ಕನ್ನಡ ಸುದ್ದಿ  /  Sports  /  Cricket News Csk Vs Gt Ipl Final Sai Sudharsan S Fireworks Propel Gujarat Titans To 214 In 20 Overs Against Chennai Prs

CSK vs GT Final: ಫೈನಲ್​​​ನಲ್ಲಿ ಸಾಯಿ ಸುದರ್ಶನ್​​ ಆರ್ಭಟಕ್ಕೆ ಬೆದರಿದ ಚೆನ್ನೈ; ಬೃಹತ್​ ಮೊತ್ತ ಕಲೆ ಹಾಕಿದ ಗುಜರಾತ್​ ಟೈಟಾನ್ಸ್​

16ನೇ ಆವೃತ್ತಿಯ ಐಪಿಎಲ್​ನ 74ನೇ ಹಾಗೂ ಫೈನಲ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​​ ಬೃಹತ್​ ಮೊತ್ತ ಕಲೆ ಹಾಕಿದೆ.​ ಶುಭ್ಮನ್​ ಗಿಲ್​, ವೃದ್ಧಿಮಾನ್​ ಸಾಹ, ಸಾಯಿ ಸುದರ್ಶನ್​ ಅವರ ಅದ್ಭುತ, ಅಮೋಘ ಆಟದ ಮೂಲಕ ಚೆನ್ನೈ ಬೌಲರ್​​ಗಳನ್ನು ಕಾಡಿದರು.

ಸಾಯಿ ಸುದರ್ಶನ್​
ಸಾಯಿ ಸುದರ್ಶನ್​ (IPL Twitter)

ಕಳೆದೆರಡು ತಿಂಗಳಿನಿಂದ ಸಖತ್​ ಮನರಂಜನೆ ಕೊಟ್ಟಿದ್ದ ರಂಗುರಂಗಿನ 16ನೇ ಆವೃತ್ತಿಯ ಐಪಿಎಲ್​ನ ಫೈನಲ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಇನ್ನಿಂಗ್ಸ್​ ಮುಕ್ತಾಯಗೊಂಡಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಹಾರ್ದಿಕ್​ ನೇತೃತ್ವದ ತಂಡವು ಬೃಹತ್​ ಮೊತ್ತವನ್ನು ಕಲೆ ಹಾಕಿದೆ. ಚೆನ್ನೈ ಸೂಪರ್ ಕಿಂಗ್ಸ್​ ಐದನೇ ಟ್ರೋಫಿ ಗೆಲ್ಲಬೇಕೆಂದರೆ 215 ರನ್​ಗಳ ಟಾರ್ಗೆಟ್​ ಬೆನ್ನತ್ತಬೇಕಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ಬೌಲರ್​ಗಳ ಮಾರಕ ಬೌಲಿಂಗ್​ ದಾಳಿಯನ್ನು ಧ್ವಂಸ ಮಾಡಿದ ಗುಜರಾತ್​ ಬ್ಯಾಟರ್​​ಗಳು, ಧೋನಿ ಲೆಕ್ಕಾಚಾರ ತಲೆಕೆಳಗು ಮಾಡಿದ್ದಾರೆ. ಅದರಲ್ಲೂ ಶುಭ್ಮನ್​ ಗಿಲ್​ ಭರ್ಜರಿ ಆರಂಭ, ವೃದ್ದಿಮಾನ್​ ಸಾಹ, ಸಾಯಿ ಸುದರ್ಶನ್​ ತಲಾ ಅರ್ಧಶತಕ ಸಿಡಿಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣಕರ್ತರಾದರು. ಅಂತಿಮವಾಗಿ ಗುಜರಾತ್​ 20 ಓವರ್​​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 214 ರನ್​ಗಳಿಸಿತು.

