GT vs MI Qualifier 2: ಶುಭ್ಮನ್ ಗಿಲ್ ದಾಖಲೆಯ ಶತಕ, ದಿಕ್ಕಾಪಾಲಾದ ಮುಂಬೈ ಇಂಡಿಯನ್ಸ್; ಬೃಹತ್ ಮೊತ್ತ ಕಲೆ ಹಾಕಿದ ಗುಜರಾತ್
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯಕ್ಕೆ ಹಾಜರಾಗಿದ್ದ ಅಭಿಮಾನಿಗಳಿಗೆ ಅಕ್ಷರಶಃ ಮನರಂಜನೆ ಸಿಕ್ಕಿತು. ಗುಜರಾತ್ ತಂಡವು, ಮುಂಬೈ ಇಂಡಿಯನ್ಸ್ಗೆ 234 ರನ್ಗಳ ಗುರಿ ನೀಡಿದೆ.
ಭಾರತದ ಯಂಗ್ ಸೆನ್ಸೇಷನ್ ಬ್ಯಾಟರ್ ಶುಭ್ಮನ್ ಗಿಲ್, ಆಕ್ರಮಣಕಾರಿ ಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ಬೃಹತ್ ಮೊತ್ತ ಕಲೆ ಹಾಕಿದೆ. ಮುಂಬೈ ಇಂಡಿಯನ್ಸ್ ಬೌಲರ್ಗಳ ಮೇಲೆ ಸವಾರಿ ಮಾಡಿದ ಗಿಲ್, ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದರು. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯಕ್ಕೆ ಹಾಜರಾಗಿದ್ದ ಅಭಿಮಾನಿಗಳಿಗೆ ಅಕ್ಷರಶಃ ಮನರಂಜನೆ ಸಿಕ್ಕಿತು. ಗುಜರಾತ್ ತಂಡವು, ಮುಂಬೈ ಇಂಡಿಯನ್ಸ್ಗೆ 234 ರನ್ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗುಜರಾತ್ ಟೈಟಾನ್ಸ್, ಭರ್ಜರಿ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ವೃದ್ಧಿಮಾನ್ ಸಾಹ ಮಿಂಚುವ ಭರವಸೆ ಮೂಡಿಸಿದರಾದರೂ, ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. 16 ಎಸೆತಗಳಲ್ಲಿ 18 ರನ್ಗಳಿಸಿ ಪಿಯೂಷ್ ಚಾವ್ಲಾ ಬೌಲಿಂಗ್ನಲ್ಲಿ ಸ್ಟಂಪ್ ಆದರು. ಆಗ ಗುಜರಾತ್ ತಂಡದ ಮೊತ್ತ 54 ರನ್ ಆಗಿತ್ತು. ಈ ಹಂತದಲ್ಲಿ ಮೇಲುಗೈ ಸಾಧಿಸಿದ ಮುಂಬೈ ಬೌಲರ್ಗಳು ನಂತರ ಶುಭ್ಮಮನ್ ಗಿಲ್ ಆರ್ಭಟಕ್ಕೆ ದಿಕ್ಕಾಪಾಲಾದರು.
ಗಿಲ್ ಆರ್ಭಟಕ್ಕೆ ಬೆಚ್ಚಿದ ಮುಂಬೈ
ಸಾಹ ಔಟಾದಾಗ ಗುಜರಾತ್ ವಿರುದ್ಧ ಮುಂಬೈ ತಿರುಗಿ ಬೀಳುವ ಲೆಕ್ಕಾಚಾರ ಹಾಕಿಕೊಂಡಿತ್ತು. ಆದರೆ ಇದೆಲ್ಲವನ್ನೂ ಶುಭ್ಮನ್ ಗಿಲ್ ಉಲ್ಟಾ ಮಾಡಿಬಿಟ್ಟರು. ಬೌಲರ್ಗಳ ತಂತ್ರಗಳೆಲ್ಲವನ್ನೂ ತಲೆಕೆಳಗೆ ಮಾಡಿಬಿಟ್ಟರು. ಬೌಲರ್ಗಳ ಸವಾರಿ ಮಾಡಿದ ಗಿಲ್ ತಂಡದ ಮೊತ್ತವನ್ನು ಒಂದೇ ಸಮನೆ ಏರಿಸಿದರು. ಒಂದೆಡೆ ಶುಭ್ಮನ್ ಆರ್ಭಟಿಸುತ್ತಿದ್ದರೆ, ಮತ್ತೊಂದೆಡೆ ಸಾಯಿ ಸುದರ್ಶನ್, ಗಿಲ್ಗೆ ಅದ್ಭುತ ಸಾಥ್ ನೀಡಿದರು. ನೋಡ ನೋಡುತ್ತಲ್ಲೇ ಇಬ್ಬರು ಅರ್ಧಶತಕ, ಶತಕದ ಜೊತೆಯಾಡಿದರು. ಈ ಜೋಡಿ 64 ಎಸೆತಗಳಲ್ಲಿ 138 ರನ್ ಕಲೆ ಹಾಕಿತು.
