ಕನ್ನಡ ಸುದ್ದಿ  /  ಕ್ರೀಡೆ  /  Csk Vs Gt Final:​​ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್​​; 5ನೇ ಬಾರಿಗೆ ಟ್ರೋಫಿ ಗೆದ್ದ ಧೋನಿ ಪಡೆ; ಕೊನೆಯ ಎಸೆತದಲ್ಲಿ ಜಯಿಸಿದ ಸಿಎಸ್​ಕೆ

CSK vs GT Final:​​ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್​​; 5ನೇ ಬಾರಿಗೆ ಟ್ರೋಫಿ ಗೆದ್ದ ಧೋನಿ ಪಡೆ; ಕೊನೆಯ ಎಸೆತದಲ್ಲಿ ಜಯಿಸಿದ ಸಿಎಸ್​ಕೆ

16ನೇ ಆವೃತ್ತಿಯ ಐಪಿಎಲ್​ನ ಫೈನಲ್​ ಪಂದ್ಯದಲ್ಲಿ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್​​ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಕೊನೆಯ ಥ್ರಿಲ್ಲಿಂಗ್​ ಓವರ್​​​ನಲ್ಲಿ ಗೆದ್ದು ಬೀಗಿದ ಚೆನ್ನೈ ಐಪಿಎಲ್​ನಲ್ಲಿ 5ನೇ ಟ್ರೋಫಿಗೆ ಮುತ್ತಿಕ್ಕಿತು.

ಚೆನ್ನೈ ಸೂಪರ್ ಕಿಂಗ್ಸ್​ ಚಾಂಪಿಯನ್​
ಚೆನ್ನೈ ಸೂಪರ್ ಕಿಂಗ್ಸ್​ ಚಾಂಪಿಯನ್​ (IPL Twitter)

ಮಳೆಯ ಹಗ್ಗಜಗ್ಗಾಟ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮತ್ತೊಂದು ಐಪಿಎಲ್ ಕಿರೀಟಕ್ಕೆ ಮುತ್ತಿಕ್ಕಿದೆ. ಹೊಸ ಚರಿತ್ರೆ ಬರೆದಿದೆ. 16ನೇ ಆವೃತ್ತಿಯ ಐಪಿಎಲ್​ ಫೈನಲ್​ ಕದನದಲ್ಲಿ 5 ವಿಕೆಟ್​​ಗಳ ರೋಚಕ ಗೆಲುವು ಸಾಧಿಸಿ, 5ನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಕಳೆದ ಐಪಿಎಲ್​​ನಲ್ಲಿ 9ನೇ ಸ್ಥಾನಕ್ಕೆ ತೃಪ್ತಿಯಾಗಿದ್ದ ಚೆನ್ನೈ, ಈ ಬಾರಿ ಪ್ರಶಸ್ತಿ ಗೆದ್ದು ಹೊಸ ಮನ್ವಂತರ ಸೃಷ್ಟಿಸಿದೆ. ಸಿಎಸ್​ಕೆ 2021ರಲ್ಲಿ ಕೊನೆಯದಾಗಿ ಐಪಿಎಲ್​ ಟ್ರೋಫಿಗೆ ಮುತ್ತಿಕ್ಕಿತು.

2022ರಲ್ಲಿ ಚೊಚ್ಚಲ ಐಪಿಎಲ್​​ ಪ್ರಶಸ್ತಿ ಗೆದ್ದಿದ್ದ ಗುಜರಾತ್​ ಟೈಟಾನ್ಸ್ ಈ ಬಾರಿ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ಹಾರ್ದಿಕ್​ ಪಡೆ, ಫೈನಲ್​​ನಲ್ಲಿ ಮಳೆಯ ಅಡಚಣೆಯಿಂದ ಪಂದ್ಯವನ್ನು ಕೈಚೆಲ್ಲುವಂತಾಯಿತು. ಅಧಿಕ ಗೆಲುವು ಟೇಬಲ್​ ಟಾಪ್​ ಆಗಿದ್ದ ಗುಜರಾತ್ ಸತತ 2ನೇ ಪ್ರಶಸ್ತಿ ಕನಸು ಭಗ್ನವಾಯಿತು. ರನ್ನರ್​ಅಪ್​ ಆಗಿದೆ. ಚೆನ್ನೈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್​ ದಾಖಲೆಯನ್ನು ಸರಿಗಟ್ಟಿದೆ. 