ಭರ್ಜರಿ ಆರಂಭ ಪಡೆದ ಗುಜರಾತ್​

ಪ್ರಶಸ್ತಿ ಸುತ್ತಿನ ಹೋರಾಟದ ಪಂದ್ಯದಲ್ಲಿ ಟಾಸ್​ ಸೋತ ಗುಜರಾತ್​ ಟೈಟಾನ್ಸ್​, ಮೊದಲು ಬ್ಯಾಟಿಂಗ್​ ನಡೆಸಿತು. ನಿರೀಕ್ಷೆಯಂತೆ ಭರ್ಜರಿ ಆರಂಭವೂ ಪಡೆಯಿತು. ಟೂರ್ನಿಯುದ್ದಕ್ಕೂ ಅಬ್ಬರಿಸಿದ ಶುಭ್ಮನ್​ ಗಿಲ್​, ಫೈನಲ್​​ನಲ್ಲೂ ನೆರವಾಗುವ ಭರವಸೆ ಮೂಡಿಸಿದರು. ಆದರೆ ಆರಂಭದ 2ನೇ ಓವರ್​​ನಲ್ಲೇ ಗಿಲ್​ ಜೀವದಾನ ಪಡೆದರು. ಇದರ ಲಾಭ ಪಡೆದ ಶುಭ್ಮನ್​ ಬೌಲರ್​ಗಳಿಗೆ ಮನಬಂದಂತೆ ದಂಡಿಸಿದರು. ವೃದ್ಧಿಮಾನ್​ ಸಾಹ ಜೊತೆಗೂಡಿ ಮೊದಲ ವಿಕೆಟ್​ 67 ರನ್​ ಕಲೆ ಹಾಕಿದರು. ಆದರೆ 39 ರನ್​ ಗಳಿಸಿದ್ದಾಗ ಎಂಎಸ್​ ಧೋನಿ ಅವರ ಚಾಣಾಕ್ಷ ವಿಕೆಟ್​ ಕೀಪಿಂಗ್​ನಿಂದ ಸ್ಟಂಪ್​ಔಟ್​ ಆದರು.

ಅರ್ಧಶತಕ ಸಿಡಿಸಿ ಮಿಂಚಿದ ಸಾಹ

ಪವರ್​ ಪ್ಲೇನಲ್ಲಿ ಆಗಾಗ ಅಬ್ಬರಿಸುತ್ತಿದ್ದ ಅನುಭವಿ ಆಟಗಾರ ವೃದ್ಧಿಮಾನ್​ ಸಾಹ, ಮಹತ್ವದ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್​ ಕಟ್ಟಿದರು. ಗಿಲ್​ ಔಟಾದ ಬಳಿಕ ವೇಗವಾಗಿ ಬ್ಯಾಟ್​ ಬೀಸಿದ ಸಾಹ ಚೆನ್ನೈ ಬೌಲರ್​​ಗಳಿಗೆ ಬಲವಾಡಿ ಕಾಡಿದರು. ಇದರೊಂದಿಗೆ ಭರ್ಜರಿ ಅರ್ಧಶತಕ ಸಿಡಿಸಿದರು. ಇದರ ಬೆನ್ನಲ್ಲೇ 39 ಎಸೆತಗಳಿಗೆ 54 ರನ್​ ಗಳಿಸಿ ಔಟಾದರು. ಅಲ್ಲದೆ, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್​ ಜೊತೆ ಸೇರಿ ಮತ್ತೊಂದು ಅರ್ಧಶತಕಕ್ಕೆ ಸಾಥ್​ ನೀಡಿದರು. 42 ಎಸೆತಗಳಲ್ಲಿ 64 ರನ್ ಪೇರಿಸಿದರು.

ಸಾಯಿ ಸುದರ್ಶನ್​ ಪ್ರದರ್ಶನ ಸೂಪರ್​

ಮತ್ತೊಂದೆಡೆ ಸಾಯಿ ಸುದರ್ಶನ್​ ಅದ್ಭುತ ಪ್ರದರ್ಶನ ತೋರಿದರು. ಜವಾಬ್ದಾರಿಯುತ ಆಟದ ಮೂಲಕ ಗಮನ ಸೆಳೆದ ಯುವ ಆಟಗಾರ, ಓವರ್​ಗಳು ಸಾಗುತ್ತಿದ್ದಂತೆ ಅಬ್ಬರಿಸಲು ಯತ್ನಿಸಿದರು. ಅದರಲ್ಲೂ ಸಾಹ ವಿಕೆಟ್​ ಒಪ್ಪಿಸಿದ ಬಳಿಕ ಸಿಕ್ಸರ್​ಗಳ ಸುರಿಮಳೆಗೈದರು. ಇದೇ ವೇಳೆ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆ ಮೂಲಕ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯುವ ಮುನ್ಸೂಚನೆ ನೀಡಿದರು. ಜೊತೆಗೆ ಚೆನ್ನೈ ಕಳಪೆ ಫೀಲ್ಡಿಂಗ್​​ನಿಂದಲೂ ರನ್​ ಸೋರಿಕೆ ಮಾಡಿತು.

