ಕನ್ನಡ ಸುದ್ದಿ  /  Sports  /  Cricket News Former Pakistan Skipper Salman Butt Captaincy Comparison Between Ms Dhoni And Imran Khan Jra

Salman Butt: ಧೋನಿ ನಾಯಕ ಆಗಿದ್ದಾಗ ಭಾರತದ ಬ್ಯಾಟಿಂಗ್ ಚೆನ್ನಾಗಿತ್ತು; ಇಮ್ರಾನ್ ಜೊತೆ ಮಾಹಿ ಹೋಲಿಸಿದ ಪಾಕ್ ಮಾಜಿ ಕ್ರಿಕೆಟಿಗ

MS Dhoni: ಕ್ರಿಕೆಟ್‌ ಇತಿಹಾಸದಲ್ಲಿ ಶ್ರೇಷ್ಠ ನಾಯಕ ಎಂದೇ ಪರಿಗಣಿಸಲ್ಪಟ್ಟಿರುವ ಭಾರತದ ಮಾಜಿ ನಾಯಕ ಧೋನಿ, ಐಸಿಸಿ ಏಕದಿನ ವಿಶ್ವಕಪ್, ಐಸಿಸಿ ಟಿ20 ವಿಶ್ವಕಪ್‌ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಂಎಸ್ ಧೋನಿ ಮತ್ತು ಇಮ್ರಾನ್ ಖಾನ್
ಎಂಎಸ್ ಧೋನಿ ಮತ್ತು ಇಮ್ರಾನ್ ಖಾನ್ (AP-Reuters)

ಎಂಎಸ್‌ ಧೋನಿ (MS Dhoni) ಅವರನ್ನು ಕ್ರಿಕೆಟ್‌ನಲ್ಲಿ ವಿಶ್ವದ ಅತ್ಯುತ್ತಮ ನಾಯಕ ಎಂದೇ ಕರೆಯಲಾಗುತ್ತದೆ. ಭಾರತದ ಯಶಸ್ವಿ ಹಾಗೂ ಅದೃಷ್ಟದ ನಾಯಕ ಎಂದು ಮಾಹಿಯನ್ನು ವ್ಯಾಪಕವಾಗಿ ಹೊಗಳಲಾಗುತ್ತದೆ.‌ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾದ ಯಶಸ್ಸು ಹಾಗೂ ಐಪಿಎಲ್‌ನಲ್ಲಿಯೂ ನಾಯಕನಾಗಿ ಅವರ ಸಕ್ಸಸ್‌ ಸ್ಟೋರಿ ಇದಕ್ಕೆ ಕಾರಣ.

ಭಾರತದ ಮಾಜಿ ನಾಯಕ ಧೋನಿ ಮತ್ತು ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಇಮ್ರಾನ್ ಖಾನ್ (Imran Khan) ಅವರ ನಾಯಕತ್ವದ ಅವಧಿಯನ್ನು ಹೋಲಿಸಿದ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್, ಇಮ್ರಾನ್‌ ಅವರ ಅವಧಿಯಲ್ಲಿ ಉತ್ತಮ ಆಟಗಾರರು ಇರಲಿಲ್ಲ ಎಂದು ಹೇಳಿದ್ದಾರೆ. ಆದರೆ, ಭಾರತ ತಂಡದಲ್ಲಿ ಉತ್ತಮ ಬ್ಯಾಟರ್‌ಗಳಿದ್ದ ಕಾರಣ ಧೋನಿ ಯಶಸ್ಸು ಸಾಧಿಸಿದರು ಎಂದು ಅವರು ಹೇಳಿದ್ದಾರೆ.

ಕ್ರಿಕೆಟ್‌ ಇತಿಹಾಸದಲ್ಲಿ ಶ್ರೇಷ್ಠ ನಾಯಕ ಎಂದೇ ಪರಿಗಣಿಸಲ್ಪಟ್ಟಿರುವ ಭಾರತದ ಮಾಜಿ ನಾಯಕ ಧೋನಿ, ಐಸಿಸಿ ಏಕದಿನ ವಿಶ್ವಕಪ್ (2011), ಐಸಿಸಿ ಟಿ20 ವಿಶ್ವಕಪ್‌ (2007) ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ (2013) ಗೆದ್ದ ವಿಶ್ವದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2011ರಲ್ಲಿ ಭಾರತವನ್ನು ಎರಡನೇ ವಿಶ್ವಕಪ್ ಪ್ರಶಸ್ತಿಯತ್ತ ಧೋನಿ ಮುನ್ನಡೆಸಿದರು. ಅತ್ತ ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್, ಇದೇ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಚೊಚ್ಚಲ ವಿಶ್ವಕಪ್ ಗೆಲ್ಲಲು ನೆರವಾದರು. ಈ ಗೆಲುವಿನ ಹಿಂದಿನ ಮಾಸ್ಟರ್‌ ಮೈಂಡ್‌ ಎನಿಸಿಕೊಂಡರು.

