World Cup 1983: ರಜೆಗೆ ಅಮೆರಿಕ ಹೋಗ್ತಿದ್ದೇವೆ, ಹೋಗ್ತಾ ವಿಶ್ವಕಪ್ ಆಡ್ತೇವೆ ಎಂದಿದ್ರು; ಕಪ್ ಗೆದ್ದು ಈ ಆಟಗಾರನ ಹನಿಮೂನ್ ಹಾಳು ಮಾಡಿದ್ರಂತೆ
ODI World Cup 1983: 1983 ವಿಶ್ವಕಪ್ ಸಂದರ್ಭದಲ್ಲಿ ನಡೆದ ಯಾರಿಗೂ ತಿಳಿಯದ ಆಸಕ್ತಿಕರ ಘಟನೆಗಳ ಕುರಿತು ಪ್ರತಿ ಭಾನುವಾರ ಸಖತ್ ಆಟ ಅಂಕಣದ ಮೂಲಕ ನಿಮ್ಮೊಂದಿಗೆ ಬರುತ್ತೇವೆ.
ಆಗಿನ್ನೂ ನಾನು ಹುಟ್ಟಿರಲಿಲ್ಲ. ಈ ಬಗ್ಗೆ ತಿಳಿದವರು ಹೇಳಿದ್ದು, ಮಾಧ್ಯಮಗಳಲ್ಲಿ ಓದಿದ್ದೇನೆ. ವಿಷಯ ಇಷ್ಟೇ, 1983ರಲ್ಲಿ ಭಾರತ ಒಂದು ಮಹೋನ್ನತ ಸಾಧನೆ ಮಾಡಿತ್ತು. ಅದನ್ನು ವಿಶೇಷವಾಗಿ ಬಿಡಿಸಿ ಹೇಳುವುದು ಏನಿದೆ; ಭಾರತ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದಿತ್ತು. ಆದರೆ ಇಡೀ ಪ್ರಪಂಚವೇ ಭಾರತದತ್ತ ಅಚ್ಚರಿಯಿಂದ ಕಣ್ಣು ಬೀರಿತ್ತು. ಯಾಕೆಂದರೆ, ಭಾರತ ವಿಶ್ವಕಪ್ ಗೆಲ್ಲಲ್ಲ ಎಂದು ಜಗತ್ತೇ ಮಾತನಾಡಿತ್ತು. ಅಯ್ಯೋ, ಅದೆಲ್ಲಾ ಇರಲಿ, ಸ್ವತಃ ಭಾರತ ತಂಡದ ಆಟಗಾರರೇ (ಕಪಿಲ್ ದೇವ್ ಹೊರತುಪಡಿಸಿ) ನಂಬಿರಲಿಲ್ಲ.
ಆದರೆ, ನಾನು ಹೇಳಲು ಹೊರಟಿರುವುದು ನಿಮಗೆ ಗೊತ್ತಿಲ್ಲದ ಅಚ್ಚರಿಯ ವಿಷಯದ ಕುರಿತು. ಮೊದಲೇ ಹೇಳಿದಂತೆ ವಿಶ್ವಕಪ್ ಗೆಲ್ಲುತ್ತೇವೆ ಎಂಬ ಆಟಗಾರರಿಗೆ ಸ್ವತಃ ನಂಬಿರಲಿಲ್ಲ ಎನ್ನುವುದಕ್ಕೆ ಆಟಗಾರರ ಈ ಸ್ವಾರಸ್ಯಕರ ಘಟನೆಯೇ ಸಾಕ್ಷಿ. 1983ರ ಟೂರ್ನಿಗೂ ಮುನ್ನ ಕ್ರಿಕೆಟಿಗರ ಮಧ್ಯೆ ಒಂದು ಒಪ್ಪಂದವಾಗಿತ್ತು. ಆದರಿದು ಸಾಕಷ್ಟು ಮಂದಿಗೆ ತಿಳಿದಿಲ್ಲ. 1983 ವಿಶ್ವಕಪ್ ಸಂದರ್ಭದಲ್ಲಿ ನಡೆದ ಯಾರಿಗೂ ತಿಳಿಯದ ಆಸಕ್ತಿಕರ ಘಟನೆಗಳ ಕುರಿತು ಪ್ರತಿ ಭಾನುವಾರ ಸಖತ್ ಆಟ ಅಂಕಣದ ಮೂಲಕ ನಿಮ್ಮೊಂದಿಗೆ ಬರುತ್ತೇವೆ.
