ಕನ್ನಡ ಸುದ್ದಿ  /  Sports  /  Cricket News Here Is Why Bcci Ignore Wriddhiman Saha And Pick Ishan Kishan For World Test Championship Final Wtc Jra

WTC final: ವೃದ್ಧಿಮಾನ್ ಸಾಹಾ ಬದಲಿಯಾಗಿ ಇಶಾನ್ ಕಿಶನ್ ಆಯ್ಕೆ ಆಗಿದ್ದೇಕೆ; ಕಾರಣ ಬಹಿರಂಗ

World Test Championship final: ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಎರಡನೇ ವಿಕೆಟ್ ಕೀಪರ್ ಪಾತ್ರದ ಚರ್ಚೆಯ ಸಮಯದಲ್ಲಿ ಸಾಹಾ ಅವರ ಹೆಸರು ಚರ್ಚೆಗೂ ಬಂದಿಲ್ಲ ಎಂದು ವರದಿ ತಿಳಿಸಿದೆ.

ವೃದ್ಧಿಮಾನ್ ಸಹಾ, ಇಶಾನ್ ಕಿಶನ್
ವೃದ್ಧಿಮಾನ್ ಸಹಾ, ಇಶಾನ್ ಕಿಶನ್

ಐಪಿಎಲ್ ಪಂದ್ಯದ ವೇಳೆ ಬಲ ತೊಡೆಯ ಗಾಯಕ್ಕೆ ತುತ್ತಾದ ಕೆಎಲ್ ರಾಹುಲ್, ಬಳಿಕ ಪ್ರಸಕ್ತ ಆವೃತ್ತಿಯ ಲೀಗ್‌ನಿಂದ ಹೊರಬಿದ್ದರು. ಅದಾದ ಬೆನ್ನಲ್ಲೇ, ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಿಂದಲೂ ಹೊರಗುಳಿದರು. ಹೀಗಾಗಿ ಕನ್ನಡಿಗನ ಬದಲಿಗೆ ಇಶಾನ್ ಕಿಶನ್ ಅವರನ್ನು ಡಬ್ಲ್ಯೂಟಿಸಿ ಫೈನಲ್‌ಗೆ ಬಿಸಿಸಿಐ ಆಯ್ಕೆ ಸಮಿತಿ ಹೆಸರಿಸಿದೆ.

ಕಳೆದ ವಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಲಖನೌ ಸೂಪರ್ ಜೈಂಟ್ಸ್ ನಾಯಕ ರಾಹುಲ್ ಗಾಯಗೊಂಡರು. ರಾಹುಲ್‌ ಬದಲಿಗೆ ಅನುಭವಿ ಆಟಗಾರ ವೃದ್ಧಿಮಾನ್ ಸಹಾ ಅವರನ್ನು ಟೆಸ್ಟ್‌ ತಂಡಕ್ಕೆ ಆಯ್ಕೆ ಮಾಡಬಹುದು ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬಂತು. ಆದರೆ, ಅಂತಿಮವಾಗಿ ರಾಹುಲ್‌ಗೆ ಬದಲಿಯಾಗಿ ಇಶಾನ್ ಅವರನ್ನು ಘೋಷಿಸಲಾಗಿದೆ. ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಇತ್ತೀಚಿನ ವರದಿಯು ಈ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದೆ.

2021ರ ಡಿಸೆಂಬರ್ ತಿಂಗಳಲ್ಲಿ ವಾಂಖೆಡೆ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಸಹಾ, ಐಪಿಎಲ್ 2023ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದರಲ್ಲಿ ಅವರ ವಿಕೆಟ್ ಕೀಪಿಂಗ್ ಕೂಡ ಸೇರಿದೆ. ಹೀಗಾಗಿ ಡಬ್ಲ್ಯುಟಿಸಿ ಫೈನಲ್‌ಗೆ ಇವರು ಆಯ್ಕೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಅತ್ತ, ಅನುಭವದ ಆಧಾರದ ಮೇಲೆ ಆಯ್ಕೆದಾರರು ಅಜಿಂಕ್ಯ ರಹಾನೆಗೆ ಮಣೆ ಹಾಕಿದ್ದು, ಸಹಾ ಅವರ ವಿಷಯದಲ್ಲೂ ಇದೇ ರೀತಿ ಆಗಬಹುದು ಎಂದು ನೆಟ್ಟಿಗರು ಚರ್ಚಿಸಿದ್ದಾರೆ.

