West Indies vs India: ಬ್ಯಾಟಿಂಗ್‌ನಲ್ಲಿ ಮತ್ತೆ ವಿಂಡೀಸ್ ವೈಫಲ್ಯ; 114 ರನ್‌ಗಳಿಗೆ ಆಲೌಟ್, ಭಾರತಕ್ಕೆ ಸರಳ ಗುರಿ
ಕನ್ನಡ ಸುದ್ದಿ  /  ಕ್ರೀಡೆ  /  West Indies Vs India: ಬ್ಯಾಟಿಂಗ್‌ನಲ್ಲಿ ಮತ್ತೆ ವಿಂಡೀಸ್ ವೈಫಲ್ಯ; 114 ರನ್‌ಗಳಿಗೆ ಆಲೌಟ್, ಭಾರತಕ್ಕೆ ಸರಳ ಗುರಿ

West Indies vs India: ಬ್ಯಾಟಿಂಗ್‌ನಲ್ಲಿ ಮತ್ತೆ ವಿಂಡೀಸ್ ವೈಫಲ್ಯ; 114 ರನ್‌ಗಳಿಗೆ ಆಲೌಟ್, ಭಾರತಕ್ಕೆ ಸರಳ ಗುರಿ

India vs West Indies 1st ODI: ಏಕದಿನ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ವೆಸ್ಟ್‌ ಇಂಡೀಸ್‌ ಕಲೆಹಾಕಿದ ಎರಡನೇ ಅತಿ ಕಡಿಮೆ ಮೊತ್ತವಾಗಿದೆ. ಈ ಹಿಂದೆ 2018ರಲ್ಲಿ ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ಕೇವಲ 104 ರನ್‌ಗಳಿಗೆ ವಿಂಡೀಸ್‌ ಆಲೌಟ್‌ ಆಗಿತ್ತು.

ವೆಸ್ಟ್‌ ಇಂಡೀಸ್‌ ವಿರುದ್ಧ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ವಿಕೆಟ್‌ ಪಡೆದ ಪಡೆದ ಮುಖೇಶ್ ಕುಮಾರ್
ವೆಸ್ಟ್‌ ಇಂಡೀಸ್‌ ವಿರುದ್ಧ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ವಿಕೆಟ್‌ ಪಡೆದ ಪಡೆದ ಮುಖೇಶ್ ಕುಮಾರ್

ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ (West Indies vs India) ಮತ್ತೆ ನೀರಸ ಪ್ರದರ್ಶನ ನೀಡಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿಸಲ್ಪಟ್ಟ ತಂಡವು, ಕೇವಲ 114 ರನ್‌ಗಳಿಗೆ ಆಲೌಟ್‌ ಆಗಿದೆ. ಅದು ಕೂಡಾ ಕೇವಲ 23 ಓವರ್‌ಗಳಲ್ಲಿ. ಆ ಮೂಲಕ ಭಾರತ ತಂಡಕ್ಕೆ 115 ರನ್‌ಗಳ ಸರಳ ಗುರಿ ಸಿಕ್ಕಿದೆ.

ಇದು ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸ್‌ ಕಲೆಹಾಕಿದ ಎರಡನೇ ಅತಿ ಕಡಿಮೆ ಮೊತ್ತವಾಗಿದೆ. ಈ ಹಿಂದೆ 2018ರಲ್ಲಿ ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ಕೇವಲ 104 ರನ್‌ಗಳಿಗೆ ವಿಂಡೀಸ್‌ ಆಲೌಟ್‌ ಆಗಿತ್ತು.

ಭಾರತದ ಸ್ಪಿನ್‌ ದಾಳಿಗೆ ಬ್ಯಾಟ್‌ ಬೀಸಲು ಪರದಾಡಿದ ವಿಂಡೀಸ್‌ ಆಟಗಾರರು, 20 ಓವರ್‌ಗಳಿಗಿಂತ ಹೆಚ್ಚು ಕಾಲ ಆಡಿದ್ದೇ ಹೆಚ್ಚು. ಕೇವಲ 7 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡ ತಂಡವು, ನಂತರ ಸಣ್ಣ ಜೊತೆಯಾಟದ ಬಲ ಪಡೆಯಿತು. ಮೇಯರ್ಸ್‌ 2 ರನ್‌ ಗಳಿಸಿ ಔಟಾದ ಬಳಿಕ ಕಿಂಗ್ ಮತ್ತು ಅಥಾನಾಜೆ 38 ರನ್ ಜೊತೆಯಾಟವಾಡಿದರು. ಆ ಬಳಿಕ ಹೋಪ್ ಮತ್ತು ಹೆಟ್ಮೆಯರ್ ನಡುವೆ 43 ರನ್‌ಗಳ ಜೊತೆಯಾಟ ಬಂದಿತು. ಇದರ ಹೊರತಾಗಿ ತಂಡ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ.

ಕೇವಲ ಮೂರು ಓವರ್‌ ಎಸೆತ ಕುಲ್ದೀಪ್‌ ಯಾದವ್ 6‌ ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಬಳಿಸಿದರು. ಮತ್ತೊಂದೆಡೆ ಆರು ಓವರ್‌ಗಳನ್ನು ಎಸೆದ ಆಲ್ ರೌಂಡರ್ ಜಡೇಜಾ 37 ರನ್‌ಗಳಿಗೆ 3 ವಿಕೆಟ್‌ ಪಡೆದರು. ಸದ್ಯ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಲು ಭಾರತವು 115 ರನ್‌ಗಳ ಸರಳ ಗುರಿಯನ್ನು ಬೆನ್ನಟ್ಟಬೇಕಾಗಿದೆ.

ಬಾರ್ಬಡೋಸ್​ನಲ್ಲಿರುವ ಕೆನ್ಸಿಂಗ್ಟನ್ ಓವಲ್​​ ಮೈದಾನದಲ್ಲಿ ಇಂದು ಮೊದಲ ಏಕದಿನ ಪಂದ್ಯ ನಡೆಯುತ್ತಿದೆ. ಸರಣಿಯ ಪ್ರಮುಖ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್‌ ಇಂಡಿಯಾ ನಾಯಕ ಬೌಲಿಂಗ್‌ ಆಯ್ಕೆ ಮಾಡಿದ್ದಾರೆ. ತಂಡವು ಇಂದು ನಾಲ್ಕು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುತ್ತಿದೆ. ಇಶಾನ್‌ ಕಿಶನ್‌ ವಿಕೆಟ್‌ ಕೀಪಿಂಗ್‌ ಮಾಡುತ್ತಿದ್ದಾರೆ.

ಮುಖೇಶ್‌ ಕುಮಾರ್‌ ಪದಾರ್ಪಣೆ

ಮೊದಲ ಏಕದಿನ ಪಂದ್ಯದ ಮೂಲಕ ಮುಖೇಶ್ ಕುಮಾರ್ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಒಂದು ವಾರದ ಹಿಂದಷ್ಟೇ ಪೋರ್ಟ್ ಆಫ್ ಸ್ಪೇನ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದ ಮುಖೇಶ್‌, ಇದೀಗ ಏಕದಿನ ಸ್ವರೂಪದಲ್ಲಿಯೂ ಮಿಂಚಲು ಮುಂದಾಗಿದ್ದಾರೆ.

ಮುಖಾಮುಖಿ ದಾಖಲೆ

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಈವರೆಗೆ ಒಟ್ಟು 139 ಏಕದಿನ ಪಂದ್ಯಗಳನ್ನು ಆಡಿದ್ದು, ಭಾರತ 70ರಲ್ಲಿ ಜಯಿಸಿದೆ. ವೆಸ್ಟ್ ಇಂಡೀಸ್ 63 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಒಂದು ಕಾಲದ ಬಲಿಷ್ಠ ತಂಡ ವಿಂಡೀಸ್‌, ಇತ್ತೀಚೆಗೆ ತನ್ನ ಗತವೈಭವವನ್ನು ಕಳೆದುಕೊಂಡಿದೆ. ಅಲ್ಲದೆ ಈ ವರ್ಷ ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.

ವೆಸ್ಟ್​ ಇಂಡೀಸ್ ಆಡುವ ಬಳಗ

ಶಾಯ್ ಹೋಪ್‌ (ನಾಯಕ/ ವಿಕೆಟ್‌ ಕೀಪರ್), ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಅಲಿಕ್ ಅಥಾನಾಜೆ, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿಯಾ, ಡೊಮಿನಿಕ್ ಡ್ರೇಕ್ಸ್, ಜೇಡನ್ ಸೀಲ್ಸ್, ಗುಡಾಕೇಶ್ ಮೋಟಿ.

ಭಾರತ ಆಡುವ ಬಳಗ

ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್‌ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.