ಕನ್ನಡ ಸುದ್ದಿ  /  Sports  /  Cricket News Highest Runs In Ipl 2023 Orange Cap Winners Shubman Gill Ipl Century Virat Kohli Indian Premier League Jra

Orange Cap: ದಾಖಲೆಯ ಶತಕದಾಟ; ಆರೇಂಜ್ ಕ್ಯಾಪ್ ಶುಬ್ಮನ್ ಗಿಲ್ ಕೈಸೇರೋದು ಖಚಿತ

Highest runs in IPL 2023: ಐಪಿಎಲ್‌ನ 16ನೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನಾಗಿ ಗುಜರಾತ್‌ ಟೈಟಾನ್ಸ್‌ ತಂಡದ ಬ್ಯಾಟರ್‌ ಶುಬ್ಮನ್‌ ಗಿಲ್‌ ಹೊರಹೊಮ್ಮಿದ್ದಾರೆ. ಇವರು ಫೈನಲ್‌ ಪಂದ್ಯಕ್ಕೂ ಮುನ್ನವೇ ಆರೇಂಜ್‌ ಕ್ಯಾಪ್‌ ಗೆಲ್ಲುವ ಫೇವರೆಟ್‌ ಆಟಗಾರನಾಗಿದ್ದಾರೆ.

ಗುಜರಾತ್‌ ಟೈಟಾನ್ಸ್‌ ತಂಡದ ಬ್ಯಾಟರ್‌ ಶುಬ್ಮನ್‌ ಗಿಲ್
ಗುಜರಾತ್‌ ಟೈಟಾನ್ಸ್‌ ತಂಡದ ಬ್ಯಾಟರ್‌ ಶುಬ್ಮನ್‌ ಗಿಲ್ (AP)

ಐಪಿಎಲ್‌ನ (IPL 2023) ಪ್ರಸಕ್ತ ಆವೃತ್ತಿಯು ಮುಕ್ತಾಯದ ಹಂತಕ್ಕೆ ಬಂದಿದೆ. ಇದೇ ಭಾನುವಾರ (ಮೇ 28) ಐಪಿಎಲ್ 16ನೇ ಆವೃತ್ತಿಯ ಅದ್ಧೂರಿ ಫೈನಲ್‌ ಪಂದ್ಯ ನಡೆಯಲಿದೆ. ಶನಿವಾರ (ಮೇ 26) ನಡೆದ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಪ್ರಬಲ ಗೆಲುವು ಸಾಧಿಸಿದ ಗುಜರಾತ್ ಟೈಟಾನ್ಸ್‌ (Gujarat Titans) ತಂಡವು, ಸತತ ಎರಡನೇ ಬಾರಿ ಫೈನಲ್ ಪ್ರವೇಶಿಸಿದೆ. ಆ ಮೂಲಕ ಸತತ ಎರಡನೇ ಐಪಿಎಲ್‌ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ.(ಐಪಿಎಲ್‌ 2023)