ಮೊದಲೇ ನಿರ್ಧರಿದ್ರು
ಆಟಗಾರರು, ವಿಶ್ವಕಪ್ ಗೆಲ್ಲಲ್ಲ ಎಂದು ಮೊದಲೇ ನಿರ್ಧರಿಸಿ ಬಿಟ್ಟಿದ್ದರು. ಅದು ಕೂಡ ಇಂಗ್ಲೆಂಡ್‌ಗೆ ವಿಮಾನ ಹತ್ತುವ ಮೊದಲೇ. ಯಾಕೆಂದರೆ, 1975ರ ಚೊಚ್ಚಲ ಟೂರ್ನಿಯಲ್ಲಿ ಈಸ್ಟ್ ಆಫ್ರಿಕಾ ವಿರುದ್ಧ ಮಾತ್ರ ಗೆದ್ದಿತ್ತು. ಮುಂದಿನ ವಿಶ್ವಕಪ್ ಅಂದರೆ 1979ರಲ್ಲಿ ನಡೆದಿತ್ತು. ಆದರೆ ಈ ಟೂರ್ನಿಯಲ್ಲಿ ಎಲ್ಲಾ ಪಂದ್ಯಗಳಲ್ಲೂ ಸೋತಿತ್ತು. ಈ ಎರಡೂ ಟೂರ್ನಿಗಳಲ್ಲೂ ವೆಸ್ಟ್ ಇಂಡೀಸ್ ಚಾಂಪಿಯನ್ ಆಗಿತ್ತು. ಹಾಗಾಗಿ 1983 ವಿಶ್ವಕಪ್‌ನಲ್ಲೂ ಇದೇ ಪರಿಸ್ಥಿತಿ ಬರುತ್ತದೆ ಎಂದು ಆಟಗಾರರು ಮೊದಲೇ ನಿರ್ಧರಿಸಿದ್ದರು. ಪರಿಣಾಮ ರಜೆಯ ಮಜಾ ಕಳೆಯಲು ಅಮೆರಿಕಾಗೆ ಹೋಗ್ತಿದ್ದೇವೆ. ದಾರಿಯಲ್ಲಿ ವಿಶ್ವಕಪ್ ಆಡುತ್ತೇವೆ ಎಂದಿದ್ದರು.
ಸ್ವಾರಸ್ಯಕರ ಘಟನೆ ವಿವರಿಸಿದ ಶ್ರೀಕಾಂತ್
ಈ ಘಟನೆಯ ಕುರಿತು ಅಂದಿನ ಭಾರತ ತಂಡದ ಸದಸ್ಯನಾಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಎಳೆಎಳೆಯಾಗಿ ವಿವರಿಸಿದ್ದಾರೆ. ತಂಡದ ಆಟಗಾರರು 1983ರ ವಿಶ್ವಕಪ್ಗೆ ಇಂಗ್ಲೆಂಡ್‌ಗೆ ಪ್ರಯಾಣವೇ ಬೆಳೆಸಿರಲಿಲ್ಲ. ಅದಾಗಲೇ ಒಂದು ಆಟಗಾರರು ಒಂದು ಪ್ಲಾನ್ ಹಾಕಿಕೊಂಡಿದ್ದರು. ಸರಿಯಾಗಿಯೇ ಯೋಜನೆ ಹಾಕಿದ್ದರು. ಆದರೆ, ಶ್ರೀಕಾಂತ್ ಹನಿಮೂನ್ ಪ್ಲಾನ್ ವಿಫಲವಾಯಿತು. ಸುನಿಲ್ ಗವಾಸ್ಕರ್ ಇಂಗ್ಲೆಂಡ್‌ಗೆ ತೆರಳುವುದಕ್ಕೂ ಮುನ್ನ ಕರೆ ಮಾಡಿದ್ದರಂತೆ.
ಗವಾಸ್ಕರ್ ಕಾಲ್ ಮಾಡಿ ಏನಂದ್ರು?
