ಕನ್ನಡ ಸುದ್ದಿ  /  Sports  /  Cricket News Ben Stokes Creates A Unique Record Without Batting Bowling Keeping Wicket In Test 146 Year Old History Prs

Ben Stokes: ಬ್ಯಾಟ್​ ಮುಟ್ಟಿಲ್ಲ, ಬೌಲಿಂಗ್​​ ಮಾಡಿಲ್ಲ; 146 ವರ್ಷಗಳ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ದಾಖಲೆ ಬರೆದ ಬೆನ್​ಸ್ಟೋಕ್ಸ್​​

ಬೆನ್​ಸ್ಟೋಕ್ಸ್ (Ben Stokes) ಐರ್ಲೆಂಡ್​ ಎದುರಿನ ಟೆಸ್ಟ್​ ಪಂದ್ಯದಲ್ಲಿ (Eng vs Ire Test) ಬೌಲಿಂಗ್​​-ಬ್ಯಾಟಿಂಗ್​ ಮಾಡದೆಯೇ ಟೆಸ್ಟ್​​ ಕ್ರಿಕೆಟ್​​ ಇತಿಹಾಸದಲ್ಲಿ ನೂತನ ವಿಶ್ವದಾಖಲೆಯೊಂದನ್ನು ತನ್ನದಾಗಿಸಿಕೊಂಡಿದ್ದಾರೆ

146 ವರ್ಷಗಳ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ದಾಖಲೆ ಬರೆದ ಬೆನ್​ಸ್ಟೋಕ್ಸ್
146 ವರ್ಷಗಳ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ದಾಖಲೆ ಬರೆದ ಬೆನ್​ಸ್ಟೋಕ್ಸ್

ಲಂಡನ್​ನ ಐತಿಹಾಸಿಕ ಲಾರ್ಡ್ಸ್​ ಮೈದಾನದಲ್ಲಿ ನಡೆದ ಐರ್ಲೆಂಡ್​ ಎದುರಿನ ಏಕೈಕ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ (Ireland vs England) ಭರ್ಜರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್​ - ಬೌಲಿಂಗ್​​ನಲ್ಲಿ ಜಬರ್​ದಸ್ತ್​ ಪ್ರದರ್ಶನ ನೀಡಿದ ಇಂಗ್ಲೀಷರು, 10 ವಿಕೆಟ್​ಗಳ ಅಂತರದಿಂದ ಅಭೂತಪೂರ್ವ ಜಯ ಸಾಧಿಸಿದರು. ಆದರೆ ಈ ಪಂದ್ಯದಲ್ಲಿ ನಾಯಕ ಬೆನ್​ಸ್ಟೋಕ್ಸ್ (Ben Stokes)​​ 146 ವರ್ಷಗಳ ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಬರೆಯದ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

ಟಾಸ್​ ಗೆದ್ದು ಇಂಗ್ಲೆಂಡ್​, ಐರ್ಲೆಂಡ್ ತಂಡ​ಕ್ಕೆ ಬ್ಯಾಟಿಂಗ್​​ಗೆ ಆಹ್ವಾನ ಮಾಡಿತು. ಮೊದಲ ಇನ್ನಿಂಗ್ಸ್​​ನಲ್ಲಿ ಐರ್ಲೆಂಡ್​, 172 ರನ್​ಗಳಿಗೆ ಸರ್ವ ಪತನ ಕಂಡಿತು. ಸ್ಟುವರ್ಟ್​ ಬ್ರಾಡ್​ 5 ವಿಕೆಟ್​ ಪಡೆದರೆ, ಜಾಕ್​ ಲೀಚ್​ 3 ವಿಕೆಟ್​, ಮ್ಯಾಥ್ಯೂ ಪಾಟ್ಸ್​ 2 ವಿಕೆಟ್​ ಉರುಳಿಸಿ ಗಮನ ಸೆಳೆದರು. ಇಂಗ್ಲೆಂಡ್​ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಓಲ್ಲೀ ಪೋಪ್​ ದ್ವಿಶತಕ, ಬೆನ್​ ಡಕೆಟ್​​ ಶತಕದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 524 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು.

ಇದರೊಂದಿಗೆ ಇಂಗ್ಲೆಂಡ್​, 351 ರನ್​ಗಳ ಮುನ್ನಡೆ ಪಡೆಯಿತು. ಇನ್ನು ಈ ಗುರಿಯನ್ನು ಹಿಂಬಾಲಿಸಿದ ಐರ್ಲೆಂಡ್​, ಅದ್ಭುತ ಪ್ರದರ್ಶನ ನೀಡಿತು. 2ನೇ ಇನ್ನಿಂಗ್ಸ್​ನಲ್ಲಿ ದಿಟ್ಟ ಹೋರಾಟಕ್ಕೆ ಮುಂದಾಯಿತು. ಅಲ್ಪಮೊತ್ತ ಮುನ್ನಡೆಯೂ ಸಾಧಿಸಿತು. ಆದರೆ ಆ್ಯಂಡಿ ಬ್ರಾಕ್​ಬ್ರೈನ್​ ಮತ್ತು ಮಾರ್ಕ್​ ಅಡೈರ್ ಬಿಟ್ಟರೆ ಯಾರೂ ಕ್ರೀಸ್​​ ಕಚ್ಚಿ ನಿಲ್ಲುವ ಪ್ರಯತ್ನ ನಡೆಸಲಿಲ್ಲ. ಗೆಲುವಿನ ಕೇವಲ 11 ರನ್​ಗಳ ಗುರಿ ನೀಡಿತು. ಇಂಗ್ಲೆಂಡ್​ ತನ್ನ 2ನೇ ಇನ್ನಿಂಗ್ಸ್​ನ 4 ಎಸೆತಗಳಲ್ಲೇ ಪಂದ್ಯ ಮುಗಿಸಿತು.

