ಕನ್ನಡ ಸುದ್ದಿ  /  Sports  /  Cricket News Gt Vs Mi Gujarat Titans Vs Mumbai Indians Qualifier 2 Playing 11 Pitch Report Head To Head Record Prs

GT vs MI Qualifier 2: ಗುಜರಾತ್​-ಮುಂಬೈ ಸೆಮಿಫೈನಲ್; ಗೆದ್ದವರಿಗೆ ಫೈನಲ್​ ಟಿಕೆಟ್​, ಸೋತವರು ಔಟ್; ದಾಖಲೆ ಬರೆಯಲು ಉಭಯ ತಂಡಗಳು ಸಜ್ಜು​

ರೋಹಿತ್​ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್​​ (Mumbai Indians), 6ನೇ ಬಾರಿಗೆ ಟ್ರೋಫಿ ಗೆಲ್ಲುವ ತವಕದಲ್ಲಿದ್ದರೆ, ಹಾರ್ದಿಕ್​ ಪಾಂಡ್ಯ (Hardik Pandya) ಸಾರಥ್ಯದ ಗುಜರಾತ್​ ಟೈಟಾನ್ಸ್ (Gujarat Titans)​ ಹಾಲಿ ಚಾಂಪಿಯನ್​ ಪಟ್ಟವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ.

ಹಾರ್ದಿಕ್​ ಪಾಂಡ್ಯ ಮತ್ತು ರೋಹಿತ್​ ಶರ್ಮಾ
ಹಾರ್ದಿಕ್​ ಪಾಂಡ್ಯ ಮತ್ತು ರೋಹಿತ್​ ಶರ್ಮಾ

ಎಲಿನಿಮೇಟರ್​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡವನ್ನು ಸೋಲಿಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡರುವ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians)​, 16ನೇ ಆವೃತ್ತಿಯ ಐಪಿಎಲ್​ನ ಕ್ವಾಲಿಫೈಯರ್ -2ರಲ್ಲಿ (IPL Qualifier 2) ಗುಜರಾತ್​ ಟೈಟಾನ್ಸ್ (Gujarat Titans) ತಂಡವನ್ನು ಎದುರಿಸಲು ಸಜ್ಜಾಗಿದೆ. ಇದರೊಂದಿಗೆ ಉಭಯ ತಂಡಗಳು ಮತ್ತೊಂದು ಫೈನಲ್​ ಕನಸಿನಲ್ಲಿವೆ.

ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​​, 6ನೇ ಬಾರಿಗೆ ಟ್ರೋಫಿ ಗೆಲ್ಲುವ ತವಕದಲ್ಲಿದ್ದರೆ, ಹಾರ್ದಿಕ್​ ಪಾಂಡ್ಯ ಸಾರಥ್ಯದ ಗುಜರಾತ್​ ಟೈಟಾನ್ಸ್​ ಹಾಲಿ ಚಾಂಪಿಯನ್​ ಪಟ್ಟವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಈ ಉಭಯ ತಂಡಗಳ ಮೆಗಾ ಕಾದಾಟಕ್ಕೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಮೈದಾನದ ಎನಿಸಿರುವ ನರೇಂದ್ರ ಮೋದಿ ಸ್ಟೇಡಿಯಂ ವೇದಿಕೆ ಕಲ್ಪಿಸಲಿದೆ.

ಆತ್ಮವಿಶ್ವಾಸದಲ್ಲಿ ರೋಹಿತ್​ ಬಳಗ

ಟೂರ್ನಿಯ ಆರಂಭಿಕ 7ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 4ರಲ್ಲಿ ಸೋಲು ಕಂಡಿತ್ತು. ದ್ವಿತೀಯಾರ್ಧದಲ್ಲಿ ಪುಟಿದೆದ್ದ ಮುಂಬೈ, 7ರಲ್ಲಿ ಗೆದ್ದು 2ರಲ್ಲಿ ಸೋಲು ಕಂಡಿತ್ತು. ಮೊದಲಾರ್ಧದಲ್ಲಿ ಬ್ಯಾಟಿಂಗ್​-ಬೌಲಿಂಗ್ ಎರಡಲ್ಲೂ ಪರದಾಡಿದ್ದ ಮುಂಬೈ, 2ನೇ ಹಂತದಲ್ಲಿ ಭರ್ಜರಿ ಕಂಬ್ಯಾಕ್​ ಮಾಡಿತ್ತು. 4 ಬಾರಿ 200+ ರನ್​ಗಳನ್ನೇ ಚೇಸ್​ ಮಾಡಿದೆ.

