Indian Cricket Teams: ತಂಬಾಕು, ಬೆಟ್ಟಿಂಗ್, ಮದ್ಯ ಕಂಪನಿಗಿಲ್ಲ ಅವಕಾಶ; ಭಾರತ ಕ್ರಿಕೆಟ್ ತಂಡಗಳ ಟೈಟಲ್ ಸ್ಪಾನ್ಸರ್‌ಗೆ ಬಿಸಿಸಿಐ ಆಹ್ವಾನ
Team India Title Sponsor: ಭಾರತೀಯ ಕ್ರಿಕೆಟ್ ತಂಡಗಳ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಅರ್ಜಿ ಸಲ್ಲಿಸಲು ಕೆಲವು ಬ್ರಾಂಡ್ ವಿಭಾಗಗಳಿಗೆ ಬಿಸಿಸಿಐ ನಿಷೇಧ ಹೇರಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯು ಭಾರತದ ಕ್ರಿಕೆಟ್ ತಂಡಗಳ ಶೀರ್ಷಿಕೆ ಪ್ರಾಯೋಜಕತ್ವ(title sponsors)ಕ್ಕೆ ಟೆಂಡರ್ ಕರೆಯಲು ಅರ್ಜಿಗಳನ್ನು ಆಹ್ವಾನಿಸಿದೆ. ಭಾರತದ ಪುರುಷರ ತಂಡ, ವನಿತೆಯರ ತಂಡ ವಯೋಮಾನದ ತಂಡಗಳಿಗೆ ಅನ್ವಯವಾಗುವಂತೆ ಟೈಟಲ್ ಪ್ರಾಯೋಜಕರಿಗೆ ಬುಲಾವ್ ನೀಡಲಾಗಿದೆ.
ಈಗಾಗಲೇ ಬೈಜೂಸ್ ಜೊತೆಗಿನ ಬಿಸಿಸಿಐ ಒಪ್ಪಂದವು ಕಳೆದ ಹಣಕಾಸು ವರ್ಷದಲ್ಲಿ ಕೊನೆಗೊಂಡಿದೆ. ಅಂದರೆ, ಪ್ರಸ್ತುತ ಭಾರತೀಯ ಕ್ರಿಕೆಟ್ ತಂಡಗಳಿಗೆ ಯಾವುದೇ ಶೀರ್ಷಿಕೆ ಪ್ರಾಯೋಜಕರಿಲ್ಲ. ಇತ್ತೀಚೆಗಷ್ಟೇ ಕಿಟ್ ಪ್ರಾಯೋಜಕತ್ವವನ್ನು ಅಡಿಡಾಸ್ ವಹಿಸಿಕೊಂಡಿತು. ಆದರೆ, ಅದು ಟೈಟಲ್ ಸ್ಪಾನ್ಸರ್ ಅಲ್ಲ.
ಭಾರತಕ್ಕೆ ಟೈಟಲ್ ಪ್ರಾಯೋಜಕರು ಇಲ್ಲದಿರುವ ಪರಿಣಾಮವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಕಂಡುಬರಲಿಲ್ಲ. ಏಕೆಂದರೆ ಐಸಿಸಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ತಂಡಗಳು ತಮ್ಮ ಜೆರ್ಸಿಯ ಎದೆಯ ಭಾಗದಲ್ಲಿ ಶೀರ್ಷಿಕೆ ಪ್ರಾಯೋಜಕರನ್ನು ತೋರಿಸಿಕೊಳ್ಳಲು ಐಸಿಸಿಯಿಂದ ಅನುಮತಿ ಇಲ್ಲ. ಅದರ ಬದಲಾಗಿ ಬಲ ಅಥವಾ ಎಡಗೈ ಭಾಗದಲ್ಲಿ ಮಾತ್ರ ಲೋಗೋ ಹಾಕಬಹುದು. ಡಬ್ಲ್ಯೂಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತಮ್ಮ ಕಿಟ್ ತಯಾರಕ ಆಸಿಕ್ಸ್‌ನ ಲೋಗೋವನ್ನು ಬಲಗೈ ಭಾಗದಲ್ಲಿ ಹಾಕಿಸಿತ್ತು. ಇದೇ ವೇಳೆ ಕಾಂಗರೂಗಳ ಶೀರ್ಷಿಕೆ ಪ್ರಾಯೋಜಕರಾದ ಕ್ವಾಂಟಾಸ್ ಏರ್‌ಲೈನ್ಸ್ ಲೋಗೋ ಎಡಗೈ ಭಾಗದಲ್ಲಿ ಕಾಣಿಸಿಕೊಂಡಿತ್ತು. ಆದರೆ, ಭಾರತದ ಜೆರ್ಸಿಯಲ್ಲಿ ಕಿಟ್ ಪ್ರಾಯೋಜಕ ಅಡಿಡಾಸ್ ಲೋಗೋ ಮಾತ್ರ ಕಾಣಿಸಿತ್ತು.
