GT vs MI Qualifier 2: ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದ ಗುಜರಾತ್ ಟೈಟಾನ್ಸ್; ಕಳಪೆ ಪ್ರದರ್ಶನಕ್ಕೆ ಬೆಲೆತೆತ್ತ ಮುಂಬೈ ಇಂಡಿಯನ್ಸ್
16ನೇ ಆವೃತ್ತಿಯ ಐಪಿಎಲ್ನಲ್ಲೂ ಗುಜರಾತ್ ಟೈಟಾನ್ಸ್ ಫೈನಲ್ ಪ್ರವೇಶಿಸಿದೆ. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ಹಾರ್ದಿಕ್ ಪಡೆ, ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಆ ಮೂಲಕ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಮುಂದಾಗಿದೆ.
ಗುಜರಾತ್ ಟೈಟಾನ್ಸ್ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತು. ಐಪಿಎಲ್ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಐತಿಹಾಸಿಕ ದಾಖಲೆ ಬರೆದಿದೆ. ಇದರೊಂದಿಗೆ 16ನೇ ಆವೃತ್ತಿಯ ಕಲರ್ಫುಲ್ ಲೀಗ್ನಲ್ಲೂ ಪ್ರಶಸ್ತಿ ಸುತ್ತಿಗೇರಿದ್ದು, ಮೇ 28ರಂದು ನಡೆಯುವ ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಪ್ರಶಸ್ತಿಗಾಗಿ ಕಾದಾಡಲಿದೆ. ಗುಜರಾತ್ ತಂಡವು ಆಲ್ರೌಂಡ್ ನಿರ್ವಹಣೆಯ ಕಾರಣ ಮಹತ್ವದ ಪಂದ್ಯದಲ್ಲಿ ಮುಂಬೈ ಮಕಾಡೆ ಮಲಗಿತು. 6ನೇ ಟ್ರೋಫಿಯ ಕನಸಿನಲ್ಲಿದ್ದ ರೋಹಿತ್ ಪಡೆಗೆ ಹಾರ್ದಿಕ್ ಪಡೆ ಶಾಕ್ ನೀಡಿತು.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ ಬೃಹತ್ ಮೊತ್ತ ಕಲೆ ಹಾಕಿತು. ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರ (129) ಸ್ಪೋಟಕ ಶತಕದ ನೆರವಿನಿಂದ ಬರೋಬ್ಬರಿ 234 ರನ್ ಪೇರಿಸಿತು. ಈ ದೊಡ್ಡ ಮೊತ್ತವನ್ನು ಹಿಂಬಾಲಿಸಿದ ಮುಂಬೈ ಬ್ಯಾಟಿಂಗ್ನಲ್ಲೂ ವೈಫಲ್ಯ ಅನುಭವಿಸಿತು. ಸೂರ್ಯಕುಮಾರ್ (61) ಹೊರತುಪಡಿಸಿ ಉಳಿದ ಬ್ಯಾಟರ್ಗಳು ತಂಡಕ್ಕೆ ಕೊಡುಗೆ ನೀಡುವಲ್ಲಿ ವಿಫಲರಾದರು. ಪರಿಣಾಮ 20 ಓವರ್ಗಳಲ್ಲಿ 171 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಎದುರಾಳಿ ಗುಜರಾತ್ 62 ರನ್ಗಳಿಂದ ಗೆದ್ದು ಬೀಗಿತು.
ದಾಖಲೆ ಬರೆದ ಗುಜರಾತ್
2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಗುಜರಾತ್, ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿತು. ಆ ಮೂಲಕ ಈ ಸಾಧನೆ ಮಾಡಿದ 3ನೇ ತಂಡ ಎನಿಸಿತು. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ತಂಡಗಳು ತಂಡಗಳು ಹೊರತುಪಡಿಸಿದರೆ, ಬೇರೆ ಯಾವ ತಂಡಗಳು ಈ ಸಾಧನೆ ಮಾಡಿಲ್ಲ. ಗುಜರಾತ್ ಇದೇ ಮೊದಲ ಬಾರಿಗೆ ಕ್ವಾಲಿಫೈಯರ್-2 ಆಡಿದ್ದು, ಈಗ ಗೆದ್ದು ಫೈನಲ್ ಪ್ರವೇಶಿಸಿದೆ. ಕಳೆದ ಬಾರಿಯೂ ಚಾಂಪಿಯನ್ ಆಗಿತ್ತು. ಫೈನಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದಿತ್ತು. ಇನ್ನು ನಾಯಕ ಹಾರ್ದಿಕ್ ಪಾಂಡ್ಯ ಒಟ್ಟಾರೆ 6ನೇ ಬಾರಿಗೆ ಐಪಿಎಲ್ ಫೈನಲ್ಗೆ ಪ್ರವೇಶ ಪಡೆದಿದ್ದಾರೆ.