ನಾನು ಮಾರ್ಚ್ 30, 1983ರಂದು ವಿವಾಹವಾದೆ. ತಂಡವು ಇಂಗ್ಲೆಂಡ್‌ಗೆ ತೆರಳುವ ಕೆಲವು ದಿನಗಳ ಮೊದಲು, ಸುನಿಲ್ ಗವಾಸ್ಕರ್ ಅವರಿಂದ ನನಗೆ ಕರೆ ಬಂದಿತ್ತು. ನಾವು ರಜೆಗಾಗಿ ಅಮೆರಿಕ ಹೋಗುತ್ತಿದ್ದೇವೆ. ದಾರಿಯಲ್ಲಿ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಆಡುತ್ತೇವೆ. ಹಾಗಾಗಿ, ದಯವಿಟ್ಟು ಬಾಂಬೆಯಿಂದ (ಇಂದಿನ ಮುಂಬೈ) ನೇರವಾಗಿ ನ್ಯೂಯಾರ್ಕ್‌ಗೆ ಟಿಕೆಟ್ ಬುಕ್ ಮಾಡು. ಆದರೆ ಲಂಡನ್‌ನಲ್ಲಿ ನಿಲುಗಡೆಯಾಗುವಂತೆ ಟಿಕೆಟ್‌ಗಳನ್ನು ಬುಕ್ ಮಾಡಿ ಎಂದು ಗವಾಸ್ಕರ್ ಹೇಳಿದ್ದರು ಎಂದು ಶ್ರೀಕಾಂತ್ ವಿವರಿಸಿದರು. ಅಷ್ಟೇ ಅಲ್ಲ, ಯಾಕೆ ಟ್ರಿಪ್ ಹೋಗ್ತಿದ್ದೇವೆ ಎಂಬುದನ್ನು ಗವಾಸ್ಕರ್ ಹೇಳಿದ್ದನ್ನೂ ಬಹಿರಂಗಪಡಿಸಿದರು.
ನಾವು ಹಂಗು ಗೆಲ್ಲಲ್ಲ ಅಂದಿದ್ರಂತೆ
ಅಂದು ಮಾತು ಮುಂದುವರೆಸಿದ ಶ್ರೀಕಾಂತ್, ಗವಾಸ್ಕರ್ ಜೊತೆಗಿನ ಸಂಭಾಷಣೆಯನ್ನು ವಿವರಿಸಿದರು. ಗವಾಸ್ಕರ್ ಮಾತುಗಳನ್ನು ಕೇಳಿ ಅಚ್ಚರಿಯಾಗಿದ್ದೆ. ನೋಡಿ, ಶ್ರೀಕಾಂತ್ ಕ್ರಿಕೆಟ್ ಲೋಕದಲ್ಲಿ ನಾವಿನ್ನೂ ಮರಿಗಳು. 1983ರ ಮೊದಲು, ನಾವು 2 ವಿಶ್ವಕಪ್‌ಗಳನ್ನು ಆಡಿದ್ದೇವೆ. ಆದರೆ ಗೆದ್ದಿರೋದು ಮಾತ್ರ ಈಸ್ಟ್ ಆಫ್ರಿಕಾ ವಿರುದ್ಧ ಮಾತ್ರ. ಒಂದೇ ಒಂದು ತಂಡವನ್ನು ಸೋಲಿಸಿದ್ದೇವೆ. ಉಳಿದ ತಂಡಗಳ ವಿರುದ್ಧ ಗೆಲ್ಲುವುದೇ ಕಷ್ಟ. ದುರಾದೃಷ್ಟ ಎಂದರೆ ಈ ಬಾರಿಯ (1983) ವಿಶ್ವಕಪ್ನಲ್ಲಿ ಈಸ್ಟ್ ಆಫ್ರಿಕಾ ಕೂಡ ಇಲ್ಲ. ಗೆಲ್ಲುತ್ತೇವೆ ಎಂಬ ನಂಬಿಕೆ ಇಲ್ಲ ಎಂದು ಗವಾಸ್ಕರ್ ಹೇಳಿದ್ದರಂತೆ.
