ಕನ್ನಡ ಸುದ್ದಿ  /  Sports  /  Cricket News Chennai Super Kings Have Won The Toss Have Opted To Field Against Gujarat Titans In Ipl 2023 Final Prs

CSK vs GT Final: ಐಪಿಎಲ್​ ಫೈನಲ್​ನಲ್ಲಿ ಟಾಸ್​ ಗೆದ್ದ ಧೋನಿ ಚೇಸಿಂಗ್​ ಆಯ್ಕೆ; ಮತ್ತೊಂದು ಟ್ರೋಫಿ ಗೆಲುವಿನ ಕನಸಿನಲ್ಲಿ ಚೆನ್ನೈ

ಧೋನಿ ಇಂದು ಐಪಿಎಲ್​ನಲ್ಲಿ ಮಹತ್ವದ ಪಂದ್ಯವನ್ನು ಆಡಲಿದ್ದಾರೆ. ಫೈನಲ್​ನಲ್ಲಿ ಐತಿಹಾಸಿಕ ಪಂದ್ಯಕ್ಕೂ ಕಾಲಿಡಲಿದ್ದಾರೆ. ಶ್ರೀಮಂತ ಲೀಗ್​​ನಲ್ಲಿ 250ನೇ ಪಂದ್ಯವನ್ನು ಆಡಲಿದ್ದಾರೆ. ಆ ಮೂಲಕ ಮಿಲಿಯನ್​ ಡಾಲರ್ ಟೂರ್ನಿಯಲ್ಲಿ ಈ ದಾಖಲೆ ಬರೆದ ಮೊದಲ ಆಟಗಾರ ಎನಿಸಲಿದ್ದಾರೆ.

ಹಾರ್ದಿಕ್​ ಪಾಂಡ್ಯ ಮತ್ತು ಎಂಎಸ್​ ಧೋನಿ
ಹಾರ್ದಿಕ್​ ಪಾಂಡ್ಯ ಮತ್ತು ಎಂಎಸ್​ ಧೋನಿ

ಮೇ 28ರಂದು ನಿರಂತರ ಸುರಿದು 16ನೇ ಆವೃತ್ತಿಯ ಐಪಿಎಲ್​ ಫೈನಲ್​ ಪಂದ್ಯಕ್ಕೆ ಅಡ್ಡಿ ಪಡಿಸಿದ್ದ ಮಳೆ, ಇಂದು ಬಿಡುವು ಕೊಟ್ಟಿದೆ. ಸತತ ಮಳೆಯ ಕಾಟದಿಂದ ಮೀಸಲು ದಿನವಾದ ಇವತ್ತಿಗೆ ಮುಂದೂಡಲಾಗಿದ್ದ ಅಂತಿಮ ಹಣಾಹಣಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​ ಟಾಸ್​ ಗೆದ್ದು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಅದರಂತೆ ಮೊದಲು ಬ್ಯಾಟಿಂಗ್​ ನಡೆಸಲಿರುವ ಗುಜರಾತ್ ಎದುರಾಳಿ ತಂಡಕ್ಕೆ ಬೃಹತ್​ ಟಾರ್ಗೆಟ್​ ನೀಡುವ ಯೋಜನೆ ಹಾಕಿಕೊಂಡಿದೆ. ಉಭಯ ತಂಡಗಳಲ್ಲೂ ಯಾವುದೇ ಬದಲಾವಣೆ ಕಂಡಿಲ್ಲ.

ಇಂದು ಪಂದ್ಯ ರದ್ದಾದರೆ?

ಪಂದ್ಯದಲ್ಲಿ ಫಲಿತಾಂಶ ನಿರ್ಧಾರವಾಗಲು ಕನಿಷ್ಠ 5 ಓವರ್‌ಗಳ ಪಂದ್ಯವಾದರೂ ಜರುಗಬೇಕು. ಇಲ್ಲದಿದ್ದಲ್ಲಿ ಸೂಪರ್‌ ಓವರ್‌ನಲ್ಲಿ ಪಂದ್ಯದ ಫಲಿತಾಂಶ ಬರಬೇಕು. ಒಂದು ವೇಳೆ ಮೀಸಲು ದಿನದಲ್ಲಿ ಅದಕ್ಕೂ ಮಳೆರಾಯ ಅವಕಾಶ ನೀಡದಿದ್ದರೆ ಗುಜರಾತ್‌ ಟೈಟಾನ್ಸ್‌ ತಂಡವೇ ಚಾಂಪಿಯನ್‌ ಆಗಿ ಹೊರ ಹೊಮ್ಮಲಿದೆ. ಮೀಸಲು ದಿನವೂ ಪಂದ್ಯ ರದ್ದಾದರೆ ಲೀಗ್‌ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ತಂಡಕ್ಕೆ ಚಾಂಪಿಯನ್​ ಪಟ್ಟ ಸಿಗಲಿದೆ.

