ಕನ್ನಡ ಸುದ್ದಿ  /  ಕ್ರೀಡೆ  /  Yashasvi Jaiswal New Flat: ಚೊಚ್ಚಲ ಶತಕದ ಬೆನ್ನಲ್ಲೇ ನೂತನ ಮನೆ ಖರೀದಿಸಿದ ಯಶಸ್ವಿ ಜೈಸ್ವಾಲ್; ಒಟ್ಟೊಟ್ಟಿಗೆ ಎರಡು ಕನಸು ನನಸು

Yashasvi Jaiswal New Flat: ಚೊಚ್ಚಲ ಶತಕದ ಬೆನ್ನಲ್ಲೇ ನೂತನ ಮನೆ ಖರೀದಿಸಿದ ಯಶಸ್ವಿ ಜೈಸ್ವಾಲ್; ಒಟ್ಟೊಟ್ಟಿಗೆ ಎರಡು ಕನಸು ನನಸು

Yashasvi Jaiswal New Flat: ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಡುವ ಕನಸು ನನಸು ಮಾಡಿಕೊಂಡ ಯಶಸ್ವಿ ಜೈಸ್ವಾಲ್, ಇದೀಗ ನೂತನ ಮನೆಯನ್ನೂ ಖರೀದಿಸಿದ್ದಾರೆ. ಆ ಮೂಲಕ ಮತ್ತೊಂದು ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಬಾಡಿಗೆ ಮನೆಯಿಂದ ನೂತನ ಮನೆಗೆ ಸ್ಥಳಾಂತರಗೊಂಡ ಯಶಸ್ವಿ ಜೈಸ್ವಾಲ್ ಕುಟುಂಬ.
ಬಾಡಿಗೆ ಮನೆಯಿಂದ ನೂತನ ಮನೆಗೆ ಸ್ಥಳಾಂತರಗೊಂಡ ಯಶಸ್ವಿ ಜೈಸ್ವಾಲ್ ಕುಟುಂಬ.

ಭಾರತದ ಕ್ರಿಕೆಟರ್​ ಆಗಬೇಕೆಂಬ ಕನಸೊತ್ತು ಉತ್ತರ ಪ್ರದೇಶದಿಂದ ಮುಂಬೈಗೆ ಬರಿಗೈಯಲ್ಲಿ ಬಂದಿದ್ದ 12 ವರ್ಷದ ಬಾಲಕನೊಬ್ಬ ಈಗ ಭಾರತ ತಂಡದ (Team India) ಪರ ಆಡಿ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾನೆ. ಶತಕ ಸಿಡಿಸಿ ತಮ್ಮ ಕನಸಿನ ಪಯಣವನ್ನು ಆರಂಭಿಸಿದ್ದಾನೆ.

ಟ್ರೆಂಡಿಂಗ್​ ಸುದ್ದಿ

ಇದರ ಬೆನ್ನಲ್ಲೇ ಮುಂಬೈನಲ್ಲಿ ಸ್ವಂತ ಮನೆ ಖರೀದಿಸುವ ಮೂಲಕ ಆತನ ಮತ್ತೊಂದು ಕನಸು ಸಹ ನನಸಾಗಿದೆ. ತನ್ನ ಎರಡೂ ಕನಸುಗಳನ್ನು ಒಟ್ಟೊಟ್ಟಿಗೆ ಈಡೇರಿಸಿಕೊಂಡ ಕ್ರಿಕೆಟಿಗನೇ ಯಶಸ್ವಿ ಜೈಸ್ವಾಲ್ (Yashasvi Jaiswal)​.

ಶತಕ ಸಿಡಿಸಿ ದಾಖಲೆ

ಜುಲೈ 12ರಂದು ನಡೆದ ವೆಸ್ಟ್​ ಇಂಡೀಸ್ (West Indies)​ ಎದುರಿನ ಟೆಸ್ಟ್​ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ಭಾರತದ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. ನಾಯಕ ಮತ್ತು ಕೋಚ್​ ಇಟ್ಟಿದ್ದ ನಂಬಿಕೆ ಉಳಿಸಿಕೊಳ್ಳುವುದು ಸವಾಲಾಗಿತ್ತು. ಆದರೆ ಮೈದಾನದಲ್ಲಿ ನಿರ್ಭೀತಿಯಿಂದ ಬ್ಯಾಟ್​ ಬೀಸಿದ ಯಶಸ್ವಿ, ಯಶಸ್ವಿಯಾಗೇ ರನ್​ ಗಳಿಸಿದರು. ಅದು 50, 100, 150ರ ಆಯಿತು. ಕೊನೆಗೆ 171 ರನ್ ಗಳಿಸಿ ಔಟಾದರು. ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದರು.

