ಕನ್ನಡ ಸುದ್ದಿ  /  Sports  /  Cricket News Cricket Australia Announce Squad For Icc World Test Championship Final Against India Prs

WTC Final 2023: ಭಾರತದ ಎದುರಿನ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

ಎರಡನೇ ಆವೃತ್ತಿಯ ಐಸಿಸಿ ಟೆಸ್ಟ್​ ಚಾಂಪಿಯನ್​​​ಶಿಪ್​ ಫೈನಲ್ (ICC World Test Championship Final)​​ ಪಂದ್ಯಕ್ಕೆ ಆಸ್ಟ್ರೇಲಿಯಾ 17 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಕಳಪೆ ಫಾರ್ಮ್​​ನಲ್ಲಿದ್ದ ಡೇವಿಡ್​ ವಾರ್ನರ್​ಗೆ ಮತ್ತೆ ಅವಕಾಶ ನೀಡಲಾಗಿದೆ.

ಆಸ್ಟ್ರೇಲಿಯಾ ಟೆಸ್ಟ್​ ಕ್ರಿಕೆಟ್​ ತಂಡ
ಆಸ್ಟ್ರೇಲಿಯಾ ಟೆಸ್ಟ್​ ಕ್ರಿಕೆಟ್​ ತಂಡ (Twitter)

ಟೀಮ್​ ಇಂಡಿಯಾ ಎದುರಿನ ಮುಂಬರುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್ (ICC World Test Championship Final)​​​ ಮತ್ತು ಇಂಗ್ಲೆಂಡ್​ ಎದುರಿನ ಆ್ಯಷಸ್​ ಟೆಸ್ಟ್​ (Ashes Test Series) ಸರಣಿಯ ಮೊದಲ ಎರಡು ಪಂದ್ಯಗಳಿಗೆ 17 ಸದಸ್ಯರ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಘೋಷಿಸಲಾಗಿದೆ. ವಿಶೇಷ ಅಂದರೆ ನಾಲ್ಕು ವರ್ಷಗಳ ಬಳಿಕ ಮಿಚೆಲ್​ ಮಾರ್ಷ್ (Mitchell Marsh)​​ ಟೆಸ್ಟ್​ ತಂಡಕ್ಕೆ ಮರಳಿದ್ದಾರೆ.

ಹಿರಿಯ ಹಾಗೂ ಆರಂಭಿಕ ಆಟಗಾರ ಡೇವಿಡ್​ ವಾರ್ನರ್ (David Warner)​ ಅವರಿಗೆ ಇದೇ ಕೊನೆಯ ಬಾರಿಗೆ ಅವಕಾಶ ನೀಡಲಾಗಿದೆ. ಮಾರ್ಚ್​ನಲ್ಲಿ ಮುಕ್ತಾಯಗೊಂಡ ಭಾರತ ತಂಡದ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯಲ್ಲಿ ಡೇವಿಡ್‌ ವಾರ್ನರ್‌ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಗಾಯದ ಸಮಸ್ಯೆಗೂ ಗುತ್ತಾಗಿದ್ದರು.

ಟೆಸ್ಟ್‌ ಸರಣಿಯ ಕೊನೆಯ ಪಂದ್ಯಗಳಲ್ಲಿ ಹೊರಗುಳಿದಿದ್ದರು. ಹಾಗಾಗಿ ಎಡಗೈ ಬ್ಯಾಟ್ಸ್‌ಮನ್‌ ಟೆಸ್ಟ್‌ ಕ್ರಿಕೆಟ್​​​ನ ಭವಿಷ್ಯ ಆತಂತ್ರಕ್ಕೆ ಸಿಲುಕಿತ್ತು. ಈಗ ವಾರ್ನರ್​ಗೆ ಕ್ರಿಕೆಟ್‌ ಆಸ್ಟ್ರೇಲಿಯಾ ಮತ್ತೊಂದು ಚಾನ್ಸ್​ ನೀಡಿದೆ. ವಾರ್ನರ್‌ ಜೊತೆಗೆ ಮಾರ್ಕಸ್‌ ಹ್ಯಾರಿಸ್‌, ಮ್ಯಾಟ್‌ ರೆನ್‌ ಶಾ ಕೂಡ ಓಪನರ್​​​ಗಳಾಗಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹಾಗೆಯೇ ಮತ್ತೊಬ್ಬ ಆರಂಭಿಕ ಆಟಗಾರ ಉಸ್ಮಾನ್‌ ಖವಾಜ ಅವರು ಸಹ ಪ್ರಕಟವಾದ 17 ಸದಸ್ಯರ ಆಸಿಸ್​ ಟೆಸ್ಟ್‌ ತಂಡದಲ್ಲಿ ಚಾನ್ಸ್​​ ಪಡೆದಿದ್ದಾರೆ. ಖವಾಜ ಭಾರತ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರು.

ಡೇವಿಡ್​ ವಾರ್ನರ್​​​ ಈವರೆಗೂ 102 ಟೆಸ್ಟ್​​ ಪಂದ್ಯಗಳನ್ನು ಕಣಕ್ಕಿಳಿದಿದ್ದಾರೆ. 45.58ರ ಸರಾಸರಿಯಲ್ಲಿ 8158 ರನ್​ ಗಳಿಸಿದ್ದಾರೆ. ಈವರೆಗೂ 26 ಶತಕ ಸಿಡಿಸಿದ್ದಾರೆ. 34 ಅರ್ಧಶತಕ ಬಾರಿಸಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಆ್ಯಷಸ್​ ಸರಣಿಯಲ್ಲಿ ವಾರ್ನರ್ ಒಂದೇ ಒಂದು ಸೆಂಚುರಿ ಬಾರಿಸಿಲ್ಲ ಎಂಬುದು ಅಚ್ಚರಿ ಎನಿಸಿದೆ.

