IPL 2024: ಆರ್‌ಸಿಬಿ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನೂತನ ಹೆಡ್ ಕೋಚ್ ಆಗಿ ನೇಮಕ; ಅವರ ಹಿನ್ನೆಲೆ ಏನು
Daniel Vettori: 16ನೇ ಆವೃತ್ತಿಯ ಐಪಿಎಲ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ಎಸ್ಆರ್ಹೆಚ್, ಹೆಡ್ಕೋಚ್ ಸ್ಥಾನದಿಂದ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ (Briyan Lara) ಅವರನ್ನು ಕೆಳಗಿಳಿಸಿದೆ.

2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಆರಂಭಕ್ಕೂ ಮುನ್ನವೇ ಫ್ರಾಂಚೈಸಿಗಳಿಂದ ಕೋಚ್ಗಳ ಬದಲಾವಣೆ ಪ್ರಕ್ರಿಯೆ ಜೋರಾಗಿದೆ. ಲಕ್ನೋ ಸೂಪರ್ ಜೈಂಟ್ಸ್ (Lucknow Super Gaints) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಗಳ ಬೆನ್ನಲ್ಲೇ ಇದೀಗ ಸನ್‌ರೈಸರ್ಸ್ ಹೈದರಾಬಾದ್ ತಂಡವು (Sunrisers Hyderbad) ನೂತನ ಕೋಚ್ ಅನ್ನು ನೇಮಿಸಿದೆ.
ಟ್ರೆಂಡಿಂಗ್ ಸುದ್ದಿ
16ನೇ ಆವೃತ್ತಿಯ ಐಪಿಎಲ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ಎಸ್ಆರ್ಹೆಚ್, ಹೆಡ್ಕೋಚ್ ಸ್ಥಾನದಿಂದ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ (Briyan Lara) ಅವರನ್ನು ಕೆಳಗಿಳಿಸಿದೆ. ಇದೀಗ ಆ ಸ್ಥಾನಕ್ಕೆ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ (Daniel Vettori) ಅವರನ್ನು ನೇಮಿಸಿದೆ. ಕಳೆದ ವಾರವಷ್ಟೇ ಜಿಂಬಾಬ್ವೆಯ ಮಾಜಿ ಆಟಗಾರ, ಅಪಾರ ಕೋಚಿಂಗ್ ಅನುಭವ ಹೊಂದಿರುವ ಆ್ಯಂಡಿ ಫ್ಲವರ್, ಆರ್‌ಸಿಬಿ ತಂಡದ ನೂತನ ಕೋಚ್ ಆಗಿ ನೇಮಕಗೊಂಡರು. ಜಸ್ಟಿನ್ ಲ್ಯಾಂಗರ್, ಲಕ್ನೋ ಸೂಪರ್ ಜೈಂಟ್ಸ್ ಹೆಡ್ಕೋಚ್ ಆಗಿ ಆಯ್ಕೆಯಾಗಿದ್ದರು.
ಪ್ರಸ್ತುತ ಸನ್‌ರೈಸರ್ಸ್ ಹೈದರಾಬಾದ್ ಜೊತೆ ಕೈ ಜೋಡಿಸಿರುವ ವೆಟ್ಟೋರಿ, ಆರ್‌ಸಿಬಿ ತಂಡದ ನಾಯಕನಾಗಿ ಮತ್ತು ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು. 16ನೇ ಆವೃತ್ತಿಯಲ್ಲಿ ಹೈದರಾಬಾದ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಕಾರಣ, ಕೋಚ್ ಬದಲಿಸಬೇಕೆಂಬ ಟೂರ್ನಿ ಮುಗಿದ ಬೆನ್ನಲ್ಲೇ ಚರ್ಚೆ ಶುರುವಾಗಿತ್ತು. ಅಲ್ಲದೆ, ಲಾರಾ ಅವರ 2 ವರ್ಷಗಳ ಒಪ್ಪಂದವೂ ಮುಕ್ತಾಯಗೊಂಡಿತ್ತು. ಆದರೆ, ಅವರನ್ನು ಮತ್ತೆ ಮುಂದುವರೆಸಲು ಮನಸ್ಸು ಮಾಡದ ಫ್ರಾಂಚೈಸಿ, ಡೇನಿಯಲ್ ವೆಟ್ಟೋರಿಯನ್ನು ಸ್ವಾಗತಿಸುವ ಮೂಲಕ ಬ್ರಿಯಾನ್ ಲಾರಾಗೆ ಆರೆಂಜ್ ಆರ್ಮಿ ವಿದಾಯ ಹೇಳಿದೆ.
