ಕನ್ನಡ ಸುದ್ದಿ  /  Sports  /  Cricket News Csk Ex Batter Ambati Rayudu Refutes Claims Of Rift Between Ravindra Jadeja And Ms Dhoni During Ipl 2022 Prs

Dhoni-Jadeja: ಧೋನಿ-ಜಡೇಜಾ ನಡುವೆ ಭಿನ್ನಾಭಿಪ್ರಾಯ ನಿಜವೇ, ಸಿಎಸ್​ಕೆ ನಾಯಕತ್ವ ಜಡ್ಡು ತ್ಯಜಿಸಿದ್ದೇಕೆ; ಗುಟ್ಟು ರಟ್ಟು ಮಾಡಿದ ರಾಯುಡು

Ambati Rayudu: ಐಪಿಎಲ್ 2022 ಸೀಸನ್‌ನಲ್ಲಿ ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ ನಡುವಿನ ಭಿನ್ನಾಭಿಪ್ರಾಯದ ವದಂತಿಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಬ್ಯಾಟರ್ ಅಂಬಟಿ ರಾಯುಡು ತಳ್ಳಿಹಾಕಿದ್ದಾರೆ.

ರವೀಂದ್ರ ಜಡೇಜಾ, ಎಂಎಸ್ ಧೋನಿ, ಅಂಬಟಿ ರಾಯುಡು.
ರವೀಂದ್ರ ಜಡೇಜಾ, ಎಂಎಸ್ ಧೋನಿ, ಅಂಬಟಿ ರಾಯುಡು.

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಋತುವಿನ 2022ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಆಟಗಾರರಾದ ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿ ನಡುವಿನ ಭಿನ್ನಾಭಿಪ್ರಾಯದ ವದಂತಿಗಳು ತುಂಬಿದ್ದವು. ಆದಾಗ್ಯೂ, ಸಿಎಸ್‌ಕೆ ಸಹ ಆಟಗಾರ ಅಂಬಟಿ ರಾಯುಡು ಅವರು ಬಿಹೈಂಡ್‌ವುಡ್ಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆಗಳನ್ನು ನಿರಾಕರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ (IPL 2023) ಚಾಂಪಿಯನ್​ ಪಟ್ಟಕ್ಕೇರಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು (Chennai Super Kings), 2020 ಋತುವಿನಲ್ಲಿ ಶ್ರೀಮಂತ ಲೀಗ್​​ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ಗೆ ಪ್ರವೇಶಿಸಲು ವಿಫಲವಾಗಿತ್ತು. ಆದರೆ, ಮುಂದಿನ ಋತುವಿನಲ್ಲಿ ಅದ್ಭುತ ಪುನರಾಗಮನ ನೀಡಿದ ಚೆನ್ನೈ ಪ್ರಶಸ್ತಿ ಗೆದ್ದಿತು. ಆದರೆ, 2021ರ ಐಪಿಎಲ್​​ನಲ್ಲಿ ಚಾಂಪಿಯನ್​​ ಆದ ನಂತರ 2022ರ ಸೀಸನ್​ನಲ್ಲಿ ಚೆನ್ನೈ ಹೀನಾಯ ಸೋಲನುಭವಿಸಿತು.

2022ರ ಋತುವಿನ ಆರಂಭಕ್ಕೂ ಮೊದಲು ಎಂಎಸ್ ಧೋನಿ (MS Dhoni) ಚೆನ್ನೈ ನಾಯಕತ್ವದಿಂದ ನಿವೃತ್ತಿ ಘೋಷಿಸಿದ್ದರು. ಹಾಗಾಗಿ ರವೀಂದ್ರ ಜಡೇಜಾಗೆ (Ravindra Jadeja) ನಾಯಕತ್ವದ ಪಟ್ಟ ಕಟ್ಟಲಾಗಿತ್ತು. ಅಂದು ನಾನು ಯಾವಾಗಲೂ ಧೋನಿ ಹಿಂದೆ ಇರುತ್ತೇನೆ ಎಂದು ಜಡ್ಡು ಹೇಳಿದ್ದರು. ಆದರೆ, ಜಡೇಜಾ ನಾಯಕತ್ವದಲ್ಲಿ ಐಪಿಎಲ್-2022ರ ಸೀಸನ್‌ನಲ್ಲಿ ಸತತ ಸೋಲುಗಳೊಂದಿಗೆ ಚೆನ್ನೈ ಅಟ್ಟರ್​ ಫ್ಲಾಪ್ ಪ್ರದರ್ಶನ ನೀಡಿತು. ಒಟ್ಟು 14 ಪಂದ್ಯಗಳಲ್ಲಿ 10 ಸೋಲು, 4 ಗೆಲುವು ಸಾಧಿಸಿತ್ತು.

