Aakash Chopra: ಎಷ್ಟೇ ಅದ್ಭುತವಾಗಿ ಆಡಿದರೂ ಅಜಿಂಕ್ಯ ರಹಾನೆ ಸ್ಥಾನ ಸಿಮೆಂಟ್​ನಂತೆ ಭದ್ರವಲ್ಲ; ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಭವಿಷ್ಯ
ಕನ್ನಡ ಸುದ್ದಿ  /  ಕ್ರೀಡೆ  /  Aakash Chopra: ಎಷ್ಟೇ ಅದ್ಭುತವಾಗಿ ಆಡಿದರೂ ಅಜಿಂಕ್ಯ ರಹಾನೆ ಸ್ಥಾನ ಸಿಮೆಂಟ್​ನಂತೆ ಭದ್ರವಲ್ಲ; ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಭವಿಷ್ಯ

Aakash Chopra: ಎಷ್ಟೇ ಅದ್ಭುತವಾಗಿ ಆಡಿದರೂ ಅಜಿಂಕ್ಯ ರಹಾನೆ ಸ್ಥಾನ ಸಿಮೆಂಟ್​ನಂತೆ ಭದ್ರವಲ್ಲ; ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಭವಿಷ್ಯ

Aakash Chopra: ಶ್ರೇಯಸ್ ಅಯ್ಯರ್ ಮತ್ತು ರಾಹುಲ್​ ಗಾಯಗೊಂಡಿದ್ದ ಕಾರಣ, ಬೇರೆ ಯಾವುದೇ ಅವಕಾಶಗಳು ಇಲ್ಲದೆ, ಆಯ್ಕೆದಾರರು ರಹಾನೆಯನ್ನು ತಂಡಕ್ಕೆ ಆಯ್ಕೆ ಮಾಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

ಅಜಿಂಕ್ಯ ರಹಾನೆ ಕುರಿತು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಭವಿಷ್ಯ
ಅಜಿಂಕ್ಯ ರಹಾನೆ ಕುರಿತು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಭವಿಷ್ಯ

16ನೇ ಆವೃತ್ತಿಯ ಐಪಿಎಲ್​ನಲ್ಲಿ (IPL 2023) ಆರ್ಭಟಿಸಿ ಒಂದೂವರೆ ವರ್ಷದ ಬಳಿಕ ಭಾರತ ಟೆಸ್ಟ್​ ತಂಡದಲ್ಲಿ (Indian Test Team) ಸ್ಥಾನ ಪಡೆದಿದ್ದಲ್ಲದೆ, ಉಪನಾಯಕನ ಪಟ್ಟ ಹಿಂದಿರುಗಿಸಿಕೊಂಡ ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಅಜಿಂಕ್ಯ ರಹಾನೆ (Ajinkya Rahane) ಅವರು ಎಷ್ಟೇ ಚೆನ್ನಾಗಿ ಆಡಿದರೂ, ಉಳಿಗಾಲವಿಲ್ಲ. ಅವರ ಸ್ಥಾನಕ್ಕೆ ಸಿಮೆಂಟಿನಂತೆ ಗ್ಯಾರಂಟಿ ಇಡಲು ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ, ಕಾಮೆಂಟೇಟರ್​ ಆಕಾಶ್ ಚೋಪ್ರಾ (Aakash Chopra) ಭವಿಷ್ಯ ನುಡಿದಿದ್ದಾರೆ.