ಸೂರ್ಯಕುಮಾರ್ ಲಯಕ್ಕೆ ಮರಳುವ ಜೊತೆಗೆ ಇಶಾನ್​ ಕಿಶನ್, ಕ್ಯಾಮರೂನ್​ ಗ್ರೀನ್​, ಟಿಮ್ ಡೇವಿಡ್​, ನೇಹಾಲ್​ ವಧೇರಾ ಅದ್ಭುತ ಸಾಥ್ ನೀಡಿದರು. ಸನ್​ರೈಸರ್ಸ್​ ವಿರುದ್ಧ ನಿರ್ಣಾಯಕ ಅಂತಿಮ ಲೀಗ್​ ಪಂದ್ಯದಲ್ಲಿ 4 ವಿಕೆಟ್​ ಪಡೆದು ಅಬ್ಬರಿಸಿದ್ದ ವೇಗಿ ಆಕಾಶ್​ ಮಧ್ವಾಲ್​, ಎಲಿಮಿನೇಟರ್​ ಪಂದ್ಯದಲ್ಲೂ ದಾಖಲೆಯ 5 ವಿಕೆಟ್​ ಉರುಳಿಸಿದರು. ಅನುಭವಿ ಸ್ಪಿನ್ನರ್ ಪಿಯೂಷ್​ ಚಾವ್ಲಾ ಅದ್ಭುತ ಕೊಡುಗೆ ಅಪಾರ.

ಗುಜರಾತ್​ ಸ್ಥಿರ ಪ್ರದರ್ಶನ

ಗುಜರಾತ್​ ಟೈಟಾನ್ಸ್​ ಟೂರ್ನಿಯುದ್ದಕ್ಕೂ ಬ್ಯಾಟಿಂಗ್​-ಬೌಲಿಂಗ್​​​​ನಲ್ಲಿ ಸ್ಥಿರ ನಿರ್ವಹಣೆ ತೋರುತ್ತಾ ಬಂದಿದೆ. ಶುಭ್ಮನ್ ಗಿಲ್, ಸಾಯಿ ಸುದರ್ಶನ್​, ವೃದ್ಧಿಮಾನ್​ ಸಾಹ, ಡೇವಿಡ್ ಮಿಲ್ಲರ್, ಅದ್ಭುತ ಆಟವಾಡುತ್ತಿದ್ದಾರೆ. ಬೌಲಿಂಗ್​ ವಿಭಾಗದಲ್ಲಿ ಮೊಹಮ್ಮದ್​ ಶಮಿ, ರಶೀದ್​ ಖಾನ್​, ಮೋಹಿತ್​ ಶರ್ಮಾ, ನೂರ್​ ಅಹ್ಮದ್​ ಮಾರಕ ಬೌಲಿಂಗ್​​ ದಾಳಿ ನಡೆಸುತ್ತಿದ್ದಾರೆ.

ಗುಜರಾತ್ ತಂಡಕ್ಕೆ 2ನೇ ಅವಕಾಶ

2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಗೆಲುವು ಸಾಧಿಸಿದರೆ, ಸತತ 2ನೇ ಬಾರಿಗೆ ಫೈನಲ್​ ಪ್ರವೇಶಿಸಲಿದೆ. ಆ ಮೂಲಕ ಈ ಸಾಧನೆ ಮಾಡಿದ 3ನೇ ತಂಡ ಎನಿಸಲಿದೆ. ಸಿಎಸ್​ಕೆ, ಮುಂಬೈ ತಂಡಗಳು ಹೊರತುಪಡಿಸಿದರೆ ಬೇರೆ ಯಾವ ತಂಡಗಳು ಈ ಸಾಧನೆ ಮಾಡಿಲ್ಲ. ಗುಜರಾತ್ ಇದೇ ಮೊದಲ ಬಾರಿಗೆ ಕ್ವಾಲಿಫೈಯರ್​​-2 ಆಡುತ್ತಿದೆ. ಕಳೆದ ಬಾರಿ ಮೊದಲ ಕ್ವಾಲಿಫೈಯರ್​ನಲ್ಲೇ ಗೆದ್ದು ಫೈನಲ್​ ಪ್ರವೇಶಿಸಿತ್ತು.

