WTC: ಡಬ್ಲ್ಯೂಟಿಸಿ ಮೂರನೇ ಆವೃತ್ತಿ ವೇಳಾಪಟ್ಟಿ ಪ್ರಕಟ; ಭಾರತದ ಸರಣಿಗಳ ವಿವರ ಹೀಗಿದೆ
ಕನ್ನಡ ಸುದ್ದಿ  /  ಕ್ರೀಡೆ  /  Wtc: ಡಬ್ಲ್ಯೂಟಿಸಿ ಮೂರನೇ ಆವೃತ್ತಿ ವೇಳಾಪಟ್ಟಿ ಪ್ರಕಟ; ಭಾರತದ ಸರಣಿಗಳ ವಿವರ ಹೀಗಿದೆ

WTC: ಡಬ್ಲ್ಯೂಟಿಸಿ ಮೂರನೇ ಆವೃತ್ತಿ ವೇಳಾಪಟ್ಟಿ ಪ್ರಕಟ; ಭಾರತದ ಸರಣಿಗಳ ವಿವರ ಹೀಗಿದೆ

World Test Championship: ಎಲ್ಲಾ ದೇಶಗಳು ಎರಡು ವರ್ಷಗಳ ಅವಧಿಯಲ್ಲಿ ಮೂರು ಸ್ವದೇಶಿ ಮತ್ತು ಮೂರು ವಿದೇಶಗಳ ಸರಣಿಗಳಲ್ಲಿ ಆಡಲಿವೆ. ಪ್ರತಿ ತಂಡಗಳು ಗೆದ್ದ ಪಂದ್ಯಗಳಿಂದ 12 ಅಂಕಗಳನ್ನು ಪಡೆಯಲಿವೆ.

ಡಬ್ಲ್ಯೂಟಿಸಿ ಮೂರನೇ ಆವೃತ್ತಿ ವೇಳಾಪಟ್ಟಿ ಪ್ರಕಟ
ಡಬ್ಲ್ಯೂಟಿಸಿ ಮೂರನೇ ಆವೃತ್ತಿ ವೇಳಾಪಟ್ಟಿ ಪ್ರಕಟ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಆವೃತ್ತಿ ಮುಕ್ತಾಯಗೊಂಡಿದ್ದು, ಆಸ್ಟ್ರೇಲಿಯಾ ತಂಡವು ಟೆಸ್ಟ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಮೂರನೇ ಆವೃತ್ತಿಗೆ ಶುಕ್ರವಾರ ಚಾಲನೆ ದೊರಕಲಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಐದು ಪಂದ್ಯಗಳ ಆಶಸ್ ಸರಣಿಯೊಂದಿಗೆ ಟೂರ್ನಿಗೆ ಚಾಲನೆ ನೀಡಲಿವೆ.

ಐಸಿಸಿಯು 2023ರಿಂದ 2025ರ ನಡುವಿನ ಡಬ್ಲ್ಯೂಟಿಸಿ ಮೂರನೇ ಆವೃತ್ತಿಯಲ್ಲಿ ಆಡಲಾಗುವ ಟೆಸ್ಟ್ ಸರಣಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆಶಸ್‌ ಸರಣಿಯೊಂದಿಗೆ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಪಂದ್ಯಗಳು ಆರಂಭವಾಗಲಿದ್ದು, ಶುಕ್ರವಾರ ಬರ್ಮಿಂಗ್ಹ್ಯಾಮ್‌ನಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ ತಂಡದೊಂದಿಗೆ ಕಣಕ್ಕಿಳಿಯಲಿದೆ.

ಭಾರತವು ಮುಂದಿನ ತಿಂಗಳು ವಿಂಡೀಸ್‌ ಪ್ರವಾಸ ಕೈಗೊಳ್ಳುವ ಮೂಲಕ, ಡಬ್ಲ್ಯೂಟಿಸಿಯ ಮೂರನೇ ಆವೃತ್ತಿಯನ್ನು ಆರಂಭಿಸಲಿದೆ. ಡೊಮಿನಿಕಾ ಮತ್ತು ಟ್ರಿನಿಡಾಡ್‌ನಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾವು, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಎರಡನೇ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ಇದೀಗ ಮೂರನೇ ಆವೃತ್ತಿಯನ್ನು ವೆಸ್ಟ್ ಇಂಡೀಸ್ ವಿರುದ್ಧ ಅವರದ್ದೇ ನೆಲದಲ್ಲಿ ಎದುರಿಸುತ್ತಿದೆ.

ಎರಡು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಪಂದ್ಯವು, ಡೊಮಿನಿಕಾದ ವಿಂಡ್ಸರ್ ಪಾರ್ಕ್‌ನಲ್ಲಿ ಜುಲೈ 12ರಂದು ಆರಂಭವಾಗಲಿದೆ. ಎರಡನೇ ಟೆಸ್ಟ್ ಪಂದ್ಯವು ಜುಲೈ 20ರಿಂದ ಜುಲೈ 24ರವರೆಗೆ ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆಯಲಿದೆ. ಇದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 100ನೇ ಟೆಸ್ಟ್ ಪಂದ್ಯ ಕೂಡಾ ಹೌದು.