ಸಿಎಸ್​ಕೆ ಪ್ರಶಸ್ತಿ ಗೆದ್ದ ವರ್ಷ

2010, 2011, 2018, 2021, 2023

ಐಪಿಎಲ್​​ನಲ್ಲಿ​ ಪ್ರಶಸ್ತಿ ಗೆದ್ದ ತಂಡಗಳು

  • ಚೆನ್ನೈ ಸೂಪರ್ ಕಿಂಗ್ಸ್​​​ 5 ಬಾರಿ ಚಾಂಪಿಯನ್​
  • ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್​
  • ಕೋಲ್ಕತ್ತಾ ನೈಟ್​ ರೈಡರ್ಸ್​​ 2 ಬಾರಿ ಚಾಂಪಿಯನ್​
  • ಗುಜರಾತ್ ಟೈಟಾನ್ಸ್​ 1 ಬಾರಿ ಚಾಂಪಿಯನ್​
  • ರಾಜಸ್ಥಾನ್​ ರಾಯಲ್ಸ್​ 1 ಬಾರಿ ಚಾಂಪಿಯನ್​
  • ಡೆಕ್ಕನ್‌ ಚಾರ್ಜಸ್ 1 ಬಾರಿ ಚಾಂಪಿಯನ್​
  • ಸನ್​ರೈಸರ್ಸ್​ ಹೈದರಾಬಾದ್​ 1 ಬಾರಿ ಚಾಂಪಿಯನ್​

ಮಳೆಯಿಂದ ಓವರ್​, ರನ್ ಕಡಿತ

ಮೀಸಲು ದಿನದಾಟದಲ್ಲೂ ಫೈನಲ್​ ಪಂದ್ಯಕ್ಕೆ ಮಳೆ ಕಾಟ ಕೊಟ್ಟಿತು. ಟಾಸ್ ಪ್ರಕ್ರಿಯೆ, ಗುಜರಾತ್​ ಟೈಟಾನ್ಸ್​ ಇನ್ನಿಂಗ್ಸ್​ ಹಾಗೂ ಮೊದಲ ಇನ್ನಿಂಗ್ಸ್​ ಬಳಿಕ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು. ಇದರ ನಂತರ ಮಳೆರಾಯನ ದರ್ಶನವಾಯಿತು. ಪರಿಣಾಮ 9.30ಕ್ಕೆ ಆರಂಭವಾಗಿದ್ದ 2ನೇ ಇನ್ನಿಂಗ್ಸ್​​​​ 12.10ಕ್ಕೆ ಶುರುವಾಯಿತು. ಹಾಗಾಗಿ ಪಂದ್ಯವನ್ನು 15 ಓವರ್​ಗಳಿಗೆ ಕಡಿತಗೊಳಿಸಿ ಚೆನ್ನೈಗೆ 171 ರನ್​ಗಳ ಗುರಿ ನೀಡಲಾಯಿತು.

ಟ್ರೆಂಡಿಂಗ್​ ಸುದ್ದಿ

ಭರ್ಜರಿ ಆರಂಭ ಪಡೆದ ಸಿಎಸ್​ಕೆ

12.10ರಲ್ಲಿ ಈ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್​​, ಭರ್ಜರಿ ಆರಂಭ ಪಡೆಯಿತು. 4 ಓವರ್​ಗಳ ಪವರ್ ​ಪ್ಲೇನಲ್ಲಿ ತಂಡ 50 ರನ್​​​ಗಳ ಗಡಿ ದಾಟಿತು. ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್​ ಗಾಯಕ್ವಾಡ್ ಮತ್ತು ಡೆವೋನ್​ ಕಾನ್ವೆ​​ ಆರಂಭದಿಂದಲೇ ಬೌಲರ್​​ಗಳ ಮೇಲೆ ದಂಡಯಾತ್ರೆ ನಡೆಸಿದರು. ಇದರೊಂದಿಗೆ ನೆರೆದಿದ್ದ ಸಿಎಸ್​ಕೆ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದರು. ಪರಿಣಾಮ ಮೊದಲ ವಿಕೆಟ್​ಗೆ 74 ರನ್​ಗಳು ಹರಿದು ಬಂದವು.

ನೂರ್ ಅಹ್ಮದ್​ ದಾಳಿ

ಅಬ್ಬರದ ಬ್ಯಾಟಿಂಗ್​​​ ಮೂಲಕ ಮುನ್ನುಗ್ಗುತ್ತಿದ್ದ ಚೆನ್ನೈ ಆರಂಭಿಕರಿಗೆ ಸ್ಪಿನ್ನರ್​​ ನೂರ್​​ ಅಹ್ಮದ್​​ ಗೇಟ್​ಪಾಸ್​ ನೀಡುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಗುಜರಾತ್​ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಋತುರಾಜ್​ ಗಾಯಕ್ವಾಡ್​ 16 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್​ ನೆರವಿನಿಂದ 26 ರನ್​ ಗಳಿಸಿದರು. ಮತ್ತೊಂದೆಡೆ ಡೆವೊನ್​ ಕಾನ್ವೆ 25 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​​ಗಳ ನೆರವಿನಿಂದ 47 ರನ್​ ಗಳಿಸಿ ಅರ್ಧಶತಕದ ಅಂಚಿನಲ್ಲಿ ವಿಕೆಟ್​ ಒಪ್ಪಿಸಿದರು.