ಈ ಕುರಿತಾಗಿ ಯೂಟ್ಯೂಬ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಪಾಕಿಸ್ತಾನದ ಮಾಜಿ ನಾಯಕ ಬಟ್, ಕ್ರಿಕೆಟ್‌ನ ಇಬ್ಬರು ಐಕಾನ್‌ಗಳ ನಡುವೆ ನಾಯಕತ್ವದ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಧೋನಿ ಭಾರತದ ನಾಯಕತ್ವ ವಹಿಸಿದ್ದ ಅವಧಿಯಲ್ಲಿ, ತಂಡದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಲೈನ್‌ಅಪ್‌ ಇತ್ತು ಎಂದು ಪಾಕಿಸ್ತಾನದ ಮಾಜಿ ನಾಯಕ ಹೇಳಿದ್ದಾರೆ. ಇದೇ ವೇಳೆ ಇಮ್ರಾನ್ ಕುರಿತಾಗಿ ಮಾತನಾಡಿದ ಅವರು ಭಿನ್ನ ರಾಗ ಎಳೆದಿದ್ದಾರೆ. ಆ ಸಮಯದಲ್ಲಿ ಜಾವೇದ್ ಮಿಯಾಂದಾದ್ ಮಾತ್ರ ಏಕೈಕ ಸೂಪರ್‌ಸ್ಟಾರ್ ಬ್ಯಾಟರ್ ಆಗಿದ್ದರು. ಹೀಗಾಗಿ ಇಮ್ರಾನ್‌ ಅವರ ಯಶಸ್ಸನ್ನು ಅಳೆಯುವುದು ಕಷ್ಟ ಎಂದು ಹೇಳಿದ್ದಾರೆ.

“ಇವರಿಬ್ಬರ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಎಂಎಸ್ ಧೋನಿ, ತಮ್ಮ ನಾಯಕತ್ವದ ಅವಧಿಯಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟಿಂಗ್ ಲೈನ್ಅಪ್ ಹೊಂದಿದ್ದರು. ಮತ್ತೊಂದೆಡೆ, ಇಮ್ರಾನ್ ಅವರ ಅವಧಿಯಲ್ಲಿ ಅವರು ಮತ್ತು ಜಾವೇದ್ ಮಿಯಾಂದಾದ್ ಮಾತ್ರ ಇದ್ದರು. ಇಮ್ರಾನ್ ಆಲ್‌ರೌಂಡರ್ ಆಗಿದ್ದರು. ಆದ್ದರಿಂದ ಆ ತಂಡದಲ್ಲಿ ಮಿಯಾಂದಾದ್ ಮಾತ್ರ ಪ್ರಮುಖ ಬ್ಯಾಟರ್ ಆಗಿದ್ದರು. ಇವರಿಬ್ಬರನ್ನು ಹೋಲಿಸಲು ಬಯಸುವುದಿಲ್ಲ. ಏಕೆಂದರೆ ಆಗನ ಉಭಯ ತಂಡಗಳ ಸಂಪನ್ಮೂಲಗಳಲ್ಲಿ ದೊಡ್ಡ ವ್ಯತ್ಯಾಸವಿತ್ತು. ಆದರೆ ಅವರಿಬ್ಬರೂ ಅದ್ಭುತ ನಾಯಕರು ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳುವವರಾಗಿದ್ದರು. ಅವರು ತಮ್ಮ ಆಟಗಾರರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದರು. ಇಮ್ರಾನ್ ತುಂಬಾ ಮಾತನಾಡುತ್ತಿದ್ದರು. ಇದೇ ವೇಳೆ ಧೋನಿ ಹೆಚ್ಚು ಮಾತನಾಡುತ್ತಿರಲಿಲ್ಲ,” ಎಂದು ಬಟ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿಯಾಗಿರುವ ಭಾರತದ ಮಾಜಿ ನಾಯಕ ಧೋನಿ, ಇತ್ತೀಚೆಗೆ ಮುಗಿದ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದರು.