ಕನ್ನಡ ಸುದ್ದಿ  /  Sports  /  Cricket News Csk Vs Gt Highlights Ipl 2023 Final Match Postponed Due To Heavy Rain Will Be Played On May 29 Prs

CSK vs GT Final: ಚೆನ್ನೈ -ಗುಜರಾತ್‌ ಫೈನಲ್‌ ಇಂದಿಗೆ ಮುಂದೂಡಿಕೆ; ಐಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಮೀಸಲು ದಿನ ಪಂದ್ಯ

ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ನಡುವಿನ 16ನೇ ಆವೃತ್ತಿಯ ಐಪಿಎಲ್​ನ ಫೈನಲ್​ ಪಂದ್ಯವು ಇಂದಿಗೆ ಮುಂದೂಡಿಕೆಯಾಗಿದೆ.

ಐಪಿಎಲ್​ ಫೈನಲ್​ ಪಂದ್ಯ ಮುಂದೂಡಿಕೆ
ಐಪಿಎಲ್​ ಫೈನಲ್​ ಪಂದ್ಯ ಮುಂದೂಡಿಕೆ

ಮಳೆರಾಯ ಕೊನೆಗೂ ಕೃಪೆ ತೋರಿಲ್ಲ. ಅಂತಿಮ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಕನಸಿಗೆ ಮಳೆರಾಯ ಕೊಳ್ಳಿ ಇಟ್ಟಿದ್ದಾನೆ. ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ - ಗುಜರಾತ್​ ಟೈಟಾನ್ಸ್​ ನಡುವಿನ 16ನೇ ಆವೃತ್ತಿಯ ಐಪಿಎಲ್​ ಫೈನಲ್​ ಪಂದ್ಯವು ಇಂದಿಗೆ (ಮೇ 29ರಂದು) ಮುಂದೂಡಿಕೆ ಆಗಿದೆ. 16 ವರ್ಷಗಳ ಐಪಿಎಲ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೀಸಲು ದಿನದಂದು ಫೈನಲ್​ ಪಂದ್ಯ ನಡೆಯಲಿದೆ.

ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಶುರುವಾಗಬೇಕಿತ್ತು. ನಂತರ 7 ಗಂಟೆಗೆ ಟಾಸ್​ ಪ್ರಕ್ರಿಯೆ ಪ್ರಾರಂಭವಾಗಬೇಕಿತ್ತು. ಆದರೆ ಸಂಜೆಯಿಂದಲೇ ಮಳೆರಾಯನ ದರ್ಶನವಾಯಿತು. ತುಂತುರು ಹನಿಗಳಿಂದ ಆರಂಭವಾಗಿ ನಂತರ ಗುಡುಗು, ಸಿಡಿಲು, ವಿಪರೀತ ಗಾಳಿ ಸಹಿತ ಮಳೆ ಆಯಿತು. ಹಾಗಾಗಿ ಕನಿಷ್ಠ ಟಾಸ್‌ ಪ್ರಕ್ರಿಯೆಗೂ ಮಳೆರಾಯ ಅವಕಾಶ ನೀಡಲಿಲ್ಲ.​ ಹಾಗಾಗಿ ಟಾಸ್​ ಅನ್ನೂ ಮುಂದೂಡಲಾಯಿತು.

ಆಗ ಬಿಡುವು ಕೊಡುತ್ತೆ, ಈಗ ಬಿಡುವು ಕೊಡುತ್ತದೆ ಎಂದು ಆಟಗಾರರ ಜೊತೆಗೆ ಅಭಿಮಾನಿಗಳು, ಮೈದಾನದ ಸಿಬ್ಬಂದಿ ಕಾದು ಕುಳಿತಿದ್ದರು. ಎಲ್ಲರ ಪ್ರಾರ್ಥನೆಯ ಫಲವಾಗಿ ಸಂಜೆಯಿಂದ ಎಡಬಿಡದೆ ಸುರಿಯುತ್ತಿದ್ದ ಮಳೆ, 9.15ರ ಸುಮಾರಿಗೆ ಬಿಡುವು ನೀಡಿತು. ಎಲ್ಲರ ಮುಖದಲ್ಲಿ ಮಂದಹಾಸ ಚಿಗುರೊಡೆದಿತ್ತು. ಆದರೆ ಈ ನಗು ಹೆಚ್ಚು ಇರಲಿಲ್ಲ. 15 ನಿಮಿಷಗಳ ನಂತರ ಜಿಟಿ ಜಿಟಿ ಮಳೆ ಶುರುವಾಯಿತು. ನಂತರ ಜೋರು ಮಳೆಯಾಯಿತು. ಕೊನೆಗೆ ನಿರಾಸೆ ಮೂಡಿಸಿತು.

ಸತತ ಮಳೆಯ ಕಾರಣದಿಂದ ಕನಿಷ್ಠ 5 ಓವರ್‌ ಪಂದ್ಯ ನಡೆಸಲು ಪಿಚ್‌ ಸೂಕ್ತವಾಗಿರುವುದಿಲ್ಲ. ಹಾಗಾಗಿ ರಾತ್ರಿ 10.50ರ ಸುಮಾರಿಗೆ ಪಂದ್ಯ ಮುಂದೂಡುವ ಬಗ್ಗೆ ಎರಡೂ ತಂಡಗಳ ಕೋಚ್‌ಗಳ ಸಮ್ಮುಖದಲ್ಲಿ ಅಂಪೈರ್‌ಗಳು ನಿರ್ಧರಿಸಿದರು. 5 ಓವರ್‌ ಪಂದ್ಯಕ್ಕೆ ರಾತ್ರಿ 12ಗಂಟೆಯವರೆಗೆ ಕಾಲಾವಕಾಶ ಇತ್ತು. ಆದರೆ ಪಿಚ್​ ಸೂಕ್ತವಾಗಿರುವುದಿಲ್ಲ ಎಂದು ತೀರ್ಮಾನಿಸಿಯೇ ಅಂಪೈರ್​ಗಳು ನಿರ್ಧಾರ ಪ್ರಕಟಿಸಿದರು.

ಇವತ್ತು ಕೂಡ ಮಳೆಯ ಮುನ್ಸೂಚನೆ

ಹವಾಮಾನ ವರದಿ ಪ್ರಕಾರ ಇಂದು ಕೂಡ ಅಹ್ಮದಾಬಾದ್​ನಲ್ಲಿ ವಿಪರೀತ ಮಳೆ ಸುರಿಯುವ ಸಾಧ್ಯತೆ ಇದೆ. ಪೂರ್ಣ ಪ್ರಮಾಣದ ಪಂದ್ಯ ನಡೆಯುವ ತೀರಾ ಕಡಿಮೆ ಎನ್ನಲಾಗಿದೆ. ಆದರೆ ಮೇ 28 ರಂದು ಮಳೆಯ ಪ್ರಮಾಣಕ್ಕಿಂತ ಕೊಂಚ ಕಡಿಮೆ ಎಂಬುದು ಕೊಂಚ ಸಮಾಧಾನಕರ ಸಂಗಂತಿ.

ಮೀಸಲು ದಿನವೂ ಪಂದ್ಯ ರದ್ದಾದರೆ?

ಪಂದ್ಯದಲ್ಲಿ ಫಲಿತಾಂಶ ನಿರ್ಧಾರವಾಗಲು ಕನಿಷ್ಠ 5 ಓವರ್‌ಗಳ ಪಂದ್ಯವಾದರೂ ಜರುಗಬೇಕು. ಇಲ್ಲದಿದ್ದಲ್ಲಿ ಸೂಪರ್‌ ಓವರ್‌ನಲ್ಲಿ ಪಂದ್ಯದ ಫಲಿತಾಂಶ ಬರಬೇಕು. ಒಂದು ವೇಳೆ ಮೀಸಲು ದಿನದಲ್ಲಿ ಅದಕ್ಕೂ ಮಳೆರಾಯ ಅವಕಾಶ ನೀಡದಿದ್ದರೆ ಗುಜರಾತ್‌ ಟೈಟಾನ್ಸ್‌ ತಂಡವೇ ಚಾಂಪಿಯನ್‌ ಆಗಿ ಹೊರ ಹೊಮ್ಮಲಿದೆ.