‘ಅಮೆರಿಕದಲ್ಲಿ ಹನಿಮೂನ್ ಎಂದಿದ್ದೆ’
1979ರಲ್ಲಿ ಟೆಸ್ಟ್ಗೆ ಅರ್ಹತೆ ಪಡೆಯದ ಶ್ರೀಲಂಕಾ ತಂಡವೇ ನಮ್ಮನ್ನು ಸೋಲಿಸಿತ್ತು. 1983ರಲ್ಲಿ ತಂಡದ ಪರ ನಿರೀಕ್ಷೆಗಳು ತುಂಬಾ ಕಡಿಮೆಯಾಗಿವೆ. ತಂಡದಲ್ಲಿ ಇರುವ ಅರ್ಧದಷ್ಟು ಆಟಗಾರರಿಗೆ ನಾವು ಗೆಲ್ಲುವ ನಂಬಿಕೆಯೇ ಇಲ್ಲ . ನಾವು ಒಟ್ಟಿಗೆ ಹೋಟೆಲ್‌ಗೆ ಹೋಗೋಣ. ನಮಗೆ 1 ತಿಂಗಳು ಸಿಕ್ಕಿರುವ ರಜಾದಿನವನ್ನು ಮಜಾ ಮಾಡೋಣ ಎಂದು ಬ್ಯಾಟಿಂಗ್ ದಿಗ್ಗಜ ಗವಾಸ್ಕರ್ ಹೇಳಿದ್ದರು. ಆದರೆ, ವಿಶ್ವಕಪ್ಗೆ ತಂಡವನ್ನು ಆಯ್ಕೆ ಮಾಡಿದ ನಂತರ, ನಾನು ನನ್ನ ಹೆಂಡತಿ ವಿದ್ಯಾಗೆ ಹೇಳಿದ್ದೆ. ಬಾ, ಹನಿಮೂನ್‌ಗೆ ಅಮೆರಿಕ ಹೋಗೋಣ ಎಂದಿದ್ದೆ ಎಂದು ಶ್ರೀಕಾಂತ್ ಹೇಳಿದರು.
‘ದೇವರ ಮೇಲೆ ಆಣೆ ಮಾಡಿದ್ರು’
ಆಗ ನಾನು ತನ್ನ ಪತ್ನಿಯನ್ನು ಶ್ರೀಲಂಕಾಗೆ ಹನಿಮೂನ್‌ಗೆ ಕರೆದುಕೊಂಡು ಹೋಗಿದ್ದೆ. ಈ ವೇಳೆ ನಾವು ಲಂಡನ್‌ನಲ್ಲಿ 2ನೇ ಹನಿಮೂನ್, ಯುಎಸ್‌ನಲ್ಲಿ 3ನೇ ಹನಿಮೂನ್ ಮಾಡಿಕೊಳ್ಳೋಣ ಎಂದು ಪತ್ನಿಗೆ ಹೇಳಿದ್ದೆ. ಮತ್ತೊಂದೆಡೆ ಭಗವಾನ್ ನಾರಾಯಣ, ಶ್ರೀಕೃಷ್ಣನ ಮೇಲೆ ಗವಾಸ್ಕರ್ ಪ್ರಮಾಣ ಮಾಡಿದ್ದರು. ಈ ಯೋಜನೆಯು ವಿಫಲವಾಗಲ್ಲ ಎಂದಿದ್ದರು. ಅಮೇರಿಕದ ರಜೆಯ ಮಜಾ ಆನಂದಿಸಲು ಸುನಿಲ್ ಗವಾಸ್ಕರ್, ಸೈಯದ್ ಕಿರ್ಮಾನಿ, ರವಿಶಾಸ್ತ್ರಿ, ಸಂದೀಪ್ ಪಾಟೀಲ್.. ಇವರೆಲ್ಲರೂ ಅಮೆರಿಕ ರಜೆಗೆ ಬರುವುದಾಗಿ ಪತ್ನಿಗೆ ಹೇಳಿದ್ದೆ. ನಾವೆಲ್ಲರೂ ಅಮೆರಿಕ ಹೋಗುವ ಖುಷಿಯಲ್ಲೇ ಇಂಗ್ಲೆಂಡ್‌ಗೆ ಹೋದೆವು. ಆದರೆ ಒಬ್ಬ ಪ್ರಮುಖ ವ್ಯಕ್ತಿ ಯೋಜನೆಯಲ್ಲಿ ಇರಲಿಲ್ಲ. ಆತನೇ ನಮ್ಮ ಯೋಜನೆಗೆಲ್ಲಾ ಕೊಳ್ಳಿ ಇಟ್ಟರು ಎಂದು ಶ್ರೀಕಾಂತ್ ವಿವರಿಸಿದರು.