ಫೈನಲ್‌ ಪಂದ್ಯ ನಡೆದು, ಐಪಿಎಲ್‌ನ 16ನೇ ಆವೃತ್ತಿಗೆ ತೆರೆ ಬೀಳಲು ಇನ್ನೂ ಒಂದು ದಿನ ಬಾಕಿ ಉಳಿದಿದೆ. ಆದರೆ, ಅದಾಗಲೇ ಈ ಬಾರಿಯ ಆರೇಂಜ್‌ ಕ್ಯಾಪ್‌ ಯಾರ ತಲೆ ಸೇರಲಿದೆ ಎಂಬುದು ಖಚಿತವಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ, ಗುಜರಾತ್‌ ತಂಡದ ಆರಂಬಿಕ ಬ್ಯಾಟರ್‌ ಶುಬ್ಮನ್‌ ಗಿಲ್‌ ಮತ್ತೊಮ್ಮೆ ಅಬ್ಬರಿಸಿದರು. ಎರಡು ವಾರಗಳ ಹಿಂದೆ ಅವರು ತಮ್ಮ ಚೊಚ್ಚಲ ಐಪಿಎಲ್ ಶತಕ ಸಿಡಿಸಿದ ತಮ್ಮ ನೆಚ್ಚಿನ ಮೈದಾನದಲ್ಲೇ, ಮತ್ತೊಮ್ಮೆ ಮೂರಂಕಿ ಗಡಿ ದಾಟಿದರು. ಈ ಶತಕದೊಂದಿಗೆ ಗಿಲ್‌ ಐಪಿಎಲ್‌ನಲ್ಲಿ ಮಹತ್ವದ ದಾಖಲೆ ಬರೆದಿದ್ದಾರೆ. ಅಲ್ಲದೆ, ಪ್ರಸಕ್ತ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಆರೇಂಜ್ ಕ್ಯಾಪ್‌ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಸದ್ಯ, ಶುಬ್ಮನ್‌ ಗಿಲ್‌ ಪ್ರಸಕ್ತ ಆವೃತ್ತಿಯಲ್ಲಿ ಬರೋಬ್ಬರಿ 851 ರನ್‌ ಗಳಿಸುವ ಮೂಲಕ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರ ಬಳಿಕ ಎರಡು ಹಾಗೂ ಮೂರನೇ ಸ್ಥಾನಗಳಲ್ಲಿ ಆರ್‌ಸಿಬಿಯ ಫಾಫ್‌ ಡುಪ್ಲೆಸಿಸ್‌ ಹಾಗೂ ವಿರಾಟ್‌ ಕೊಹ್ಲಿ ಇದ್ದಾರೆ. ಅವರ ಬ್ಯಾಟ್‌ನಿಂದ ಕ್ರಮವಾಗಿ 730 ಹಾಗೂ 639 ರನ್‌ಗಳು ಬಂದಿವೆ. ಆದರೆ, ಪ್ರಸಕ್ತ ಆವೃತ್ತಿಯಲ್ಲಿ ಆರ್‌ಸಿಬಿ ಪಂದ್ಯಗಳು ಮುಗಿದಿರುವುದರಿಂದ, ಗಿಲ್ ಅವರನ್ನು ಹಿಂದಿಕ್ಕಲು ಇವರಿಗೆ ಅವಕಾಶವೇ ಇಲ್ಲ. ಸದ್ಯ ಗುಜರಾತ್‌ ಹೊರತುಪಡಿಸಿದರೆ, ಸಿಎಸ್‌ಕೆ ತಂಡದ ಆಟಗಾರರಿಗೆ ಮಾತ್ರ ಫೈನಲ್‌ ಪಂದ್ಯ ಆಡುವ ಮೂಲಕ ಶುಬ್ಮನ್‌ ಮೀರಿಸುವ ಅವಕಾಶವಿದೆ.

ಸಿಎಸ್‌ಕೆ ತಂಡದ ಡಿವೋನ್ ಕಾನ್ವೆ, ಪ್ರಸ್ತುತ ಆರೇಂಜ್‌ ಕ್ಯಾಪ್‌ ರೇಸ್‌ನಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇವರ ರನ್‌ ಗಳಿಕೆ 625. ಆದರೆ, ಗಿಲ್‌ಗೆ ಸರಿಸಮನನಾಗಿ ನಿಲ್ಲಲು ಕಾನ್ವೆಗೆ ಇನ್ನೂ 226 ರನ್‌ಗಳ ಅವಶ್ಯಕತೆ ಇದೆ. ಒಂದು ಪಂದ್ಯದಲ್ಲಿ ಒಬ್ಬ ಆಟಗಾರ ಇಷ್ಟು ದೊಡ್ಡ ಮೊತ್ತ ಗಳಿಸುವುದು ಬಹುತೇಕ ಅಸಾಧ್ಯ. ಅಲ್ಲದೆ ಗಿಲ್‌ ಅವರಿಗೂ ಒಂದು ಅವಕಾಶ ಇರುವುದರಿಂದ ಅವರು ಕೂಡಾ ಹೆಚ್ಚಿನ ರನ್‌ ಗಳಿಸುವ ಸಾಧ್ಯತೆ ಇದೆ. ಸದ್ಯ ಶುಬ್ಮನ್‌ ಗಿಲ್‌ಗೆ ಪೈಪೋಟಿ ಒಡ್ಡುವ ಬೇರೆ ಆಟಗಾರರೇ ಇಲ್ಲದ ಕಾರಣ, ಅವರು ಪ್ರಸಕ್ತ ಆವೃತ್ತಿಯಲ್ಲಿ ಆರೇಂಜ್‌ ಕ್ಯಾಪ್‌ ಗೆಲ್ಲುವುದು ಖಚಿತವೆನಿಸಿದೆ.