ರಹಾನೆ ಆರ್ಭಟ

ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಳ್ಳುತ್ತಿದ್ದಂತೆ ತಂಡವನ್ನು ಸಂಕಷ್ಟಕ್ಕೆ ಸಿಲುದಂತೆ ನೋಡಿಕೊಂಡರು ಅಜಿಂಕ್ಯ ರಹಾನೆ. ವೇಗವಾಗಿ ಬ್ಯಾಟ್​ ಬೀಸಿದರು. ಕ್ರೀಸ್​​​ನಲ್ಲಿ ಅಲ್ಪ ಅವಧಿಯಲ್ಲೇ ರನ್​ ತೇರು ಎಳೆದರು. 12 ಎಸೆತಗಳಲ್ಲಿ 2 ಸಿಕ್ಸರ್​​, 2 ಬೌಂಡರಿಗಳ ನೆರವಿನಿಂದ 27 ರನ್ ಗಳಿಸಿ ಔಟಾದರು. ಆಗ ತಂಡದ ಗೆಲುವಿಗೆ ಕೊನೆಯ 25 ಎಸೆತಗಳಲ್ಲಿ 54 ರನ್​ ಗಳ ಅಗತ್ಯ ಇತ್ತು.

ಶಿವಂ ದುಬೆ-ರಾಯುಡು ಅಬ್ಬರದ ನಡುವೆ ಆಘಾತ

ರಹಾನೆ ಔಟಾದ ಬೆನ್ನಲ್ಲೇ ಶಿವಂ ದುಬೆ ಮತ್ತು ಅಂಬಟಿ ರಾಯುಡು ರಾಕ್ಷಸ ರೂಪ ತಾಳಿದರು. ಮತ್ತೊಂದೆಡೆ ಶಿವಂ ದುಬೆ ಸಿಕ್ಸರ್​ಗಳ ಸುರಿಮಳೆಗೈದರು. ತಮ್ಮ ವಿದಾಯದ ಪಂದ್ಯದಲ್ಲಿ ಸಿಕ್ಸರ್​​, ಬೌಂಡರಿ, ಸಿಕ್ಸರ್​​ ಸಿಡಿಸಿ ಔಟಾದರು. 8 ಎಸೆತಗಳಲ್ಲಿ 19 ರನ್​ ಗಳಿಸಿದರು. ರಾಯುಡು ಔಟಾದಾಗ ಚೆನ್ನೈ ಗೆಲುವಿಗೆ 14 ಎಸೆತಗಳಲ್ಲಿ 22 ರನ್ ಅಗತ್ಯ ಇತ್ತು. ಈ ವೇಳೆ ಬ್ಯಾಟಿಂಗ್​ಗೆ ಬಂದ ಎಂಎಸ್​ ಧೋನಿ ನಿರಾಸೆ ಮೂಡಿಸಿದರು. ಮೊದಲ ಎಸೆತದಲ್ಲೇ ಗೋಲ್ಡನ್​ ಡಕೌಟ್​ ಆಗಿ ಹೊರ ನಡೆದರು. ಮೋಹಿತ್​ ಶರ್ಮಾ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಪಡೆದರು.

ಕೊನೆಯ ಓಬರ್​​ನ ಕೊನೆಯ ಎಸೆತದಲ್ಲಿ ಗೆಲುವು

ಇದರೊಂದಿಗೆ ಕೊನೆಯ 2 ಓವರ್​ಗಳಲ್ಲಿ ಸಿಎಸ್​ಕೆಗ 21 ರನ್​ ಬೇಕಿತ್ತು. ಆದರೆ 14ನೇ ಓವರ್​​ನಲ್ಲಿ ಶಮಿ ಅದ್ಭುತ ಬೌಲಿಂಗ್​ ಪ್ರದರ್ಶಿಸಿದರು. ಕೇವಲ 8 ರನ್ ನೀಡಿದರು. ಇನ್ನು ಕೊನೆಯ ಓವರ್​ನಲ್ಲಿ ಜಯಿಸಲು 13 ರನ್​ಗಳ ಅಗತ್ಯ ಇತ್ತು. ಅಂತಿಮ ಓವರ್​​​ ಅನ್ನು ಬೌಲಿಂಗ್​ ಮಾಡಿದ ಮೋಹಿತ್​ ಶರ್ಮಾ, ಕ್ರೀಸ್​​ನಲ್ಲಿದ್ದ ಶಿವಂ ದುಬೆಗೆ ಮೊದಲ ಎಸೆತವನ್ನೇ ಡಾಟ್​ ಮಾಡಿದರು. 2ನೇ ಎಸೆತದಲ್ಲಿ 1 ರನ್​ ನೀಡಿದರು. 3ನೇ ಎಸೆತದಲ್ಲೂ 1 ರನ್​ ನೀಡಿದರು. 4ನೇ ಎಸೆತದಲ್ಲೂ 1 ನೀಡುವಲ್ಲಿ ಯಶಸ್ವಿಯಾದರು. 5ನೇ ಜಡೇಜಾ ಸಿಕ್ಸರ್​​​ ಬಾರಿಸಿದರು. ಇದರೊಂದಿಗೆ ಗೆಲುವಿಗೆ ಕೊನೆಯ ಎಸೆತಕ್ಕೆ 4 ರನ್​ ಬೇಕಿತ್ತು. ಆದರೆ ಕೊನೆಯ ಎಸೆತದಲ್ಲಿ ಜಡೇಜಾ ಬೌಂಡರಿ ಸಿಡಿಸುವ ಮೂಲಕ ಚೆನ್ನೈ ತಂಡಕ್ಕೆ ರೋಚಕ ಗೆಲುವಿನ ಜೊತೆಗೆ ಮತ್ತೊಂದು ಟ್ರೋಫಿ ತಂದುಕೊಟ್ಟರು.