ದಾಖಲೆಯ ಶತಕ ಸಿಡಿಸಿದ ಗಿಲ್
ಮುಂಬೈ ಬೌಲರ್ಗಳಿಗೆ ಬೆಂಡೆತ್ತಿದ ಪಂಜಾಜ್ ಪುತ್ತರ್, 16ನೇ ಆವೃತ್ತಿಯ ಐಪಿಎಲ್ನ ಮಹತ್ವದ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿದರು. ಇದು ಈ ಐಪಿಎಲ್ನಲ್ಲಿ ಗಿಲ್ ಬಾರಿಸಿದ 3ನೇ ಶತಕವಾಗಿದೆ. ಲೀಗ್ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ವಿರುದ್ಧ ನೂರರ ಗಡಿ ದಾಟಿದ್ದರು. ಇದೀಗ ಭರ್ಜರಿ ಶತಕದ ಮೂಲಕ ದಾಖಲೆ ಬರೆದಿದ್ದಾರೆ. 2 ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.
ಕೊನೆಗೂ ಔಟಾದ ಆರಂಭಿಕ ಆಟಗಾರ
ಬೌಲರ್ಗಳಿಗೆ ಮನಬಂದಂತೆ ದಂಡಿಸಿದ ಬಲಗೈ ಆಟಗಾರ, ಅಕ್ಷರಶಃ ಮುಂಬೈ ಮೇಲೆ ಸವಾರಿ ಮಾಡಿದರು. 60 ಎಸೆತಗಳಲ್ಲಿ 10 ಸಿಕ್ಸರ್, 7 ಬೌಂಡರಿಗಳ ಸಹಾಯದಿಂದ 129 ರನ್ ಗಳಿಸಿದರು. ಆಕಾಶ್ ಮಧ್ವಾಲ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಅರ್ಧಶತಕದ ಅಂಚಿನಲ್ಲಿದ್ದ ಸಾಯಿ ಸುದರ್ಶನ್ ಕೂಡ ಔಟಾದರು. 31 ಎಸೆತಗಳಲ್ಲಿ 43 ರನ್ ಬಾರಿಸಿದರು.
ಬೃಹತ್ ಮೊತ್ತ
ಕೊನೆಯಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ, 13 ಎಸೆತಗಳಲ್ಲಿ ಅಜೇಯ 28 ರನ್ ಚಚ್ಚಿದರು. ರಶೀದ್ ಖಾನ್ ಅಜೇಯ 5 ರನ್ ಗಳಿಸಿದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು.
ಆರೆಂಜ್ ಕ್ಯಾಪ್ ವಶಪಡಿಸಿಕೊಂಡ ಶುಭ್ಮನ್
ಆರ್ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಬಳಿಯಿದ್ದ ಆರೆಂಜ್ ಕ್ಯಾಪ್ ಅನ್ನು ಗಿಲ್ ತಾನು ವಶಪಡಿಸಿಕೊಂಡಿದ್ದಾರೆ. ಡು ಪ್ಲೆಸಿಸ್ ಈ ಟೂರ್ನಿಯಲ್ಲಿ 730 ರನ್ ಗಳಿಸಿದ್ದರು. ಶತಕ ಇನ್ನಿಂಗ್ಸ್ಗೂ ಮುನ್ನ ಗಿಲ್, 722 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ 9 ರನ್ ಗಳಿಸಿದ್ದಾಗ ಆರೆಂಜ್ ಕ್ಯಾಪ್ ಅನ್ನು ಸ್ವಂತವಾಗಿಸಿಕೊಂಡಿದ್ದಾರೆ. ಸದ್ಯ ಗಿಲ್ 16 ಪಂದ್ಯಗಳಲ್ಲಿ 61ರ ಸರಾಸರಿಯಲ್ಲಿ 851 ರನ್ ಗಳಿಸಿದ್ದಾರೆ.
ವಿಭಾಗ