4 ವರ್ಷಗಳ ಬಳಿಕ ಕಂಬ್ಯಾಕ್​

ಇಂಜುರಿಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಮಿಚೆಲ್‌ ಮಾರ್ಷ್‌ 4 ವರ್ಷಗಳ ನಂತರ ಟೆಸ್ಟ್​ ಅವಕಾಶ ಪಡೆದಿದ್ದಾರೆ. ಅವರು ಕೊನೆಯ ಬಾರಿಗೆ ಟೆಸ್ಟ್​ ತಂಡದಲ್ಲಿ ಕಾಣಿಸಿಕೊಂಡಿದ್ದು 2019ರಲ್ಲಿ. ಆ ಬಳಿಕ ಮೊದಲ ಬಾರಿ ಆಸಿಸ್​ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯಂಗ್ ಸೆನ್​ಸೇಷನ್​​​ ಕ್ಯಾಮೆರಾನ್‌ ಗ್ರೀನ್‌ ಅವರಿಗೆ ಬ್ಯಾಕ್‌ ಅಪ್‌ ಆಟಗಾರನಾಗಿ ಮಿಚೆಲ್​ ಮಾರ್ಷ್​ಗೆ ಅವಕಾಶ ಸಿಕ್ಕಿದೆ.

ಭಾರತದ ಎದುರಿನ ಬಾರ್ಡರ್​ ಗವಾಸ್ಕರ್​​​ ಟೆಸ್ಟ್​ ಸರಣಿಯಲ್ಲಿ ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದ ನಾಥನ್ ಲಿಯಾನ್‌ ಅವರಿಗೆ ಟಾಡ್‌ ಮರ್ಫಿ ಅವರು ಬ್ಯಾಕ್‌ ಅಪ್‌ ಸ್ಪಿನ್ನರ್‌ ಆಗಿ ತಂಡದಲ್ಲಿದ್ದಾರೆ. ನಾಯಕ ಪ್ಯಾಟ್‌ ಕಮಿನ್ಸ್ ತಂಡಕ್ಕೆ ಕಂಬ್ಯಾಕ್​ ಮಾಡಿದ್ದಾರೆ. ಮಿಚೆಲ್‌ ಸ್ಟಾರ್ಕ್‌, ಜೋಶ್​​ ಹೇಜಲ್‌ವುಡ್‌, ಸ್ಕಾಟ್‌ ಬೋಲ್ಯಾಂಡ್​ ಫಾಸ್ಟ್​ ಬೌಲರ್ಸ್​ ಕೋಟಾದಲ್ಲಿ ಸ್ಥಾನ ಪಡೆದಿದ್ದಾರೆ.

ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಸ್ಪಿನ್ನರ್ಸ್ ಆಷ್ಟನ್‌ ಅಗರ್‌, ಮಿಚೆಲ್‌ ಸ್ವೆಪ್ಸನ್‌ ಹಾಗೂ ಮ್ಯಾಟ್‌ ಕುಹ್ನೇಮನ್‌ ಸ್ಥಾನ ಕಳೆದುಕೊಂಡಿದ್ದಾರೆ. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ ಬಳಿಕ ಜೂನ್ 16 ರಿಂದ ಆ್ಯಷಸ್​ ಸರಣಿ ಆರಂಭವಾಗಲಿದೆ. ಮೊದಲ ಬರ್ಮಿಂಗ್‌ಹ್ಯಾಮ್‌ನಲ್ಲಿ ಮೊದಲನೇ ಪಂದ್ಯ ಆರಂಭವಾಗಲಿದೆ.

ಫೈನಲ್​ ಪಂದ್ಯ ಯಾವಾಗ?

ಟೀಮ್​ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳ ಮಧ್ಯೆ 2ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌-2023ರ ಪಂದ್ಯ ಜೂನ್‌ 7 ರಿಂದ 11ರವರೆಗೆ ಲಂಡನ್ ದಿ ಓವಲ್‌ ಮೈದಾನದಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ ಟೆಸ್ಟ್‌ ತಂಡ

ಪ್ಯಾಟ್‌ ಕಮಿನ್ಸ್‌ (ನಾಯಕ), ಡೇವಿಡ್‌ ವಾರ್ನರ್‌, ಸ್ಟೀವನ್ ಸ್ಮಿತ್‌, ಸ್ಕಾಟ್‌ ಬೋಲ್ಯಾಂಡ್​, ಮಾರ್ನಸ್‌ ಲಬುಶೇನ್‌, ಉಸ್ಮಾನ್‌ ಖವಾಜ, ಅಲೆಕ್ಸ್‌ ಕೇರಿ (ವಿಕೆಟ್​ ಕೀಪರ್​​), ಟ್ರಾವಿಸ್‌ ಹೆಡ್‌, ಕ್ಯಾಮೆರಾನ್‌ ಗ್ರೀನ್‌, ಮಾರ್ಕಸ್‌ ಹ್ಯಾರಿಸ್‌, ಜೋಶ್‌ ಹೇಜಲ್‌ವುಡ್‌, ಜೋಶ್‌ ಇಂಗ್ಲಿಸ್‌, ನಾಥನ್‌ ಲಿಯಾನ್‌, ಮಿಚೆಲ್‌ ಮಾರ್ಷ್‌, ಟಾಡ್‌ ಮರ್ಫಿ, ಮ್ಯಾಟ್‌ ರೆನ್‌ಶಾ, ಮಿಚೆಲ್‌ ಸ್ಟಾರ್ಕ್‌.