ಸ್ವಾಗತಿಸಿದ ಆರೆಂಜ್ ಆರ್ಮಿ
ಬ್ರಿಯಾನ್ ಲಾರಾ ಅವರೊಂದಿಗಿನ 2 ವರ್ಷಗಳ ಉತ್ತಮ ಒಡನಾಟ ಕೊನೆಗೊಂಡಿದೆ. ನಾವು ಅವರಿಗೆ ವಿದಾಯ ಹೇಳುತ್ತೇವೆ. ತಂಡಕ್ಕಾಗಿ ನೀವು ಸಮರ್ಪಿಸಿದ ಕೊಡುಗೆ, ಕಾಣಿಕೆಗೆ ಧನ್ಯವಾದಗಳು. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇವೆ ಎಂದು ಟ್ವೀಟ್ನಲ್ಲಿ ಎಸ್ಆರ್ಹೆಚ್ ಶುಭ ಕೋರಿದೆ. ಮತ್ತೊಂದು ಟ್ವೀಟ್ನಲ್ಲಿ ಕಿವೀಸ್ ಲೆಜೆಂಡ್ ಡೇನಿಯಲ್ ವೆಟ್ಟೋರಿ ಅವರು ಹೆಡ್ಕೋಚ್ ಆಗಿ ಆರೆಂಜ್ ಆರ್ಮಿ ಬಳಗ ಸೇರಿದ್ದಾರೆ. ಅವರಿಗೆ ಸ್ವಾಗತ ಎಂದು ಪೋಸ್ಟ್ ಮಾಡಿದೆ.
ವೆಟ್ಟೋರಿ ಕೋಚಿಂಗ್ ಅನುಭವ
ಪ್ರಸ್ತುತ ನಡೆಯುತ್ತಿರುವ ಹಂಡ್ರೆಡ್ ಲೀಗ್ನಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡದ ಹೆಡ್ಕೋಚ್ ಆಗಿ ನ್ಯೂಜಿಲೆಂಡ್ ತಂಡದ ಮಾಜಿ ಎಡಗೈ ಸ್ಪಿನ್ನರ್ ವೆಟ್ಟೋರಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಅವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು. 2014 ರಿಂದ 2018ರವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ 2018ರ ಬಳಿಕ ಮತ್ತೆ ಐಪಿಎಲ್ ಕಡೆ ಮರಳುತ್ತಿರುವುದು ವಿಶೇಷ.
ಆರ್ಸಿಬಿಯನ್ನು ಫೈನಲ್ಗೇರಿಸಿದ್ದರು!
ಡೇನಿಯಲ್ ವೆಟ್ಟೋರಿ ಅವರ ಮಾರ್ಗದರ್ಶನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 2015ರಲ್ಲಿ ಪ್ಲೇ ಆಫ್, 2016ರಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಹೈದರಾಬಾದ್ ತಂಡದ ಎದುರೇ ಬೆಂಗಳೂರು ಟ್ರೋಫಿ ಗೆಲ್ಲುವಲ್ಲಿ ಎಡವಿತ್ತು. ಆರ್‌ಸಿಬಿ ಸೋಲಿಸಿದ್ದ ತಂಡಕ್ಕೆ 2024 ರಿಂದ ಕೆಲಸ ಮಾಡಲು ಒಪ್ಪಿದ್ದಾರೆ. ವೆಟ್ಟೋರಿ ಅವರು ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಆಗಿದ್ದರು.