ಜಡ್ಡು-ಧೋನಿ ನಡುವೆ ಭಿನ್ನಾಭಿಪ್ರಾಯ

ರವೀಂದ್ರ ಜಡೇಜಾ ನಾಮಮಾತ್ರದ ನಾಯಕರಾಗಿದ್ದರೂ, ಎಂಎಸ್ ಧೋನಿಯೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಫೀಲ್ಡ್​ ಸೆಟ್​ ಮಾಡುವುದು, ನಿರ್ಧಾರ ತೆಗೆದುಕೊಳ್ಳುವುದು, ಬೌಲರ್​ಗಳಿಗೆ ಸಲಹೆ ನೀಡುವುದು ಹೀಗೆ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಆದರೆ ಈ ವೇಳೆ ಮಾಹಿ ಹಾಗೂ ಜಡೇಜಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ನಾಯಕತ್ವ ನೀಡಿದರೂ, ತನ್ನನ್ನು ಕ್ಯಾರೆ ಎನ್ನುತ್ತಿಲ್ಲ ಎಂದು ಜಡೇಜಾ ಅಸಮಾಧಾನಗೊಂಡಿದ್ದರು ಎಂಬ ಮಾತುಗಳೂ ಕೇಳಿ ಬಂದಿದ್ದವು.

2022ರ ಮೊದಲಾರ್ಧದಲ್ಲಿ ಅತ್ಯಂತ ಕಳಾಹೀನ ಪ್ರದರ್ಶನ ನೀಡಿದ ಚೆನ್ನೈ ನಾಯಕತ್ವದಿಂದ ರವೀಂದ್ರ ಜಡೇಜಾ ಕೆಳಗಿಳಿಯುವ ನಿರ್ಧಾರ ಕೈಗೊಂಡರು. ನಾಯಕತ್ವದಿಂದ ಕೆಳಗಿಳಿದ ನಂತರ ಜಡ್ಡು ಎರಡು ಪಂದ್ಯಗಳ ನಂತರ ಗಾಯದಿಂದ ಇಡೀ ಋತುವನ್ನು ಕಳೆದುಕೊಂಡರು. ಆದರೆ ಅವರಿಗೆ ಯಾವುದೇ ಗಾಯವಾಗಿರಲಿಲ್ಲ ಎಂಬ ವಿಚಾರಗಳು ಮೇಲ್ನೋಟಕ್ಕೆ ಕೇಳಿ ಬಂದಿದ್ದವು. ಕೆಲವು ದಿನಗಳ ನಂತರ, ಸಿಎಸ್​ಕೆ ಸಾಮಾಜಿಕ ಮಾಧ್ಯಮವು ಜಡೇಜಾ ಅವರನ್ನು ಅನ್ ಫಾಲೋ ಮಾಡಿತ್ತು. ಮತ್ತೊಂದೆಡೆ ಜಡೇಜಾ ಸಿಎಸ್​​ಕೆಗೆ ಸಂಬಂಧಿಸಿದ ಎಲ್ಲಾ ಟ್ವೀಟ್‌, ಕಾಮೆಂಟ್‌ಗಳು ಮತ್ತು ಪೋಸ್ಟ್‌ಗಳನ್ನು ಅಳಿಸಿದ್ದರು.

ಅಂಬಟಿ ರಾಯುಡು ಪ್ರತಿಕ್ರಿಯೆ

ರವೀಂದ್ರ ಜಡೇಜಾ ಈಗ ಚೆನ್ನೈ ಪರ ಆಡುವುದು ಅನುಮಾನ ಎಂಬ ಮಾತಾಗಿತ್ತು. ಆದರೆ, ಅನಿರೀಕ್ಷಿತವಾಗಿ ರವೀಂದ್ರ ಜಡೇಜಾ ಅವರು, ಧೋನಿಯ ಮಧ್ಯಸ್ಥಿಕೆಯಿಂದ ಮತ್ತೊಮ್ಮೆ ಸಿಎಸ್​ಕೆ ಪರ ಆಡಿದರು. ಅಲ್ಲದೆ 2023ರ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. 2022ರ ಸೀಸನ್​ನಲ್ಲಿ ಏನಾಯಿತು? ಜಡೇಜಾ-ಧೋನಿ ನಡುವೆ ನಿಜವಾಗಿಯೂ ಭಿನ್ನಾಭಿಪ್ರಾಯವಿತ್ತಾ? ಸದ್ಯ ಇಷ್ಟೆಲ್ಲಾ ಗೊಂದಲಗಳಿಗೆ ಸಿಎಸ್‌ಕೆ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು (Ambati Rayudu) ಬಗ್ಗೆ ಪ್ರತಿಕ್ರಿಯಿಸಿದ್ದು, ವದಂತಿಗಳನ್ನು ತಳ್ಳಿ ಹಾಕಿದ್ದಾರೆ.

