ್ವ ವಹಿಸಬೇಕಿತ್ತು. ಆದರೆ, ತನ್ನ ಒಪ್ಪಂದವನ್ನು 2023ರ ಅಂತ್ಯದವರೆ ಉಳಿಸಲು ಬಯಸದ ಎಂಪಿಎಲ್‌, ಅದನ್ನು ಅರ್ಧದಲ್ಲೇ ಮೊಟಕುಗೊಳಿಸಲು ನಿರ್ಧರಿಸಿತು. ಹೀಗಾಗಿ ಎಂಪಿಎಲ್‌ ಸಂಸ್ಥೆಯು ಅಷ್ಟೇನೂ ಪ್ರಸಿದ್ಧವಲ್ಲದ ಉಡುಪು ಬ್ರ್ಯಾಂಡ್ ಆಗಿರುವ ಕಿಲ್ಲರ್ ಕಂಪನಿಗೆ, ಭಾರತ ತಂಡದ ಕಿಟ್ ಪ್ರಾಯೋಜಕತ್ವವನ್ನು ವಹಿಸಿಕೊಟ್ಟಿತು. ಇದು ಆ ಎರಡು ಕಂಪನಿಯೊಳಗಿನ ಉಪ ಒಪ್ಪಂದ. MPL ಕಂಪನಿಯು ಮೂರು ವರ್ಷಗಳ ಒಪ್ಪಂದಕ್ಕೆ ಬಿಸಿಸಿಐಗೆ 9 ಕೋಟಿ ರೂಪಾಯಿಯನ್ನು ರಾಯಲ್ಟಿಯಾಗಿ ಪಾವತಿಸುತ್ತಿತ್ತು. ಅಲ್ಲದೆ ಪ್ರತಿ ಪಂದ್ಯಕ್ಕೆ 65 ಲಕ್ಷ ಪಾವತಿಸುತ್ತಿತ್ತು.