ತವರಿನಲ್ಲಿ ಭಾರತದ ಸರಣಿಗಳು

ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಆತಿಥ್ಯ ವಹಿಸಲಿದೆ. ಇದರೊಂದಿಗೆ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಎರಡು ಪಂದ್ಯಗಳ ಸರಣಿಗಾಗಿ ಬಾಂಗ್ಲಾದೇಶ ಕೂಡಾ ಭಾರತ ಪ್ರವಾಸ ಮಾಡಲಿದೆ.

ಎಲ್ಲಿಗೆಲ್ಲಾ ಪ್ರವಾಸ

ವೆಸ್ಟ್ ಇಂಡೀಸ್ ಹೊರತಾಗಿ, ಭಾರತವು ಮೂರನೇ ಡಬ್ಲ್ಯುಟಿಸಿ ಸೈಕಲ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಐದು ಟೆಸ್ಟ್ ಪಂದ್ಯಗ‌ಳ‌ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಅದರೊಂದಿಗೆ ಎರಡು ಟೆಸ್ಟ್‌ಗಳನ್ನಾಡಲು ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ.

ಎಲ್ಲಾ ತಂಡಗಳು ಎರಡು ವರ್ಷಗಳ ಅವಧಿಯಲ್ಲಿ ಮೂರು ಸ್ವದೇಶಿ ಮತ್ತು ಮೂರು ವಿದೇಶಗಳ ಸರಣಿಗಳಲ್ಲಿ ಆಡಲಿವೆ. ಪ್ರತಿ ತಂಡಗಳು ಗೆದ್ದ ಪಂದ್ಯಗಳಿಂದ 12 ಅಂಕಗಳನ್ನು ಪಡೆದರೆ, ಟೈ ಆದರೆ ಆರು ಅಂಕಗಳನ್ನು ಪಡೆಯಲಿವೆ. ಇದೇ ವೇಳೆ ಡ್ರಾ ಸಾಧಿಸಿದರೆ ನಾಲ್ಕು ಅಂಕಗಳನ್ನು ಪಡೆಯುತ್ತವೆ.

ಡಬ್ಲ್ಯೂಟಿಸಿ ಮೂರನೇ ಆವೃತ್ತಿಯ ಟೆಸ್ಟ್ ಸರಣಿಗಳು
ಡಬ್ಲ್ಯೂಟಿಸಿ ಮೂರನೇ ಆವೃತ್ತಿಯ ಟೆಸ್ಟ್ ಸರಣಿಗಳು

ಭಾರತದ ಪಂದ್ಯಗಳು ಯಾವಾಗ?

ಜುಲೈ 12ರಿಂದ 24ರವರೆಗೆ ಭಾರತ ವಿಂಡೀಸ್‌ ಪ್ರವಾಸದಲ್ಲಿರಲಿದೆ. ಇದು ಮುಗಿದು ಸುದೀರ್ಘ ಅಂತರದ ಬಳಿಕ 2 ಟೆಸ್ಟ್ ಪಂದ್ಯಗಳ ಸರಣಿಗಾಗಿ ಭಾರತವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. 2023ರ ಡಿಸೆಂಬರ್ ಹಾಗೂ 2024ರ ಜನವರಿಯಲ್ಲಿ ಈ ಸರಣಿ ನಡೆಯಲಿದೆ. ಈ ಸರಣಿಯ ಬೆನ್ನಲ್ಲೇ 5 ಟೆಸ್ಟ್ ಪಂದ್ಯಗಳ ಸರಣಿಗಾಗಿ ಇಂಗ್ಲೆಂಡ್ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ. 2024ರ ಜನವರಿ ಮತ್ತು ಫೆಬ್ರವರಿಯಲ್ಲಿ ಭಾರತದಲ್ಲೇ ಈ ಸರಣಿ ನಡೆಯಲಿದೆ.

ಇಂಗ್ಲೆಂಡ್ ತವರಿಗೆ ತೆರಳಿದ ಬಳಿಕ ಸುದೀರ್ಘ ಅಂತರ ಇರಲಿದೆ. 2024ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ನಡೆಯರುವ 2 ಪಂದ್ಯಗಳ ಸರಣಿಗಾಗಿ ಬಾಂಗ್ಲಾದೇಶ ಭಾರತಕ್ಕೆ ಬರಲಿದೆ. ಆ ಬಳಿಕ 2024ರ ಅಕ್ಟೋಬರ್ ಹಾಗೂ ನವೆಂಬರ್ ವೇಳೆಗೆ ನ್ಯೂಜಿಲೆಂಡ್ ಭಾರತ ಪ್ರವಾಸ ಕೈಗೊಳ್ಳಲಿದೆ. ಕಿವೀಸ್‌ ತಂಡವು 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಅಂತಿಮವಾಗಿ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾವು ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಈ ಸರಣಿಯು 2024ರ ನವೆಂಬರ್ ಹಾಗೂ 2025ರ ಜನವರಿ ವೇಳೆಗೆ ನಡೆಯುವ ಸಾಧ್ಯತೆ ಇದೆ. ಈ ಎಲ್ಲಾ ಸರಣಿಯ ಅಂತಿಮ ವೇಳಾಪಟ್ಟಿ ಪ್ರಕಟಗೊಳ್ಳಬೇಕಿದೆ.

Whats_app_banner