India vs West Indies: ಟೆಸ್ಟ್ ಸ್ಥಾನದೊಂದಿಗೆ ಉಪನಾಯಕ ಪಟ್ಟವೂ ಹೋಯ್ತು; ಪೂಜಾರ ಬದಲಿಗೆ ರಹಾನೆಗೆ ಸಿಕ್ತು ವೈಸ್ ಕ್ಯಾಪ್ಟನ್ಸಿ
ಕನ್ನಡ ಸುದ್ದಿ  /  ಕ್ರೀಡೆ  /  India Vs West Indies: ಟೆಸ್ಟ್ ಸ್ಥಾನದೊಂದಿಗೆ ಉಪನಾಯಕ ಪಟ್ಟವೂ ಹೋಯ್ತು; ಪೂಜಾರ ಬದಲಿಗೆ ರಹಾನೆಗೆ ಸಿಕ್ತು ವೈಸ್ ಕ್ಯಾಪ್ಟನ್ಸಿ

India vs West Indies: ಟೆಸ್ಟ್ ಸ್ಥಾನದೊಂದಿಗೆ ಉಪನಾಯಕ ಪಟ್ಟವೂ ಹೋಯ್ತು; ಪೂಜಾರ ಬದಲಿಗೆ ರಹಾನೆಗೆ ಸಿಕ್ತು ವೈಸ್ ಕ್ಯಾಪ್ಟನ್ಸಿ

Cheteshwar Pujara: ಚೇತೇಶ್ವರ ಪೂಜಾರ ಅವರನ್ನು ವೆಸ್ಟ್‌ ಇಂಡೀಸ್ ವಿರುದ್ಧದ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಭಾರತಕ್ಕೆ ಹೊಸ ಉಪನಾಯಕನಾಗಿ ರಹಾನೆಯನ್ನು ನೇಮಿಸಲಾಗಿದೆ.

ಚೆತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ
ಚೆತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ

ಕೆರಿಬಿಯನ್ನರ ನಾಡಿನಲ್ಲಿ ಜುಲೈ ತಿಂಗಳಿನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ (India vs West Indies) ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದರೆ, ಭಾರತ ಟೆಸ್ಟ್‌ ತಂಡದ ಕಾಯಂ ಆಟಗಾರ ಎನಿಸಿಕೊಂಡಿರುವ ಚೆತೇಶ್ವರ ಪೂಜಾರಗೆ (Cheteshwar Pujara) ಅಚ್ಚರಿಯ ರೀತಿಯಲ್ಲಿ ಕೊಕ್‌ ನೀಡಲಾಗಿದೆ.

ಇತ್ತೀಚೆಗೆ ಮುಗಿದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪೂಜಾರಾಗೆ ಬಿಸಿಸಿಐ ಅವಕಾಶ ನೀಡಿಲ್ಲ. ಟೆಸ್ಟ್ ತಂಡವೆಂದರೆ ಪೂಜಾರ ಇರಲೇಬೇಕು ಎನ್ನುವ ಸನ್ನಿವೇಶದ ನಡುವೆ, ಪೂಜಾರಾ ಅನುಪಸ್ಥಿತಿಯು ಸಹಜವಾಗಿಯೇ ಚರ್ಚೆಯ ಅಂಶವಾಗಿದೆ.

