ಕನ್ನಡ ಸುದ್ದಿ  /  Sports  /  Cricket News Complete Schedule Of India Tour Of South Africa Bcci On India Vs South Africa Series Ind Vs Sa Jra

India vs South Africa: ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ಪ್ರಕಟ; ಇಲ್ಲಿದೆ ವಿವರ

India tour of South Africa: ಭಾರತವು ದಕ್ಷಿಣ ಆಫ್ರಿಕಾದಲ್ಲಿ ತಲಾ ಮೂರು ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಲಿದೆ. ನಂತರ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ನಡೆಯಲಿದೆ.

ಭಾರತ ದಕ್ಷಿಣ ಆಫ್ರಿಕಾ ಸರಣಿಯ ಸಂಪೂರ್ಣ ವೇಳಾಪಟ್ಟಿ
ಭಾರತ ದಕ್ಷಿಣ ಆಫ್ರಿಕಾ ಸರಣಿಯ ಸಂಪೂರ್ಣ ವೇಳಾಪಟ್ಟಿ (PTI)

ಏಷ್ಯಾಕಪ್‌ ಹಾಗೂ ಏಕದಿನ ವಿಶ್ವಕಪ್‌ ಇರುವ ಮಹತ್ವದ ವರ್ಷದಲ್ಲಿ ಭಾರತ ಕ್ರಿಕೆಟ್‌ ತಂಡವು ಸರಣಿಯ ಮೇಲೆ ಸರಣಿಗಳಲ್ಲಿ ಆಡಬೇಕಿದೆ. ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ‌ ತವರಿನ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಬಳಿಕ ಭಾರತವು ದಕ್ಷಿಣ ಆಫ್ರಿಕಾ ಪ್ರವಾಸ (India tour of South Africa) ಕೈಗೊಳ್ಳಲಿದೆ. ಈ ಪ್ರವಾಸದ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಜುಲೈ 14ರ ಶುಕ್ರವಾರ, ಮುಂದಿನ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ನಡೆಯಲಿರುವ ಭಾರತದ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿಪಕ್ಷೀಯ ಸರಣಿಯ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿವೆ. ಭಾರತದ ಆತಿಥ್ಯದಲ್ಲಿ ನಡೆಯಲಿರುವ ಮಹತ್ವದ ವಿಶ್ವಕಪ್‌ ಬಳಿಕ ಭಾರತದ ಮೊದಲ ಪ್ರಮುಖ ಸರಣಿಯಾಗಿದೆ. ಹರಿಣಗಳ ನಾಡಿಗೆ ಪ್ರಯಾಣ ಬೆಳೆಸಲಿರುವ ಟೀಮ್‌ ಇಂಡಿಯಾ, ಅಲ್ಲಿ ತಲಾ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಇದರೊಂದಿಗೆ ಎರಡು ಟೆಸ್ಟ್ ಪಂದ್ಯಗಳನ್ನು ಕೂಡಾ ಆಡಲಿದೆ.

"ಪ್ರವಾಸವು ಮೂರು ಪಂದ್ಯಗಳ ಟಿ20 ಸರಣಿಯೊಂದಿಗೆ ಪ್ರಾರಂಭವಾಗುತ್ತದೆ. ಆ ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಕೊನೆಯಲ್ಲಿ ಗಾಂಧಿ-ಮಂಡೇಲಾ ಟ್ರೋಫಿಗಾಗಿ ಎರಡು ಟೆಸ್ಟ್‌ ಪಂದ್ಯಗಳೊಂದಿಗೆ ಸರಣಿ ಮುಕ್ತಾಯಗೊಳ್ಳುತ್ತದೆ" ಎಂದು ಬಿಸಿಸಿಐ ಮತ್ತು ಸಿಎಸ್‌ಎ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.

ಮುಂದಿನ ವರ್ಷ ವೆಸ್ಟ್‌ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ. ಹೀಗಾಗಿ ಅದಕ್ಕೂ ಮುನ್ನ ಚುಟುಕು ಸರಣಿಯು ಮಹತ್ವ ಪಡೆಯಲಿದೆ. ಎರಡು ಪಂದ್ಯಗಳ ಗಾಂಧಿ-ಮಂಡೇಲಾ ಟೆಸ್ಟ್ ಸರಣಿಯು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿದೆ. ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ಪ್ರವಾಸದ ನಂತರ ಭಾರತದ ನಂತರದ ಟೆಸ್ಟ್‌ ಸರಣಿ ಇದಾಗಿದೆ.

ವೇಳಾಪಟ್ಟಿ ಹೀಗಿದೆ

ಮೂರು ಪಂದ್ಯಗಳ ಟಿ20 ಸರಣಿ

ಡಿಸೆಂಬರ್ 10 : ಡರ್ಬನ್‌

ಡಿಸೆಂಬರ್ 12 : ಗ್ಕೆಬರ್ಹಾ

ಡಿಸೆಂಬರ್ 14 : ಜೋಹಾನ್ಸ್‌ಬರ್ಗ್

ಏಕದಿನ ಸರಣಿ

ಮೊದಲ ಏಕದಿನ ಪಂದ್ಯ: ಡಿಸೆಂಬರ್ 17, ಜೋಹಾನ್ಸ್‌ಬರ್ಗ್‌

ಎರಡನೇ ಏಕದಿನ ಪಂದ್ಯ: ಡಿಸೆಂಬರ್ 19, ಗ್ಕೆಬರ್ಹಾ

ಮೂರನೇ ಏಕದಿನ ಪಂದ್ಯ: ಡಿಸೆಂಬರ್ 21, ಪಾರ್ಲ್‌

ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿದೆ ಭಾರತ ತಂಡ

ಪ್ರಸ್ತುತ ಭಾರತವು ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿದೆ. ಸದ್ಯ ಮೊದಲ ಟೆಸ್ಟ್‌ ಪಂದ್ಯ ನಡೆಯುತ್ತಿದ್ದು, ಎರಡನೇ ಟೆಸ್ಟ್ ಪಂದ್ಯವು ಜುಲೈ 20ರಿಂದ ಜುಲೈ 24ರವರೆಗೆ ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿದೆ. ಇದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 100ನೇ ಟೆಸ್ಟ್ ಪಂದ್ಯವಾಗಿದ್ದು, ಸರಣಿ ನಿರ್ಣಾಯಕ ಪಂದ್ಯ ಉಭಯ ರಾಷ್ಟ್ರಗಳಿಗೂ ಮಹತ್ವದ್ದಾಗಲಿದೆ.

ಟೆಸ್ಟ್ ಸರಣಿಯ ಬಳಿಕ ಮೂರು ಪಂದ್ಯಗಳನ್ನೊಳಗೊಂದ ಏಕದಿನ ಸರಣಿ ನಡೆಯಲಿದೆ. ಮೊದಲ ಪಂದ್ಯವು ಜುಲೈ 27ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ ಮೈದಾನದಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಕೂಡ ಬಾರ್ಬಡೋಸ್‌ನಲ್ಲಿ ಜುಲೈ 29ರಂದು ನಡೆಯಲಿದೆ. ಇದೇ ವೇಳೆ ಆಗಸ್ಟ್ 1ರಂದು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯು ಮೂರನೇ ಹಾಗೂ ಸರಣಿಯ ನಿರ್ಣಾಯಕ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.