ವಿಶ್ವದಾಖಲೆ ಬರೆದ ಬೆನ್​ಸ್ಟೋಕ್ಸ್

ಬೆನ್​ಸ್ಟೋಕ್ಸ್ ಈ ಪಂದ್ಯದಲ್ಲಿ ಬ್ಯಾಟಿಂಗ್​ ಮಾಡಲು ಕ್ರೀಸ್​ಗೆ ಬರಲೇ ಇಲ್ಲ. ಬೌಲಿಂಗ್​ ಮಾಡಲಿಲ್ಲ. ತಂಡವನ್ನು ಮುನ್ನಡೆಸಿದ​ ನಾಯಕ ಬೌಲಿಂಗ್​​-ಬ್ಯಾಟಿಂಗ್​ ಮಾಡದೆಯೇ ಟೆಸ್ಟ್​​ ಕ್ರಿಕೆಟ್​​ ಇತಿಹಾಸದಲ್ಲಿ ನೂತನ ವಿಶ್ವದಾಖಲೆಯೊಂದನ್ನು ತನ್ನದಾಗಿಸಿಕೊಂಡಿದ್ದಾರೆ. 146 ವರ್ಷಗಳ ಟೆಸ್ಟ್​ ಕ್ರಿಕೆಟ್​​ ಚರಿತ್ರೆಯಲ್ಲಿ ನಾಯಕನೊಬ್ಬ ಬ್ಯಾಟಿಂಗ್, ಬೌಲಿಂಗ್ ಅಥವಾ ವಿಕೆಟ್ ಕೀಪಿಂಗ್‌ ಮಾಡದೇ ಟೆಸ್ಟ್​ ಪಂದ್ಯ ಗೆದ್ದ ವಿಶ್ವದ ಏಕೈಕ ಆಟಗಾರನಾಗಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಐದನೇ ಶ್ರೇಯಾಂಕ ಹೊಂದಿದ್ದರೂ, ಸ್ಟೋಕ್ಸ್ ಬ್ಯಾಟ್, ಬಾಲ್ ಅಥವಾ ವಿಕೆಟ್‌ಕೀಪರ್‌ನಲ್ಲಿ ಕೊಡುಗೆ ನೀಡದೆ ಟೆಸ್ಟ್ ಪಂದ್ಯ ಗೆದ್ದ ಮೊದಲ ನಾಯಕ ಎಂಬ ವಿಶಿಷ್ಟ ದಾಖಲೆ ಬರೆದಿದ್ದಾರೆ. ಎಡ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ, ಬೌಲಿಂಗ್​ ಮಾಡಲು ಹಿಂದೇಟು ಹಾಕಿದರು. ಇಂಗ್ಲೆಂಡ್​ ತಂಡದ ಅಗ್ರಕ್ರಮಾಂಕದ ಆಟಗಾರರು ಅತ್ಯದ್ಧುತ ಪ್ರದರ್ಶನ ನೀಡಿದ ಕಾರಣ, ಬ್ಯಾಟಿಂಗ್​ ಮಾಡುವ ಅವಕಾಶ ಸಿಗಲಿಲ್ಲ. ಇಂಗ್ಲೆಂಡ್​ನ ಎರಡೂ ಇನ್ನಿಂಗ್ಸ್​ ಸೇರಿ 4 ವಿಕೆಟ್​​ಗಳನ್ನಷ್ಟೇ ಕಳೆದುಕೊಂಡಿತ್ತು.

ಐಪಿಎಲ್ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬೆನ್​ಸ್ಟೋಕ್ಸ್​​ ಅವರನ್ನು ಖರೀದಿಸಿತ್ತು. ಗಾಯದ ಸಮಸ್ಯೆಯ ಕಾರಣ ಸಿಎಸ್​ಕೆ ತಂಡದಲ್ಲಿ ಅವಕಾಶ ಪಡೆದಿರಲಿಲ್ಲ. ಎಂಎಸ್ ಧೋನಿ ನೇತೃತ್ವದ ತಂಡವು ತಮ್ಮ ಕೊನೆಯ ಲೀಗ್ ಹಂತದ ಪಂದ್ಯವನ್ನು ಆಡಿದ ನಂತರ ಮನೆಗೆ ಮರಳಿದರು.