ತಂಡದಿಂದ ಪೂಜಾರ ಅವರನ್ನು ಹೊರಗಿಡಲಾಗಿದೆ ಎಂದರೆ ಭಾರತ ತಂಡದಲ್ಲಿ ಮೂರನೇ ಕ್ರಮಾಂಕಕ್ಕೆ ಹೊಸ ಆಟಗಾರನ ಪ್ರಯೋಗಕ್ಕೆ ಬಿಸಿಸಿಐ ಇಳಿಯುವುದು ಬಹುತೇಕ ಖಚಿತ. ಸದ್ಯ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ತಂಡಕ್ಕೆ ಆಯ್ಕೆಯಾಗಿದ್ದು, ಇವರಿಬ್ಬರಲ್ಲಿ ಒಬ್ಬರಿಗೆ ಇದು ಚೊಚ್ಚಲ ಟೆಸ್ಟ್ ಪಂದ್ಯವಾಗಬಹುದು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜೈಸ್ವಾಲ್ ಅವರ ದಾಖಲೆ ಮತ್ತು ಈ ಬಾರಿ ಅಂತ್ಯಗೊಂಡ ಐಪಿಎಲ್‌ನಲ್ಲಿ ಅವರು ತೋರಿದ ಫಾರ್ಮ್‌ನಿಂದಾಗಿ ಆ ಸ್ಥಾನವನ್ನು ಅವರು ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಭಾರತ ಟೆಸ್ಟ್‌ ತಂಡದಲ್ಲಿ ಪೂಜಾರ ಉಪನಾಯಕನ ಸ್ಥಾನ ಪಡೆದಿದ್ದರು. ಆದರೆ, ಈಗ ಅವರನ್ನೇ ಕೈಬಿಟ್ಟಿದ್ದು ಪ್ರಥಮ ದರ್ಜೆ ಕ್ರಿಕೆಟ್‌ಗೆ ಹೊಸ ಉಪನಾಯಕನ ನೇಮಕದ ಅಗತ್ಯವಿದೆ. ಆಯ್ಕೆದಾರರು ಅಚ್ಚರಿಯ ರೀತಿಯಲ್ಲಿ ಅಜಿಂಕ್ಯ ರಹಾನೆಗೆ ಹೊಸ ಜವಾಬ್ದಾರಿ ನೀಡಿದ್ದಾರೆ. 2022ರ ಆರಂಭದಲ್ಲಿ ರಹಾನೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆ ಬಳಿಕ ಪ್ರಥಮ ದರ್ಜೆ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಜಿಂಕ್ಸ್‌, ಡಬ್ಲ್ಯೂಟಿಸಿ ಫೈನಲ್‌ ತಂಡಕ್ಕೆ ಆಯ್ಕೆಯಾದರು. ಅಲ್ಲಿ ಭಾರತದ ಪರ ಉತ್ತಮ ಆಟ ಆಡಿದ ಅವರು, ತಮ್ಮ ಸ್ಥಾನವನ್ನು ಭದ್ರವಾಗಿಟ್ಟಿದ್ದಾರೆ.

129 ಎಸೆತಗಳಲ್ಲಿ 89 ರನ್ ಗಳಿಸುವ ಮೂಲಕ ಆಸಿಸ್‌ ತಂಡಕ್ಕೆ ಕೆಲಕಾಲ ಕಂಟಕರಾದರು. ಮೊದಲನೆ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ ಕಲೆ ಹಾಕಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 46 ರನ್ ಗಳಿಸಿದ ರಹಾನೆ 5ನೇ ದಿನದ ಮೊದಲ ಸೆಷನ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಬೆರಳಿನ ಗಾಯವಿದ್ದರೂ ಬ್ಯಾಟ್ ಬೀಸುವ ಮೂಲಕ ರಹಾನೆ ಕ್ರೀಡಾಸ್ಫೂರ್ತಿ ಮೆರೆದರು.

2022ರಲ್ಲಿ ರಹಾನೆಯನ್ನು ತಂಡದಿಂದ ಕೈಬಿಡುವ ಮೊದಲು ರಹಾನೆ ಭಾರತ ಟೆಸ್ಟ್ ತಂಡದ ಉಪನಾಯಕರಾಗಿದ್ದರು. ಅಲ್ಲದೆ ಆರು ಪಂದ್ಯಗಳಲ್ಲಿ ಭಾರತದ ನಾಯಕತ್ವವನ್ನೂ ವಹಿಸಿದ್ದರು. ಅವರು ನೇತೃತ್ವ ವಹಿಸಿದ ಟೆಸ್ಟ್ ಪಂದ್ಯಗಳಲ್ಲಿ ಭಾರತ ಒಂದರಲ್ಲೂ ಸೋತಿಲ್ಲ ಎಂಬುದು ವಿಶೇಷ. 2020/21ರ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಸರಣಿಯಲ್ಲಿ ಆಸೀಸ್‌ ವಿರುದ್ಧ ಅವರದೇ ನೆಲದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅವರು ಭಾರತ ತಂಡದ ನಾಯಕರಾಗಿದ್ದರು. ಇದೀಗ ಇದೇ ರಹಾನೆ ಮತ್ತೆ ತಮ್ಮ ಹಳೆ ಖದರ್‌ ತೋರಿಸಲು ಮುಂದಾಗಿದ್ದಾರೆ.

ಪಂದ್ಯಗಳು ಯಾವಾಗ?

ವಿಂಡೀಸ್‌ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಪಂದ್ಯವು, ಡೊಮಿನಿಕಾದ ವಿಂಡ್ಸರ್ ಪಾರ್ಕ್‌ನಲ್ಲಿ ಜುಲೈ 12ರಂದು ಆರಂಭವಾಗಲಿದೆ. ಎರಡನೇ ಟೆಸ್ಟ್ ಪಂದ್ಯವು ಜುಲೈ 20ರಿಂದ ಜುಲೈ 24ರವರೆಗೆ ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿದೆ.

ಭಾರತ ಟೆಸ್ಟ್ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.

Whats_app_banner