ಒಟ್ಟೊಟ್ಟಿಗೆ ಎರಡು ಕನಸು ನನಸು

ಮೂರಂಕಿ ದಾಟಿ ಸಂಭ್ರಮದಲ್ಲಿ ಮಿಂದೆದ್ದರ ನಡುವೆಯೂ ಮುಂಬೈನಲ್ಲಿ ಅವರ ಕುಟುಂಬವು ಹೊಸ ಮನೆಯೊಂದು ಖರೀದಿಸಿದೆ. ಮೊದಲು 2 ಬೆಡ್​ರೂಂಗಳ ಬಾಡಿಗೆ ಫ್ಲ್ಯಾಟ್​ನಿಂದ 5 ಬೆಡ್​ರೂಂಗಳ ಹೊಸ ಸ್ವಂತ ಫ್ಲ್ಯಾಟ್​​ಗೆ ಸ್ಥಳಾಂತರಗೊಂಡಿದೆ. ಈ ಅವಳಿ ಸಂಭ್ರಮದ ಬಗ್ಗೆ ಜೈಸ್ವಾಲ್​ ಸಹೋದರ ತೇಜಸ್ವಿ ಖುಷಿ ಹಂಚಿಕೊಂಡಿದ್ದಾರೆ. ಸ್ವಂತ ಮನೆಗೆ ಖರೀದಿಸಬೇಕು ಎಂಬುದು ಜೈಸ್ವಾಲ್​ ಕನಸು. ಆ ಆಸೆಯಂತೆ ಹೊಸ ಮನೆಗೆ ಸ್ಥಳಾಂತರಗೊಂಡಿದ್ದೇವೆ ಎಂದು ಹೇಳಿದ್ದಾರೆ.

ಮೊದಲೇ ನಿಶ್ಚಯಿಸಿದ್ದ

ಜೈಸ್ವಾಲ್​ ಕುಟುಂಬವು ಕಳೆದ ಎರಡು ವರ್ಷಗಳಿಂದಲೂ ಥಾಣೆಯ ಬಾಡಿಗೆ ಮನೆಯಲ್ಲಿತ್ತು. ಮುಂಬೈನಲ್ಲಿ 5 ಬಿಎಚ್‌ಕೆ ಫ್ಲಾಟ್‌ ಒಂದನ್ನು ಖರೀದಿಸಿರುವ ಜೈಸ್ವಾಲ್, ಮೊದಲಿದ್ದ 2 ಬೆಡ್‌ರೂಮ್‌ಗಳ ಬಾಡಿಗೆ ಮನೆಗೆ ಹೋಗಲಾರೆ ಎಂದು ನಿಶ್ಚಯಿಸಿದ್ದರು. ಬಾಲ್ಯದಿಂದಲೇ ಕಷ್ಟ ಎದುರಿಸಿದ ಈ ಯುವಕ, ಟೆಂಟ್‌ಗಳಲ್ಲಿ ಮಲಗಿ, ರಸ್ತೆಗಳ ಬಳಿ ಪಾನಿಪುರಿ ಮಾರುತ್ತಿದ್ದ. ಮರಗಳನ್ನು ಏರಿ ಐಪಿಎಲ್​​​ ಪಂದ್ಯಗಳನ್ನು ನೋಡುತ್ತಿದ್ದ. ಹಾಗಾಗಿ ಈ ಹುಡುಗನಿಗೆ ದಿನವೂ ಅಭ್ಯಾಸ ಮಾಡುತ್ತಿದ್ದ ಆಝಾದ್‌ ಮೈದಾನಕ್ಕೂ ಪ್ರವೇಶ ನಿರಾಕರಿಸಲಾಗಿತ್ತು.