ಆದಾಗ್ಯೂ, ಹಂಗಾಮಿ ಮುಖ್ಯಸ್ಥ ಶಿವಸುಂದರ್ ದಾಸ್ ನೇತೃತ್ವದ ಆಯ್ಕೆ ಸಮಿತಿಯು ಈ ಸ್ಥಾನಕ್ಕೆ ಇಶಾನ್ ಆಯ್ಕೆಯನ್ನು ಬೆಂಬಲಿಸಿದೆ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಬ್ಯಾಕ್-ಅಪ್ ವಿಕೆಟ್ ಕೀಪಿಂಗ್ ಆಯ್ಕೆಯಾಗಿಯೂ ಇಶಾನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಹೀಗಾಗಿ ಮತ್ತೆ ಅವರನ್ನೇ ಆಯ್ಕೆ ಮಾಡಲಾಗಿದೆ. ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಎರಡನೇ ವಿಕೆಟ್ ಕೀಪರ್ ಪಾತ್ರದ ಚರ್ಚೆಯ ಸಮಯದಲ್ಲಿ ಸಾಹಾ ಅವರ ಹೆಸರು ಚರ್ಚೆಗೆ ತೆಗೆದುಕೊಳ್ಳಲಾಗಿಲ್ಲ ಎಂದು ಸುದ್ದಿಸಂಸ್ಥೆ ಪಿಟಿಐ ವರದಿಯಲ್ಲಿ ವಿವರಿಸಿದೆ.

"ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ, ಕಿಶನ್‌ ಎರಡನೇ ಕೀಪರ್ ಆಯ್ಕೆ ಆಗಿದ್ದರು. ವೃದ್ಧಿಮಾನ್ ಸಹಾ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ," ಎಂದು ಬೆಳವಣಿಗೆಯ ಬಲ್ಲ ಮೂಲವೊಂದು ಪಿಟಿಐಗೆ ತಿಳಿಸಿದೆ.

ಮತ್ತೊಂದೆಡೆ, ಭಾರತ ಎ ತಂಡದ ನಾಯಕ ಅಭಿಮನ್ಯು ಈಶ್ವರನ್ ಸ್ಟ್ಯಾಂಡ್-ಬೈ ಲಿಸ್ಟ್‌ಗೂ ಆಯ್ಕೆಯಾಗಿರುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಈ ಪಟ್ಟಿಯಲ್ಲಿ ಮುಖೇಶ್ ಕುಮಾರ್ ಮತ್ತು ಸೂರ್ಯಕುಮಾರ್ ಯಾದವ್ ಅವರೊಂದಿಗೆ ರುತುರಾಜ್ ಗಾಯಕ್ವಾಡ್ ಸ್ಥಾನ ಪಡೆದಿದ್ದಾರೆ. ಇಂಡಿಯಾ ಎ ಪರ ಈಶ್ವರನ್ ಅವರ ದಾಖಲೆಯನ್ನು ಅಭಿಮಾನಿಗಳು ಉಲ್ಲೇಖಿಸಿದ್ದಾರೆ.

ಪಿಟಿಐ ವರದಿಯ ಪ್ರಕಾರ ಈಶ್ವರನ್ ಆಯ್ಕೆಯಾಗದಿರಲು ಪ್ರಮುಖ ಕಾರಣಗಳೆಂದರೆ, ಐಪಿಎಲ್‌ನಲ್ಲಿ ಯಾವುದೇ ಫ್ರಾಂಚೈಸಿ ಪರ ಕಣಕ್ಕಿಳಿಯಲು ವಿಫಲರಾಗಿರುವುದು. ಅಲ್ಲದೆ ಕಳೆದೆರಡು ಋತುಗಳಲ್ಲಿ ಬಂಗಾಳ ಪರ ಪ್ರಮುಖ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದಿರುವುದು.

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಇಶಾನ್ ಕಿಶನ್ (ವಿಕೆಟ್‌ ಕೀಪರ್).

ಸ್ಟ್ಯಾಂಡ್‌ಬೈ ಆಟಗಾರರು: ರುತುರಾಜ್ ಗಾಯಕ್‌ವಾಡ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.