ಸದ್ಯದಲ್ಲೇ ಭಾರತ ತಂಡಕ್ಕೆ ಹೊಸ ಟೈಟಲ್ ಸ್ಪಾನ್ಸರ್ ಸಿಗುವ ಸಾಧ್ಯತೆ ಇದೆ. ಬಿಸಿಸಿಐ ಇದಕ್ಕಾಗಿ ಪ್ರಕ್ರಿಯೆಯಗಳನ್ನು ಆರಂಭಿಸಿದೆ. ಹೊಸ ಶೀರ್ಷಿಕೆ ಪ್ರಾಯೋಜಕರನ್ನು ಅಂತಿಮಗೊಳಿಸಿದ ತಕ್ಷಣ, ಟೀಮ್ ಇಂಡಿಯಾ ಜೆರ್ಸಿಯಲ್ಲಿ ಆ ಲೋಗೋ ಕಾಣಿಸಿಕೊಳ್ಳಲಿದೆ. ಸದ್ಯ ಭಾರತ ಕ್ರಿಕೆಟ್ ತಂಡದ ಪ್ರಮುಖ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆಯಲು ಬಿಸಿಸಿಐ ಪ್ರತಿಷ್ಠಿತ ಸಂಸ್ಥೆಗಳಿಂದ ಬಿಡ್‌ಗಳನ್ನು ಆಹ್ವಾನಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಡ್ ಡಾಕ್ಯುಮೆಂಟ್ ಅನ್ನು ಜೂನ್ 26ರ ಒಳಗೆ ಖರೀದಿಸಬಹುದು. ಇದನ್ನು ಖರೀದಿಸಲು ಶುಲ್ಕವಾಗಿ 5 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ. ಆ ಮೊತ್ತವನ್ನು ಮರುಪಾವತಿಸಲಾಗುವುದಿಲ್ಲ.
“ಬಿಡ್ ಸಲ್ಲಿಸಲು ಬಯಸುವ ಯಾವುದೇ ಆಸಕ್ತ ಸ್ಪಾನ್ಸರ್‌ಗಳು, ಬಿಸಿಸಿಐ ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು. ಬಿಡ್ ಡಾಕ್ಯುಮೆಂಟ್‌ನಲ್ಲಿ ಸೂಚಿಸಲಾದ ಇತರ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುವವರು ಮಾತ್ರ ಬಿಡ್‌ನಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ” ಎಂದು ಶಾ ಹೇಳಿದ್ದಾರೆ.
ಇದೇ ವೇಳೆ ಬಿಡ್‌ಗೆ ಆಸಕ್ತಿ ಇರುವ ಭಾರತ ಹಾಗೂ ವಿದೇಶಿ ಸ್ಪಾನ್ಸರ್‌ಗಳಿಗೆ ಪ್ರತ್ಯೇಕ ಪಾವತಿ ವಿವರಗಳನ್ನು ಬಿಸಿಸಿಐ ಹಂಚಿಕೊಂಡಿದೆ.
ಹಾಗಂತ ಹಣಕಾಸಿನ ಮಾನದಂಡಗಳನ್ನು ಪೂರೈಸುವ ಎಲ್ಲಾ ಕಂಪನಿ ಅಥವಾ ಸಂಸ್ಥೆಗಳು ಭಾರತೀಯ ಕ್ರಿಕೆಟ್ ತಂಡಗಳ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಇದಕ್ಕೆ ಮಂಡಳಿಯು ಮತ್ತಷ್ಟು ಷರತ್ತುಗಳನ್ನು ವಿಧಿಸಿದೆ.
ಭಾರತೀಯ ಕ್ರಿಕೆಟ್ ತಂಡಗಳ ಟೈಟಲ್ ಪ್ರಾಯೋಜಕತ್ವಕ್ಕೆ ಅರ್ಜಿ ಸಲ್ಲಿಸಲು ಕೆಲವು ಬ್ರಾಂಡ್ ವಿಭಾಗಗಳಿಗೆ ಅವಕಾಶವಿಲ್ಲ. ಆ ನಿಷೇಧಿತ ವರ್ಗದ ಬ್ರ್ಯಾಂಡ್‌ಗಳ ಪಟ್ಟಿಯನ್ನು ಬಿಸಿಸಿಐ ಹಂಚಿಕೊಂಡಿದೆ.