‘ಧೋನಿಗೆ ಜಡೇಜಾ ಅಂದರೆ ತುಂಬಾ ಇಷ್ಟ’

ಜಡೇಜಾ ಅವರನ್ನು ಧೋನಿ ಎಷ್ಟು ಇಷ್ಟಪಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮಾಹಿ ಅವರಿಂದ ಜಡೇಜಾಗೆ ಎಂದೂ ನೋವು ಪಡಲಿಲ್ಲ. ಆದರೆ, ಆ ಋತುವಿನಲ್ಲಿ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸದ ಕಾರಣ ಅವರು ಬೇಸರಗೊಂಡಿದ್ದರು. ಆ ಸೀಸನ್‌ನಲ್ಲಿ ಸಿಎಸ್​ಕೆ ತಂಡದಲ್ಲಿ ಯಾರೂ ಸರಿಯಾಗಿ ಆಡಲಿಲ್ಲ. ಜಡೇಜಾ ಅವರ ಈಗಿನ ಸ್ಥಾನಮಾನಕ್ಕೆ ಧೋನಿಯೇ ಕಾರಣ. 10-12 ವರ್ಷಗಳಲ್ಲಿ ಅವರನ್ನು ಸ್ಟಾರ್ ಆಲ್​ರೌಂಡರ್ ಆಗಿ ಸಿದ್ದಗೊಳಿಸಿದರು. ಹಾಗಾಗಿ ಧೋನಿ ಏನೋ ಹೇಳಿದರೆಂದು ಜಡ್ಡು ಕೋಪಗೊಳ್ಳುವ ಸಾಧ್ಯತೆ ಇಲ್ಲ. ಆದರೆ ಈ ಆವೃತ್ತಿಯಲ್ಲಿ ಚೆನ್ನೈ ಪ್ರಶಸ್ತಿ ಗೆದ್ದಿದ್ದಕ್ಕೆ ಜಡೇಜಾ ತುಂಬಾ ಸಂತೋಷಪಟ್ಟರು ಎಂದು ರಾಯುಡು ವಿವರಿಸಿದ್ದಾರೆ.

‘ಧೋನಿಯೇ ನಾಯಕ’

ಪಕ್ಕೆಲುಬಿನ ಗಾಯದ ನಂತರ ಋತುವಿನ ಕೊನೆಯಲ್ಲಿ ಜಡೇಜಾ ವಿರಾಮ ತೆಗೆದುಕೊಳ್ಳುತ್ತಾರೆ. ಆದರೆ ಇದೇ ಸುದ್ದಿಯನ್ನು ತಪ್ಪಾಗಿ ಅರ್ಥೈಸಲಾಯಿತು. ತಂಡದ ಕಳಪೆ ಪ್ರದರ್ಶನವೇ ಜಡೇಜಾಗೆ ಮಾನಸಿಕವಾಗಿ ಬಾಧಿಸಿತು ಎಂದು ರಾಯುಡು ವಿವರಿಸಿದ್ದಾರೆ. ಚೆನ್ನೈ ತಂಡದಲ್ಲಿರುವ ಎಲ್ಲಾ ಆಟಗಾರರು ಕುಟುಂಬ ಸದಸ್ಯರಂತೆ. ಅದಕ್ಕಾಗಿಯೇ ಯಾರೂ ತಂಡ ತೊರೆಯಲು ಬಯಸುವುದಿಲ್ಲ. ಮುಂದಿನ ಸೀಸನ್‌ನಲ್ಲೂ ಮಾಹಿ ಭಾಯ್ ಸಿಎಸ್‌ಕೆ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ರಾಯುಡು, ಧೋನಿ ನಿವೃತ್ತಿ ನೀಡುವುದಿಲ್ಲ ಎಂಬುದರ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಹೇಳಿಕೆ ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದೆ.

ಸಂಬಂಧಿತ ಲೇಖನ