ರಹಾನೆಗೆ ಅವಕಾಶ ಕೊಟ್ಟಿದ್ದು ಈ ಕಾರಣಕ್ಕೆ

ಐಪಿಎಲ್​ 2023ರಲ್ಲಿ 172ರ ಸ್ಟ್ರೈಕ್​ರೇಟ್​​ನಲ್ಲಿ 326 ರನ್ ಕಲೆ ಹಾಕಿದ್ದರು. ಆದರೆ ಅದಕ್ಕೂ ಮುನ್ನ ನಡೆದ 2022-23ರ ರಣಜಿ ಟ್ರೋಫಿಯ (Ranji Trophy) ಆವೃತ್ತಿಯಲ್ಲಿ 57.63ರ ಬ್ಯಾಟಿಂಗ್​ ಸರಾಸರಿಯಲ್ಲಿ 634 ರನ್ ಗಳಿಸಿದ್ದರು. ಇಷ್ಟಾದರೂ ಆತನ ಮರುಪ್ರವೇಶಕ್ಕೆ ಈ ಪ್ರದರ್ಶನಕ್ಕಿಂತ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ಕೆಎಲ್ ರಾಹುಲ್ (KL Rahul)​ ಗಾಯಗೊಂಡಿದ್ದು ಪ್ರಮುಖ ಕಾರಣ ಎಂದು ತಮ್ಮ ಯೂಟ್ಯೂಟ್ ಚಾನೆಲ್​​ನಲ್ಲಿ ಮಾತನಾಡಿದ ಚೋಪ್ರಾ ತಿಳಿಸಿದ್ದಾರೆ.

‘ಫಿಟ್​ ಆಗಿದ್ದರೆ ರಹಾನೆ ಕಥೆ..’

ಶ್ರೇಯಸ್ ಅಯ್ಯರ್ ಮತ್ತು ರಾಹುಲ್​ ಗಾಯಗೊಂಡಿದ್ದ ಕಾರಣ, ಬೇರೆ ಯಾವುದೇ ಅವಕಾಶಗಳು ಇಲ್ಲದೆ, ಆಯ್ಕೆದಾರರು ರಹಾನೆಯನ್ನು ತಂಡಕ್ಕೆ ಆಯ್ಕೆ ಮಾಡಿದ್ದಾರೆ. ತಂಡದಲ್ಲಿ ಇರುವ ಆಟಗಾರರಿಗೆ ಹೋಲಿಸಿದರೆ, ಟೆಸ್ಟ್​ ನಾಯಕತ್ವದ ಅನುಭವ ಹೊಂದಿದ್ದರಿಂದ, ಅವರಿಗೆ ಉಪನಾಯಕನ ಪಟ್ಟ ಹಿಂತಿರುಗಿಸಿ ನೀಡಲಾಗಿದೆ. ಆ ಇಬ್ಬರು ಆಟಗಾರರು ಫಿಟ್ ಆಗಿದ್ದರೆ, ರಹಾನೆಗೆ ಸ್ಥಾನ ಸಿಗುತ್ತಿರುವುದೇ ಅನುಮಾನ ಎಂದು ಚೋಪ್ರಾ ಹೇಳಿದ್ದಾರೆ.

‘ಉಪನಾಯಕ ಎಂದಮಾತ್ರಕ್ಕೆ ಭದ್ರ ಎಂದಲ್ಲ’

ಅಜಿಂಕ್ಯ ರಹಾನೆ ಟೆಸ್ಟ್​​ ಕ್ರಿಕೆಟ್​ನಲ್ಲಿ ಉಪನಾಯಕನಾಗಿದ್ದರೂ, ಅವರ ಸ್ಥಾನಕ್ಕೆ ಗ್ಯಾರಂಟಿ ಇಲ್ಲ. 18 ತಿಂಗಳ ಬಳಿಕ ತಂಡಕ್ಕೆ ಮರು ಪ್ರವೇಶ ಪಡೆದ ನಂತರ ಡಬ್ಲ್ಯುಟಿಸಿ ಫೈನಲ್​​ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಪರಿಣಾಮ ಅವರಿಗೆ ವೈಸ್ ಕ್ಯಾಪ್ಟನ್ಸಿ ಕೊಟ್ಟಿದ್ದಾರೆ. ವೈಸ್​ ಕ್ಯಾಪ್ಟನ್​ ಆದ ಮಾತ್ರಕ್ಕೆ ತಂಡದಲ್ಲಿ ಸ್ಥಾನ ಭದ್ರವಾಗಿರುತ್ತದೆ ಎಂಬುದು ತಪ್ಪು. ಅವರ ಸ್ಥಾನಕ್ಕೆ ಉಳಿಗಾಲ ಇಲ್ಲ ಎಂದಿದ್ದಾರೆ ಕ್ರಿಕೆಟ್ ಕಾಮೆಂಟೇಟರ್​.