ಅದರಂತೆ ಗುಜರಾತ್‌ ತಂಡ ಅಂಕಪಟ್ಟಿಯ ಮೊದಲ ತಂಡವಾಗಿ ಪ್ಲೇ ಆಫ್‌ಗೆ ಏರಿತ್ತು. ಲೀಗ್‌ನಲ್ಲಿ 14 ಪಂದ್ಯಗಳನ್ನಾಡಿದ್ದು 10ರಲ್ಲಿ ಗೆಲುವು ಸಾಧಿಸಿ 20 ಅಂಕ ಸಂಪಾದಿಸಿದೆ. ಇನ್ನು ಚೆನ್ನೈ ಪಾಯಿಂಟ್ಸ್​ ಟೇಬಲ್​ನಲ್ಲಿ 2ನೇ ಸ್ಥಾನ ಪಡೆದಿದೆ. 14 ಪಂದ್ಯಗಳಲ್ಲಿ 8 ಗೆಲುವು ಕಾಣುವ ಮೂಲಕ 17 ಅಂಕದೊಂದಿಗೆ ಎರಡನೇ ಸ್ಥಾನಿಯಾಗಿ ಪ್ಲೇ ಆಫ್​ಗೆ ಪ್ರವೇಶಿಸಿತ್ತು.

ಐಪಿಎಲ್​ನಲ್ಲಿ ಧೋನಿ 250ನೇ ಪಂದ್ಯ

ಧೋನಿ ಇಂದು ಐಪಿಎಲ್​ನಲ್ಲಿ ಮಹತ್ವದ ಪಂದ್ಯವನ್ನು ಆಡಲಿದ್ದಾರೆ. ಫೈನಲ್​ನಲ್ಲಿ ಐತಿಹಾಸಿಕ ಪಂದ್ಯಕ್ಕೂ ಕಾಲಿಡಲಿದ್ದಾರೆ. ಶ್ರೀಮಂತ ಲೀಗ್​​ನಲ್ಲಿ 250ನೇ ಪಂದ್ಯವನ್ನು ಆಡಲಿದ್ದಾರೆ. ಆ ಮೂಲಕ ಮಿಲಿಯನ್​ ಡಾಲರ್ ಟೂರ್ನಿಯಲ್ಲಿ ಈ ದಾಖಲೆ ಬರೆದ ಮೊದಲ ಆಟಗಾರ ಎನಿಸಲಿದ್ದಾರೆ.

ಧೋನಿಗೆ 11ನೇ ಫೈನಲ್​

ಐಪಿಎಲ್​ 16 ಆವೃತ್ತಿಗಳ ಪೈಕಿ ಧೋನಿಗೆ ಇದು 11ನೇ ಆವೃತ್ತಿಯ ಪಂದ್ಯವಾಗಿದೆ. ಅವರಿಗೆ ಸಿಎಸ್​ಕೆ ಪರ ಇದು 10ನೇ ಫೈನಲ್​​​​ ಆಗಿದೆ. 2017ರಲ್ಲಿ ಪುಣೆ ಸೂಪರ್​ ಜೈಂಟ್ಸ್​​ ಪರ ಫೈನಲ್​​ ಆಡಿದ್ದರು.

ಮುಂಬೈ ದಾಖಲೆ ಸರಿಗಟ್ಟುತ್ತಾ ಸಿಎಸ್​ಕೆ?

ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​​ ಅತಿ ಹೆಚ್ಚು ಟ್ರೋಫಿ ಗೆದ್ದ ತಂಡ ಎನಿಸಿದೆ. ಚೆನ್ನೈ ಸೂಪರ್ ಕಿಂಗ್ಸ್​​ ಒಟ್ಟು 4 ಬಾರಿ ಪ್ರಶಸ್ತಿ ಗೆದ್ದಿದೆ. ಇದೀಗ ಸಿಎಎಸ್​ಕೆ ಟ್ರೋಫಿ ಗೆದ್ದರೆ ಮುಂಬೈ ದಾಖಲೆಯನ್ನು ಸರಿಗಟ್ಟಲಿದೆ.

ಚಾಣಾಕ್ಷ ನಾಯಕರ ಕದನ

ಧೋನಿ ಈಗಾಗಲೇ ಭಾರತ ಮತ್ತು ಸಿಎಸ್​ಕೆ ಪರ ಚಾಣಾಕ್ಷ ಕ್ಯಾಪ್ಟನ್ಸಿಯಿಂದ ಹಲವು ಪ್ರಶಸ್ತಿ ಗೆದ್ದಿದ್ದಾರೆ. ಹಾರ್ದಿಕ್​ ಪಾಂಡ್ಯ ಕಳೆದ ವರ್ಷ ಗುಜರಾತ್​ ತಂಡಕ್ಕೆ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದುಕೊಟ್ಟಿದ್ದರು. ಇದರಿಂದ ಟೀಮ್​ ಇಂಡಿಯಾದ ಹಂಗಾಮಿ ನಾಯಕತ್ವವೂ ಸಿಕ್ಕಿದೆ. ಭವಿಷ್ಯದ ನಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ.

ಉಭಯ ತಂಡಗಳ ಮುಖಾಮುಖಿ

ಗುಜರಾತ್​ ಮತ್ತು ಚೆನ್ನೈ ತಂಡಗಳು ಒಟ್ಟು 4 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಗುಜರಾತ್​ ತಂಡವು 3 ಬಾರಿ ಗೆಲುವು ಸಾಧಿಸಿದ್ದರೆ, ಚೆನ್ನೈ 1 ಸಲ ಗೆಲುವು ದಾಖಲಿಸಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ

ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್​ ಕೀಪರ್), ದೀಪಕ್ ಚಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

ಗುಜರಾತ್‌ ಟೈಟನ್ಸ್ ತಂಡ

ವೃದ್ಧಿಮಾನ್ ಸಹಾ (ವಿಕೆಟ್​ ಕೀಪರ್), ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ.