ಕನ್ನಡ ಸುದ್ದಿ  /  Sports  /  Cricket News I Couldn T Sleep Mohit Sharma Opens Up On Heart Breaking Last Over Vs Chennai Super Kings Ipl Final Prs

Mohit Sharma: ಆ ರಾತ್ರಿ ನಿದ್ದೆಯೇ ಬರಲಿಲ್ಲ, ನನ್ನಿಂದಲೇ ಪಂದ್ಯ ಸೋತಿದ್ದು; ಸಿಎಸ್‌ಕೆ ವಿರುದ್ಧದ ಫೈನಲ್‌ ಬಳಿಕ ಮೋಹಿತ್​ ಶರ್ಮಾ ಬೇಸರ

ಫೈನಲ್​ನಲ್ಲಿ ಚೆನ್ನೈ ವಿರುದ್ಧ ಪಂದ್ಯದ ಬಳಿಕ ತಾನು ಅನುಭವಿಸಿದ ಮಾನಸಿಕ ವೇದನೆ ಕುರಿತು ಗುಜರಾತ್​ ಟೈಟಾನ್ಸ್​ ವೇಗದ ಬೌಲರ್​ ಮೋಹಿತ್​ ಶರ್ಮಾ ಮಾತನಾಡಿದ್ದಾರೆ. ಫೈನಲ್​​​​ ಓವರ್​​ನಲ್ಲಿ ತಾನು ಹಾಕಿಕೊಂಡಿದ್ದ ಗೇಮ್​ ಪ್ಲಾನ್​ ಬಗ್ಗೆ ಹೇಳಿಕೊಂಡಿದ್ದಾರೆ.

ಗುಜರಾತ್​ ಟೈಟಾನ್ಸ್​ ತಂಡದ ವೇಗಿ ಮೋಹಿತ್​ ಶರ್ಮಾ
ಗುಜರಾತ್​ ಟೈಟಾನ್ಸ್​ ತಂಡದ ವೇಗಿ ಮೋಹಿತ್​ ಶರ್ಮಾ

ಕ್ರಿಕೆಟ್​​​ನಲ್ಲಿ ಯಾವಾಗ ಯಾರು ಹೀರೋ ಆಗುತ್ತಾರೆ, ಯಾರು ವಿಲನ್​ ಆಗುತ್ತಾರೆ ಎಂಬುದು ನಮಗೆ ತಿಳಿದಿರುವುದಿಲ್ಲ. ಕ್ರಿಕೆಟ್​​ನಲ್ಲಿ ಸೋಲು ಗೆಲುವು ಸಹಜ. ಇತ್ತೀಚೆಗೆ ಮುಕ್ತಾಯವಾದ 16ನೇ ಆವೃತ್ತಿಯ ಐಪಿಎಲ್​​ನಲ್ಲಿ ಇಂತಹ ಘಟನೆಗಳು ನಡೆದಿದ್ದೂ ಇದೆ. ರಿಂಕು ಸಿಂಗ್ (Rinku Singh)​ ಅವರು ಯಶ್​ ದಯಾಳ್ (Yash Dayal)​ ಬೌಲಿಂಗ್​​ನಲ್ಲಿ 5 ಸಿಕ್ಸರ್​​ ಸಿಡಿಸಿ ಗೆಲುವು ತಂದುಕೊಟ್ಟು ಹೀರೋ ಆದರೆ, ಬೌಲರ್​​ ಮಾತ್ರ ವಿಲನ್​​ ಆದರು.

ಇಂತಹದ್ದೇ ಘಟನೆ ಐಪಿಎಲ್​ ಫೈನಲ್​ ಪಂದ್ಯದಲ್ಲೂ (IPL Final Match) ನಡೆಯಿತು. ಚೆನ್ನೈ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja), ಅಂತಿಮ 2 ಎಸೆತಗಳಲ್ಲಿ ಸಿಕ್ಸರ್​​ ಮತ್ತು ಬೌಂಡರಿ ಬಾರಿಸಿ, ಫ್ಯಾನ್ಸ್​ ಪಾಲಿನ ಹೀರೋ ಆದರು. ಟೂರ್ನಿಯುದ್ದಕ್ಕೂ ಅದ್ಭುತ ಬೌಲಿಂಗ್​ ಮಾಡಿದ್ದ ಗುಜರಾತ್​ ಟೈಟಾನ್ಸ್​ ವೇಗಿ ಮೋಹಿತ್​ ಶರ್ಮಾ (Gujarat Titans bowler Mohit Sharma) ಕೊನೆಯ 2 ಬಾಲ್​ಗಳಲ್ಲಿ ಬೌಂಡರಿ ನೀಡಿ, ವಿಲನ್​ ಆದರು. ಮೊದಲ 4 ಎಸೆತಗಳಲ್ಲಿ ಕೇವಲ 3 ರನ್‌ ಕೊಟ್ಟಿದ್ದರು. ಆದರೆ ಗೆದ್ದೇ ಬಿಟ್ಟರು ಎನ್ನುವ ಸಂದರ್ಭದಲ್ಲಿ ಮೋಹಿತ್‌ ಶರ್ಮಾ ಬೌಂಡರಿ-ಸಿಕ್ಸರ್​ ನೀಡಿ ಫ್ಯಾನ್ಸ್​ ವಿಲನ್ ಆದರು.