‘ನಿರಂತರ ರನ್​ ಗಳಿಸುತ್ತಲೇ ಇರಬೇಕು’

ವಿರಾಟ್ ಕೊಹ್ಲಿ ನಾಯಕನಾಗಿ, ರಹಾನೆ ಉಪನಾಯಕನಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಉಪನಾಯಕತ್ವದಿಂದ ರಹಾನೆ ಹೆಸರನ್ನು ಕಿತ್ತೊಗೆಯಲಾಗಿತ್ತು. ಆ ಬಳಿಕ ಟೆಸ್ಟ್​ ತಂಡದಿಂದಲೇ ದೂರ ಇಟ್ಟರು. ಇದೀಗ ಈ ಸರಣಿಗಳೂ ಅಷ್ಟೆ. ಒಂದು ವೇಳೆ ರಹಾನೆ ಸ್ಥಾನ ಕಾಪಾಡಿಕೊಳ್ಳಲು ಬಯಸಿದರೆ, ನಿರಂತರ ರನ್​ ಗಳಿಸುತ್ತಲೇ ಇರಬೇಕು ಎಂದು ಎಚ್ಚರಿಸಿದ್ದಾರೆ.

ಪೂಜಾರ ಉದಾಹರಣೆ ಕೊಟ್ಟ ಕಾಮೆಂಟೇಟರ್​​

ಇಲ್ಲವಾದರೆ, ಮೊದಲು ಉಪನಾಯಕತ್ವದ ಟ್ಯಾಗ್ ಕಿತ್ತು ಹಾಕುತ್ತಾರೆ. ನಂತರ ತಂಡದಿಂದ ದೂರ ಇಡುತ್ತಾರೆ. ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಫಿಟ್ ಆಗಿ ತಂಡಕ್ಕೆ ಮರಳಿದರೆ, ಅಜಿಂಕ್ಯ ರಹಾನೆ ಮುಂದುವರೆಯುತ್ತಾರೆ ಎಂಬುದು ಅನುಮಾನಾಸ್ಪದ ಎಂದು ರಹಾನೆ ಭವಿಷ್ಯದ ಆಕಾಶ್ ಚೋಪ್ರಾ ವಿವರಿಸಿದ್ದಾರೆ. ಜೊತೆಗೆ ಪೂಜಾರ ಅವರ ಉದಾಹರಣೆಯನ್ನೂ ಇಲ್ಲಿ ಉಲ್ಲೇಖಿಸಿದ್ದಾರೆ.

ಚೇತೇಶ್ವರ್ ಪೂಜಾರ (Cheteshwar Pujara) ನಂತರ ಈಗ ಸೆಲೆಕ್ಟರ್​ಗಳ ಗುರಿ ಇರುವುದು ರಹಾನೆ ಮೇಲೆ. ಬ್ಯಾಟಿಂಗ್​​ನಲ್ಲಿ ವಿಫಲರಾದರೆ, ಟೀಮ್​ನಿಂದ ದೂರ ಇಡಲು ಟೀಮ್​ ಮ್ಯಾನೇಜ್​​ಮೆಂಟ್​ ಯಾವುದೇ ರೀತಿಯ ಯೋಚನೆ ಮಾಡುವುದಿಲ್ಲ. ಹಾಗಾಗಿ ತಮ್ಮ ಸ್ಥಾನವನ್ನು ಸುಭದ್ರವಾಗಿಟ್ಟುಕೊಳ್ಳಲು ಜವಾಬ್ದಾರಿ ಆತನ ಮೇಲಿದೆ ಎಂದು ಕಾಮೆಂಟೇಟರ್ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.

Whats_app_banner