ಕ್ರಿಕೆಟ್ ವೃತ್ತಿಜೀವನ
1997ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ವೆಟ್ಟೋರಿ 2015ರವರೆಗೂ ನ್ಯೂಜಿಲೆಂಡ್ ತಂಡದ ಪರ ಸೇವೆ ಸಲ್ಲಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ವೆಟ್ಟೋರಿ 113 ಟೆಸ್ಟ್, 295 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 6 ಟೆಸ್ಟ್ ಶತಕ, 27 ಅರ್ಧಶತಕ ಸೇರಿದಂತೆ 6784 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ 362 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 295 ಪಂದ್ಯಗಳಲ್ಲಿ 2253 ರನ್, 305 ವಿಕೆಟ್ ಪಡೆದಿದ್ದಾರೆ. ಕಿವೀಸ್ ತಂಡದ ಪರ 4 ವರ್ಷಗಳ ಕಾಲ ನಾಯಕನೂ ಆಗಿದ್ದಾರೆ.
ಕಳಪೆ ಪ್ರದರ್ಶನ ನೀಡಿದ ಹೈದರಾಬಾದ್
ಹೈದರಾಬಾದ್ 16ನೇ ಆವೃತ್ತಿಯಲ್ಲಿ ಬ್ರಿಯಾನ್ ಲಾರಾ ಅವರ ಕೋಚಿಂಗ್ ಅಡಿಯಲ್ಲಿ ಭಾರಿ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿತ್ತು. ಆದರೆ ಟೂರ್ನಿಯಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆಲುವು ಸಾಧಿಸಲಷ್ಟೇ ಶಕ್ತವಾಯಿತು. ಕಳೆದ ನಾಲ್ಕು ಸೀಸನ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಾಲ್ವರು ಮುಖ್ಯ ಕೋಚ್‌ಗಳನ್ನು ಬದಲಿಸಿದೆ.2021ರಲ್ಲಿ ಟ್ರೆವರ್ ಬೇಲಿಸ್, 2022ರಲ್ಲಿ ಟಾಮ್ ಮೂಡಿ, ನಂತರ ಬ್ರಿಯಾನ್ ಲಾರಾ, ಇದೀಗ ಬ್ರಿಯಾನ್ ಲಾರಾ ಅವರನ್ನು ಹೆಡ್ಕೋಚ್ ಆಗಿ ನೇಮಿಸಿಕೊಂಡಿತ್ತು.
4 ಸೀಸನ್‌ಗಳಲ್ಲಿ ನಾಲ್ವರು ಮುಖ್ಯ ಕೋಚ್‌ಗಳನ್ನು ಬದಲಾಯಿಸಿದ ಏಕೈಕ ಐಪಿಎಲ್ ತಂಡವಾಗಿದೆ. ಕಳೆದ ಮೂರು ಆವೃತ್ತಿಗಳಿಂದಲೂ ಪ್ಲೇ ಆಫ್ ಪ್ರವೇಶಿಸಲು ಸನ್ಸೈರ್ಸ್ ಹೈದರಾಬಾದ್ ವಿಫಲವಾಗುತ್ತಿದೆ. 2021ರಲ್ಲಿ ಅಂಕಪಟ್ಟಿಯ ಕೊನೆಯ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 2022ರಲ್ಲಿ ಆರು ಪಂದ್ಯಗಳಲ್ಲಿ ಗೆದ್ದು 8ನೇ ಸ್ಥಾನ ಪಡೆದಿತ್ತು. 2023ರ ಐಪಿಎಲ್ನಲ್ಲಿ ಕೊನೆಯ ಸ್ಥಾನ ತೃಪ್ತಿಪಟ್ಟುಕೊಂಡಿತ್ತು.