ಕಪ್ ಗೆಲ್ಲಲು ಕಾರಣ ಕಪಿಲ್ ದೇವ್
ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಘರ್ಷಣೆಗೆ ಮುನ್ನ ನಡೆದ ಟೀಮ್ ಮೀಟಿಂಗ್ನಲ್ಲಿ ಕಪಿಲ್ ದೇವ್, ಗೆಲ್ಲುವ ಕುರಿತು ಧೈರ್ಯದ ಮಾತುಗಳನ್ನಾಡಿದ್ದರು. ಆದರೆ ಉಳಿದ ಆಟಗಾರರು, ನಮ್ಮ ನಾಯಕನಿಗೆ ಹುಚ್ಚು ಹಿಡಿದಿದೆ ಎಂದು ನಾವು ಭಾವಿಸಿದ್ದೆವು. ಆದರೆ, ಕಪಿಲ್ ಅವರ ಆತ್ಮ ವಿಶ್ವಾಸವು ತಂಡ ಗೆಲ್ಲುವ ತನಕ ಹೋಗುತ್ತೆ ಎಂದೂ ಅವರು ಭಾವಿಸಿರಲಿಲ್ಲ. ಪಂದ್ಯದಿಂದ ಪಂದ್ಯಕ್ಕೆ ನಾಯಕ ಗಂಭೀರವಾಗ ತೊಡಗಿದರು. ಇದರನ್ನರಿತು ನಾವು ಕೂಡ ಆಟದ ಕಡೆ ಹೆಚ್ಚು ಗಮನ ಹರಿಸಿದರು.
ಪಂದ್ಯವೇ ಮೊದಲು, ಉಳಿದಿದ್ದು ಆಮೇಲೆ ಎನ್ನುವಂತೆ ಮಾಡಿದವು ಕಪಿಲ್ ನಿರ್ಧಾರಗಳು ಎಂದ ಶ್ರೀಕಾಂತ್, ನಾವು ವಿಶ್ವಕಪ್ ಗೆದ್ದಿದ್ದೇವೆ ಅಂದರೆ, ಅದಕ್ಕೆ ಒಬ್ಬ ವ್ಯಕ್ತಿ ಕಾರಣ, ಅವರೇ ಕಪಿಲ್ ದೇವ್ ಎಂದರು. ಆದರೆ, ಮೊದಲು ಯೋಜನೆಯಾಗಿದ್ದು ಕೊನೆಗೊಂಡಿದ್ದು ಗೆಲುವಿನೊಂದಿಗೆ. ಇದರಿಂದ ನನ್ನ ಹನಿಮೂನ್ ಹಾಳಾಯಿತು ಎಂದು ನಗುತ್ತಾ, ತಮಾಷೆ ಮಾಡುತ್ತಾ ಶ್ರೀಕಾಂತ್, 83 ಚಿತ್ರದ ಪ್ರಚಾರದ ವೇಳೆ ಈ ಸ್ವಾರಸ್ಯಕರ ಘಟನೆಯನ್ನು ವಿವರಿಸಿದ್ದರು.
ಕಪಿಲ್ ನೆರವು ನೆನೆದ ಕ್ರಿಸ್
ನಾವು ವಿಶ್ವಕಪ್ ಗೆದ್ದೆವು. ಶ್ರೀಮತಿ ಇಂದಿರಾ ಗಾಂಧಿಯನ್ನು ಭೇಟಿಯಾಗಲು ನಾವು ಭಾರತಕ್ಕೆ ಹಿಂತಿರುಗಬೇಕಾಗಿತ್ತು. ಆದರೆ, ನನ್ನ ಟಿಕೆಟ್ ರದ್ದಾಗಿತ್ತು. ಸೆಮೀಸ್, ಫೈನಲ್ಗೆ ಹೋಗಲ್ಲ ಎನ್ನುವ ಭಾವನೆಯಿಂದ ಆವರೆಗೂ ಫ್ಲೈಟ್ ಟಿಕೆಟ್ ಬುಕ್ ಮಾಡಿರಲಿಲ್ಲ. ಹಾಗಾಗಿ ಲೀಗ್ ಹಂತದ ದಿನಾಂಕಕ್ಕಷ್ಟೇ ಬುಕ್ ಮಾಡಲಾಗಿದ್ದ ಟಿಕೆಟ್ ರದ್ದಾಗಿತ್ತು. ನಾನು ಆಗಸ್ಟ್ನಲ್ಲಿ ನನ್ನ ಟಿಕೆಟ್‌ಗಳನ್ನು ಮರುಬುಕ್ ಮಾಡಬೇಕಾಗಿತ್ತು. ಅದಕ್ಕಾಗಿ ಕಪಿಲ್ 10,000 ಕೊಟ್ಟಿದ್ದರು ಎಂದು ಲೆಜೆಂಡರಿ ಆಟಗಾರನ ಸಹಾಯವನ್ನು ನೆನೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ವಿಭಾಗ