ಕನ್ನಡ ಸುದ್ದಿ  /  Sports  /  Cricket News Ipl 2023 Advertisement Revenue Crosses 10000 Crore Bcci Jiocinema Star Sports Broadcast Ms Dhoni Kohli Prs

IPL 2023: ಐಪಿಎಲ್​​ 2023 ಬರೀ ಹಿಟ್ ಅಲ್ಲ, ಬ್ಲಾಕ್​ಬಸ್ಟರ್ ಹಿಟ್; ಜಾಹೀರಾತು ಮೂಲಕವೇ ಬರೋಬ್ಬರಿ 10,000 ಕೋಟಿ ಆದಾಯ

IPL 2023: ಡಿಜಿಟಲ್, ಟಿವಿಗಳಲ್ಲಿ ಐಪಿಎಲ್​​ ವೀಕ್ಷಣೆ ಹೆಚ್ಚಳ ಕಂಡ ಪರಿಣಾಮ ಜಾಹೀರಾತು ಮೂಲಕ ದಾಖಲೆಯ ಮಟ್ಟದಲ್ಲಿ ಆದಾಯ ಗಳಿಸಿದೆ. ಐಪಿಎಲ್​ನ 2023ರ ಆವೃತ್ತಿಯಲ್ಲಿ 10,120 ಕೋಟಿ ರೂಪಾಯಿ ಜಾಹೀರಾತಿನಲ್ಲೇ ಆದಾಯ ಬಂದಿದೆ.

ಐಪಿಎಲ್​ನಲ್ಲಿ ಜಾಹೀರಾತು ಮೂಲಕವೇ 10,000 ಕೋಟಿ ಆದಾಯ
ಐಪಿಎಲ್​ನಲ್ಲಿ ಜಾಹೀರಾತು ಮೂಲಕವೇ 10,000 ಕೋಟಿ ಆದಾಯ

ಇತ್ತೀಚೆಗಷ್ಟೆ ಮುಕ್ತಾಯಗೊಂಡ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023)​ ಅತ್ಯಂತ ಯಶಸ್ವಿಗೊಂಡಿದೆ. ಚೆನ್ನೈ ಸೂಪರ್ ಕಿಂಗ್ (CSK)​ 5ನೇ ಟ್ರೋಫಿ ಗೆದ್ದು ದಾಖಲೆ ಬರೆಯಿತು. ಗುಜರಾತ್​ ಟೈಟಾನ್ಸ್ (Gujarat Titans) ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಯಾಯಿತು. ಟೂರ್ನಿಯುದ್ದಕ್ಕೂ ತಂಡಗಳ ತೀವ್ರ ಏರ್ಪಟ್ಟಿತ್ತು. ಲೀಗ್​​ನ ಕೊನೆಯವರೆಗೂ ಯಾವ ತಂಡವು ಪ್ಲೇ ಆಫ್​ ಪ್ರವೇಶಿಸಲಿದೆ ಎಂಬುದಕ್ಕೆ ಉತ್ತರವೇ ಸಿಕ್ಕಿರಲಿಲ್ಲ.

ಟ್ರೆಂಡಿಂಗ್​ ಸುದ್ದಿ

2023ರ ಆವೃತ್ತಿಯ ಐಪಿಎಲ್​ ಟೂರ್ನಿ ಆರಂಭದಿಂದ ಕೊನೆಯವರೆಗೂ ಇದೇ ಸ್ಪಂದನೆ ವ್ಯಕ್ತವಾಗಿತ್ತು. ಪ್ರತಿಯೊಂದು ಪಂದ್ಯಕ್ಕೂ ಸ್ಟೇಡಿಯಂಗಳು ಕಿಕ್ಕಿರಿದು ತುಂಬಿದ್ದವು. ಹಾಗಂತ ಡಿಜಿಟಲ್, ಟಿವಿಗಳಲ್ಲಿ ನೋಡುಗರ ಸಂಖ್ಯೆ ಏನೂ ಕಡಿಮೆಯಾಗಿರಲಿಲ್ಲ. ದಾಖಲೆಯ ಮಟ್ಟದಲ್ಲಿ ವೀಕ್ಷಣೆ ಪಡೆದವು. ಪರಿಣಾಮ ಐಪಿಎಲ್​ನ 2023ರ ಆವೃತ್ತಿಯಲ್ಲಿ 10,120 ಕೋಟಿ ರೂಪಾಯಿ ಜಾಹೀರಾತಿನಲ್ಲೇ ಆದಾಯ ಬಂದಿದೆ.