ಮೀಸಲು ದಿನವೂ ಪಂದ್ಯ ರದ್ದಾದರೆ ಲೀಗ್‌ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ತಂಡಕ್ಕೆ ಚಾಂಪಿಯನ್​ ಪಟ್ಟ ಸಿಗಲಿದೆ. ಅದರಂತೆ ಗುಜರಾತ್‌ ತಂಡ ಅಂಕಪಟ್ಟಿಯ ಮೊದಲ ತಂಡವಾಗಿ ಪ್ಲೇ ಆಫ್‌ಗೆ ಏರಿತ್ತು. ಲೀಗ್‌ನಲ್ಲಿ 14 ಪಂದ್ಯಗಳನ್ನಾಡಿದ್ದು 10ರಲ್ಲಿ ಗೆಲುವು ಸಾಧಿಸಿ 20 ಅಂಕ ಸಂಪಾದಿಸಿದೆ. ಇನ್ನು ಚೆನ್ನೈ ಪಾಯಿಂಟ್ಸ್​ ಟೇಬಲ್​ನಲ್ಲಿ 2ನೇ ಸ್ಥಾನ ಪಡೆದಿದೆ. 14 ಪಂದ್ಯಗಳಲ್ಲಿ 8 ಗೆಲುವು ಕಾಣುವ ಮೂಲಕ 17 ಅಂಕದೊಂದಿಗೆ ಎರಡನೇ ಸ್ಥಾನಿಯಾಗಿ ಪ್ಲೇ ಆಫ್​ಗೆ ಪ್ರವೇಶಿಸಿತ್ತು.

ಇಂದು ಎಷ್ಟೊತ್ತಿಗೆ ಪಂದ್ಯ?

ಮೀಸಲು ದಿನಕ್ಕೆ ಪಂದ್ಯವನ್ನು ಮುಂದೂಡಲಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಫೈನಲ್​ ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಲಿದೆ. ಟಾಸ್​ ಸಮಯ ಸಂಜೆ 7ಕ್ಕೆ ಇರಲಿದೆ.

ಟಿಕೆಟ್ ಸುರಕ್ಷಿತವಾಗಿಟ್ಟುಕೊಳ್ಳಿ

ಪಂದ್ಯ ಮುಂದೂಡಿದ ಬೆನ್ನಲ್ಲೇ ಪ್ರೇಕ್ಷಕರಿಗೆ ಸೂಚನೆಯೊಂದನ್ನು ನೀಡಲಾಗಿದೆ. ಮೇ 28ರ ಫಿಸಿಕಲ್​ ಟಿಕೆಟ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ತಿಳಿಸಲಾಗಿದೆ. ಈ ಟಿಕೆಟ್​ಗಳು ಮೇ 29ರಂದು ಮಾನ್ಯವಾಗಿರುತ್ತವೆ. ಟಿಕೆಟ್‌ ಇದ್ದರೆ ಮಾತ್ರ ಮೈದಾನದ ಒಳಗೆ ಪ್ರವೇಶ ಪಡೆಯಲಿದ್ದಾರೆ ಎಂದು ಐಪಿಎಲ್​ ಆಡಳಿತ ಮಂಡಳಿ ಟ್ವೀಟ್​ ಮಾಡಿದೆ.

ಚಾಣಾಕ್ಷ ನಾಯಕರ ಕದನ

ಧೋನಿ ಈಗಾಗಲೇ ಭಾರತ ಮತ್ತು ಸಿಎಸ್​ಕೆ ಪರ ಚಾಣಾಕ್ಷ ಕ್ಯಾಪ್ಟನ್ಸಿಯಿಂದ ಹಲವು ಪ್ರಶಸ್ತಿ ಗೆದ್ದಿದ್ದಾರೆ. ಹಾರ್ದಿಕ್​ ಪಾಂಡ್ಯ ಕಳೆದ ವರ್ಷ ಗುಜರಾತ್​ ತಂಡಕ್ಕೆ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದುಕೊಟ್ಟಿದ್ದರು. ಇದರಿಂದ ಟೀಮ್​ ಇಂಡಿಯಾದ ಹಂಗಾಮಿ ನಾಯಕತ್ವವೂ ಸಿಕ್ಕಿದೆ. ಭವಿಷ್ಯದ ನಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ.

ಉಭಯ ತಂಡಗಳ ಮುಖಾಮುಖಿ

ಗುಜರಾತ್​ ಮತ್ತು ಚೆನ್ನೈ ತಂಡಗಳು ಒಟ್ಟು 4 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಅದರಲ್ಲಿ ಗುಜರಾತ್​ ತಂಡವು 3 ಬಾರಿ ಗೆಲುವು ಸಾಧಿಸಿದ್ದರೆ, ಚೆನ್ನೈ 1 ಸಲ ಗೆಲುವು ದಾಖಲಿಸಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಸಂಭಾವ್ಯ ತಂಡ

ಡೆವೋನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಮೊಯೀನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ & ವಿಕೆಟ್​ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

ಇಂಪ್ಯಾಕ್ಟ್ ಪ್ಲೇಯರ್​; ಮತೀಷ ಪತಿರಾಣ

ಗುಜರಾತ್‌ ಟೈಟನ್ಸ್ ಸಂಭಾವ್ಯ ತಂಡ

ಶುಭಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್.