R Ashwin: ನನಗೆ 48 ಗಂಟೆಗಳ ಮೊದಲೇ ಗೊತ್ತಿತ್ತು; ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಡಿಸದ ಕುರಿತು ಮೌನ ಮುರಿದ ಆರ್ ಅಶ್ವಿನ್
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ (WTC final 2023) ಅವಕಾಶ ಸಿಗದಿರುವ ಬಗ್ಗೆ ಟೀಮ್ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಮೌನ ಮುರಿದಿದ್ದಾರೆ. ಫೈನಲ್ನಲ್ಲಿ ಆಡುವ ಅವಕಾಶ ಸಿಗುವುದಿಲ್ಲ ಎಂಬ ವಿಚಾರ ನನಗೆ ಮೊದಲೇ ಗೊತ್ತಿತ್ತು ಎಂದಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ (WTC final 2023) ತನ್ನನ್ನು ಆಡುವ ಹನ್ನೊಂದರ ಬಳಗದಿಂದ ಟೀಮ್ ಇಂಡಿಯಾ (Team India) ಕೈಬಿಡುವ ಬಗ್ಗೆ ಎಂದು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ((Ravichandran Ashwin)) ಮೌನ ಮುರಿದಿದ್ದಾರೆ. ಫೈನಲ್ ಪಂದ್ಯಕ್ಕೆ ನನಗೆ ಸ್ಥಾನ ಸಿಗುವುದಿಲ್ಲ ಎಂಬ ವಿಷಯ ಎರಡು ದಿನಗಳ ಮೊದಲೇ ಗೊತ್ತಿತ್ತು ಎಂದು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್ ಬಹಿರಂಗಪಡಿಸಿದ್ದಾರೆ.
ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಟೀಮ್ ಇಂಡಿಯಾ ಎದುರಿಸಿತು. ಜೂನ್ 7ರಿಂದ 11ರವರೆಗೆ ಜರುಗಿದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿತು. ಇದಕ್ಕೆ ಭಾರಿ ಬೆಲೆತೆತ್ತ ರೋಹಿತ್ ಪಡೆ, 209 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಇದರೊಂದಿಗೆ ಸತತ 2ನೇ ಬಾರಿಯೂ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ವಿಫಲವಾಯಿತು.
48 ಗಂಟೆಗಳ ಮೊದಲೇ ತಿಳಿದಿತ್ತೆಂದ ಅಶ್ವಿನ್
ಆಸ್ಟ್ರೇಲಿಯಾ ತಂಡದ ವಿರುದ್ಧ ತವರಿನಲ್ಲಿ ಮತ್ತು ತವರಿನಾಚೆಯ ಮೈದಾನದಲ್ಲೂ ಅದ್ಭುತ ಪ್ರದರ್ಶನ ಬೌಲಿಂಗ್ ಪ್ರದರ್ಶನದ ದಾಖಲೆ ಹೊಂದಿದ್ದ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಟೀಮ್ ಇಂಡಿಯಾದ ಈ ನಿರ್ಧಾರ ಕಂಡು ಹಲವು ಮಾಜಿ ಆಟಗಾರರು ಅಚ್ಚರಿ ಜೊತೆ ಆಕ್ರೋಶ ಕೂಡ ಹೊರಹಾಕಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ವಿನ್, 48 ಗಂಟೆಗಳ ಮೊದಲೇ ನನಗೆ ತಿಳಿದಿತ್ತು ಎಂದಿದ್ದಾರೆ.
ಆಡಬೇಕೆಂಬ ಆಸೆ ಇತ್ತು
ನಿಜ ಹೇಳಬೇಕೆಂದರೆ ಫೈನಲ್ ಪಂದ್ಯದಲ್ಲಿ ಆಡಬೇಕೆಂಬ ಆಸೆ ನನಗೂ ಇತ್ತು. ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಲು ನನ್ನ ಕೊಡುಗೆಯೂ ಇದೆ. ಕೊನೆಯ ಬಾರಿ ಆಡಿದ್ದ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲೂ ನಾನು 4 ವಿಕೆಟ್ ಪಡೆದಿದ್ದೆ. 2018-19ರ ನಂತರ ಫಾರಿನ್ ಪಿಚ್ಗಳಲ್ಲಿ ನಾನು ಬೌಲಿಂಗ್ ಅನ್ನು ಉತ್ತಮವಾಗಿ ಮಾಡುತ್ತಿದ್ದೇನೆ. ನನ್ನ ಕೊಡುಗೆಯಿಂದಲೂ ಹಲವು ಪಂದ್ಯಗಳು ಗೆದ್ದಿವೆ. ಜೀವನದಲ್ಲಿ ನೀವು ಯಾವುದೇ ಅನುಭವಗಳನ್ನು ಎದುರಿಸಿದರೂ, ನೀವು ಅವುಗಳನ್ನು ಜಯಿಸಬೇಕು ಎಂದು ಅಶ್ವಿನ್ ಹೇಳಿದ್ದಾರೆ.