ಮೌನ ಮುರಿದ ಮೋಹಿತ್​ ಶರ್ಮಾ

ರೋಚಕ ಹಣಾಹಣಿಯಲ್ಲಿ ಕೊನೆಯ 2 ಎಸೆತಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್​​ ಗೆಲುವು ಸಾಧಿಸುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ಆದರೆ ರವೀಂದ್ರ ಜಡೇಜಾ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿಬಿಟ್ಟರು. ನಿಖರ ಯಾರ್ಕರ್​ಗಳನ್ನು ಎಸೆದಿದ್ದ ವೇಗಿ ಮೋಹಿತ್​ ಶರ್ಮಾ, ಕೊನೆ ಎಸೆತಗಳಲ್ಲಿ ಆತ್ಮವಿಶ್ವಾಸ ಕಳೆದುಕೊಂಡರು. ಇದರ ಲಾಭ ಪಡೆದ ಜಡ್ಡು, ಒತ್ತಡ ನಿಭಾಯಿಸಿ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟರು. ಸದ್ಯ ಈ ಬಗ್ಗೆ ಮೌನ ಮುರಿದಿರುವ ಮೋಹಿತ್​ ಶರ್ಮಾ, ಫೈನಲ್​ ಪಂದ್ಯದ ನಂತರ ನಿದ್ದೆ ಬರಲಿಲ್ಲ ಎಂದಿದ್ದಾರೆ.

ನನ್ನಿಂದಲೇ ಪಂದ್ಯ ಸೋತಿದ್ದು

ಫೈನಲ್​ನಲ್ಲಿ ಚೆನ್ನೈ ವಿರುದ್ಧ ಪಂದ್ಯದ ಬಳಿಕ ತಾನು ಅನುಭವಿಸಿದ ಮಾನಸಿಕ ವೇದನೆ ಕುರಿತು ಮಾತನಾಡಿದ್ದಾರೆ. ಫೈನಲ್​​​​ ಓವರ್​​ನಲ್ಲಿ ತಾನು ಹಾಕಿಕೊಂಡಿದ್ದ ಗೇಮ್​ ಪ್ಲಾನ್​ ಬಗ್ಗೆ ಮಾತನಾಡಿದ್ದಾರೆ. ಅಂತಿಮ ಓವರ್​ನಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ನನಗೆ ಗೊಂದಲ ಇರಲಿಲ್ಲ. ನೆಟ್ಸ್​​​ನಲ್ಲೂ ಲೆಕ್ಕಾಚಾರ ಹಾಕಿಕೊಂಡು ಅಭ್ಯಾಸ ಮಾಡಿದ್ದೆ. ಈ ಹಿಂದೆಯೂ ಇಂತಹ ಒತ್ತಡಗಳಲ್ಲಿ ಬೌಲಿಂಗ್​ ಮಾಡಿದ ಅನುಭವ ನನಗಿತ್ತು. ನಾಯಕ ಹಾರ್ದಿಕ್​ ಪಾಂಡ್ಯಗೆ ಓವರ್​​​ನ ಎಲ್ಲಾ ಬಾಲ್​​ಗಳನ್ನೂ ಯಾರ್ಕರ್ ಹಾಕುತ್ತೇನೆ ಎಂದು ಹೇಳಿದ್ದೆ. ನನ್ನ ಬಲವಾದ ನಂಬಿಕೆಯಿಂದ ಬೌಲಿಂಗ್‌ ಮಾಡಿದ್ದೆ ಎಂದು ಹೇಳಿದ್ದಾರೆ.

ಆದರೆ ನನ್ನಿಂದ ಸೋಲಾಗಿದ್ದು, ಬೇಸರ ಉಂಟು ಮಾಡಿತು. ಸೋತ ನಂತರ ನನಗೆ ಆ ರಾತ್ರಿ ನಿದ್ದೆ ಬರಲಿಲ್ಲ. ಸೋತಿದ್ದನ್ನೇ ಹೆಚ್ಚು ಯೋಚಿಸುತ್ತಿದ್ದೆ. ಕೊನೆಯಲ್ಲಿ ಆ ಎಸೆತ ಎಸೆದಿದ್ದರೆ ನಾವು ಗೆಲ್ಲುತ್ತಿದ್ದೆವಾ? ಹೀಗೆ ಮಾಡಿದ್ದರೆ, ಗೆಲ್ಲುತ್ತಿದ್ದೆವಾ ಎಂಬುದನ್ನೇ ಹೆಚ್ಚು ಯೋಚಿಸುತ್ತಿದ್ದೆ. ಇದು ನಿಜವಾಗಿಯೂ ಒಳ್ಳೆಯ ಭಾವನೆ ಅಲ್ಲ. ಆದರೆ ಎಲ್ಲೋ ಒಂದು ಕಡೆ ನನ್ನಿಂದಲೇ ಸೋತಿದ್ದು, ಎನಿಸುತ್ತಿದೆ. ಸದ್ಯ ಅದರಿಂದ ಹೊರ ಬರಲು ಯತ್ನಿಸುತ್ತಿದ್ದೇನೆ ಎಂದಿದ್ದಾರೆ.

ಐಪಿಎಲ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮೋಹಿತ್​ ಶರ್ಮಾ ಪರ್ಪಲ್​ ಕ್ಯಾಪ್​ ರೇಸ್​ನಲ್ಲಿದ್ದರು. 14 ಪಂದ್ಯಗಳಲ್ಲಿ 27 ವಿಕೆಟ್​ ಪಡೆದಿದ್ದರು. ಇದರೊಂದಿಗೆ 1 ವಿಕೆಟ್​ ಅಂತರದಿಂದ ಪರ್ಪಲ್​ ಕ್ಯಾಪ್​ನಿಂದ ವಂಚಿತರಾದರು. ಫೈನಲ್​ ಪಂದ್ಯದಲ್ಲೂ ಪ್ರಮುಖ 3 ವಿಕೆಟ್​ ಉರುಳಿಸಿ ಗಮನ ಸೆಳೆದಿದ್ದರು.