ಯಾರಿಗೆಷ್ಟು ಆದಾಯ?

ಬಿಸಿಸಿಐ, ಫ್ರಾಂಚೈಸಿ ಮಾಲೀಕರು ಮತ್ತು ಪ್ರಸಾರಕರು ನೇರವಾಗಿ ಶೇ 65ರಷ್ಟು ಆದಾಯ ಗಳಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಸಿನಿಮಾ, ಜಾಹೀರಾತಿನ ಮೂಲಕ 4,700 ಕೋಟಿ ಆದಾಯ ಗಳಿಸಿದೆ. ಫ್ರಾಂಚೈಸಿಗಳು 1,450 ಕೋಟಿ ಮತ್ತು ಬಿಸಿಸಿಐ ಸುಮಾರು 430 ಕೋಟಿ ಗಳಿಸಿದೆ. ಅಲ್ಲದೆ, ಈ ಐಪಿಎಲ್ ಋತುವಿನಲ್ಲಿ ಫ್ಯಾಂಟಸಿ ಸ್ಪೋರ್ಟ್ಸ್ ಫ್ಲಾಟ್‌ಫಾರ್ಮ್‌ಗಳು 2,800 ಕೋಟಿ ಆದಾಯ ಗಳಿಸಿರುವುದು ಮತ್ತೊಂದು ವಿಶೇಷ ಎಂದು ಸಲಹಾ ಸಂಸ್ಥೆ ರೆಡ್ ಸೀರ್‌ನ ವರದಿ ತಿಳಿಸಿದೆ.

ಸರಿಸುಮಾರು 61 ಮಿಲಿಯನ್ ಬಳಕೆದಾರರು ಪಂದ್ಯಗಳು ನಡೆಯುವಾಗ ಫ್ಯಾಂಟಸಿ ಸ್ಪೋರ್ಟ್ಸ್ ಫ್ಲಾಟ್‌ಫಾರ್ಮ್‌ಗಳಲ್ಲಿ ಭಾಗವಹಿಸಿದ್ದರು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇ 25ರಷ್ಟು ಹೆಚ್ಚಳ ಕಂಡಿದೆ. ಒಟ್ಟು ಗೇಮಿಂಗ್ ಆದಾಯವು ಸರಕು ಮತ್ತು ಸೇವಾ ತೆರಿಗೆ, ಕ್ಯಾಶ್‌ಬ್ಯಾಕ್ ಮತ್ತು ಬೋನಸ್‌ಗಳಲ್ಲಿ ಅಪವರ್ತನಗೊಳಿಸುವ ಮೊದಲು ಈ ಪ್ಲಾಟ್‌ಫಾರ್ಮ್‌ಗಳು ಗಳಿಸಿದ ಕಮಿಷನ್ ಅನ್ನು ಉಲ್ಲೇಖಿಸುತ್ತದೆ ಎಂದು ರೆಡ್ ಸೀರ್ ವಿವರಿಸಿದೆ.

ಸಾಮಾಜಿಕ ಮಾಧ್ಯಮದಿಂದ ಶೇ 35ರಷ್ಟು ಆದಾಯ

ನಮ್ಮ ಅಂದಾಜಿನ ಪ್ರಕಾರ, 10,000 ಕೋಟಿ ಆದಾಯವು ಜಾಹೀರಾತಿನಿಂದ ಬಂದಿದೆ. ಅದರಲ್ಲಿ ಬಿಸಿಸಿಐ, ಪ್ರಸಾರಕರು ಮತ್ತು ಫ್ರಾಂಚೈಸಿಗಳು ಒಟ್ಟು ಖರ್ಚಿನ ಶೇ.65ರಷ್ಟು ನೇರ ಆದಾಯವಾಗಿ ಗಳಿಸಿವೆ. ಉಳಿದ ಶೇ.35ರಷ್ಟು ಸಾಮಾಜಿಕ ಮಾಧ್ಯಮ, ಸಾಂಪ್ರದಾಯಿಕ ಮಾಧ್ಯಮ ಮತ್ತು ಇಂಟರ್ನೆಟ್ ಫ್ಲಾಟ್​​ಫಾರ್ಮ್‌ಗಳ ಜಾಹೀರಾತು ಆದಾಯದಿಂದ ಪರೋಕ್ಷ ಆದಾಯವಾಗಿದೆ ಎಂದು ರೆಡ್ ಸೀರ್‌ನ ಪಾಲುದಾರ ಉಜ್ವಲ್ ಚೌಧರಿ ಹೇಳಿದ್ದಾರೆ.