ಪ್ರಶಸ್ತಿ ಗೆಲ್ಲುವುದು ನನ್ನ ಗುರಿಯಾಗಿತ್ತು
ಸದ್ಯ ನನಗೆ 36 ವರ್ಷ. ಈ ವಯಸ್ಸಿನಲ್ಲಿ ನಾನು ನನಗೆ ಸಂತೋಷವನ್ನು ನೀಡುವ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಲು ಬಯಸುತ್ತೇನೆ. ಹಿರಿಯರು ಮತ್ತು ಮಾಜಿ ಕ್ರಿಕೆಟಿಗರು ನನಗೆ ಸಂದೇಶ ಕಳುಹಿಸುತ್ತಲೇ ಇರುತ್ತಾರೆ. ನಾನು ಅವರಿಗೆ ಶೀಘ್ರದಲ್ಲೇ ಉತ್ತರಿಸುತ್ತೇನೆ. ಯಾಕೆಂದರೆ ಅವರ ದೃಷ್ಟಿಯಲ್ಲಿ ನಾನು ಇನ್ನೂ ಚಿಕ್ಕವನೇ. ಆ ಭಾವನೆ ತುಂಬಾ ಚೆನ್ನಾಗಿದೆ. ಅವರ ಸಲಹೆ ಮತ್ತು ಸಲಹೆಗಳು ನನಗೆ ಬೇಕು ಎಂದು ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದಾರೆ.
ನಾಲ್ವರು ವೇಗಿಗಳಿಗೆ ಮಣೆ
ಫೈನಲ್ನಲ್ಲಿ ಅಶ್ವಿನ್ರನ್ನು ಕೈಬಿಟ್ಟು ನಾಲ್ವರು ವೇಗಿಗಳಿಗೆ ಮಣೆ ಹಾಕಿತ್ತು. ಒಬ್ಬರು ಮಾತ್ರ ಸ್ಪಿನ್ನರ್ ಇದ್ದರು. ಆದರೆ ಅಶ್ವಿನ್ ಜಾಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ವೇಗಿ ಉಮೇಶ್ ಯಾದವ್, 2 ವಿಕೆಟ್ ಮಾತ್ರ ಕಬಳಿಸಿದರು. ಇದೇ ವರ್ಷ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 25 ವಿಕೆಟ್ ಉರುಳಿಸಿದ್ದ ಅಶ್ವಿನ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದರು. ದುರಾದೃಷ್ಟವಶಾತ್ ಎಂದರೆ ಫೈನಲ್ನಲ್ಲಿ ಆಡುವ ಅವಕಾಶ ಸಿಗಲಿಲ್ಲ.
ಟಿಎನ್‌ಪಿಎಲ್‌ನಲ್ಲಿ ಅಶ್ವಿನ್ ಕಣಕ್ಕೆ
ಡಬ್ಲ್ಯಟಿಸಿ ಫೈನಲ್ ಮುಗಿಸಿದ ಬೆನ್ನಲ್ಲೆ ತಾಯ್ನಾಡಿಗೆ ಬಂದಿಳಿದ ಆರ್ ಅಶ್ವಿನ್, ನೇರವಾಗಿ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಪಾಲ್ಗೊಂಡರು. ಪ್ರಸ್ತುತ ನಡೆಯುತ್ತಿರುವ ಟಿಎನ್‌ಪಿಎಲ್ ಲೀಗ್ನಲ್ಲಿ ದಿಂಡುಗಲ್ ಡ್ರಾಗನ್ಸ್ ತಂಡವನ್ನು ಅಶ್ವಿನ್ ಮುನ್ನಡೆಸಿದ್ದಾರೆ. ಆಡಿದ ಮೊದಲ ಪಂದ್ಯದಲ್ಲೇ ಅಶ್ವಿನ್ ಎರಡು ವಿಕೆಟ್ ಪಡೆದು ಗಮನ ಸೆಳೆದರು.