ಶತಕದ ಅಂಚಿನಲ್ಲಿ ಎಡವಿದ ಯುವ ಕ್ರಿಕೆಟಿಗ

ಡೆತ್​ ಓವರ್​​ಗಳಿಗೂ ಮುನ್ನವೇ ಕ್ರೀಸ್​​​​​ನಲ್ಲಿ ಸೆಟಲ್​ ಆಗಿ ಅರ್ಧಶತಕ ಸಿಡಿಸಿದ ಸಾಯಿ ಸುದರ್ಶನ್​​, ಡೆತ್​​ ಓವರ್​​ಗಳಲ್ಲಿ ಮತ್ತಷ್ಟು ಆಕ್ರಮಣಕಾರಿಯಾದರು. ಬೆಂಕಿ-ಬಿರುಗಾಳಿ ಆಟಕ್ಕೆ ಮುಂದಾದರು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ನಾಯಕ ಹಾರ್ದಿಕ್​ ಪಾಂಡ್ಯ ಜೊತೆ ಸೇರಿ ಚೆನ್ನೈ ಬೌಲರ್​ಗಳ ಮಾರಕ ಬೌಲಿಂಗ್​ ದಾಳಿ ಪುಡಿಗಟ್ಟಿದರು. 19ನೇ ಓವರ್​​ನಲ್ಲಿ 18 ರನ್​ ಕಲೆ ಹಾಕಿದರು. ಇದರೊಂದಿಗೆ ತಂಡದ ಮೊತ್ತ 200 ದಾಟಿತು.

20ನೇ ಓವರ್​​ನಲ್ಲಿ ಬ್ಯಾಕ್​ ಟು ಬ್ಯಾಕ್​ ಸಿಕ್ಸರ್​​​​ ಸಿಡಿಸಿದ ಸಾಯಿ ಸುದರ್ಶನ್​, ಅನ್​ಕ್ಯಾಪ್ಡ್​ ಪ್ಲೇಯರ್​ ಆಗಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು. ಇದರೊಂದಿಗೆ ಶತಕದ ಅಂಚಿಗೆ ತಲುಪಿದರು. ಆದರೆ 96 ರನ್​ ಗಳಿಸಿದ್ದಾಗ ಮತೀಷ ಪತಿರಾಣ ಬೌಲಿಂಗ್​​ನಲ್ಲಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದರು. 47 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್​​ಗಳ ನೆರವಿನಿಂದ 96 ರನ್​ ಸಿಡಿಸಿದರು.

ಬೌಲರ್​ಗಳು ಮೇಲುಗೈ ಸಾಧಿಸಲೇ ಇಲ್ಲ

ತನ್ನ ತವರಿನ ಪಿಚ್​​ನಲ್ಲಿ ಗುಜರಾತ್​ ಬ್ಯಾಟಿಂಗ್​​​ನಲ್ಲಿ ಮತ್ತೆ ಖದರ್​ ತೋರಿಸಿತು. ಆದರೆ ಬೌಲರ್​ಗಳು ಆರಂಭದಿಂದ ಕೊನೆಯವರೆಗೂ ಗುಜರಾತ್​ ಮೇಲೆ ಹಿಡಿತ ಸಾಧಿಸಲು ಪರದಾಡಿದರು. ಪ್ರತಿ ವಿಕೆಟ್​​​ಗೂ ಅರ್ಧಶತಕದ ಜೊತೆಯಾಟ ಹರಿದು ಬಂತು. ಪಡೆದಿದ್ದು 2 ವಿಕೆಟ್​. ಆದರೆ ಯಾವ ಹಂತದಲ್ಲೂ ಬ್ಯಾಟರ್​​ಗಳ ಮೇಲೆ ಒತ್ತಡ ಹಾಕಲು ಸಾಧ್ಯವಾಗಲಿಲ್ಲ. ಚೆನ್ನೈ ಪರ ಮತೀಷ ಪತಿರಾಣ 2 ವಿಕೆಟ್​, ದೀಪಕ್​ ಚಹರ್​, ರವೀಂದ್ರ ಜಡೇಜಾ ತಲಾ 1 ವಿಕೆಟ್​ ಪಡೆದರು.