ಕರೆ ಮಾಡಿದಾಗಲೆಲ್ಲಾ ಅದೇ ಮಾತು

ಡೊಮಿನಿಕಾದಲ್ಲಿ ತನ್ನ ಚೊಚ್ಚಲ ಪಂದ್ಯವನ್ನು ಆಡುತ್ತಿದ್ದರೂ, ಹೊಸ ಮನೆ ಖರೀದಿಸುವುದೇ ಚಿಂತೆಯಾಗಿತ್ತಂತೆ. ವೆಸ್ಟ್​ ಇಂಡೀಸ್​​ ಸರಣಿಗೆ ಪ್ರವಾಸ ಕೈಗೊಂಡಾಗಿನಿಂದಲೂ ನಾವು ಹೊಸ ಮನೆಗೆ ಖರೀದಿಸಬೇಕು. ಪ್ರತಿ ಸಲ ಕರೆ ಮಾಡಿದಾಗಲೂ ಇದನ್ನೇ ಹೇಳುತ್ತಿದ್ದ. ಈ ಪ್ರವಾಸ ಮುಗಿಸಿ ಬರುವಷ್ಟರದಲ್ಲಿ ಹೊಸ ಮನೆ ಖರೀದಿಸಿರಬೇಕು ಎಂದಿದ್ದ. ಬಾಲ್ಯದಲ್ಲಿ ಸಾಕಷ್ಟು ಕಷ್ಟವನ್ನು ಎದುರಿಸಿದ ಜೈಸ್ವಾಲ್, ಹೊಸ ಮನೆ ಖರೀದಿಸುವುದೇ ಆತನ ಬಹುದೊಡ್ಡ ಕನಸಾಗಿತ್ತು ಎಂದು ಸಹೋದರ ಹೇಳಿದರು.

ಹೆಮ್ಮೆಯಾಗುತ್ತಿದೆ ಎಂದ ಸಹೋದರ

ಇನ್ನು ಯಶಸ್ವಿ ಶತಕ ಕುರಿತು ಮಾತನಾಡಿದ ಸಹೋದರ, ಆತನ ಸತತ ಪರಿಶ್ರಮದ ಬೆವರಿಗೆ ಸಿಕ್ಕ ಫಲ. ಹೆಮ್ಮೆಯಾಗುತ್ತದೆ. ಚೊಚ್ಚಲ ಶತಕದ ಬೆನ್ನಲ್ಲೇ ತಂದೆ ಕಾನ್ವಾರ್​ ಯಾತ್ರೆಗೆ ತೆರಳಿದ್ದಾರೆ. ಯಶಸ್ವಿ ಜೈಸ್ವಾಲ್ ಯಶಸ್ಸಿಗೆ ಪ್ರಾರ್ಥಿಸಲಿದ್ದಾರೆ ಎಂದು ಹೇಳಿದರು. ಡೆಬ್ಯೂ ಪಂದ್ಯದಲ್ಲೇ ಸೆಂಚುರಿ ಬಾರಿಸಿದ ಭಾರತದ 17ನೇ ಭಾರತೀಯ ಎನಿಸಿದ್ದಾರೆ.

ಆಜಾದ್​ ಕ್ರಿಕೆಟ್​ ಮೈದಾನದ ಪಕ್ಕದಲ್ಲೇ ಪಾನಿಪುರಿ ಮಾರುತ್ತಾ ಕೋಚ್​ಗಳ ಸಂಪರ್ಕ ಸಾಧಿಸಿದ್ದ ಜೈಸ್ವಾಲ್, ಅಂಡರ್​-19 ಭಾರತ ತಂಡ, ಡೊಮೆಸ್ಟಿಕ್ ಕ್ರಿಕೆಟ್​, ಐಪಿಎಲ್​ನಲ್ಲಿ ಮಿಂಚಿ ರಾಷ್ಟ್ರೀಯ ತಂಡದ ಪರವೂ ಆರ್ಭಟ ಮುಂದುವರೆಸಿದ್ದಾರೆ. ಸದ್ಯ ಚೊಚ್ಚಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಎಡಗೈ ಆರಂಭಿಕ ಆಟಗಾರ, ಇದು ಆರಂಭವಷ್ಟೇ. ಇನ್ನಷ್ಟು ಯಶಸ್ಸು ಗಳಿಸಬೇಕಿದೆ ಎಂದು ಹೇಳಿದ್ದಾರೆ.