ಗಿಲ್‌ ದಾಖಲೆಯಾಟ

ಮುಂಬೈ ವಿರುದ್ಧ ಅದ್ಭುತ ಶತಕ ಸಿಡಿಸಿದ ಗಿಲ್, ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಇರುವ ದಾಖಲೆಯ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಸದ್ಯ ಪ್ರಸಕ್ತ ಆವೃತ್ತಿಯಲ್ಲಿ ಗಿಲ್‌ ಮೂರು ಶತಕಗಳನ್ನು ಸಿಡಿಸಿದ್ದಾರೆ. ಈ ಹಿಂದೆ 2016ರ ಆವೃತ್ತಿಯಲ್ಲಿ ವಿರಾಟ್‌ ಕೊಹ್ಲಿ ದಾಖಲೆಯ ನಾಲ್ಕು ಶತಕಗಳನ್ನು ಸಿಡಿಸಿದ್ದರು. ಅದಾದ ಬಳಿಕ, ಒಂದೇ ಋತುವಿನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಸಿಡಿಸಿದ ಎರಡನೇ ಭಾರತೀಯ ಎಂಬ ದಾಖಲೆಗೆ ಗಿಲ್‌ ಪಾತ್ರರಾಗಿದ್ದಾರೆ. ಕಳೆದ (2022) ಋತುವಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಬ್ಯಾಟರ್‌ ಜೋಸ್ ಬಟ್ಲರ್ ಕೂಡಾ ನಾಲ್ಕು ಶತಕಗಳನ್ನು ಸಿಡಿಸಿ ವಿರಾಟ್‌ ದಾಖಲೆಯನ್ನು ಸರಿಗಟ್ಟಿದ್ದರು. ಹೀಗಾಗಿ ಒಂದೇ ಆವೃತ್ತಿಯಲ್ಲಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಗಿಲ್ ಮೂರನೇ ಸ್ಥಾನ ಪಡೆದಿದ್ದಾರೆ.

ಕೊಹ್ಲಿಯ ಮತ್ತೊಂದು ದಾಖಲೆ ಬ್ರೇಕ್‌ ಮಾಡ್ತಾರಾ ಗಿಲ್

2016ರಲ್ಲಿ ಕೊಹ್ಲಿ ದಾಖಲೆಯ 973 ರನ್ ಗಳಿಸಿದ್ದರು. ಅದಾದ ಬಳಿಕ ಒಂದೇ ಋತುವಿನಲ್ಲಿ 800 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟರ್ ಆಗಿ ಗಿಲ್‌ ಹೊರಹೊಮ್ಮಿದ್ದಾರೆ. ಬಟ್ಲರ್ ಕಳೆದ ಆವೃತ್ತಿಯಲ್ಲಿ 863 ರನ್ ಸಿಡಿಸಿದ್ದರು. ಹೀಗಾಗಿ ಗಿಲ್‌ ಈ ಪಟ್ಟಿಯಲ್ಲಿಯೂ ಮೂರನೇ ಸ್ಥಾನದಲ್ಲಿದ್ದಾರೆ. ಸದ್ಯ ಗಿಲ್‌ ಮುಂದೆ ಒಂದು ಪಂದ್ಯ ಬಾಕಿ ಉಳಿದಿದ್ದು, ಇಲ್ಲಿ ಬಟ್ಲರ್‌ ಹಾಗೂ ಕೊಹ್ಲಿಯನ್ನು ಹಿಂದಿಕ್ಕುವ ಅವಕಾಶವಿದೆ. ಸದ್ಯ 851 ರನ್‌ ಗಳಿಸಿರುವ ಅವರು, ಫೈನಲ್‌ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿದರೆ, ಎರಡೆರಡು ದಾಖಲೆ ನಿರ್ಮಿಸಲಿದ್ದಾರೆ.