ಆದಾಯದ ಬೆಳವಣಿಗೆಯು ಎರಡು ಪ್ರಮುಖ ಅಂಶಗಳಿಂದ ಗಮನಾರ್ಹ ಬೆಳವಣಿಗೆ ಕಂಡಿದೆ. ಬಳಕೆದಾರರ ವಹಿವಾಟು ಮತ್ತು ಪ್ರತಿ ಬಳಕೆದಾರರ ಸರಾಸರಿ ಆದಾಯವು ಕ್ರಮವಾಗಿ ಶೇ 11ರಷ್ಟು ಮತ್ತು ಶೇ 12ರಷ್ಟು ಹೆಚ್ಚಾಗಿದೆ. 2023-27ರವರೆಗಿನ 5 ವರ್ಷಗಳ ಕಾಲ, 48,390 ಕೋಟಿ ಹೂಡಿಕೆಯ ಮೂಲಕ ಪ್ರಸಾರದ ಹಕ್ಕುಗಳನ್ನು ಖರೀದಿಸಿದ ಕಂಪನಿಗಳು, ಮೊದಲ ಸೀಸನ್‌ನಲ್ಲಿಯೇ 25 ಪ್ರತಿಶತಕ್ಕಿಂತ ಹೆಚ್ಚು (ಲೈವ್ ಹರಾಜು ಸೇರಿದಂತೆ) ಲಾಭವನ್ನು ಪಡೆದಿರುವುದು ಗಮನಾರ್ಹ.

ಲಾಭಕ್ಕೆ ಕಾರಣಗಳೇನು?

ಐಪಿಎಲ್​ ಆರಂಭದಿಂದ ಅಂತ್ಯದವರೆಗೂ ಒಂದು ಸುದ್ದಿ ಹೆಚ್ಚು ಹರಿದಾಡಿತ್ತು. ಅದೇ ಧೋನಿ ನಿವೃತ್ತಿಯ ಸುದ್ದಿ. ಎಂಎಸ್​ ಧೋನಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ, ಅಭಿಮಾನಿಗಳು ಸಾಗಾರೋಪಾದಿಯಲ್ಲಿ ಮೈದಾನದತ್ತ ಹೆಜ್ಜೆ ಹಾಕಿದರು. ಅಲ್ಲದೆ, ಅಭಿಮಾನಿಗಳು ಟಿವಿಗಳ ಮುಂದೆ ತಪ್ಪದೆ ಹಾಜರಿ ಹಾಕುತ್ತಿದ್ದರು.

ಇದರ ಲಾಭ ಪಡೆದ ವಿವಿಧ ಉತ್ಪನ್ನಗಳ ಕಂಪನಿಗಳು, ತಮ್ಮ ವಸ್ತುಗಳ ಪ್ರಚಾರಕ್ಕೆ ಹೆಚ್ಚಿನದಾಗಿ ಮುಂದಾದವು. ಧೋನಿ ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಟೂರ್ನಿಯುದ್ದಕ್ಕೂ ಬೊಂಬಾಟ್ ಪ್ರದರ್ಶನ ನೀಡಿದರು. ಆರ್​​​ಸಿಬಿ ಪಂದ್ಯಗಳು ಹೆಚ್ಚಿನ ವೀಕ್ಷಣೆ ಕಂಡವು. ಇದರ ಜೊತೆಗೆ ಟೂರ್ನಿಯ ಆರಂಭದಿಂದ ಕೊನೆಯ ಹಂತದವರೆಗೂ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಇದೆಲ್ಲದರ ಪರಿಣಾಮ 16ನೇ ಆವೃತ್ತಿಯ ಐಪಿಎಲ್​ ಬ್ಲಾಕ್​ಬಸ್ಟರ್​ ಸಕ್ಸಸ್​ ಕಂಡಿತು. ಜೊತೆಗೆ ಆದಾಯವನ್ನೂ ಹೆಚ್ಚಿಸಿತು.