IND vs WI Day 1: ರೋಹಿತ್, ಜೈಸ್ವಾಲ್, ಕೊಹ್ಲಿ ಭರ್ಜರಿ ಅರ್ಧಶತಕ; 2ನೇ ಟೆಸ್ಟ್ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 288/4
India vs West Indies 2nd Test day 1 highlights: ಭಾರತ- ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ನಲ್ಲಿ ಮೊದಲ ದಿನದಾಟ ಮುಕ್ತಾಯಗೊಂಡಿದ್ದು, ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದೆ. ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ತಲಾ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ವೆಸ್ಟ್ ಇಂಡೀಸ್ ಎದುರು ನಡೆಯುತ್ತಿರುವ ಎರಡನೇ ಟೆಸ್ಟ್ನಲ್ಲೂ ಟೀಮ್ ಇಂಡಿಯಾ (India vs West Indies 2nd Test) ಪ್ರಾಬಲ್ಯ ಮುಂದುವರೆಸಿದೆ. ಉಭಯ ತಂಡಗಳ ನಡುವಿನ ಐತಿಹಾಸಿಕ 100ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರ ಅದ್ಭುತ ಪ್ರದರ್ಶನ ಗಮನ ಸೆಳೆದಿದೆ. ಇದರೊಂದಿಗೆ ಭಾರತ ತಂಡವು ಬೃಹತ್ ಮೊತ್ತ ಕಲೆ ಹಾಕುವ ಮುನ್ಸೂಚನೆ ನೀಡಿದೆ. ಮೊದಲ ದಿನದ ಅಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 288 ರನ್ ಕಲೆ ಹಾಕಿದೆ.
ಟ್ರೆಂಡಿಂಗ್ ಸುದ್ದಿ
ರೋಹಿತ್-ಯಶಸ್ವಿ ಭರ್ಜರಿ ಆರಂಭ
ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ 2ನೇ ಟೆಸ್ಟ್ನಲ್ಲೂ ಅವಕಾಶ ಪಡೆದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal), ಮೊದಲ ದಿನದಾಟದಲ್ಲೇ ನಾಯಕ ರೋಹಿತ್ ಶರ್ಮಾ (Rohit Sharma) ಜೊತೆಗೂಡಿ ಮತ್ತೊಂದು ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಆರಂಭಿಕರಾಗಿ ಕಣಕ್ಕಿಳಿದ ಈ ಜೋಡಿ, ವೆಸ್ಟ್ ಇಂಡೀಸ್ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿದರು. ಮೊದಲ ಟೆಸ್ಟ್ನಲ್ಲಿ ದ್ವಿಶತಕದ ಜೊತೆಯಾಟವಾಡಿದ್ದ ಈ ಜೋಡಿ, ಈ ಪಂದ್ಯದಲ್ಲಿ ಮೊದಲ ವಿಕೆಟ್ಗೆ ಶತಕದ ಜೊತೆಯಾಟವಾಡಿದರು. ಮೊದಲ ವಿಕೆಟ್ಗೆ 139 ರನ್ಗಳು ಹರಿದು ಬಂದವು.
ತಲಾ ಅರ್ಧಶತಕ ಸಿಡಿಸಿದ ಓಪನರ್ಸ್
ರೋಹಿತ್ ಹಾಗೂ ಜೈಸ್ವಾಲ್ ಮತ್ತೊಂದು ಭರ್ಜರಿ ಇನ್ನಿಂಗ್ಸ್ ಕಟ್ಟಿದರು. ಇಬ್ಬರೂ ತಲಾ ಅರ್ಧಶತಕ ಇನ್ನಿಂಗ್ಸ್ ಆಡಿದರು. ಬಿರುಸಿನ ಅರ್ಧಶತಕ ಪೂರೈಸಿದ ಜೈಸ್ವಾಲ್, 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ತಾಳ್ಮೆಯ ಬ್ಯಾಟಿಂಗ್ ಜೊತೆಗೆ ಆಗ್ಗಾಗೆ ಬಿರುಸಿನ ಬ್ಯಾಟಿಂಗ್ ನಡೆಸಿದ ಕ್ಯಾಪ್ಟನ್, ಶತಕದತ್ತ ಮುನ್ನುಗ್ಗಿದರು. ಊಟದ ವಿರಾಮಕ್ಕೆ ಭಾರತ ವಿಕೆಟ್ ನಷ್ಟ ಇಲ್ಲದೆ 121 ರನ್ ಗಳಿಸಿತ್ತು. ಆದರೆ ಊಟದ ವಿರಾಮದ ಬಳಿಕ ವಿಂಡೀಸ್ ಮೇಲುಗೈ ಸಾಧಿಸಿತ್ತು.
ಹಿಂದಿದೆಯೇ 4 ವಿಕೆಟ್ ಪತನ
ಭೋಜನ ವಿರಾಮದ ನಂತರ ಭಾರತದ ಓಪನರ್ಸ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರಲಿಲ್ಲ. 74 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ಸಹಿತ 57 ರನ್ ಗಳಿಸಿದ ಜೈಸ್ವಾಲ್, ಜೇಸನ್ ಹೋಲ್ಡರ್ ಬೌಲಿಂಗ್ನಲ್ಲಿ ಔಟಾದರು. ನಂತರ 143 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ಗಳ ಸಹಾಯದಿಂದ 80 ರನ್ ಗಳಿಸಿದ ರೋಹಿತ್ಗೆ ವಾರಿಕಾನ್ ಗೇಟ್ಪಾಸ್ ನೀಡಿದರು. ಇನ್ನು ಶುಭ್ಮನ್ ಗಿಲ್ 10 ರನ್, ಮತ್ತು ಅಜಿಂಕ್ಯ ರಹಾನೆ 8 ರನ್ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. 2ನೇ ಸೆಷನ್ನಲ್ಲಿ ಭಾರತ ಕೇವಲ 61 ರನ್ ಕಲೆಹಾಕಿ 4 ವಿಕೆಟ್ ಕಳೆದುಕೊಂಡಿತು.
ಸ್ಮರಣೀಯ ಪಂದ್ಯದಲ್ಲಿ ಕೊಹ್ಲಿ ಅದ್ಭುತ ಆಟ
ಬ್ಯಾಕ್ ಟು ಬ್ಯಾಕ್ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಆಸರೆಯಾಗಿದ್ದೇ ವಿರಾಟ್ ಕೊಹ್ಲಿ. ಕಳೆದ ಪಂದ್ಯದಲ್ಲಿ ಶತಕದ ಅಂಚಿನಲ್ಲಿ ಎಡವಿದ್ದ ಕೊಹ್ಲಿ, ಈಗ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲೂ ಅವರಿಗೆ ಇದು ಸ್ಮರಣೀಯ 500ನೇ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಅದ್ಭುತ ಬ್ಯಾಟಿಂಗ್ ನಡೆಸುತ್ತಿದ್ದಾರೆ. ತಮ್ಮ 21ನೇ ಎಸೆತದಲ್ಲಿ ಬೌಂಡರಿ ಖಾತೆ ತೆರೆದ ಈ ಸೂಪರ್ ಸ್ಟಾರ್ ಬ್ಯಾಟ್ಸ್ಮನ್ ಕೊಹ್ಲಿ, ರವೀಂದ್ರ ಜಡೇಜಾ ಜೊತೆ ಸೇರಿ ಉತ್ತಮ ಜೊತೆಯಾಟ ಹಂಚಿಕೊಂಡಿದ್ದಾರೆ.
288ಕ್ಕೆ 4 ವಿಕೆಟ್
ವಿಂಡೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ, ತಮ್ಮ 97ನೇ ಎಸೆತದಲ್ಲಿ 50ರ ಗಡಿ ದಾಟಿದರು. ಸೊಗಸಾದ ಕವರ್ ಡ್ರೈವ್‌ಗಳ ಮೂಲಕ ಕೊಹ್ಲಿ ಬೌಂಡರಿಗಳನ್ನು ತಮ್ಮ ಬತ್ತಳಿಕೆಗೆ ಹಾಕಿಕೊಂಡರು. ಇದು ಕೊಹ್ಲಿಯ 30ನೇ ಅರ್ಧಶತಕ. ಜಡೇಜಾ-ಕೊಹ್ಲಿ 3ನೇ ಸೆಷನ್‌ನ ಅಂತ್ಯಕ್ಕೆ 288 ರನ್‌ಗಳಿಗೆ ಕೊಂಡೊಯ್ದರು. ವಿರಾಟ್ (87) ಮತ್ತು ಜಡೇಜಾ (36) ಮಧ್ಯೆ ಶತಕದ ಜೊತೆಯಾಟವಿದ್ದು, ಇಬ್ಬರೂ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿದ್ದಾರೆ.
ಸಂಬಂಧಿತ ಲೇಖನ