ಫೈನಲ್ನಲ್ಲಿ ಸಿಎಸ್ಕೆ ಎದುರಾಳಿ
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿತ್ತು. ಪರಿಣಾಮ ಸಿಎಸ್ಕೆ ನೇರವಾಗಿ ಫೈನಲ್ಗೆ ಅರ್ಹತೆ ಪಡೆದುಕೊಂಡಿತ್ತು. ಮೇ 28ರಂದು ಇದೇ ಮೈದಾನದಲ್ಲಿ ಧೋನಿ ಪಡೆಯ ವಿರುದ್ಧ ಪ್ರಶಸ್ತಿಗಾಗಿ ಗುಜರಾತ್ ಸೆಣಸಾಟ ನಡೆಸಲಿದೆ.
ಕ್ವಾಲಿಫೈಯರ್ನಲ್ಲಿ ಮುಂಬೈಗೆ ಮತ್ತೊಂದು ಸೋಲು
2ನೇ ಕ್ವಾಲಿಫೈಯರ್ನಲ್ಲಿ ಗುಜರಾತ್ ವಿರುದ್ಧ ಸೋಲುವ ಮೂಲಕ ಮತ್ತೊಮ್ಮೆ 2ನೇ ಕ್ವಾಲಿಫೈಯರ್ನಲ್ಲಿ ಎಡವಿದೆ. 7ನೇ ಬಾರಿಗೆ ಫೈನಲ್ ಪ್ರವೇಶಿಸುವ ಕನಸಿನಲ್ಲಿದ್ದ ಮುಂಬೈ ಶಾಕ್ ನೀಡಿತು. 2010ರಲ್ಲಿ ರನ್ನರ್ ಅಪ್ ಆಗಿದ್ದ ಮುಂಬೈ, 2012, 2015, 2017, 2019, 2020ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮುಂಬೈ 4 ಬಾರಿ ಎರಡನೇ ಕ್ವಾಲಿಫೈಯರ್ ಪಂದ್ಯಗಳನ್ನಾಡಿದ್ದು, ಎರಡಲ್ಲಿ ಗೆದ್ದು, ಎರಡರಲ್ಲಿ ಸೋಲು ಕಂಡಿದೆ. ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಲೀಗ್ ಹಂತದಿಂದಲೇ ಹೊರ ಬಿದ್ದಿತ್ತು.
ಸಿಎಸ್ಕೆ - ಗುಜರಾತ್ 3ನೇ ಬಾರಿ ಮುಖಾಮುಖಿ
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ತಂಡಗಳು ಇದೇ ಆವೃತ್ತಿಯಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಈ ಸೀಸನ್ನ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳು ನಂತರ ಮೊದಲ ಕ್ವಾಲಿಫೈಯರ್ನಲ್ಲಿ ಸೆಣಸಾಟ ನಡೆಸಿದ್ದವು. ಮೊದಲ ಮುಖಾಮುಖಿಯಲ್ಲಿ ಸೋತಿದ್ದ ಚೆನ್ನೈ, ಕ್ವಾಲಿಫೈಯರ್ನಲ್ಲಿ ಗೆದ್ದು ಫೈನಲ್ಗೆ ಪ್ರವೇಶಿಸಿತ್ತು. ಒಟ್ಟು 4 ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಗುಜರಾತ್ 3 ಬಾರಿ ಜಯಿಸಿದೆ.
ಶುಭ್ಮನ್ ಗಿಲ್ ದಾಖಲೆಯ ಸೆಂಚುರಿ
ಮುಂಬೈ ಬೌಲರ್ಗಳಿಗೆ ಬೆಂಡೆತ್ತಿದ ಪಂಜಾಜ್ ಪುತ್ತರ್, 16ನೇ ಆವೃತ್ತಿಯ ಐಪಿಎಲ್ನ ಮಹತ್ವದ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿದರು. ಇದು ಈ ಐಪಿಎಲ್ನಲ್ಲಿ ಗಿಲ್ ಬಾರಿಸಿದ 3ನೇ ಶತಕವಾಗಿದೆ. ಪ್ರಸಕ್ತ ಆವೃತ್ತಿಯಲ್ಲಿ 2 ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ. ಇದರೊಂದಿಗೆ ಆರೆಂಜ್ ಕ್ಯಾಪ್ ಅನ್ನೂ ತನ್ನದಾಗಿಸಿಕೊಂಡಿದ್ದಾರೆ. ಸದ್ಯ ಗಿಲ್ 16 ಪಂದ್ಯಗಳಲ್ಲಿ 61ರ ಸರಾಸರಿಯಲ್ಲಿ 851 ರನ್ ಗಳಿಸಿದ್ದಾರೆ.
ವಿಭಾಗ