India vs West Indies: ಇಂಡೋ-ವಿಂಡೀಸ್ ಮೊದಲ ಟೆಸ್ಟ್; ಅಂಕಿ-ಅಂಶಗಳ ಪ್ರಕಾರ ಭಾರತಕ್ಕಿಂತ ಕೆರಿಬಿಯನ್ನರೇ ಮೇಲುಗೈ; ಆಡುವ 11ರ ಬಳಗ ಹೀಗಿದೆ
India vs West Indies: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ವಿಂಡ್ಸರ್ ಪಾರ್ಕ್ ಮೈದಾನವು ಸಜ್ಜಾಗಿದೆ. ಉಭಯ ತಂಡಗಳಲ್ಲೂ ಪ್ರಮುಖ ಬದಲಾವಣೆ ಕಾಣುವ ಸಾಧ್ಯತೆ ಇದೆ. ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಒಂದು ತಿಂಗಳ ವಿಶ್ರಾಂತಿ ಬಳಿಕ ಟೀಮ್ ಇಂಡಿಯಾ (Team India) ಕಣಕ್ಕಿಳಿಯಲು ಸಜ್ಜಾಗಿದೆ. ಕೆರಿಬಿಯನ್ನರ ನಾಡಿನಲ್ಲಿ 21 ವರ್ಷಗಳಿಂದ ಪ್ರಾಬಲ್ಯ ಮೆರೆದಿರುವ ಭಾರತ ತಂಡವು, ಇಂದಿನಿಂದ ಆರಂಭವಾಗುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ (Ind vs WI) ಸೆಣಸಾಟ ನಡೆಸಲು ಸಜ್ಜಾಗಿದೆ. ಆ ಮೂಲಕ 2023-25ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ICC WTC 2025) 3ನೇ ಆವೃತ್ತಿಗೆ ಚಾಲನೆ ದೊರೆಯಲಿದೆ.
ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಜರುಗಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಪಡೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲಿನ ಕಹಿ ಮರೆತು ಕಣಕ್ಕಿಳಿಯಬೇಕಿದೆ. ಆಸಿಸ್ ವಿರುದ್ಧ ಸೋತ ಬಳಿಕ ವಿಂಡೀಸ್ ಪ್ರವಾಸ ಕೈಗೊಂಡಿರುವ ಭಾರತ ತಂಡವು ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಖಚಿತವಾಗಿದೆ. ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ (Yashasvi Jaiswal), ಭರವಸೆ ಮೂಡಿಸಿದ್ದರು.
ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ
ಮುಂಬರುವ ದಕ್ಷಿಣ ಆಫ್ರಿಕಾ (South Africa) ಮತ್ತು ಆಸ್ಟ್ರೇಲಿಯಾ (Australia) ಸರಣಿಗೂ ಮುನ್ನ ಜೈಸ್ವಾಲ್ಗೆ ಈ ಸರಣಿ ಅಗ್ನಿಪರೀಕ್ಷೆಯಾಗಿದೆ. ಇನ್ನೂ ಟೀಕೆಗೆ ಒಳಗಾಗಿರುವ ರೋಹಿತ್ಗೆ ಸತ್ವಪರೀಕ್ಷೆ ಎನಿಸಿದೆ. ಇನ್ನು ದೇಶೀಯ ಕ್ರಿಕೆಟ್ನಲ್ಲಿ 3ನೇ ಕ್ರಮಾಂದಲ್ಲಿ ಬ್ಯಾಟ್ ಬೀಸುತ್ತಿದ್ದ ಶುಭ್ಮನ್ ಗಿಲ್, ಚೇತೇಶ್ವರ್ ಪೂಜಾರ ಸ್ಥಾನವನ್ನು ತುಂಬಲಿದ್ದಾರೆ. 4 ಮತ್ತು 5ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರು ಕಣಕ್ಕಿಳಿಯಲಿದ್ದಾರೆ.