ಮುಂಬೈ ತಂಡಕ್ಕೆ 7ನೇ ಅವಕಾಶ

ಗುಜರಾತ್​ ವಿರುದ್ಧ ಗೆಲುವು ಸಾಧಿಸಿದರೆ, 7ನೇ ಬಾರಿಗೆ ಫೈನಲ್​ ಪ್ರವೇಶ ಮಾಡಲಿದೆ. ಇದಕ್ಕೂ ಮುನ್ನ 2010ರಲ್ಲಿ ರನ್ನರ್​ ಅಪ್​ ಆಗಿತ್ತು. 2012, 2015, 2017, 2019, 2020ರಲ್ಲಿ ಚಾಂಪಿಯನ್​ ಆಗಿತ್ತು. ಮುಂಬೈ ಈ ಹಿಂದೆ 3 ಬಾರಿ ಕ್ವಾಲಿಫೈಯರ್​ ಪಂದ್ಯಗಳನ್ನಾಡಿದ್ದು, ಎರಡಲ್ಲಿ ಗೆದ್ದು, ಒಂದರಲ್ಲಿ ಸೋಲು ಕಂಡಿದೆ. ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಲೀಗ್​ ಹಂತದಿಂದಲೇ ಹೊರ ಬಿದ್ದಿತ್ತು.

ಉಭಯ ತಂಡಗಳ ಮುಖಾಮುಖಿ

ಮುಂಬೈ ಮತ್ತು ಗುಜರಾತ್​ ಉಭಯ ತಂಡಗಳು ಒಟ್ಟು 3 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ರೋಹಿತ್​ ಪಡೆ 2 ಸಲ, ಹಾರ್ದಿಕ್​ ಪಡೆ 1 ಗೆದ್ದಿದೆ. ಪ್ಲೇ ಆಫ್​ ಹಂತದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಎದುರಾಗುತ್ತಿವೆ. ಈ ಬಾರಿಯ ಲೀಗ್​ ಹಂತದಲ್ಲಿ 2 ಬಾರಿ ಎದುರಾಗಿದ್ದು, ತಲಾ 1ರಲ್ಲಿ ಗೆದ್ದಿವೆ.

ಪಿಚ್​ ರಿಪೋರ್ಟ್​

ಅಹಮದಾಬಾದ್‌ನ ಪಿಚ್ ಬ್ಯಾಟಿಂಗ್​ಗೆ ನೆರವಾಗಲಿದೆ. ಉತ್ತಮ ಮೊತ್ತ ಕಲೆ ಹಾಕಲು ಈ ಪಿಚ್​ ಸಹಾಯವಾಗಲಿದೆ. ವೇಗಿಗಳೂ ಅದ್ಭುತ ಪ್ರದರ್ಶನ ನೀಡಲಿದ್ದಾರೆ. ಭುವನೇಶ್ವರ್​ ಕುಮಾರ್​ ಪಂದ್ಯವೊಂದರಲ್ಲಿ 5 ವಿಕೆಟ್​ ಉರುಳಿಸಿದ್ದರು. ಟಾಸ್​​ ಗೆದ್ದ ತಂಡವು ಚೇಸಿಂಗ್​ಗೆ ಹೆಚ್ಚು ಆದ್ಯತೆ ನೀಡಲಿದೆ. ಪಂದ್ಯ ಮುಂದುವರೆದಂತೆ ಇಬ್ಬನಿ ಕಾಡಲಿದೆ.

ಗುಜರಾತ್ ಟೈಟಾನ್ಸ್​​ ಸಂಭಾವ್ಯ ತಂಡ

ವೃದ್ಧಿಮಾನ್ ಸಾಹ (ವಿಕೆಟ್​ ಕೀಪರ್), ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ದಸುನ್ ಶನಕ, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಯಶ್​ ದಯಾಳ್​.

ಮುಂಬೈ ಇಂಡಿಯನ್ಸ್​​ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್​ ಕೀಪರ್​), ಕ್ಯಾಮರೂನ್​ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆಂಡಾರ್ಫ್.