ಗುಜರಾತ್​ ಟೈಟಾನ್ಸ್​ ಬ್ಯಾಟಿಂಗ್​​​ ಪ್ರದರ್ಶನ

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ್ದ ಗುಜರಾತ್​ ಟೈಟಾನ್ಸ್​ ಬೃಹತ್​ ಮೊತ್ತ ಕಲೆ ಹಾಕಿತು. ಭರ್ಜರಿ ಆರಂಭ ಪಡೆದಿದ್ದ ಗುಜರಾತ್, ಮೊದಲ ವಿಕೆಟ್​ಗೆ 67 ರನ್​ ಕಲೆ ಹಾಕಿತು. ಶುಭ್​ಮನ್​ ಗಿಲ್​ ಮತ್ತು ವೃದ್ಧಿಮಾನ್​ ಸಾಹ ಭರ್ಜರಿ ಪ್ರದರ್ಶನ ನೀಡಿದರು. ಗಿಲ್​​ 39 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರೆ, ಮಹತ್ವದ ಪಂದ್ಯದಲ್ಲಿ ಸಾಹ ಅರ್ಧಶತಕ ಸಿಡಿಸಿ ಗಮನ ಸೆಳೆದರು.

ಶತಕ ವಂಚಿತ ಸಾಯಿ ಸುದರ್ಶನ್​

ಗಿಲ್​, ಸಾಹ ಆರ್ಭಟದ ಬಳಿಕ ಸಾಯಿ ಸುದರ್ಶನ್​ ಚೆನ್ನೈ ಬೌಲರ್​​ಗಳಿಗೆ ಕಾಟ ಕೊಟ್ಟರು. ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿದರು. ನೋಡ ನೋಡುತ್ತಿದ್ದಂತೆ ಅರ್ಧಶತಕ ಪೂರೈಸಿದ ಸಾಯಿ ಸುದರ್ಶನ್​ ಶತಕದತ್ತ ಹೆಜ್ಜೆ ಹಾಕಿದರು. ಆದರೆ, 96 ರನ್​ಗಳಿಸಿದ ವೇಳೆ ಎಲ್​ಬಿಡಬ್ಲ್ಯೂ ಆದರು. ಆದರೆ ಗುಜರಾತ್​ ಬೃಹತ್​ ಮೊತ್ತ ಕಲೆ ಹಾಕಲು ನೆರವಾದರು. 47 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್​ಗಳ ನೆರವಿನಿಂದ 96 ರನ್ ಗಳಿಸಿದರು.

214 ರನ್​ ಕಲೆ ಹಾಕಿದ ಗುಜರಾತ್​

ಮತ್ತೊಂದೆಡೆ ಸಾಯಿ ಸುದರ್ಶನ್​ಗೆ ನಾಯಕ ಹಾರ್ದಿಕ್​ ಪಾಂಡ್ಯ ಅದ್ಭುತ ಸಾಥ್​ ನೀಡಿದರು. 12 ಎಸೆತಗಳಲ್ಲಿ ಅಜೇಯ 24 ರನ್​ ಗಳಿಸಿದರು. ಅಂತಿಮವಾಗಿ ಗುಜರಾತ್​ ಟೈಟಾನ್ಸ್​ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 214 ರನ್​ ಗಳಿಸಿತು. ಸಿಎಸ್​ಕೆ ಪರ ಮತೀಷ ಪತಿರಾಣ 2 ವಿಕೆಟ್​, ರವೀಂದ್ರ ಜಡೇಜಾ, ದೀಪಕ್​ ಚಹರ್ ತಲಾ 1 ವಿಕೆಟ್​ ಪಡೆದರು.