ಡಬ್ಲ್ಯುಟಿಸಿ ಫೈನಲ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹಿನ್ನೆಲೆ ರಹಾನೆಗೆ ಸ್ಥಾನದ ಜೊತೆಗೆ ಉಪನಾಯಕನ ಪಟ್ಟವೂ ಸಿಕ್ಕಿದೆ. ಹಾಗಾಗಿ ಅಜ್ಜುಗೆ ಈ ಸರಣಿಗೆ ಹೊಸ ಸವಾಲು. ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡುವ ನಿರೀಕ್ಷೆ ಇರುವುದರಿಂದ ರವೀಂದ್ರ ಜಡೇಜಾ ಜೊತೆಗೆ ಆರ್ ಅಶ್ವಿನ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಮೊದಲ ಆದ್ಯತೆ ಆಗಿದ್ದಾರೆ. ಇನ್ನು 3ನೇ ಬೌಲರ್ ಸ್ಥಾನಕ್ಕೆ ಜಯದೇವ್ ಉನಾದ್ಕತ್ ಮತ್ತು ನವದೀಪ್ ಸೈನಿ ಮತ್ತು ಮುಕೇಶ್ ಕುಮಾರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಲು ವಿಫಲವಾದ ವೆಸ್ಟ್ ಇಂಡೀಸ್ ತಂಡವು ಪುಟಿದೇಳುವ ನಿರೀಕ್ಷೆಯಲ್ಲಿದೆ.
ಎಲ್ಲಿ ವೀಕ್ಷಿಸಬಹುದು?
ರಾತ್ರಿ 7.30ಕ್ಕೆ ಪಂದ್ಯದ ಆರಂಭವಾಗಲಿದೆ. ಡಿಡಿ ಸ್ಪೋರ್ಟ್ಸ್ ಮತ್ತು ಜಿಯೋ ಸಿನಿಮಾದಲ್ಲಿ ನೇರಪ್ರಸಾರವಾಗಲಿದೆ.
ಮುಖಾಮುಖಿ ದಾಖಲೆ
ವೆಸ್ಟ್ ಇಂಡೀಸ್ ಮತ್ತು ಭಾರತ ತಂಡಗಳು ಒಟ್ಟು 98 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 22 ಪಂದ್ಯಗಳಲ್ಲಿ ಗೆದ್ದಿದೆ. ವೆಸ್ಟ್ ಇಂಡೀಸ್ 30 ಪಂದ್ಯಗಳಲ್ಲಿ ಜಯಿಸಿದೆ. 46 ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿವೆ. ಈ ಪಂದ್ಯದಲ್ಲಿ ಗಿಲ್ 79 ರನ್ ಸಿಡಿಸಿದರೆ, ಟೆಸ್ಟ್ನಲ್ಲಿ ಸಾವಿರ ರನ್ ಕಲೆ ಹಾಕಲಿದ್ದಾರೆ. ಕೊಹ್ಲಿ 21 ರನ್ ಗಳಿಸಿದರೆ, ಟೆಸ್ಟ್ನಲ್ಲಿ 8500 ರನ್ ಪೂರೈಸಲಿದ್ದಾರೆ.
ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಕೆಎಸ್ ಭರತ್/ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ
ವೆಸ್ಟ್ ಇಂಡೀಸ್ ಸಂಭಾವ್ಯ ತಂಡ
ಕ್ರೈಗ್ ಬ್ರಾಥ್‌ವೈಟ್, ಟ್ಯಾಗೆನರೈನ್ ಚಂದ್ರಪಾಲ್, ರೇಮನ್ ರೀಫರ್, ಜರ್ಮೈನ್ ಬ್ಲಾಕ್‌ವುಡ್, ಅಲಿಕ್ ಅಲ್ತಾನಾಜೆ, ಜೋಶುವಾ ಡಾ ಸಿಲ್ವಾ, ಜೇಸನ್ ಹೋಲ್ಡರ್, ರಹಕೀಮ್ ಕಾರ್ನ್‌ವಾಲ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್.